Dharmasthala Chalo: ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ: ವಿಜಯೇಂದ್ರ ಕಿಡಿ
BY Vijayendra: ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ಪರ ಸಂಘಟನೆಗಳಿಗೆ ಕಿರುಕುಳ ನೀಡುವುದು, ಹಿಂದೂ ವಿರೋಧಿ ದುಷ್ಟರಿಗೆ ಕುಮ್ಮಕ್ಕು ನೀಡುವ ಕಾರ್ಯಸೂಚಿಯನ್ನು ತನ್ನ ಪ್ರಮುಖ ಅಜೆಂಡಾವನ್ನಾಗಿರಿಸಿಕೊಂಡಿದೆ, ಇದನ್ನು ಬಗ್ಗುಬಡಿಯುವ ಶಕ್ತಿ ಈ ನಾಡಿನ ಜನತೆಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

-

ಬೆಳ್ತಂಗಡಿ: ಧರ್ಮಸ್ಥಳದಲ್ಲಿಂದು ನಡೆದ ʼನಮ್ಮ ನಡಿಗೆ ಧರ್ಮದೆಡೆಗೆ, ಧರ್ಮಸ್ಥಳ ಚಲೋʼ (Dharmasthala Chalo) ಕಾರ್ಯಕ್ರಮ ಅಕ್ಷರಶಃ ಸಮರ ಭೂಮಿ ನೆನಪಿಸಿತು. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದ್ದ ದುಷ್ಟ ಶಕ್ತಿಗಳ ದಮನ ಕಾರ್ಯ ತಾರ್ಕಿಕ ಅಂತ್ಯ ಕಾಣುವವರೆಗೂ ಧರ್ಮಯುದ್ಧ ನಿಲ್ಲಿಸುವ ಮಾತೇ ಇಲ್ಲ ಎಂಬ ಸಂದೇಶ ರವಾನಿಸಲಾಯಿತು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ಪರ ಸಂಘಟನೆಗಳಿಗೆ ಕಿರುಕುಳ ನೀಡುವುದು, ಹಿಂದೂ ವಿರೋಧಿ ದುಷ್ಟರಿಗೆ ಕುಮ್ಮಕ್ಕು ನೀಡುವ ಕಾರ್ಯಸೂಚಿಯನ್ನು ತನ್ನ ಪ್ರಮುಖ ಅಜೆಂಡಾವನ್ನಾಗಿರಿಸಿಕೊಂಡಿದೆ, ಇದನ್ನು ಬಗ್ಗುಬಡಿಯುವ ಶಕ್ತಿ ಈ ನಾಡಿನ ಜನತೆಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ, ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನವನ್ನು ಗುರಿಯಾಗಿಸಿಕೊಂಡು ಹಿಂದೂ ವಿರೋಧಿ ಕಾರ್ಯಯೋಜನೆಯನ್ನು ಜಾರಿಗೆ ತರಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಹುನ್ನಾರವನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ, ಅದಕ್ಕೆ ಉತ್ತರ ನೀಡಲೆಂದೇ BJP Karnataka ಕರೆ ನೀಡಿದ್ದ ಧರ್ಮಸ್ಥಳ ಚಲೋ ಬೃಹತ್ ಸಮಾವೇಶಕ್ಕೆ ಸಮರೋಪಾದಿಯಲ್ಲಿ ಇಂದು ಧಾವಿಸಿ ಬಂದಿದ್ದಾರೆ, ಭವಿಷ್ಯದಲ್ಲಿ ಕಾಂಗ್ರೆಸ್ ತನ್ನ ನಡವಳಿಕೆ ತಿದ್ದಿಕೊಳ್ಳದಿದ್ದರೆ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ.
ಅನಾಮಿಕರು ಕೊಡುವ ದೂರನ್ನು ಆಧರಿಸಿ SIT ರಚಿಸಿ ತನಿಖೆ ನಡೆಸುವ ಕಾಂಗ್ರೆಸ್ ಸರ್ಕಾರದ ಉದ್ದೇಶದ ಹಿಂದೆ ಧರ್ಮಸ್ಥಳದಂತಹ ಕೋಟ್ಯಂತರ ಭಕ್ತರನ್ನು ಸೆಳೆಯುವ ಕ್ಷೇತ್ರದ ವರ್ಚಸ್ಸು ಹಾಗೂ ಪಾವಿತ್ರ್ಯತೆಯನ್ನು ಕುಗ್ಗಿಸುವ ಕುತಂತ್ರ ಅಡಗಿದೆ, ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಸುಳ್ಳು ದೂರಿನ ಹಿನ್ನಲೆಯಲ್ಲಿ ರಾಷ್ಟ್ರ ವಿದ್ರೋಹಿ ಅಥವಾ ವಿದೇಶಿ ಶಕ್ತಿಗಳ ಕೈವಾಡ ಇರುವುದು ಸದ್ಯ ತನಿಖೆಯ ಬೆಳವಣಿಗೆಯನ್ನು ಗಮನಿಸಿದರೆ ವೇದ್ಯವಾಗುತ್ತಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ 'ಸತ್ಯದ ಬಾಗಿಲು ತೆರೆಯುವುದಿಲ್ಲ' ಎನ್ನುವುದು ನಿಶ್ಚಿತ, ಈ ನಿಟ್ಟಿನಲ್ಲಿ NIA ಅಥವಾ CBI ತನಿಖೆಯೊಂದೇ ಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತರಕ್ಕೆ ಶಾಶ್ವತ ಉತ್ತರ ದೊರಕಿಸಿಕೊಡಲು ಸಾಧ್ಯ ಎಂದು ಒಟ್ಟಾರೆಯಾಗಿ ವೇದಿಕೆ ಘೋಷಣೆ ಮೊಳಗಿಸಿತು, ನೆರೆದಿದ್ದ ಜನಸ್ತೋಮ ಹರ್ಷೋದ್ಗಾರದೊಂದಿಗೆ ಒಕ್ಕೊರಲಿನಿಂದ ದನಿಗೂಡಿಸಿ ಆಗ್ರಹಿಸಿತು.
ಈ ಸುದ್ದಿಯನ್ನೂ ಓದಿ | Dharmasthala Chalo: ಬುರುಡೆ ಪ್ರಕರಣವು ಬಹುಸಂಖ್ಯಾತರ ವಿರುದ್ಧ ಕಾಂಗ್ರೆಸ್ ಷಡ್ಯಂತ್ರದ ಭಾಗ: ಜೋಶಿ
ಸಮಾವೇಶದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಮಾಜಿ ಸಿಎಂಗಳಾದ ಸದಾನಂದ ಗೌಡ, ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ರಾಜ್ಯ ಸಹ ಉಸ್ತುವಾರಿಗಳಾದ ಪೊಂಗುಲೇಟಿ ಸುಧಾಕರ್ ರೆಡ್ಡಿ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಸಿ.ಟಿ. ರವಿ, ಸುನಿಲ್ ಕುಮಾರ್, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಂಸದರಾದ ತೇಜಸ್ವಿ ಸೂರ್ಯ, ಧರ್ಮಸ್ಥಳ ಚಲೋ ಕಾರ್ಯಕ್ರಮದ ರಾಜ್ಯ ಸಂಚಾಲಕರಾದ ಎಸ್.ಆರ್.ವಿಶ್ವನಾಥ್ ಅವರು ಸೇರಿ ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಪ್ರಮುಖರು, ಪಕ್ಷದ ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ಧರ್ಮಸ್ಥಳ ಭಕ್ತರು ಉಪಸ್ಥಿತರಿದ್ದರು.