ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಹಿಳೆ-ಪುರುಷ ಸಮಾನರು ಎಂಬುದು ಭಾಷಣಕ್ಕಷ್ಟೇ ಸೀಮಿತವಾಗಬಾರದು: ಆಶಾ ಪಾಟೀಲ್‌

ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆಯರ ಪಾತ್ರವಿರುತ್ತದೆ ಎಂಬ ಮಾತು ನೂರಕ್ಕೆ ನೂರರಷ್ಟು ನಿಜ. ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿರುವ ಮಲ್ಲನಗೌಡ ಬಸನಗೌಡ ಪಾಟೀಲ್, ಚಿಕ್ಕ-ಚೊಕ್ಕವಾಗಿ ಹೇಳುವುದಾದರೆ ಎಂ.ಬಿ. ಪಾಟೀಲ್ ಇಂದು ರಾಜಕಾರಣದಲ್ಲಿ ಸಾಕಷ್ಟು ಸಾಧನೆಗಳಿಗೆ ನಾಂದಿ ಹಾಡಿದವರು. ಹಿಂದೆ ಜಲ ಸಂಪನ್ಮೂಲ ಸಚಿವರಾಗಿದ್ದಾಗಲೂ ನಗರಗಳಿಗಷ್ಟೇ ಅಲ್ಲದೇ ಹಳ್ಳಿಗಾಡಿನ ಜನರಗೂ ಕುಡಿಯುವ ನೀರನ್ನು ಕಲ್ಪಿಸಿಕೊಟ್ಟವರು. ಹೀಗೆ ಅನೇಕ ಜನಪರ ಕೆಲಸ ಕಾರ್ಯಗಳನ್ನು ಮಾಡಿರುವ ಸಚಿವ ಎಂ.ಬಿ. ಪಾಟೀಲ್ ಅವರ ಸಾಧನೆಗಳ ಹಿಂದಿರುವ ಸ್ಫೂರ್ತಿ ಪತ್ನಿ ಆಶಾ ಪಾಟೀಲ್. ಅವರ ಸಂದರ್ಶನ ಇಲ್ಲಿದೆ.

ಆಶಾ ಪಾಟೀಲ್‌.
  • ಸಂದರ್ಶನ - ಭಾಗ್ಯ ದಿವಾಣ

ರಾಜಕಾರಣಿಯ ಪತ್ನಿಯೆಂಬುದನ್ನು ಹೆಸರಿಗಷ್ಟೇ ಸೀಮಿತಗೊಳಿಸಿಕೊಂಡಿರುವ ಆಶಾ ಪಾಟೀಲ್ ಪತಿ ಎಂ.ಬಿ. ಪಾಟೀಲ್ ಅವರಿಗೆ ರಾಜಕೀಯದಲ್ಲಿ ಸಹಕಾರ ನೀಡಿದ್ದಾರೆ. ಮನೆಯನ್ನು ಶಿಸ್ತಿನಿಂದ ನಡೆಸಿಕೊಂಡು, ಮಕ್ಕಳ ಬದುಕನ್ನು ರೂಪಿಸುವಲ್ಲಿಯೂ ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ‘ಸ್ತ್ರೀ ಎಂದರೆ ಅಷ್ಟೇ ಸಾಕೇ...ʼ ಎಂಬ ಚಿಂತನೆಯೊಂದಿಗೆ ಸಮಾಜಕ್ಕೆ ತನ್ನ ಕೊಡುಗೆಯೇನು ಎಂಬ ಪ್ರಶ್ನೆಯೊಂದಿಗೆ ಹೊಸತನದ ಹುಡುಕಾಟದಲ್ಲಿ ತೊಡಗಿದ್ದ ಅವರ ಆಯ್ಕೆಯಾಗಿದ್ದು ಬಂಜಾರ ಕಸೂತಿ.

