ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

lorry strike: ಲಾರಿ ಮುಷ್ಕರ; ರಸ್ತೆಗಿಳಿಯದ ಲಾರಿಗಳು, ಸರಕು ಸಾಗಣೆಯಲ್ಲಿ ಭಾರಿ ವ್ಯತ್ಯಯ

lorry strike: ಮಾರುಕಟ್ಟೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲೆಡೆ ಲಾರಿಗಳು, ಗೂಡ್ಸ್ ವಾಹನಗಳು ನಿಂತಲ್ಲೇ ನಿಂತಿವೆ. ಜಲ್ಲಿ, ಮರಳು, ಕಲ್ಲು, ಸಿಮೆಂಟು, ಕಬ್ಬಿಣ, ತರಕಾರಿ, ಆಹಾರ ಪದಾರ್ಥ ಮತ್ತಿತರೆ ವಸ್ತುಗಳ ಸಾಗಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.

ಲಾರಿ ಮಾಲೀಕರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರಿನ ಯಶವಂತಪುರದ ಎಪಿಎಂಸಿ ಯಾರ್ಡ್‌ನಲ್ಲಿ ನೂರಾರು ಲಾರಿಗಳು ನಿಂತಿವೆ. (ಫೋಟೊ: ಸುಧಾಕರ್ ದೇವರಾಜ್)

ಬೆಂಗಳೂರು: ರಾಜ್ಯದಲ್ಲಿ ಡೀಸೆಲ್ ಬೆಲೆ, ಟೋಲ್‌ ದರ ಹೆಚ್ಚಳ ವಿರೋಧಿಸಿ ಲಾರಿ ಮಾಲೀಕರ ಸಂಘದಿಂದ ಸೋಮವಾರ ರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಲಾರಿಗಳು ನಿಂತಲ್ಲೇ ನಿಂತಿದ್ದು, ಹೊರರಾಜ್ಯಗಳಿಂದಲೂ ಯಾವುದೇ ರೀತಿಯ ಲಾರಿಗಳು ಕರ್ನಾಟಕಕ್ಕೆ ಆಗಮಿಸುತ್ತಿಲ್ಲ. ಇದರಿಂದ ರಾಜ್ಯಾದ್ಯಂತ ಸರಕು ಸಾಗಾಣಿಕೆಯಲ್ಲಿ ವ್ಯತ್ಯಯವಾಗಿದ್ದು, ಬೆಲೆ ಏರಿಕೆ ಭೀತಿ ಉಂಟಾಗಿದೆ.

ಜಲ್ಲಿ, ಮರಳು, ಕಲ್ಲು, ಸಿಮೆಂಟು, ಕಬ್ಬಿಣ, ತರಕಾರಿ, ಆಹಾರ ಪದಾರ್ಥ ಮತ್ತಿತರೆ ವಸ್ತುಗಳ ಸಾಗಾಟ ಸ್ಥಗಿತಗೊಂಡಿದೆ. ಹಾಲು, ಔಷಧಿ, ತರಕಾರಿ ಹೊರತುಪಡಿಸಿ ಎಲ್ಲಾ ವಸ್ತುಗಳ ಸಾಗಾಟ ನಿಂತಿದೆ. ಮಾರುಕಟ್ಟೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲೆಡೆ ಲಾರಿಗಳು, ಗೂಡ್ಸ್ ವಾಹನಗಳು ನಿಂತಲ್ಲೇ ನಿಂತಿವೆ. ಮುಷ್ಕರಕ್ಕೆ ಸುಮಾರು 69 ಸಂಘಟನೆಗಳು ಬೆಂಬಲ ನೀಡಿದ್ದು 6 ಲಕ್ಷ ಲಾರಿಗಳು ಸಂಚಾರ ಸ್ತಬ್ಧಗೊಳಿಸಿವೆ ಎಂದು ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಜಿ.ಆ‌ರ್.ಷಣ್ಮುಗಪ್ಪ ತಿಳಿಸಿದ್ದಾರೆ.

lorry strike (1)

ಡೀಸೆಲ್ ಮೇಲೆ ಹೆಚ್ಚು ತೆರಿಗೆ ವಿಧಿಸಿದ್ದರಿಂದ ನಮ್ಮ ಉದ್ಯಮ ತೀವ್ರ ಸಂಕಷ್ಟಕ್ಕೆ ಈಡಾಗಿದೆ. ಕೂಡಲೇ ಡೀಸೆಲ್ ದರ ಇಳಿಸಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು, ಟೋಲ್‌ಗಳಲ್ಲಿ ಪೊಲೀಸರು ಲಾರಿ ಚಾಲಕರಿಗೆ ನೀಡುವ ಕಿರುಕುಳ ತಪ್ಪಿಸಬೇಕು, ವಾಹನ ವಿಮೆಯ ದರ ಕಡಿತಗೊಳಿಸುವುದು, ಎಫ್‌ಸಿ ದರ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತಾದರೂ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಮುಷ್ಕರ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

lorry strike (2)

ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನ ಯಶವಂತಪುರ ಎಪಿಎಂಸಿ ಸೇರಿದಂತೆ ರಾಜ್ಯದ ಹಲವೆಡೆ ಟ್ರಕ್ ನಿಲ್ದಾಣಗಳಲ್ಲಿ ವಾಹನಗಳು ನಿಂತಿವೆ. ಕೆಲವು ಸರಕು ಸಾಗಾಣಿಕೆ ಲಾರಿ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ದಾವಣಗೆರೆ ಸೇರಿದಂತೆ ಪ್ರಮುಖ ನಗರಗಳಲ್ಲಿ ಸರಕು ಸಾಗಣೆ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ವ್ಯಾಪಾರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದ್ದು, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

lorry strike (3)

ನೆನ್ನೆ ರಾತ್ರಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರೊಂದಿಗೆ ಮಾತುಕತೆ ನಡೆಸಿ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ್ದರಾದರೂ, ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಸಂಘದ ಪದಾಧಿಕಾರಿಗಳು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | HD Kumaraswamy: ಇದು ಜಾತಿಗಣತಿಯೋ, ದ್ವೇಷಗಣತಿಯೋ? ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಲಾರಿಗಳ ಮುಷ್ಕರದಿಂದ ತಕ್ಷಣಕ್ಕೆ ವ್ಯತ್ಯಯಗಳು ಆಗದಿದ್ದರೂ ಅನಿರ್ದಿಷ್ಟಾವಧಿಗೆ ಕರೆ ನೀಡಿರುವುದರಿಂದ ಮೂರ್ನಾಲ್ಕು ದಿನಗಳಲ್ಲಿ ಮುಷ್ಕರದ ಬಿಸಿ ತಟ್ಟಬಹುದು. ರಾಜ್ಯ ಸರ್ಕಾರ ಮಾತುಕತೆಗೆ ಕರೆದರೆ ನಾವು ಸಿದ್ಧರಿದ್ದೇವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ ಆರ್ ಷಣ್ಮುಖಪ್ಪ ತಿಳಿಸಿದ್ದಾರೆ.