ಚಿಕ್ಕನಾಯಕನಹಳ್ಳಿ: ಸರ್ಕಾರವು ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಇದಕ್ಕಾಗಿ ಬರೋಬ್ಬರಿ 4,500 ಕೋಟಿ ರೂ. ಅನುದಾನ ಮೀಸಲಿರಿಸಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಅವರು ತಿಳಿಸಿದರು. ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ನವೋದಯ ಸಂಸ್ಥೆ, ರೋಟರಿ ಎಜುಕೇಷನ್ ಟ್ರಸ್ಟ್, ಮತ್ತು ಸರ್ಕಾರಿ ಕಾಲೇಜಿನ ಸಹಯೋಗದಲ್ಲಿ ಹಾಲಾಪ್ಪ ಪ್ರತಿಷ್ಠಾನ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಅವಕಾಶಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಉದ್ಯೋಗಕ್ಕೆ ಹೋದರೂ ಅನುಭವ ಕೇಳುತ್ತಿರುವುದರಿಂದ ನಿರುದ್ಯೋಗ ಸೃಷ್ಟಿಯಾಗು ತ್ತಿದೆ. ಈ ಹಿನ್ನೆಲೆಯಲ್ಲಿ, ವಿಶೇಷ ತರಬೇತಿ ನೀಡಿ ಯುವಕರಿಗೆ ಸ್ಪಂದಿಸಲಾಗುವುದು ಎಂದು ಮುರುಳೀಧರ ಹಾಲಪ್ಪ ಹೇಳಿದರು. ಯುವಕರ ಅಭಿರುಚಿಗೆ ತಕ್ಕಂತೆ ಸರ್ಕಾರ ಸ್ಪಂದನೆ ಮಾಡುತ್ತಿದೆ. ವಿದ್ಯಾರ್ಥಿಗಳು ಡಿಗ್ರಿ ಹಂತದಲ್ಲೇ ಪಠ್ಯ ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯ ಅಗತ್ಯ: ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ಸಂವಹನ ಕೌಶಲವನ್ನು ಬಳಸಿಕೊಂಡರೆ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ತಮ್ಮ ಅಧ್ಯಯನಕ್ಕೆ ಪೂರಕವಾದ ಮಾಹಿತಿಗಳನ್ನು ಸಂವಹನ ಮಾಡಿಕೊಂಡರೆ ಅಧ್ಯಯನದಲ್ಲಿ ಹೊಸ ಆಯಾಮ ದೊರೆಯುತ್ತದೆ. ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್, ಇನ್ಸುರೆನ್ಸ್, ಅಕೌಂಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದ ವಿಪುಲ ಅವಕಾಶಗಳಿವೆ. ಹೊಸದಾಗಿ ಕಿರು ಉದ್ದಿಮೆ ಆರಂಭಿಸುವವರಿಗೆ ನಿಗಮದ ಮೂಲಕ ಸಾಲ ಕೊಡಿಸಲು ನೆರವು ನೀಡಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: Chikkanayanahalli News: ಕುರುಬರಹಳ್ಳಿ ರಸ್ತೆ ಕಾಮಗಾರಿ ಪರಿಶೀಲನೆ: ಗುಣಮಟ್ಟ ಕಾಯ್ದುಕೊಳ್ಳಲು ಗುತ್ತಿಗೆದಾರರಿಗೆ ಸೂಚನೆ
ನವೋದಯ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್ ಮಾತನಾಡಿ, ಪ್ರತಿಷ್ಠಾನವು ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿಗೆ ಸಹಕಾರಿಯಾಗುವ ಮೂಲಕ ಅವರ ಭವಿಷ್ಯವನ್ನು ಕಟ್ಟುತ್ತಿದೆ ಎಂದು ಶ್ಲಾಘಿಸಿದರು.
ಶಕ್ತಿ ಯೋಜನೆ: 3,500 ಹೊಸ ಬಸ್‌ಗಳ ಖರೀದಿ
ಶಕ್ತಿ ಯೋಜನೆಯ ಆರಂಭದಿಂದ ರಾಜ್ಯದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಡಿಸೆಂಬರ್ ಅಂತ್ಯಕ್ಕೆ 3,500 ಬಸ್‌ಗಳು ಸಾರಿಗೆ ನಿಗಮಕ್ಕೆ ಸೇರ್ಪಡೆಯಾಗಲಿವೆ ಎಂದು ಮುರುಳೀಧರ ಹಾಲಪ್ಪ ಹೇಳಿದರು. ಹೊಸ ಬಸ್‌ಗಳ ಆಗಮನದಿಂದ ಪ್ರಯಾಣಿಕರ ಪರದಾಟ ತಗ್ಗಲಿದೆ. ಸದ್ಯ ತಾಲ್ಲೂಕಿ ನಲ್ಲಿ ಡಿಪೋ ಪ್ರಾರಂಭವಾದರೆ ಎಲ್ಲಾ ಹಳ್ಳಿಗಳಿಗೂ ಸಂಚಾರ ಮಾಡಿ, ಬಸ್ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಾಂಶುಪಾಲೆ ಜ್ಯೋತಿ, ಬಿಎಂಎಸ್ ಕಾಲೇಜಿನ ಪ್ರಾಂಶುಪಾಲ ವೀರಣ್ಣ, ರೋಟರಿ ಸಂಸ್ಥೆಯ ಸತೀಷ್, ಪ್ರಾಧ್ಯಪಕರು ಶ್ರೀನಿವಾಸ್, ನಾಗರಾಜಕುಮಾರ್, ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.