ಬೆಂಗಳೂರು : ಕನ್ನಡಿಗರನ್ನು (Kannadiga) ವ್ಯಂಗ್ಯ ಮಾಡುವ, ಅವಹೇಳನ ಮಾಡಿ ತಮ್ಮ ರೀಚ್ ಹೆಚ್ಚಿಸಿಕೊಳ್ಳುವ ಕೆಟ್ಟ ಚಟ ಉತ್ತರ ಭಾರತೀಯರಂತೆ ತಮಿಳರಲ್ಲಿಯೂ (Tamil) ಕಾಣಿಸಿಕೊಳ್ಳಲು ಶುರುವಾಗಿದೆ. ಇತ್ತೀಚೆಗೆ ಕಮಲಹಾಸನ್ ಅವರು ವೇದಿಕೆ ಮೇಲೆಯೇ ʼಕನ್ನಡ ಹುಟ್ಟಿದ್ದು ತಮಿಳಿನಿಂದʼ ಎಂದು ಹೇಳಿ ಕನ್ನಡಿಗರ ತಪರಾಕಿ ಪಡೆದಿದ್ದರು. ಇದೀಗ ತಮಿಳಿನ ಯುಟ್ಯೂಬಿಗನೊಬ್ಬ (Youtuber) ತನ್ನ ಲೈಕ್ ಹೆಚ್ಚಿಸಿಕೊಳ್ಳಲು ಕನ್ನಡದ ದಿಗ್ಗಜ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ (Actor Vishnuvardhan) ಅವರನ್ನು ಗೇಲಿ ಮಾಡಿದ್ದಾನೆ.
ʼಕೋಟಿಗೊಬ್ಬʼ ಚಿತ್ರದಲ್ಲಿ ನಟ ವಿಷ್ಣುವರ್ಧನ್ ಅಭಿನಯವನ್ನು ತಮಿಳಿನ ಯೂಟ್ಯೂಬರ್ ಹೀಯಾಳಿಸಿದ್ದಾನೆ. ಈ ಸಿನಿಮಾದಲ್ಲಿ ಕಾಲಿನಿಂದ ವಿಲನ್‌ನನ್ನು ಹಗ್ಗದಿಂದ ಕಟ್ಟಿ ಹಾಕುವ ದೃಶ್ಯ ಮತ್ತು ಸಿಂಹ ವಿಷ್ಣು ರೂಪ ಪಡೆಯುವ ಗ್ರಾಫಿಕ್ಸ್ ಅನ್ನು ಈತ ಟೀಕಿಸಿದ್ದಾನೆ. ಇದು ರಜನಿಕಾಂತ್ ಅವರ ನಟನೆಯ ಕಾಪಿ ಎಂದು ಆತ ಟೀಕಿಸಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈತನನ್ನು ಕನ್ನಡಿಗರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಟ್ಯೂಬ್‌ಲೈಟ್ ಮೈಂಡ್ ಟಾಮ್ ವಿಜಯ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ಅಪ್‌ಲೋಡ್ ಆಗಿದೆ. ʼಕೋಟಿಗೊಬ್ಬʼ ಸಿನಿಮಾ ರಜನಿಕಾಂತ್ ನಟನೆಯ ʼಭಾಷಾʼ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ವಿಷ್ಣವರ್ಧನ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.