Union Budget 2025: ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕೆ ಉತ್ತೇಜನ ಶ್ಲಾಘನೀಯ: ಶಿಕ್ಷಣ ತಜ್ಞ ಪ್ರೊ.ಎಂ.ಆರ್.ದೊರೆಸ್ವಾಮಿ
Union Budget 2025: ಕೇಂದ್ರ ಬಜೆಟ್ ಬಗ್ಗೆ ಪಿಇಎಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಹಾಗೂ ಶಿಕ್ಷಣ ತಜ್ಞ ಪ್ರೊ.ಎಂ.ಆರ್.ದೊರೆಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಶಾಲಾ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟ ಒಟ್ಟು 1.28 ಲಕ್ಷ ಕೋಟಿ ರೂ.ಗಳಲ್ಲಿ ಸುಮಾರು 78,572 ಕೋಟಿ ರೂ.ಗಳನ್ನು ಹಂಚಿಕೆ ಮಾಡುವ ಮೂಲಕ ಶಾಲಾ ಶಿಕ್ಷಣಕ್ಕೆ ಉತ್ತೇಜನ ನೀಡಿದೆ. ಇದು ಒಟ್ಟು ಶಿಕ್ಷಣ ಬಜೆಟ್ ಸುಮಾರು ಶೇ. 61 ರಷ್ಟಿದೆ. ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲು ನಾನು ಕಳೆದ 5 ದಶಕಗಳಿಂದ ಒತ್ತಿಹೇಳುತ್ತಿದ್ದೇನೆ. ಇದೀಗ ಶಾಲಾ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಪಿಇಎಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಹಾಗೂ ಶಿಕ್ಷಣ ತಜ್ಞ ಪ್ರೊ.ಎಂ.ಆರ್.ದೊರೆಸ್ವಾಮಿ ತಿಳಿಸಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 15,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (ಪಿಎಂಶ್ರೀ)ಗಾಗಿ ಬಜೆಟ್ ಹಂಚಿಕೆಯಲ್ಲಿ 1,450 ಕೋಟಿ ರೂ. ಹೆಚ್ಚಳ, ಸರ್ಕಾರಿ ಶಾಲೆಗಳಿಗೆ ಪೌಷ್ಟಿಕ ಮಧ್ಯಾಹ್ನದ ಊಟವನ್ನು ಒದಗಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ (ಪಿಎಂ ಪೋಷಣ್) ಯೋಜನೆಗೆ ಹಂಚಿಕೆಯನ್ನು 12,500 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಭಾರತದಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಬೆಳೆಯುತ್ತಿರುವ ಹಿನ್ನೆಲೆ ಸರ್ಕಾರ ಇದರತ್ತ ಗಮನಹರಿಸಿ 50,000 ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಪ್ರಾಯೋಗಿಕ ಕಲಿಕೆಗೆ ಸಹಾಯವಾಗುತ್ತದೆ.
ಇನ್ನು ಗ್ರಾಮೀಣ ಭಾರತದ ಎಲ್ಲಾ ಸರ್ಕಾರಿ ಮಾಧ್ಯಮಿಕ ಶಾಲೆಗಳಿಗೆ ಹೈಸ್ಪೀಡ್ ಇಂಟರ್ನೆಟ್ ಒದಗಿಸುವ ಮೂಲಕ ಡಿಜಿಟಲ್ ಕಲಿಕೆಗೆ ಸಂಪನ್ಮೂಲ ಒದಗಿಸುವುದು. ಶಿಕ್ಷಣ ಕ್ಷೇತ್ರದಲ್ಲಿ ಎಐ ಚಾಲಿತ ಪರಿಹಾರಗಳನ್ನು ಸಂಯೋಜಿಸುವ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಗೆ 500 ಕೋಟಿ ರೂ. ಮೀಸಲಿಟ್ಟಿರುವುದು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆ ನೆರವಾಗಲಿದೆ.
ಯುವ ಪದವೀಧರರಿಗೆ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಭಾರತ ಸರ್ಕಾರದ ಬದ್ಧತೆಯು ಕೌಶಲ್ಯವನ್ನು ಉತ್ತೇಜಿಸಲು ಮೀಸಲಾದ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಭಾರತೀಯ ಭಾಷಾ ಪುಸ್ತಕ ಯೋಜನೆಯನ್ನು ಪ್ರಾರಂಭಿಸುವುದು ವಿದ್ಯಾರ್ಥಿಗಳಲ್ಲಿ ಅಂತರ್ಗತ ಮತ್ತು ಪರಿಣಾಮಕಾರಿ ಕಲಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವುದು ಶ್ಲಾಘನೀಯವಾಗಿದೆ.
ಇದಲ್ಲದೆ, ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚುವರಿ 10,000 ವೈದ್ಯಕೀಯ ಸೀಟುಗಳನ್ನು ಸೇರಿಸುವ ಪ್ರಸ್ತಾಪ ಮತ್ತು ಮುಂದಿನ 5 ವರ್ಷಗಳಲ್ಲಿ 75,000 ಸೀಟುಗಳನ್ನು ಸೇರಿಸುವ ಗುರಿ ಸೂಕ್ತವಾಗಿದೆ. ವೈದ್ಯಕೀಯ ಶಿಕ್ಷಣವನ್ನು ವಿಸ್ತರಿಸುವುದು ಮಾತ್ರವಲ್ಲದೆ ಭಾರತದಲ್ಲಿ ವೈದ್ಯರ ಪೂರೈಕೆ ಬೇಡಿಕೆ ಅನುಪಾತವನ್ನು ಪರಿಹರಿಸಲು ಸೂಕ್ತ ನಿರ್ಧಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Union Budget 2025: 8 ಬಜೆಟ್, 8 ಸೀರೆಗಳು, 8 ಮೈಲುಗಲ್ಲುಗಳು – ದಾಖಲೆ ಬರೆದ ನಿರ್ಮಲಾ ಸೀತಾರಾಮನ್