ದೆಹಲಿ, ಫೆ. 12: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ (Biklu Shiva Murder Case) ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜು (Byrathi Basavaraj) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲೂ (Supreme Court) ಹಿನ್ನಡೆಯಾಗಿದೆ. ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ (ಫೆಬ್ರವರಿ 12) ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ನಿಯಮಿತ ಜಾಮೀನು ಅರ್ಜಿ ಸಲ್ಲಿಸುವಂತೆ ಸೂಚಿಸಿತು. ʼʼಬೈರತಿ ಬಸವರಾಜು ವಿಚಾರಣೆಯನ್ನು ಎದುರಿಸಲು ಧೈರ್ಯ ತೋರಿಸಬೇಕುʼʼ ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.
"ನೀವು ಸಾರ್ವಜನಿಕ ಸೇವಕರಾಗಿದ್ದು ಧೈರ್ಯಶಾಲಿಯಾಗಿರಬೇಕು. ವಿಚಾರಣೆಯನ್ನು ಎದುರಿಸಬೇಕು" ಎಂದು ಅವರು ಹೇಳಿದರು. "ನಾವು ನಿಮಗೆ ನಿರೀಕ್ಷಣಾ ಜಾಮೀನು ನೀಡುತ್ತಿದ್ದೆವು. ಆದರೆ ನೀವು ಪ್ರಕರಣದ ಪ್ರಮುಖ ಆರೋಪಿ ನನಗೆ ಗೊತ್ತಿಲ್ಲ ಎಂದು ತಪ್ಪಿಸಿಕೊಳ್ಳುವ ನಿಲುವು ತಾಳಿದ್ದೀರಿ. ನಿಮ್ಮ ಕರೆ ದಾಖಲೆಗಳು ಬೇರೆಯದನ್ನೇ ಹೇಳುತ್ತವೆ" ಎಂದು ನ್ಯಾಯಮೂರ್ತಿ ಬಾಗ್ಚಿ ತಿಳಿಸಿದರು.
ರೌಡಿ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜುಗೆ ಸಿಐಡಿ ಲುಕೌಟ್ ನೋಟಿಸ್
ವಿಚಾರಣೆ ವೇಳೆ ಪ್ರಕರಣದ ಪ್ರಥಮ ಆರೋಪಿ ಜಗದೀಶ್‌ನೊಂದಿಗೆ ಬೈರತಿ ಬಸವರಾಜು ಅವರಿಗೆ ಯಾವುದೇ ಸಂಬಂಧವಿಲ್ಲ ಎಂದು ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದಿಸಿದ್ದರು. ಈ ವೇಳೆ, ಸಿಜೆಐ ಸೂರ್ಯಕಾಂತ್ ʼʼಕಾಲ್ ಹಿಸ್ಟ್ರಿಯು ಬಸವರಾಜು ಮತ್ತು ಜಗದೀಶ್ ಸಂಪರ್ಕದಲ್ಲಿದ್ದರು ಎನ್ನುವುದನ್ನು ಬಹಿರಂಗಪಡಿಸಿದೆʼʼ ಎಂದು ತಿಳಿಸಿದರು. ಹೀಗಾಗಿ ಶಾಸಕರ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು. "ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ" ಎಂದೂ ನ್ಯಾಯಾಲಯ ಹೇಳಿದೆ.
ಕರ್ನಾಟಕವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದಿಸಿ ಬಸವರಾಜು ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದರು. ಅದಕ್ಕಾಗಿ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿ ಬಾಗ್ಚಿ ಪ್ರತಿಕ್ರಿಯಿಸಿದರು.
ಪ್ರಕರಣದ ಹಿನ್ನೆಲೆ
ಜಮೀನು ವಿವಾದ ಸಂಬಂಧ ಬೆಂಗಳೂರಿನ ಹಲಸೂರು ಕೆರೆಯ ಸಮೀಪ 2025ರ ಜುಲೈ 15ರಂದು ರೌಡಿ ಶೀಟರ್ ಬಿಕ್ಲು ಶಿವ ಕೊಲೆ ನಡೆದಿತ್ತು. ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಬೈರತಿ ಬಸವರಾಜು 5ನೇ ಆರೋಪಿ. ಮೊದಲಿಗೆ ಎಫ್‌ಐಆರ್ ರದ್ದು ಕೋರಿ ಬೈರತಿ ಬಸವರಾಜು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿಗಳು ಬೈರತಿ ಬಸವರಾಜ ಅವರನ್ನು ಬಂಧಿಸಬಾರದು ಎಂದು ಆರಂಭದಲ್ಲಿ ಹೈಕೋರ್ಟ್ ಸೂಚಿಸಿತ್ತು. ಬಸವರಾಜು ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು.
2025ರ ಆಗಸ್ಟ್ 12ರಂದು ಸಿಐಡಿ ಪೊಲೀಸರು ಪ್ರಕರಣದಲ್ಲಿ ಕೋಕಾ ಕಾಯಿದೆ ಹೇರಿದ್ದರು. ಇದರ ರದ್ದತಿಗೆ ಮತ್ತು ನಿರೀಕ್ಷಣಾ ಜಾಮೀನು ಕೋರಿ ಬಸವರಾಜು ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಕೋಕಾ ಅನ್ವಯಿಸಿದ್ದ ಸಿಐಡಿ ಪೊಲೀಸರ ಕ್ರಮ ರದ್ದುಪಡಿಸಿದ್ದ ಹೈಕೋರ್ಟ್, ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಜತೆಗೆ ವಿಚಾರಣಾಧೀನ ನ್ಯಾಯಾಲಯದ ಮೊರೆ ಹೋಗುವಂತೆ ಸೂಚಿಸಿತ್ತು.
ಶಾಸಕ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ
ಮರುದಿನವೇ ನಿರೀಕ್ಷಣಾ ಜಾಮೀನು ಕೋರಿ ಬಸವರಾಜು ಅರ್ಜಿ ಸಲ್ಲಿಸಿದ್ದರು. ಅದನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಮತ್ತೆ ನಿರೀಕ್ಷಣಾ ಜಾಮೀನಿಗಾಗಿ 2025ರ ಡಿಸೆಂಬರ್ 24ರಂದು ಬಸವರಾಜು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. 2025ರ ಡಿಸೆಂಬರ್ 26ರಂದು ರಜಾಕಾಲೀನ ಏಕ ಸದಸ್ಯ ಪೀಠವು ಬೈರತಿ ಬಸವರಾಜ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಪ್ರಸ್ತುತ ಆದೇಶದಿಂದಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ಸಹ ಕೊನೆಗೊಂಡಿದೆ.