ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜ್ಯದಲ್ಲಿ ಹೆಚ್ಚಾಯ್ತು ಸ್ಟಿಂಗ್ ಆಪರೇಷನ್ ಕಾವು; ಕಿಂಗ್ ಪಿನ್‌ಗಳ ಬಂಧನಕ್ಕೆ ಆಗ್ರಹಿಸಿ ಬೀದಿಗಿಳಿದ ಎಚ್‌.ಡಿ. ಕುಮಾರಸ್ವಾಮಿ

HD Kumaraswamy: ರಾಜ್ಯದ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬ್ಲಾಕ್‌ಮೇಲ್ ಪತ್ರಕರ್ತ ರಾಕೇಶ್ ಶೆಟ್ಟಿ ಇಬ್ಬರು ಸಂಘಟಿತ ಸಂಚು ನಡೆಸಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಿ ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ಕೆಳಗಿಳಿಯುವಂತೆ ಮಾಡಿದರು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು

ಬೆಂಗಳೂರು, ಅ. 17: ಸ್ಟಿಂಗ್ ಆಪರೇಷನ್ ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಒಳಸಂಚು ಹೂಡಿ ಅವರ ಪದಚ್ಯುತಿಗೆ ಕಾರಣನಾದ ಪತ್ರಕರ್ತ ರಾಕೇಶ್ ಶೆಟ್ಟಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಶನಿವಾರ ಬೆಂಗಳೂರಿನಲ್ಲಿ ದಿಢೀರ್ ರಸ್ತೆಗಿಳಿದು ಪಾದಯಾತ್ರೆ ನಡೆಸಿದರು. ಸ್ಟಿಂಗ್ ಆಪರೇಷನ್ ಕಿಂಗ್ ಪಿನ್‌ಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ, ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿದರು.

ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಿಂದ ಪಾದಯಾತ್ರೆ ಆರಂಭಿಸಿದ ಕೇಂದ್ರ ಸಚಿವರು, ಅಸಂಖ್ಯಾತ ಕಾರ್ಯಕರ್ತರು, ಮುಖಂಡರೊಂದಿಗೆ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಪಾದಯಾತ್ರೆ ಆರಂಭಿಸಿದರು. ಮಾರ್ಗದುದ್ದಕ್ಕೂ ಪೊಲೀಸರು ಸಚಿವರನ್ನು ತಡೆದು ಮನವೊಲಿಸಲು ಯತ್ನಿಸಿದರೂ ಅದು ಫಲಿಸಲಿಲ್ಲ. ಕೊನೆಗೆ ಪ್ರೀಡಂ ಪಾರ್ಕ್ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಬಸ್ಸುಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಇಡೀ ಪ್ರದೇಶದಲ್ಲಿ ಪೊಲೀಸ್ ಕೋಟೆಯನ್ನು ನಿರ್ಮಾಣ ಮಾಡಿದರು. ಆದರೆ ಯಾವುದೇ ಕಾರಣಕ್ಕೂ ಅಶಾಂತಿಗೆ ಅವಕಾಶ ಕೊಟ್ಟು ಪಾದಯಾತ್ರೆ ಹಳಿ ತಪ್ಪುವುದು ಬೇಡ ಎಂದು ಮುಖಂಡರು ಮತ್ತು ಕಾರ್ಯಕರ್ತರ ಮನವೊಲಿಸಿದ ಕೇಂದ್ರ ಸಚಿವರು, ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

HDK

ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ನಡೆಸಿದ ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗಿಯಾಗಿರುವ ರಾಕೇಶ್ ಶೆಟ್ಟಿ, ಬಾಗೇಪಲ್ಲಿ ಪ್ರಶಾಂತ್ ಹಾಗೂ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಎಚ್‌.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರು ಆಗ್ರಹಿಸಿದರು.

ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ರಾಜ್ಯದ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬ್ಲಾಕ್‌ಮೇಲ್ ಪತ್ರಕರ್ತ ರಾಕೇಶ್ ಶೆಟ್ಟಿ ಇಬ್ಬರು ಸಂಘಟಿತ ಸಂಚು ನಡೆಸಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಿ ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ಕೆಳಗಿಳಿಯುವಂತೆ ಮಾಡಿದರು ಎಂದು ಗುರುತರ ಆರೋಪ ಮಾಡಿದರು.