ಲಂಬಾಣಿ ಮಹಿಳೆಯರ ಕಸೂತಿ ಕಲೆ

ಜೀವನ ನಡೆಸುವುದಕ್ಕಾಗಿ ಪುರುಷರಿಗೆ ಸಮವಾಗಿ ಕಠಿಣ ಕೆಲಸಗಳಲ್ಲಿ ತೊಡಗಿಸಿಕೊಂಡು, ಮಳೆ ಬಿಸಿಲೆನ್ನದೆ ದುಡಿಯುತ್ತಿದ್ದ ಅನೇಕ ಜೀವಗಳಿಗೆ ಬದುಕುವ ಕಲೆಯನ್ನು ಹೇಳಿಕೊಟ್ಟು, ಮರೆಯಾಗುವ ಹಂತ ತಲುಪಿದ್ದ ಪಾರಂಪರಿಕ ಕಲೆಗೆ ಮರುಜೀವ ತುಂಬಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಹಗಲಿರುಳೆನ್ನದೇ ಶ್ರಮಿಸುತ್ತಲಿರುವ ಆಶಾ ಪಾಟೀಲ್, ವಿಜಯಪುರ ಜಿಲ್ಲೆಯ ಲಂಬಾಣಿ ಮಹಿಳೆಯರನ್ನು ಸ್ವಾವಲಂಬಿಯಾಗಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಅವರ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶದಿಂದ ಗೆಳತಿ ಸೀಮಾ ಕಿಶೋರ್ ಸಹಕಾರದೊಂದಿಗೆ 2017ರಲ್ಲಿ ʻಬಂಜಾರ ಕಸೂತಿ ಆರ್ಗನೈಸೇಷನ್ʼ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈ ಸಂಸ್ಥೆಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಅವರು ಪಟ್ಟ ಶ್ರಮ, ಏಳು ಬೀಳುಗಳ ಕುರಿತ ಸಂದರ್ಶನ ಇಲ್ಲಿದೆ.

ರಾಜಕಾರಣಿಯ ಪತ್ನಿಯಾಗಿ ನಿಮ್ಮ ದೈನಂದಿನ ಜೀವನ ಹೇಗಿರುತ್ತದೆ?

ಎಂ.ಬಿ.ಪಾಟೀಲ್ ಅವರ ಪತ್ನಿ ಎಂಬ ಹಿರಿಮೆಯಿಂದ ನಾನೆಂದೂ ಕೈ ಕಟ್ಟಿ ಕುಳಿತಿಲ್ಲ. ಮನೆ, ಮಕ್ಕಳು, ಕುಟುಂಬದ ಜವಾಬ್ದಾರಿಯ ಜತೆಗೆ ನನ್ನ ಕೈಲಾದ ಮಟ್ಟಿಗೆ ಸಮಾಜಕ್ಕೆ ನೆರವಾಗಬೇಕೆಂಬುದೇ ನನ್ನ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಮತಕ್ಷೇತ್ರಗಳಲ್ಲಿ ಅನೇಕ ಮಂದಿಗೆ ಆರೋಗ್ಯ ಸಂಬಂಧಿ ವಿಚಾರಗಳಲ್ಲಿ ನೆರವಾಗುತ್ತಲೇ ಬಂದಿದ್ದೇನೆ. 8 ವರ್ಷಗಳಿಂದೀಚೆಗೆ ಲಾಭ, ನಷ್ಟವೆಂಬ ಲೆಕ್ಕಾಚಾರವನ್ನು ತೊರೆದು ವಿಜಯಪುರದ ಲಂಬಾಣಿ ಜನಾಂಗದ ಕಸೂತಿ ಕಲೆಯನ್ನು ಉಳಿಸಿ ಬೆಳೆಸುತ್ತಲೇ ಇದ್ದೇನೆ. ಹೀಗೆ ದಿನವೂ ಬಿಡುವಿಲ್ಲದ ಕೆಲಸಗಳು.

lAMBANI

ರಾಜಕಾರಣದ ಸಂಪರ್ಕ ಹೇಗೆ ಶುರುವಾಗಿದ್ದು?

