ಮಧುಗಿರಿ: ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಸ್ವ.ಅ.ರವರ 1500 ನೇ ಜನ್ಮ ದಿನವನ್ನು ಶ್ರದ್ದಾಭಕ್ತಿಯಿಂದ ಶುಕ್ರವಾರ ಆಚರಿಸಿದರು.
ಮೆರವಣಿಗೆ ಮುಂದೆ ಫಕೀರರು ದಫ್ ಬಾರಿಸಿಕೊಂಡು ಶ್ಲೋಕಗಳನ್ನು ಹೇಳುತ್ತಾ ನಡೆದರು.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಗ್ರಾಮದ ಅಹಲೇ ಸುನ್ನತುಲ್ ಜಮಾತ್ ಜಾಮಿಯಾ ಮಸೀದಿ ಕಮಿಟಿ ವತಿಯಿಂದ ಜಶ್ನೆ ಈದ್ ಮಿಲಾದ್ ಉನ್ ನಬಿ ಸ್ವ.ಅ.ರವರ ಹಬ್ಬವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಸಡಗರದಿಂದ ಅಲ್ಲಾಹುನ ನಾಮ ಜಪ ಮಾಡುತ್ತಾ ಸಾಗಿದರು.
ಇದನ್ನೂ ಓದಿ: Eid-Milad: ಚಿಕ್ಕಬಳ್ಳಾಪುರದಲ್ಲಿ ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಆಚರಣೆ ;ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ
ಕೊಡಿಗೇನಹಳ್ಳಿ ಗ್ರಾಮದ ಪೊಲೀಸ್ ಠಾಣೆ ಮುಂಭಾಗದಿಂದ ಹೊರಟ ಮೆರವಣಿಗೆ ಬಸ್ ನಿಲ್ದಾಣ, 1ನೇ ಬ್ಲಾಕ್, ಸಂಪಂಗಿ ರಸ್ತೆ, ಗ್ರಾಮ ಪಂಚಾಯತಿ ಮುಂಭಾಗದಿಂದ ಸಾಗಿ ಗೌರಿಬಿದನೂರು ರಸ್ತೆ ಮಾರ್ಗ ವಾಗಿ ಮಸೀದಿ ಬಳಿ ಕೊನೆಗೊಳಿಸಿದರು.
ಮುಸ್ಲಿಂ ಬಾಂಧವರು ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಹಬ್ಬದ ಶುಭಾಶಯ ಕೋರಿದರು. ಚಿಕ್ಕ ಮಕ್ಕಳು ಹೊಸ ಬಟ್ಟೆ ಧರಿಸಿ ಧ್ವಜ ಹಿಡಿದು ಕೊಂಡು ಹೋಗುತ್ತಿರುವ ದೃಶ್ಯ ನೋಡುಗರ ಗಮನ ಸೆಳೆಯಿತು. ಗ್ರಾಮದ ಬೀದಿಗಳಲ್ಲಿ ಹಸಿರು ಜಂಡಾಗಳೊಂದಿಗೆ ಸಿಂಗಾರಗೊಳಿಸಿದ್ದರು. ಇದೇ ಸಂದರ್ಭದಲ್ಲಿ ಮಹಿಳೆಯರು ಸಕ್ಕರೆ ಓದಿಸಿ ಫಾತೆಹಾ ಮಾಡಿಸಿದರು.

ಮೆರವಣಿಗೆಯ ವಿಶೇಷತೆ: ಮೆಕ್ಕಾ ಮದೀನಾ, ಅರ್ಧ ಚಂದ್ರ ಹೋಲುವ ರೀತಿಯ ಚಿತ್ರಗಳನ್ನೂ ವಾಹನದಲ್ಲಿ ಇಟ್ಟಿದ್ದರು, ಹೂವಿನಿಂದ ಅಲಂಕಾರಗೊಂಡ ಚಾಂದಿನಿಯನ್ನು ಯುವಕರು ಶ್ರದ್ಧಾ ಭಕ್ತಿಯಿಂದ ಹಿಡಿದುಕೊಂಡು ಬರುತಿದ್ದರು ಅದರಲ್ಲಿ ಪುಟಾಣಿ ಮಗುವೊಂದು ದೇಶದ ಹೆಮ್ಮೆಯ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ನಡೆಯುತ್ತಿರುವುದು ಎಲ್ಲರಲ್ಲೂ ದೇಶಪ್ರೇಮವನ್ನು ಹಿಮ್ಮಡಿಗೊಳಿಸಿತು.