HD Kumaraswamy padayatra

ಕಿಡಿಗೇಡಿ ಸ್ಟಿಂಗ್ ಆರೋಪಿಯನ್ನು ಡಿ.ಕೆ. ಶಿವಕುಮಾರ್ ನಿರಂತರವಾಗಿ ಭೇಟಿಯಾಗುತ್ತಿದ್ದರು. ಸಿದ್ದರಾಮಯ್ಯ ವಿರುದ್ಧ ನಾನೇ ವೀಡಿಯೋ ಮಾಡಿದ್ದೇನೆ. ಅವರ ವಿರುದ್ಧ ಸ್ಟಿಂಗ್ ನಡೆಸಿದ್ದು ನಾನೇ, ಅದರಲ್ಲಿರುವ ಧ್ವನಿಯು ನನ್ನದೇ ಎಂದು ಅಪರಾಧಿ ಒಪ್ಪಿಕೊಂಡಿದ್ದಾನೆ. ತಾನು ನಡೆಸುವ ಸುದ್ದಿವಾಹಿನಿಯಲ್ಲಿ ಈ ಎಲ್ಲ ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ. ನನ್ನ ಹೋರಾಟ ವೈಯಕ್ತಿಕವಲ್ಲ. ವಿಜಯದಶಮಿ ಹಬ್ಬದ ಬಳಿಕ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇನೆ ಎಂದು ಕೇಂದ್ರ ಸಚಿವರು ಹೇಳಿದರು.

ಬಳಿಕ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರನ್ನು ಭೇಟಿಯಾದ ಕೇಂದ್ರ ಸಚಿವರು, ಎರಡು ದಿನಗಳ ಹಿಂದೆ ಸ್ಟಿಂಗ್ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿ ಗಡುವು ನೀಡಿದ್ದರೂ ಅವರನ್ನು ಇನ್ನೂ ಬಂಧಿಸಿಲ್ಲ. ನೀವು ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ನೇರ ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ವರ್ಚಸ್ಸು ಹಾಳು ಮಾಡಲು ಸ್ಟಿಂಗ್‌ ಆಪರೇಷನ್‌: ಎಚ್‌.ಡಿ. ಕುಮಾರಸ್ವಾಮಿ

ಜೆಡಿಎಸ್ ದೂರಿನಲ್ಲಿ ಏನಿದೆ?

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ನೇತೃತದ ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸಹಿ ಮಾಡಿ ಸಲ್ಲಿಸಿರುವ ಈ ದೂರಿನಲ್ಲಿ ಅನೇಕ ಗಂಭೀರ ಅಂಶಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅತ್ಯಂತ ಗಂಭೀರ ಹಾಗೂ ಆತಂಕಕಾರಿ ವಿಡಿಯೊ ಒಂದರ ಕುರಿತು ಈ ದೂರನ್ನು ದಾಖಲಿಸುತ್ತಿದ್ದೇವೆ. ಈ ಘಟನೆಯು ಸಮಾಜದ ಶಾಂತಿ, ಮಹಿಳೆಯರ ಭದ್ರತೆ ಹಾಗೂ ರಾಜ್ಯದ ರಾಜಕೀಯ ಸ್ಥಿರತೆಗೆ ತೀವ್ರ ಬೆದರಿಕೆಯನ್ನು ಒಡ್ಡಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ವಿಡಿಯೊದಲ್ಲಿ ವರದಿಗಾನೆಂದು ಹೇಳಿಕೊಳ್ಳುವ ರಾಕೇಶ್ ಶೆಟ್ಟಿ ಮಹಿಳೆಯ ಯಾವುದೇ ಪೂರ್ವ ಅನುಮತಿಯಿಲ್ಲದೆ ಮತ್ತು ಆಕೆಯ ಅರಿವಿಗೆ ಬಾರದಂತೆ ರಹಸ್ಯವಾಗಿ ವಿಡಿಯೊ ಚಿತ್ರೀಕರಿಸಿದ್ದಾರೆ. ಇದು ಭಾರತೀಯ ಸಂವಿಧಾನದ ವಿಧಿ 21ರ ಅಡಿಯಲ್ಲಿ ನೀಡಲಾದ ವ್ಯಕ್ತಿಯ ಗೌಪ್ಯತೆ ಹಕ್ಕಿನ ನೇರ ಉಲ್ಲಂಘನೆ. ಅಲ್ಲದೇ ವಿಡಿಯೊ ಸಂಭಾಷಣೆಯ ನಡುವೆ ಮಹಿಳೆಯು ತಾನು ಅತ್ಯಂತ ಗಂಭೀರವಾದ ಘಟನೆಯನ್ನು ಎದುರಿಸಿದ್ದೇನೆ ಎಂದು ಆರೋಪಿಸುತ್ತಾ, ಒಬ್ಬ ರಾಜಕೀಯ ನಾಯಕರು ತನ್ನನ್ನು ತಮ್ಮ ಲೈಂಗಿಕ ಅಗತ್ಯಗಳಿಗಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ವಿಡಿಯೊದಲ್ಲಿ ದಾಖಲಾಗಿದೆ.