ನಾನು ರಾಜಕೀಯದ ಹಿನ್ನೆಲೆಯಿರುವ ಕುಟುಂಬದಿಂದಲೇ ಬಂದವಳು. ವಿಜಯಪುರವೇ ನನ್ನೂರು. ನನ್ನ ತಂದೆ ಆ ಜಿಲ್ಲೆಯ ಪ್ರಮುಖ ವೈದ್ಯರಾಗಿದ್ದರು. ಆಗಿನಿಂದಲೂ ಜಿಲ್ಲೆಯಲ್ಲಿ ಎಲ್ಲರೂ ನನ್ನನ್ನು ಗುರುತಿಸುತ್ತಿದ್ದರು. ಎಂ.ಬಿ.ಪಾಟೀಲ್ ಅವರನ್ನು ಮದುವೆಯಾದಮೇಲೂ ಅದೇ ಊರಿನಲ್ಲಿದ್ದೆನಾದ್ದರಿಂದ ಮತಕ್ಷೇತ್ರದಲ್ಲಿ ನಾನು ಎಲ್ಲರಿಗೂ ಪರಿಚಿತಳು. ಜನರ ಜತೆಗೆ ಬೆರೆತು ಮಾತಾಡಿ, ಅವರ ಸಮಸ್ಯೆಗಳಿಗೆ ಕಿವಿಯಾಗಿ, ಅವರ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸುತ್ತೇನೆ. ಇದಕ್ಕೆ ರಾಜಕೀಯದ ಹೆಸರೇ ಬೇಕಿಲ್ಲ. ಸಮಾಜಮುಖಿ ಚಿಂತನೆಯಿದ್ದರೂ ಸಾಕು.

ʻಬಂಜಾರ ಕಸೂತಿ ಆರ್ಗನೈಸೇಷನ್ʼ ಹುಟ್ಟುಹಾಕುವ ಪೂರ್ವಸಿದ್ಧತೆಗಳು ಹೇಗಿದ್ದವು ?

ವಿಜಯಪುರದಲ್ಲಿ ಬಂಜಾರ ಜನಾಂಗದ ಮಂದಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಪಾರಂಪರಿಕ ಕಸೂತಿ ಕಲೆ ನನಗೆ ಇಷ್ಟವಾಯಿತು. ಅವರು ಹೆಣೆಯುವ ಕಲರ್‌ ಫುಲ್‌ ಕಸೂತಿಯ ಬಗ್ಗೆ ಆಸಕ್ತಿಯಿತ್ತು. ಆ ಮಹಿಳೆಯರು ದಿನಗೂಲಿಗಾಗಿ ಕಷ್ಟಪಟ್ಟು ಕೆಲಸ ಮಾಡುವುದಕ್ಕಿಂತ, ಅವರದೇ ಆದ ಈ ಶೈಲಿಯನ್ನು ಇಷ್ಟಪಟ್ಟು ಮಾಡಿದರೆ ಆದಾಯದ ಜತೆಗೆ ಜನರೂ ಅವರನ್ನು ಗುರುತಿಸುತ್ತಾರೆಂಬ ಉದ್ದೇಶದೊಂದಿಗೆ ಬಂಜಾರ ಕಸೂತಿಯೊಂದಿಗಿನ ನನ್ನ ಪಯಣ ಪ್ರಾರಂಭವಾಯ್ತು. ಆದರೆ ಇಲ್ಲಿನ ಲಂಬಾಣಿ ಮಹಿಳೆಯರು ತಮ್ಮ ಸಣ್ಣಪುಟ್ಟ ಕಸೂತಿಗಳನ್ನು ಗೋವಾ ಮಾರುಕಟ್ಟೆ, ಮಹಾರಾಷ್ಟ್ರ ಮಾರುಕಟ್ಟೆಗಳಲ್ಲಿ ಅಂತಾರಾಷ್ಟ್ರಿಯ ಪ್ರವಾಸಿಗರಿಗೆ ಅತೀ ಕಡಿಮೆ ಬೆಲೆಗೆ ವ್ಯಾಪಾರ ಮಾಡಿ ಜೀವನ ಕಟ್ಟಿಕೊಂಡಿದ್ದರು. ಅವರಿಗೆ ತಮ್ಮ ಕಸೂತಿ ಕಲೆಯ ಬಗ್ಗೆ ಆಸಕ್ತಿಯೇ ಉಳಿದಿರಲಿಲ್ಲ. ಅಂಥ ಅನೇಕ ಮಹಿಳೆಯನ್ನು ಸಂಪರ್ಕಿಸಿ, ಅವರಿಂದ ಆ ಕಸೂತಿಗಳನ್ನು ಸಂಗ್ರಹಿಸಿ ಇಂದಿನ ಜಗತ್ತಿಗೆ ಉಡುಗೆ ತೊಡುಗೆ, ಫರ್ನಿಷಿಂಗ್ಸ್ ಹೀಗೆ ಯಾವ ರೀತಿಯಲ್ಲಿ ಪರಿಚಯಿಸಬೇಕೆಂಬ ಬಗ್ಗೆ ಅನೇಕ ಅಧ್ಯಯನಗಳನ್ನು ಮಾಡಿದ್ದೆ. ಬಹಳ ಕಷ್ಟದಿಂದಲೇ ಕಳೆದೆಂಟು ವರ್ಷಗಳಿಂದ ಈ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದೇನೆ. ಆದರೆ 30 ಮಹಿಳೆಯರೊಂದಿಗೆ ಪ್ರಾರಂಭವಾದ ಈ ಸಂಸ್ಥೆ ಈಗ 160-200 ಮಹಿಳೆಯರಿಗೆ ಜೀವನ ನೀಡಿದೆ ಎಂಬುದೇ ಖುಷಿಯ ವಿಚಾರ.