ಮುಖಕ್ಕೆ ಹಸಿರು ಬಣ್ಣ ಬಳಿದುಕೊಂಡು ಸ್ಟಿಕರ್ ಆಂಟಿಸಿಕೊಂಡ ಯುವಕರು ಕೈಯಲ್ಲಿ ಹಸಿರು ಜಂಡಾಗಳನ್ನಾ ಹಿಡಿದುಕೊಂಡು ಹೋಗುತ್ತಿದ್ದರು.
ನೂತನ ಜಾಮಿಯಾ ಮಸೀದಿಯ ಕಾಮಗಾರಿ ನಡೆಯುತ್ತಿರುವ ಕಟ್ಟಡವನ್ನು ವಿವಿಧ ಲೈಟ್ ಗಳಿಂದ ಅಲಂಕಾರಗೊಳಿಸಿದ್ದರು.
ಮಸೀದಿ ಅವರಣ ಬಳಿ ವಿದ್ಯುತ್ ದೀಪಾಲಂಕಾರ, ಗೌಸೇ ಪಾಕ್ ಜಂಡವನ್ನು ಶಾದಿ ಮಹಲ್ ಬಳಿ ಬುಲಂದ್ (ಏರಿಸಿ) ಮಾಡಿದರು.
ಪವಿತ್ರ ಗ್ರಂಥ ಕುರಾನ್ ಜೊತೆಗೆ ಶ್ಲೋಕಗಳು, ಪ್ರವಾದಿ ರವರ ಜೀವನದ ನಡೆ ನುಡಿ, ಇಸ್ಲಾಂ ಧರ್ಮದ ಆಚರಣೆಗಳ ಬಗ್ಗೆ ಧರ್ಮ ಗುರುಗಳು ರಾತ್ರಿ ಪ್ರವಚನ ನೀಡಿದರು.
ಕೊಡಿಗೇನಹಳ್ಳಿ ಹೋಬಳಿಯ ಹಿಂದೂ ಸಹೋದರರು ಈದ್ ಮಿಲಾದ್ ಹಬ್ಬಕ್ಕೆ ಶುಭಾಶಯ ಕೋರುವುದರ ಜೊತೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಸೀದಿಗಳಲ್ಲಿ ಶುಭ ಶುಕ್ರವಾರ ಅದ ಪರಿಣಾಮ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮಸೀದಿ ಕಮಿಟಿ ವತಿಯಿಂದ ಸಾರ್ವಜನಿಕ ರಿಗೆ ಅನ್ನ ದಾಸೋಹ ಏರ್ಪಡಿಸಿದ್ದರು, ರಾತ್ರಿಯ ವೇಳೆ ಮಕ್ಕಳು ಹಾಗೂ ಗುರುಗಳಿಂದ ಪ್ರವಾದಿಯವರ ಜೀವನ ಬೋಧನೆಗಳನ್ನು ತಿಳಿಸಿದರು.
ಕಾರ್ಯಕ್ರಮ ಮುಗಿದ ಮೇಲೆ ಸಿಹಿ ವಿತರಿಸಿ, ಪ್ರವಾದಿ ರವರಿಗೆ ಸಲಾಂ ಹೇಳಿದರು. ಅಹಲೆ ಸುನ್ನತುಲ್ ಜಮಾತ್ ಜಾಮಿಯಾ ಮಸೀದಿಯ ಪದಾಧಿಕಾರಿಗಳು, ಜೆಕೆ ಗ್ರೂಪ್, ಮದರಸ ಮಕ್ಕಳು, ಯುವಕರು ಹಾಗೂ ಮುಖಂಡರು ಇದ್ದರು.