ಇಷ್ಟು ಸೂಕ್ಷ್ಮ ಹಾಗೂ ವೈಯಕ್ತಿಕ ವಿಚಾರವನ್ನು ವರದಿಗಾರ ಹಾಗೂ ನಿರೂಪಕ ಯಾವುದೇ ಅಧಿಕೃತ ದೂರು ಅಥವಾ ಕಾನೂನು ಪ್ರಕ್ರಿಯೆಗೆ ಒಳಪಡಿಸದೆ ಕೇವಲ ತನ್ನ ಚಾನೆಲ್‌ನ ಪ್ರಚಾರಕ್ಕಾಗಿ ಹಾಗೂ ರಾಜಕೀಯ ದುರುದ್ದೇಶಕ್ಕಾಗಿ ಮತ್ತು ಬ್ಲಾಕ್‌ಮೇಲ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಅತ್ಯಂತ ಅಕ್ಷಮ್ಯ ಅಪರಾಧವಾಗಿದೆ. ಮಹಿಳೆಗೆ ಮಾಧ್ಯಮಗಳ ಮುಂದೆ ಬರುವಂತೆ ನಿರಂತರವಾಗಿ ಒತ್ತಡ ಹೇರುತ್ತಿರುವುದು ಕಂಡು ಬರುತ್ತದೆ.

ನೀವು ಸಿದ್ದರಾಮಯ್ಯ ಅವರ ವಿರುದ್ದ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದೀರಾ? ನೀವು ಮಾಧ್ಯಮಗಳ ಮುಂದೆ ಬಂದರೆ ನಿಮಗೆ ಸಂಪೂರ್ಣ ಆರ್ಥಿಕ ನೆರವು ನೀಡುತ್ತೇವೆ ಎಂದು ಆಕೆಗೆ ಅಮಿಷ ಒಡ್ಡಿ ಪ್ರಚೋದಿಸುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಆಕೆಯ ಅನುಮತಿಯಿಲ್ಲದೆ ಮತ್ತು ಆಕೆಯ ಅರಿವಿಗೆ ಬಾರದಂತೆ ರಹಸ್ಯವಾಗಿ ವಿಡಿಯೊ ಚಿತ್ರೀಕರಿಸಲಾಗಿದ್ದು, ಇದು ಆ ಮಹಿಳೆಯ ಆತ್ಮಗೌರವ, ಗೌಪ್ಯತೆ ಮತ್ತು ಸುರಕ್ಷತೆಗೆ ತೀವ್ರ ಧಕ್ಕೆ ತರುವಂತದ್ದು. ಅಲ್ಲದೇ ಇಡೀ ಸಂಭಾಷಣೆಯು ಇಂಗ್ಲಿಷ್‌ನಲ್ಲಿ ನಡೆಯುತ್ತಿದ್ದು, ಮಧ್ಯವರ್ತಿಯೊಬ್ಬ ತುಳು ಮತ್ತು ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಇಬ್ಬರ ನಡುವೆ ಸಂವಹನ ನಡೆಸುತ್ತಿರುವುದು ಕಂಡು ಬರುತ್ತದೆ ಈ ವಿಡಿಯೊ ಸಂಭಾಷಣೆಯಲ್ಲಿ ಪ್ರಸ್ತಾಪಿಸಲಾದ 'ಸಿದ್ದರಾಮಯ್ಯ' ಎಂಬ ಹೆಸರು ಉನ್ನತ ಮಟ್ಟದ ರಾಜಕಾರಣಿಗಳನ್ನು ಉದ್ದೇಶಿಸಿ ತೇಜೋವಧೆ ಮಾಡುವ ದುರುದ್ದೇಶದಿಂದ ಕೂಡಿದೆ.