ಚಿಕ್ಕಂದಿನಿಂದಲೂ ಕಸೂತಿಯ ಬಗ್ಗೆ ಆಸಕ್ತಿ ಇತ್ತಾ?

ಚಿಕ್ಕವಳಿದ್ದಾಗಿನಿಂದಲೂ ನನಗೆ ಕರಕುಶಲ ವಸ್ತುಗಳ ಬಗ್ಗೆ ಅತಿಯಾದ ಆಸಕ್ತಿ. ನಾನೂ ಕಸೂತಿ ಕಲಿತಿದ್ದೇನೆ. ಪೇಂಟಿಂಗ್ ಮಾಡಿದ್ದೇನೆ. ನನಗೆ ಇವೇ ಆಸಕ್ತಿಕರ ವಿಷಯ.

MB Patil wife Asha Patil

ಈ ಜನಾಂಗದ ಮಹಿಳೆಯರಿಗೆ ತರಬೇತಿ ನೀಡಿದ ಅನುಭವ ಹೇಗಿತ್ತು?

ನನ್ನ ಆತ್ಮೀಯ ಗೆಳತಿ ಸೀಮಾ ಜತೆಗೆ 2017ರಲ್ಲಿ ಈ ಸಾಹಸಕ್ಕೆ ಕೈ ಹಾಕಿದ್ದೆ. ಅವಳು ಫ್ಯಾಷನ್ ಡಿಸೈನಿಂಗ್ ಮಾಡಿರುವುದರಿಂದ ಅವಳ ನೆರವು ಪಡೆದುಕೊಂಡು ಶುರುಮಾಡಿದ್ದೆ. ಅವಳು ಬಿಜಾಪುರಕ್ಕೆ ಹೋಗಿ ಲಂಬಾಣಿ ಮಹಿಳೆಯರ ಜತೆಗೆ ಬೆರೆತು, ಈ ಕಸೂತಿಯಿಂದ ಅವರಿಗಾಗುವ ಲಾಭದ ಬಗೆಗೆ ತಿಳಿಹೇಳುವ ಕೆಲಸ ಮಾಡಿದ್ದಳು. ತರಬೇತಿಯ ವಿಚಾರಕ್ಕೆ ಬಂದಾಗ, ಎಂಬ್ರಾಯಿಡರಿ ಬಗ್ಗೆ ಅವರಿಗೆ ತರಬೇತಿ ಕೊಡುವ ಅಗತ್ಯವಿಲ್ಲ. ಕಲೆಯೆಂಬುದು ಅವರಲ್ಲಿ ರಕ್ತಗತವಾಗಿ ಬಂದಿದೆ. ಅವರಿಗೆ ತರಬೇತಿ ಬೇಕಿರುವುದು ಒಂದು ಜಾಗದಲ್ಲಿ ಕುಳಿತು, ಶಿಸ್ತಿನಿಂದ ಹೊಸ ಬಗೆಯ ದಾರಗಳು, ಕವಡೆ ಸೇರಿದಂತೆ ಅನೇಕ ಉತ್ಪನ್ನಗಳ ಜತೆಗೆ ಡ್ರೆಸ್, ಸ್ಕರ್ಟ್ಗಳ ತಯಾರಿಯ ಬಗ್ಗೆ ಮಾಹಿತಿಯಷ್ಟೇ. ಸೀಮಾಗೆ ನಾನು ಬೆನ್ನೆಲುಬಾಗಿ ನಿಂತುಕೊಂಡು ಎಲ್ಲ ಕೆಲಸಗಳಲ್ಲೂ ಸಹಕಾರ ನೀಡುತ್ತಿದ್ದೆ.

