ಬೆಂಗಳೂರು, ಜ.13: ಬಹುಕಾಲದಿಂದ ನೆನಗುದಿಗೆ ಬಿದ್ದಿದ್ದ ಬೆಂಗಳೂರಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇದೀಗ ಮುಹೂರ್ತ ನಿಗದಿಯಾಗಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ (Greater Bengaluru Authority) ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಾರ್ಡ್‌ಗಳ ಮರುವಿಂಗಡಣೆ ಮತ್ತು ಚುನಾವಣಾ (GBA Elections) ಪ್ರಕ್ರಿಯೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ (Supreme court) ಸ್ಪಷ್ಟ ವೇಳಾಪಟ್ಟಿಯನ್ನು ನಿಗದಿಪಡಿಸಿದೆ.
ಜನವರಿ 12ರಂದು ಸೋಮವಾರ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೇತೃತ್ವದ ಪೀಠವು ಈ ಕುರಿತು ವಿಚಾರಣೆ ನಡೆಸಿದ್ದು, ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಮಹತ್ವದ ನಿರ್ದೇಶನಗಳನ್ನು ನೀಡಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಅಡಿಯಲ್ಲಿ ರಚನೆಯಾಗಲಿರುವ ಐದು ಮಹಾನಗರ ಪಾಲಿಕೆಗಳ ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅದರ ಅಂತಿಮ ಅಧಿಸೂಚನೆಯನ್ನು ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 2026ರ ಫೆಬ್ರವರಿ 20ರವರೆಗೆ ಕಾಲಾವಕಾಶ ನೀಡಿದೆ. ಇದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೀಡಲಾದ ಕೊನೆಯ ಅವಕಾಶವಾಗಿದೆ ಎಂದು ಕೋರ್ಟ್ ತಿಳಿಸಿದೆ.
ಮಾರ್ಚ್‌ನಲ್ಲಿ ಮತದಾರರ ಪಟ್ಟಿ ಪ್ರಕಟ
ನ್ಯಾಯಾಲಯದ ವಿಚಾರಣೆ ವೇಳೆ ರಾಜ್ಯ ಚುನಾವಣಾ ಆಯೋಗವು (ಎಸ್‌ಇಸಿ) ಮತದಾರರ ಪಟ್ಟಿಯ ಬಗ್ಗೆ ಮಾಹಿತಿ ನೀಡಿದ್ದು, 2026ರ ಮಾರ್ಚ್ 16ರೊಳಗೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸುವುದಾಗಿ ವಾಗ್ದಾನ ನೀಡಿದೆ.
GBA amendment bill: ಜಿಬಿಎ ವಿಧೇಯಕ ತಿದ್ದುಪಡಿಗೆ ವಿಧಾನಸಭೆ ಅಂಗೀಕಾರ; ಸುಧಾ ಮೂರ್ತಿ, ಕೆ. ಸುಧಾಕರ್‌ಗೆ ಸದಸ್ಯತ್ವ
ಮಕ್ಕಳ ಶಾಲಾ ಪರೀಕ್ಷೆಗಳು ಮುಗಿದ ನಂತರವೇ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅದರಂತೆ, 2026ರ ಮೇ 26 ರಿಂದ ಚುನಾವಣಾ ಪ್ರಕ್ರಿಯೆಗಳು ಅಧಿಕೃತವಾಗಿ ಆರಂಭವಾಗಲಿವೆ.
ಜೂನ್ 30ಕ್ಕೆ ಡೆಡ್‌ಲೈನ್
ಯಾವುದೇ ಕಾರಣಕ್ಕೂ ಚುನಾವಣಾ ಪ್ರಕ್ರಿಯೆ ತಡವಾಗಬಾರದು ಎಂದು ಎಚ್ಚರಿಸಿರುವ ಸುಪ್ರೀಂ ಕೋರ್ಟ್, ಎಲ್ಲಾ ಹಂತದ ಚುನಾವಣಾ ಪ್ರಕ್ರಿಯೆಗಳು 2026ರ ಜೂನ್ 30ರೊಳಗೆ ಮುಕ್ತಾಯಗೊಳ್ಳಲೇಬೇಕು ಎಂದು ಖಡಕ್ ಆದೇಶ ನೀಡಿದೆ. ಈ ಆದೇಶದ ಮೂಲಕ, ಕಳೆದ 5ಕ್ಕೂ ಹೆಚ್ಚು ಹಲವು ವರ್ಷಗಳಿಂದ ಮುಂದೂಡಲ್ಪಡುತ್ತಿದ್ದ ಬೆಂಗಳೂರಿನ ಸ್ಥಳೀಯ ಆಡಳಿತದ ಚುನಾವಣೆಗೆ ಸುಪ್ರೀಂ ಕೋರ್ಟ್ ಸ್ಪಷ್ಟ ಮಾರ್ಗಸೂಚಿ ಮತ್ತು ಕಾಲಮಿತಿಯನ್ನು ಹಾಕಿಕೊಟ್ಟಂತಾಗಿದೆ.
GBA elections: ಜಿಬಿಎ ಪಾಲಿಕೆಗಳ ಚುನಾವಣೆ; ಶೇ.50ರಷ್ಟು ಟಿಕೆಟ್ ಮಹಿಳೆಯರಿಗೆ ಎಂದ ಡಿಕೆಶಿ
2015ರಲ್ಲಿ ಕೊನೆಯ ಬಾರಿಗೆ ಬಿಬಿಎಂಪಿ ಚುನಾವಣೆ ನಡೆದಿತ್ತು. ಅಂದುಕೊಂಡಂತೆ ನಡೆದಿದ್ದರೆ, 2020ರಲ್ಲಿ ಮುಂದಿನ ಚುನಾವಣೆ ನಡೆಯಬೇಕಾಗಿತ್ತು. ಆದರೆ ಕೊರೊನಾ ನೆಪದಲ್ಲಿ ಮುಂದೂಡಲ್ಪಟ್ಟ ಚುನಾವಣೆ ಮುಂದೆ ಹಲವು ಕಾರಣಗಳಿಂದ ಮುಂದೂಡಿಕೆಯಾಗುತ್ತಲೇ ಬಂತು. ಇದೀಗ ಜಿಬಿಎ ಅಸ್ತಿತ್ವಕ್ಕೆ ಬಂದಿದ್ದು, ಐದು ನಗರ ಪಾಲಿಕೆಗಳು ರಚನೆಯಾಗಿವೆ. ಈಗಾಗಲೇ ವಾರ್ಡ್ ರಚನೆಯಾಗಿದ್ದು, ಮೀಸಲಾತಿ ಕರಡುಪಟ್ಟಿಯೂ ಪ್ರಕಟವಾಗಿದೆ.