ಆರೋಪಿಯು ಈ ಹಿಂದೆಯೂ ಇಂತಹ ಕಟ್ಟುಕಥೆ ಕಟ್ಟಿ ನಕಲಿ ವಿಡಿಯೊಗಳನ್ನು ಬಳಸಿ ಪ್ರಭಾವಿ ನಾಯಕರನ್ನು ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುವ ದೊಡ್ಡ ಜಾಲವನ್ನೇ ಸೃಷ್ಟಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿರುವುದು ನಡೆದಿದೆ. ಈ ವಿಡಿಯೊದ ಹಿಂದೆ ಬಹುದೊಡ್ಡ ಆರ್ಥಿಕ ಮತ್ತು ರಾಜಕೀಯ ಲಾಭದ ಸಂಚು ಅಡಗಿದೆ.

ಈ ವರದಿಗಾರ ಈ ವಿಡಿಯೊದಲ್ಲಿ ಮಹಿಳೆಯನ್ನು ಪ್ರಚೋದಿಸುತ್ತಾ, ಆಕೆಗೆ ಸಿದ್ದರಾಮಯ್ಯ ಅವರ ಜತೆ ಮೀಟಿಂಗ್ ಏರ್ಪಡಿಸಿಕೊಡುವುದಾಗಿ ಹೇಳುತ್ತಿರುವ ವ್ಯಕ್ತಿಯ ಧ್ವನಿಯು ಖಾಸಗಿ ನ್ಯೂಸ್ ಚಾನೆಲ್ ಒಂದರ ವ್ಯವಸ್ಥಾಪಕ ನಿರ್ದೇಶಕ ಹಾಗೂ ನಿರೂಪಕ ಆಗಿರುವ ರಾಕೇಶ್ ಶೆಟ್ಟಿ ಅವರ ಧ್ವನಿಗೆ ಸಾಮ್ಯತೆ ಹೊಂದಿದೆ ಹಾಗೂ ಇಂಥ ಯಾವುದೇ ಮಾಧ್ಯಮ ಅಥವಾ ವ್ಯಕ್ತಿ ನಡೆಸುವ ಕುಟುಕು ಕಾರ್ಯಾಚರಣೆ, ಅಂತಹ ಕಾರ್ಯಾಚರಣೆಯಲ್ಲಿ ಲಭ್ಯವಾಗುವ ಇಂತಹ ಗಂಭೀರ ಸ್ವರೂಪದ ಮಾಹಿತಿಯನ್ನು ತಕ್ಷಣವೇ ಸಂಬಂಧಿತ ಪೊಲೀಸ್ ಇಲ್ಲವೇ ನ್ಯಾಯಾಂಗ ಸಂಸ್ಥೆಗಳ ಗಮನಕ್ಕೆ ತರುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿಯಲ್ಲಿ ಪೊಲೀಸ್ ಇಲಾಖೆಯ ಕಾನೂನುಬದ್ದ ಕರ್ತವ್ಯ.