ದೆಹಲಿ ಸೇರಿದಂತೆ ಅನೇಕ ಜಾಗತಿಕ ಪ್ರದರ್ಶನಗಳಲ್ಲಿ ವಿಜಯಪುರ ಕಸೂತಿಯ ಪ್ರದರ್ಶನ ಮಾಡಿದ್ದೀರಿ. ಇದಕ್ಕಾಗಿ ಯಾವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೀರಿ?

ಯಾವ ಎಕ್ಸಿಬಿಷನ್ಗೆ ಹೋಗಬೇಕೆಂದುಕೊಳ್ಳುತ್ತೇವೋ ಅದಕ್ಕೆ ಹೊಂದುವಂತೆ ತಯಾರಿಗಳನ್ನು ಮಾಡಿಕೊಳ್ಳುತ್ತೇವೆ. ಅಲ್ಲಿಗೆ ಬರುವ ಜನಸಂದಣಿ ಹೇಗಿರುತ್ತದೆಯೆಂಬುದರ ಆಧಾರದ ಮೇಲೆ ಯಾವೆಲ್ಲಾ ಉತ್ಪನ್ನಗಳನ್ನು ಇಡಬೇಕೆಂಬುದರ ನಿರ್ಧಾರ ಮಾಡುತ್ತೇವೆ. ನಮ್ಮದು ಮಾಸ್ ಪ್ರೊಡಕ್ಷನ್ ಇಲ್ಲ. ಎಲ್ಲವೂ ಲಿಮಿಟೆಡ್ ಎಡಿಷನ್. ಕೈಯಿಂದಲೇ ಈ ಉತ್ಪನ್ನಗಳನ್ನು ಮಾಡುವುದರಿಂದ ಒಂದು ಉತ್ಪನ್ನದಿಂದ ಇನ್ನೊಂದು ಉತ್ಪನ್ನಕ್ಕೆ ಸಾಕಷ್ಟು ವ್ಯತ್ಯಾಸವಿರುತ್ತದೆ.ಆದರೆ ಇದು ಆರ್ಗ್ಯಾನಿಕ್ ಆಂಡ್ ನ್ಯಾಚುರಲ್ ಆಗಿರುತ್ತವೆ.

ಬಂಜಾರ ಕಸೂತಿಯಲ್ಲಿ ಅರಳುವ ಉತ್ಪನ್ನಗಳು ಯಾವುವು?

ನಾನು ಹೇಳಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹೆಚ್ಚಿನ ಒತ್ತು ನೀಡುವುದರಿಂದ ಇತ್ತೀಚೆಗಷ್ಟೇ ಕೋಸ್ಟರ್ಸ್ ಮಾಡಿದ್ದೇವೆ. ಅದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಷ್ಟವಾಗಬಹುದು. ಪರ್ಸ್, ಕ್ಲಚಸ್, ಟೋಟ್ ಬ್ಯಾಗ್ಸ್, ಕುಷನ್ ಕವರ್ಸ್, ಇಳಕಲ್ ಸೀರೆ, ದುಪಟ್ಟಾಗಳ ಮೇಲೂ ಕಸೂತಿ ಮಾಡಿದ್ದೇವೆ. ಗ್ರಾಹಕರನ್ನು ಸೆಳೆಯುವುದಕ್ಕೆ ಇಂಥ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ.

ಆರೋಗ್ಯಕ್ಕೊಂದು ಹೊಸ ಆಯಾಮ: ಯೋಗಬನ

ಯುವ ಜನಾಂಗದಿಂದ ಈ ಉತ್ಪನ್ನಗಳಿಗೆ ಪ್ರತಿಕ್ರಿಯೆ ಹೇಗಿದೆ?

