ನವದೆಹಲಿ, ಜೂ. 3: ಸುಪ್ರೀಂಕೋರ್ಟ್‌ನ ಅಧಿಕೃತ ಹಿರಿಯ ವಕೀಲರಾಗಿದ್ದ ಚಿಕ್ಕಬಳ್ಳಾಪುರ ಮೂಲದ ರಾಘವೇಂದ್ರ ಸೀತಾರಾಮ ಶ್ರೀವತ್ಸ ಅವರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡುವ ಪ್ರಸ್ತಾವಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಒಪ್ಪಿಗೆ ಸೂಚಿಸಿದೆ. ಕಳೆದ ಹಲವು ವರ್ಷಗಳಿಂದ ಸುಪ್ರೀಂಕೋರ್ಟ್, ದಿಲ್ಲಿ ಹೈಕೋರ್ಟ್ ಸೇರಿ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯವಾದಿಯಾಗಿ ಕರ್ತವ್ಯ ನಿರ್ವಹಿಸಿದ್ದ ರಾಘವೇಂದ್ರ ಶ್ರೀವತ್ಸ ಅವರು 2024ರ ಜನವರಿ 19ರಿಂದ ಸುಪ್ರೀಂಕೋರ್ಟ್‌ನ ಅಧಿಕೃತ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.
ನ್ಯಾಯವಾದಿಯಾಗಿ ದೆಹಲಿಗೆ ಬರುವ ಮುನ್ನ ಅವರು, ಬೆಂಗಳೂರಿನ ವಿಚಾರಣಾ ನ್ಯಾಯಾಲಯಗಳಲ್ಲಿ ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು. ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿದ್ದ ಜತೆಗೆ ದೇಶದ ಇತರೆ ಹೈಕೋರ್ಟ್‌ಗಳು ಮತ್ತು ನ್ಯಾಯಮಂಡಳಿಗಳಲ್ಲಿಯೂ ವಕೀಲರಾಗಿ ಕಾಣಿಸಿಕೊಳ್ಳುತ್ತಿದ್ದರು. 2006ರಲ್ಲಿ ಸುಪ್ರೀಂಕೋರ್ಟ್‌ನ ಅಡ್ವೊಕೇಟ್-ಆನ್-ರೆಕಾರ್ಡ್ ಆಗಿ ಅರ್ಹತೆ ಪಡೆದ ರಾಘವೇಂದ್ರ ಅವರು, ವೈಯಕ್ತಿಕ ಮತ್ತು ಸಾಂಸ್ಥಿಕ ಕಕ್ಷಿದಾರರ ಪರ ಕಾರ್ಯನಿರ್ವಹಿಸುತ್ತಾ, ಸುಪ್ರೀಂಕೋರ್ಟ್ ಕಾನೂನು ಸೇವೆಗಳ ಸಮಿತಿಗೆ ಗಣನೀಯ ಪ್ರಮಾಣದಲ್ಲಿ ಕೆಲಸ ಮಾಡಿದ್ದಾರೆ.