ಈ ಘಟನೆಯಲ್ಲಿ ಆರೋಪಿ ವರದಿಗಾರನು ಹಲವು ವರ್ಷಗಳು ಕಳೆದರೂ ಯಾವುದೇ ಸರ್ಕಾರಿ ಅಥವಾ ಕಾನೂನು ಸಂಸ್ಥೆಗೆ ಮಾಹಿತಿ ನೀಡದೆ, ಸ್ವಹಿತಾಸಕ್ತಿಗಾಗಿ ಈ ವಿಡಿಯೊವನ್ನು ಮುಚ್ಚಿಟ್ಟು ದುರುದ್ದೇಶಪೂರಿತವಾಗಿ ಬಳಸಿಕೊಂಡಿರುವುದು ಕಾನೂನಿನ ಅಡಿಯಲ್ಲಿ ದೊಡ್ಡ ಅಪರಾಧ. ನಿರೂಪಕ ರಾಕೇಶ್ ಶೆಟ್ಟಿ ಈ ವಿಡಿಯೊವನ್ನು ತನಗೆ ಬೇಕಾದಂತೆ ಎಡಿಟ್/ತಿದ್ದುಪಡಿ ಮಾಡಿ ರಾಜ್ಯದ ಉನ್ನತ ಮಟ್ಟದ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಅಧಿಕಾರಿಗಳು, ಉದ್ದಿಮೆದಾರನ್ನು ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುವ ಅಕ್ರಮ ಎಸಗುವ ಬಹುದೊಡ್ಡ ವ್ಯವಸ್ಥಿತ ಸಂಚು ರೂಪಿಸಿರುವುದು ಕಂಡು ಬಂದಿದೆ.

ಈ ಕೃತ್ಯ ಎಸಗಿರುವ ರಾಕೇಶ್ ಶೆಟ್ಟಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಂಪರ್ಕದಲ್ಲಿದ್ದು, ಅವರ ಕುಮ್ಮಕ್ಕಿನಿಂದ ಉನ್ನತ ಮಟ್ಟದ ಪೊಲೀಸ್ ರಕ್ಷಣೆಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಈ ರಕ್ಷಣೆಯ ಮರೆಯಲ್ಲೇ ರಾಜಕೀಯ ವ್ಯಕ್ತಿಗಳ ಜತೆ ಸೇರಿ ಈ ಆಳವಾದ ಷಡ್ಯಂತ್ರ ಹಣೆದಿರುವುದು ವ್ಯಕ್ತವಾಗಿರುತ್ತದೆ. ಇಂತಹ ವಿಡಿಯೊಗೆ ಸಂಬಂಧಿಸಿದಂತೆ ಹಿಂದಿನ ಮುಖ್ಯಮಂತ್ರಿ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ. ಅವರ ಪುತ್ರ ಯತೀಂದ್ರ ಸಹ ತಮ್ಮ ತಂದೆಯ ತೇಜೋವಧೆ ಮಾಡಲು ನಕಲಿ ವಿಡಿಯೊ ಹರಡಲಾಗುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿರುವುದು ಈ ದೂರಿಗೆ ಪುಷ್ಟಿ ನೀಡುತ್ತದೆ. ರಾಕೇಶ್ ಶೆಟ್ಟಿ ಬಳಿ ಇಂತಹ ಹಲವು ರಾಜಕೀಯ ವ್ಯಕ್ತಿಗಳ, ಗಣ್ಯ ವ್ಯಕ್ತಿಗಳ ವಿಡಿಯೊಗಳಿದ್ದು ಬ್ಲಾಕ್‌ಮೇಲ್ ದಂಧೆಯಲ್ಲಿ ತೊಡಗಿದ್ದಾರೆ.