ತುಂಬಾ ಚೆನ್ನಾಗಿದೆ. ಕಾವೇರಿ ಎಂಪೋರಿಯಂಗಳಿಗೆ ಬರುವವರೆಲ್ಲರೂ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಹುಡುಕುವುದರಿಂದ ಅಲ್ಲಿ ನಮ್ಮ ಉತ್ಪನ್ನಗಳಿಗೆ ನಿತ್ಯವೂ ಬೇಡಿಕೆಯಿದೆ. ಮೊನೋಪೊಲೈಸ್ ಆಗಿರುವುದೆಲ್ಲವೂ ರಾಜಸ್ಥಾನ ಹಾಗೂ ಗುಜರಾತಿನ ಕಲೆಗಳು. ನಮ್ಮ ಉತ್ಪನ್ನಗಳನ್ನು ನೋಡಿದರೂ ಅಲ್ಲಿಯದ್ದಾ ಎಂದು ಪ್ರಶ್ನಿಸುತ್ತಾರೆ. ಅದು ಅರ್ಧ ಮೆಷಿನ್ ಹಾಗೂ ಅರ್ಧ ಕೈಯಿಂದ ಮಾಡಿರುವುದರಿಂದ ಅಲ್ಲಿನದ್ದು ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ. ಆದರೆ ನಾವು ದಿನಗೂಲಿ ಕೊಟ್ಟು ಕಸೂತಿ ಮಾಡಿಸುವುದರಿಂದ ಉತ್ಪನ್ನದ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಲೇಬೇಕಾಗುತ್ತದೆ. ಆದ್ದರಿಂದ ಗುರುತಿಸಿಕೊಳ್ಳುವುದು ಕಷ್ಟವೇ ಆಗುತ್ತದೆ.

ಮಾರ್ಕೆಟಿಂಗ್ ಸ್ಟ್ರಾಟಜಿ ಬಗ್ಗೆ ಹೇಳಿ?

ಅದು ನಿಧಾನವಾಗಿಯೇ ನಡೆಯುತ್ತಿದೆ. ನಾವಿನ್ನೂ ಬ್ರ್ಯಾಂಡ್ ಅಂತ ಪ್ರಾರಂಭಿಸಿಲ್ಲ. ಬ್ರ್ಯಾಂಡ್ ಕ್ರಿಯೇಟ್ ಮಾಡಿದರೆ ನಮಗೆ ಅಟ್ರ್ಯಾಕ್ಷನ್ ಸಿಗುತ್ತದೆ. ಆದರೆ ನಾನು ಇದನ್ನು ಮಾಡುತ್ತಿರುವುದು ನನ್ನ ಪತಿ ನನಗಂತ ಕೊಟ್ಟಿರುವ ಖರ್ಚಿನ ಮೊತ್ತದಿಂದ. ನಾನು ಇದಕ್ಕಾಗಿ ಯಾವುದೇ ಸಿಎಸ್ಆರ್ ಫಂಡ್ಗಳನ್ನು ಕೇಳಿಲ್ಲ. ಸರಕಾರದಿಂದ ಯಾವ ಸಹಾಯವನ್ನೂ ಪಡೆದುಕೊಂಡಿಲ್ಲ. ದಿನಗೂಲಿಯಾಗಿರುವುದರಿಂದ ಅವರಿಗೂ ದಿನದ ಸಂಬಳ ಕೊಡಬೇಕು. ಸಣ್ಣ ಎಕ್ಸಿಬಿಷನ್ಗಳಿಂದ ದೊಡ್ಡ ಮಟ್ಟದ ಲಾಭ ಬರುವುದಿಲ್ಲ. ಆದ್ದರಿಂದ ಕಷ್ಟದಿಂದಲೇ ಈ ಸಂಸ್ಥೆಯನ್ನು ನಡೆಸಬೇಕಾಗಿದೆ.

ಈ ಸಂಸ್ಥೆಯನ್ನು ಹುಟ್ಟುಹಾಕಿದ ನಂತರ ನೆನಪಿನಲ್ಲಿ ಉಳಿಯುವಂಥ ಘಟನೆಗಳೇನಾದರೂ ಸಂಭವಿಸಿದ್ದಿದೆಯಾ ?