ಕರ್ನಾಟಕದ ಹೈಕೋರ್ಟ್, ಹಂಪಿ ವರ್ಲ್ಡ್ ಹೆರಿಟೇಜ್ ಏರಿಯಾ ಮ್ಯಾನೇಜ್‌ಮೆಂಟ್ ಅಥಾರಿಟಿ (HWHAMA), ಉತ್ತರ ಪ್ರದೇಶ ವಿಧಾನಸಭೆ, ಕಿಂಗ್ ಜಾರ್ಜ್ಸ್ ಮೆಡಿಕಲ್ ಯೂನಿವರ್ಸಿಟಿ, ಲಕ್ನೋ (KGMU), ಕೋಲ್ ಇಂಡಿಯಾ ಲಿಮಿಟೆಡ್, ಉತ್ತರ ಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ ಲಿಮಿಟೆಡ್ (UPSIDC), ನಂತಹ ವಿವಿಧ ಸಾರ್ವಜನಿಕ ಸಂಸ್ಥೆಗಳಿಗೆ ವಕೀಲರಾಗಿ ಅವರು ಪ್ರತಿನಿಧಿಸಿದ್ದಾರೆ. ಉತ್ತರ ಪ್ರದೇಶ ರಾಜಕೀಯ ನಿರ್ಮಾಣ ನಿಗಮ ಲಿಮಿಟೆಡ್, ಕರ್ನಾಟಕದ ವಿದ್ಯುತ್ ಪ್ರಸರಣ ಮತ್ತು ಸರಬರಾಜು ನಿಗಮಗಳು/ಕಂಪನಿಗಳು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಸಂಸ್ಥೆಗಳನ್ನೂ ಅವರು ಪ್ರತಿನಿಧಿಸಿದ್ದಾರೆ. ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠದ ಮುಂದೆಯೂ ಅವರು ವಾದ ಮಂಡಿಸಿದ್ದಾರೆ.
ಕಾನೂನು ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಲೇಖನಗಳನ್ನೂ ಬರೆದಿರುವ ರಾಘವೇಂದ್ರ ಶ್ರೀವತ್ಸ, ನವದೆಹಲಿಯ ಭಾರತೀಯ ಕಾನೂನು ಸಂಸ್ಥೆ ಪ್ರಕಟಿಸಿದ ಲೀಗಲ್ ಡೈಮೆನ್ಶನ್ಸ್ ಆಫ್ ಸೈಬರ್‌ಸ್ಪೇಸ್ ಎಂಬ ಪುಸ್ತಕದಲ್ಲಿ ಆನ್‌ಲೈನ್ ಒಪ್ಪಂದಗಳ ಅಧ್ಯಾಯದ ಸಹ-ಲೇಖಕರಾಗಿದ್ದಾರೆ. ನಿಯತಕಾಲಿಕೆಗಳು ಮತ್ತು ಬ್ಲಾಗ್‌ಗಳಲ್ಲೂ ಅವರ ಹಲವು ಲೇಖನಗಳು ಪ್ರಕಟವಾಗಿವೆ. ಮಾತೃಭಾಷೆ ಕನ್ನಡದಲ್ಲಿ ಬರೆಯುವ ಬಗ್ಗೆ ವಿಶೇಷ ಒಲವು ಮತ್ತು ಕನ್ನಡ ದಿನಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನ ಆಶ್ರಯದಲ್ಲಿ ನ್ಯಾಯಾಂಗ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ಆಯೋಜಿಸಿದ್ದ ಸಿವಿಲ್ ನ್ಯಾಯಾಧೀಶರ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಅವರು, 2024ರಲ್ಲಿ ಛತ್ತೀಸ್‌ಗಢ ಪೊಲೀಸ್ ಇಲಾಖೆಯು ರಾಯ್‌ಪುರದ ಹಿದಾಯತುಲ್ಲಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದಲ್ಲಿ ಹೊಸ ಕ್ರಿಮಿನಲ್ ಕಾನೂನು ಸುಧಾರಣೆಗಳ ಕುರಿತು ಉಪನ್ಯಾಸಗಳನ್ನು ನೀಡಿದ್ದರು. 2024ರ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್ ಆಶ್ರಯದಲ್ಲಿ ಮಹಾರಾಷ್ಟ್ರ ನ್ಯಾಯಾಂಗ ಅಕಾಡೆಮಿಯಲ್ಲಿ ನ್ಯಾಯಾಧೀಶರಿಗೆ ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಅದೇ ವರ್ಷ ಬೆಂಗಳೂರಿನ ವಕೀಲರ ಸಂಘವು ನಡೆಸಿದ ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕಾರ್ಯಾಗಾರದಲ್ಲಿ ಮೊದಲ ಉಪನ್ಯಾಸ ನೀಡಿದ್ದರು.