ಇಂತಹ ಅತ್ಯಂತ ಗಂಭೀರ ಹಾಗೂ ಸ್ಪಷ್ಟ ಸಾಕ್ಷಾಧಾರಗಳು ಕಣ್ಣ ಮುಂದೆಯೆ ಇದ್ದರೂ ಈವರೆಗೆ ಸ್ಟಿಂಗ್ ವಿಡಿಯೊ ಸೃಷ್ಟಿಸಿ ಸ್ವಹಿತಾಸಕ್ತಿಗೆ ಬಳಸಿಕೊಂಡ ಮೂಲ ರೂವಾರಿಯನ್ನು ಬಂಧಿಸಲು ಪೊಲೀಸ್ ಇಲಾಖೆ ಯಾವುದೇ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳದಿರುವುದು ಸಂಶಯ ಉಂಟು ಮಾಡುತ್ತದೆ. ಈ ಎಲ್ಲ ಸತ್ಯಾಸತ್ಯಗಳು ಪೊಲೀಸ್ ಇಲಾಖೆಯ ಕಣ್ಣ ಮುಂದೆಯೆ ಹಾಗೂ ಸಾಮಾಜಿಕ ಜಾಲತಾಣದಲ್ಲಿದ್ದರೂ ಇಲಾಖೆ ಈ ಗಂಭೀರ ಪ್ರಕರಣವನ್ನು ಬೇರೆಡೆಗೆ ದಿಕ್ಕು ತಪ್ಪಿಸಲು ಯತ್ನಿಸುತ್ತಾ ಆರೋಪಿಗಳಿಗೆ ಪೊಲೀಸ್ ರಕ್ಷಣೆ ನೀಡುತ್ತಿರುವುದು ಕಾನೂನಿಗೆ ವಿರುದ್ದವಾದುದು. ಆದ್ದರಿಂದ, ಇಲಾಖೆ ತಕ್ಷಣವೇ ತನ್ನ ನಿಷ್ಕ್ರಿಯತೆಯನ್ನು ಬಿಟ್ಟು ಸತ್ಯವನ್ನು ಮರೆಮಾಚುವ ಯತ್ನವನ್ನು ಕೈಬಿಟ್ಟು ಈ ಕೃತ್ಯದ ಹಿಂದೆ ಇರುವ ಎಲ್ಲ ಆರೋಪಿಗಳ ವಿರುದ್ದ ಯಾವುದೇ ಮುಲಾಜಿಲ್ಲದೇ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಿ ಈ ಕುಟುಕು ಕಾರ್ಯಾಚರಣೆಯಲ್ಲಿ ಒಳಗಾಗಿರುವ ಎಲ್ಲರನ್ನೂ ಬಂಧಿಸಬೇಕು. ಈ ಸಂಶಯಾಸ್ಪದ ವಿಡಿಯೊದ ಮೂಲವನ್ನು ಪತ್ತೆ ಹಚ್ಚಿ ಧ್ವನಿ ಮಾದರಿ ಪರೀಕ್ಷೆ ನಡೆಸಿ ವಿಡಿಯೊದ ಹಿಂದಿರುವ ಅಸಲಿ ಸತ್ಯ, ಸ್ಟಿಂಗ್ ವಿಡಿಯೊ ಸೃಷ್ಟಿಸಿ ಸ್ವಹಿತಾಸಕ್ತಿಗೆ ಬಳಸಿಕೊಂಡ ಎಲ್ಲರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಜೆಡಿಎಸ್‌ ಒತ್ತಾಯಿಸಿದೆ.

ಸಿಜೆಪಿಗೆ ಕಾಂಗ್ರೆಸ್‌ನಿಂದ ಹಣಕಾಸು ನೆರವು: ಬಿ.ವೈ. ವಿಜಯೇಂದ್ರ ವಾಗ್ದಾಳಿ

ಡಿಜಿ ಸಲೀಂ ಅವರನ್ನು ಭೇಟಿಯಾದ ಜೆಡಿಎಸ್ ನಿಯೋಗದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ, ಸಾ.ರಾ. ಮಹೇಶ್, ವೆಂಕಟರಾವ್ ನಾಡಗೌಡ, ಡಿ.ಸಿ. ತಮ್ಮಣ್ಣ, ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಸಂಸದ ಎಂ. ಮಲ್ಲೇಶ್ ಬಾಬು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ಶಾಸಕರಾದ ಟಿ.ಎ. ಶರವಣ, ಕರೆಮ್ಮ ನಾಯಕ, ಎಚ್.ಟಿ. ಮಂಜುನಾಥ್, ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಕೆ. ಅನ್ನದಾನಿ, ಎ. ಮಂಜುನಾಥ್, ಅಖಂಡ ಶ್ರೀನಿವಾಸಮೂರ್ತಿ, ಶಿವಶಂಕರ್, ದೊಡ್ಡನಗೌಡ ಪಾಟೀಲ, ವಕ್ತಾರರಾದ ದೇವರಾಜ್, ಪ್ರದೀಪ್ ಕುಮಾರ್, ಯುವ ಮುಖಂಡ ಪ್ರವೀಣ್ ಮತ್ತಿತರರು ಇದ್ದರು.