ನಾನು ಇದೊಂದು ಉದ್ಯಮ ಎಂಬ ರೀತಿಯಲ್ಲಿ ಈ ಸಂಸ್ಥೆಯನ್ನು ಕಟ್ಟಿದವಳಲ್ಲ. ಪ್ರತಿ ಲಂಬಾಣಿ ಹೆಣ್ಣು ಮಗಳೊಂದಿಗೆ ಹುಟ್ಟಿ ಬಂದಿರುವ ಈ ಕಲೆಯಿಂದಲೇ ಅವಳು ಬದುಕು ರೂಪಿಸಲಿ ಎಂಬ ಉದ್ದೇಶ ನನ್ನದಾಗಿತ್ತು. ಅವರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಬಂದಿರುವ ದುಡ್ಡನ್ನು, ಫಿಕ್ಸೆಡ್ ಡೆಪಾಸಿಟ್ನಲ್ಲಿ ಹಾಕಿ, ನಾಳೆ ಅವರ ತುರ್ತು ಪರಿಸ್ಥಿತಿಗಳಿಗೆ ನೆರವಾಗಲಿ ಎಂಬ ಕಾರಣಕ್ಕೆ ಇದನ್ನು ಪ್ರಾರಂಭಿಸಿದ್ದೆ. ಇದರ ನಡುವೆಯೇ ಹೆಮ್ಮೆ ಪಡುವ ವಿಷಯವೆಂದರೆ, ಕೋವಿಡ್ ಕಾಲದಲ್ಲೂ ನಾನು ಈ ಕೆಲಸಗಳನ್ನು ನಿಲ್ಲಿಸಿಲ್ಲ. ಇದರಿಂದ ಅವರ ಜೀವನ ಸಾಧ್ಯವಾಗಿರುವುದರಿಂದಾಗಿ ಮನೆಯಲ್ಲೇ ಕುಳಿತು ಕಸೂತಿ ಮಾಡುವಂತೆ ಹೇಳಿದ್ದೆ. ಉದ್ಯೋಗಕ್ಕೆ ಸೂಕ್ತ ದಿನಗೂಲಿಯನ್ನೂ ನೀಡುತ್ತಿದ್ದೆ. ಆದರೂ ವಿಜಯಪುರ ಉತ್ಪನ್ನವೆಂದರೆ ಮೂಗು ಮುರಿಯುವ ಮಂದಿಯಿಂದಾಗಿ, ಅಲ್ಲದೇ ಜಾಗತಿಕ ಮಾರುಕಟ್ಟೆಯನ್ನು ತಲುಪುವುದು ಕಷ್ಟವಾದ ಸಂದರ್ಭದಲ್ಲೊಮ್ಮೆ ಬೇಸರವಾಗಿ, ಸುಮಾರು 60ಕ್ಕೂ ಹೆಚ್ಚಿನ ಉತ್ಪನ್ನಗಳನ್ನು ದಾನ ಮಾಡಿಬಿಟ್ಟಿದ್ದೆ. ಎಲ್ಲವನ್ನೂ ಮತ್ತೆ ಪ್ರಾರಂಭಿಸುವಂತೆ ನನ್ನನ್ನು ಹುರಿದುಂಬಿಸಿದವಳು ನನ್ನ ಗೆಳತಿ ಸೀಮಾ.

ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕೆಂಬ ಹೆಣ್ಣುಮಕ್ಕಳಿಗೆ ನಿಮ್ಮ ಕಿವಿಮಾತು?

ಮಹಿಳೆಯರು ಸಮಾನರು ಎಂದು ಭಾಷಣದಲ್ಲಷ್ಟೇ ಹೇಳುತ್ತಾರೆ. ಅದು ಕಾರ್ಯರೂಪಕ್ಕೆ ಬರಲೇಬೇಕು. ನಾವು ಸಮಾನರಾಗಿಯೇ ಇದ್ದೇವೆ. ಆದರೆ ಆರ್ಥಿಕ ಸ್ವಾವಲಂಬನೆ ಬಂದಮೇಲೆ, ನಮ್ಮನ್ನು ಅವಲಂಬಿಸಿರುವವರಿಗೆ ಕೊಡುವ ಗೌರವದಲ್ಲಿ ಕಿಂಚಿತ್ತೂ ಬದಲಾವಣೆಯಾಗಬಾರದು. ಅದರಲ್ಲೂ ಹೊಂದಾಣಿಕೆಯಿಂದಲೇ ಒಳ್ಳೆಯ ಕುಟುಂಬ ಜೀವನ ಸಾಧ್ಯವೆಂಬುದನ್ನು ಮುಂದಿನ ಪೀಳಿಗೆಯೂ ತಿಳಿದುಕೊಳ್ಳಬೇಕಿದೆ.

Banjara kasuthi

ಬಿಡುವಿಲ್ಲದ ಜೀವನದ ನಡುವೆ ನಿಮ್ಮ ಪ್ರವಾಸಿ ಜೀವನ ಹೇಗಿದೆ?

ಚಿಕ್ಕಂದಿನಿಂದ ಮದುವೆಯಾಗುವವರೆಗೂ ನಾನು ಸಾಕಷ್ಟು ಪ್ರವಾಸ ಮಾಡಿದ್ದೇನೆ. ಅಪ್ಪ ವೈದ್ಯರಾಗಿದ್ದ ಕಾರಣದಿಂದ ಬಾಂಬೆಯಲ್ಲಿ ಹೆಚ್ಚಿನ ಕಾಲ ಕಳೆದಿದ್ದೇನೆ. ಭಾರತದೊಳಗೆ ಸುತ್ತುವುದು ನನಗಿಷ್ಟ. ಐತಿಹಾಸಿಕ ತಾಣಗಳ ಬಗ್ಗೆ ಹೆಚ್ಚಿನ ಆಸಕ್ತಿಯಿದೆ. ಅಮೃತಸರ, ಜೋಧ್ಪುರ, ಜೈಪುರ, ರಾಜಸ್ತಾನ ಹೀಗೆ ಅನೇಕ ತಾಣಗಳಿಗೆ ಹೋಗಿದ್ದೆ. ಕರ್ನಾಟಕದಲ್ಲಿ ಮೇಲುಕೋಟೆ ಮತ್ತು ಹಿಂದೂಪುರದ ಲೇಪಾಕ್ಷಿಗೆ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ.

ವಿಜಯಪುರದ ಪ್ರವಾಸೋದ್ಯಮ ಬಗ್ಗೆ ನಿಮಗೇನನಿಸುತ್ತದೆ?

ವಿಜಯಪುರದಲ್ಲಿ ಅನೇಕ ಐತಿಹಾಸಿಕ ಪ್ರವಾಸೋದ್ಯಮ ತಾಣಗಳಿವೆ. ಅದೇ ಊರಿನವಳಾದರೂ ನಾನಿನ್ನೂ ನೋಡದಿರುವ ಅನೇಕ ಸ್ಥಳಗಳಿದ್ದು, ಹೋದಾಗಲೆಲ್ಲಾ ಅವುಗಳಿಗೆ ಭೇಟಿ ನೀಡುತ್ತಿರುತ್ತೇನೆ. ಅಲ್ಲಿ ಏರ್ಪೋರ್ಟ್ ಸಿದ್ಧವಾಗುತ್ತಿದೆ. ಅದಾದ ನಂತರ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ. ವಿಜಯಪುರವನ್ನು ಹೆಚ್ಚು ಕೇಂದ್ರೀಕರಿಸುವ ಬಗ್ಗೆ ಮಗನೊಂದಿಗೆ ನಾನು ಯೋಚಿಸುತ್ತಿದ್ದೇನೆ. ವಿಜಯಪುರ ಎಂದಾಕ್ಷಣ ಬಿಸಿಲೂರು ಎಂದು ಪ್ರವಾಸಿಗರು ಆ ಕಡೆ ಹೋಗುವುದೇ ಕಡಿಮೆ. ಆ ಹೆಸರನ್ನು ಅಳಿಸಿ, ನಮ್ಮದು ದ್ರಾಕ್ಷಿ ಬೆಳೆಯುವ ನಾಡು ಎಂದು ಹೇಳುವಂತಾಗಬೇಕು ಎಂಬುದು ನನ್ನ ಧ್ಯೇಯ.

ಎಂ.ಬಿ. ಪಾಟೀಲ್ ಅವರು ಪ್ರವಾಸೋದ್ಯಮ ಸಚಿವರಾಗಿದ್ದರೆ ನಿಮ್ಮ ನಿರೀಕ್ಷೆಗಳೇನಿತ್ತು?

ವಿಜಯಪುರಕ್ಕೆ ಸೂಕ್ತವಾದ ಸಾರಿಗೆ ವ್ಯವಸ್ಥೆಯನ್ನು ಕಲಿಸುವುದು ಮೊದಲನೆಯದು. ಉಳಿದಂತೆ ಕರ್ನಾಟಕದ ಪ್ರವಾಸೋದ್ಯಮವನ್ನು ಜಗತ್ತಿಗೆ ಸಾರುವುದಕ್ಕೆ ಕನ್ನಡದ ಯಶ್, ರಿಷಬ್ ಸೇರಿದಂತೆ ಹೆಸರಾಂತ ನಟರನ್ನು ಅಂಬಾಸಿಡರ್ ಆಗಿ ಬಳಸಿಕೊಂಡು ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಯೋಜನೆಗಳ ಬಗ್ಗೆ ಗಮನ ಹರಿಸುವಂತೆ ಹೇಳುತ್ತಿದ್ದೆ.