ಬೆಂಗಳೂರು, ಜು.2: ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಮೇಲೆ ಹೋದವನು ಕೆಳಗೆ ಬರಲೇಬೇಕು, ಕೆಳಗೆ ಇರೋರು ಮೇಲೆ ಹೋಗಲೇಬೇಕು. ನಾನೇ ಪರ್ಮನೆಂಟ್ ಆಗಿ ಇರುತ್ತೇನೆ ಎಂದರೆ ಅದು ಆಗದ ಮಾತು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಅವರಿಗೆ ತಿರುಗೇಟು ನೀಡಿದ್ದಾರೆ. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾನೇ ಇರುತ್ತೇನೆ, ಎಲ್ಲವೂ ನನ್ನಿಂದಲೇ ಆಗುತ್ತದೆ ಎನ್ನುವುದು ನಡೆಯಲ್ಲ. ಪ್ರತಿಯೊಂದಕ್ಕೂ ಕೊನೆ ಇರುತ್ತದೆ ಎಂದು ಹೇಳಿದ್ದಾರೆ.
'ಕುಮಾರಸ್ವಾಮಿ ರಾಮನಗರ ಬಿಟ್ಟಿದ್ದಾರೆ' ಎಂಬ ಡಿಕೆಶಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಯಾರ ಪರ್ಮಿಷನ್ ತೆಗೆದುಕೊಂಡು ನಾನು ಜಿಲ್ಲೆ ಬಿಟ್ಟು ಹೋಗಬೇಕು? ನಮಗೂ ರಾಮನಗರದಲ್ಲಿ 80 ಸಾವಿರ, ಮಾಗಡಿಯಲ್ಲಿ 80 ಸಾವಿರ ಜನ ಮತ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜನ ಅವರ ತಮ್ಮನನ್ನು ಮನೆಗೆ ಕಳಿಸಿದ್ದಾರೆ, ಆಮೇಲೆ ಅವರು ಕನಕಪುರ ಬಿಟ್ಟು ಹೋಗಿದ್ದಾರಾ? ಇಂಥ ಮಾತುಗಳನ್ನು ಬಿಟ್ಟು ಜನರಿಗೆ ಒಳ್ಳೇ ಕೆಲಸ ಮಾಡುವುದನ್ನು ಕಲಿಯಲಿ ಎಂದು ತಿರುಗೇಟು ನೀಡಿದರು.
ಅವರು ರಾಜ್ಯಕ್ಕೆ ಮುಖ್ಯಮಂತ್ರಿ ಅಥವಾ ಬೆಂಗಳೂರು ದಕ್ಷಿಣಕ್ಕೆ ಮುಖ್ಯಮಂತ್ರಿಯೋ?
ತಮ್ಮ ಪ್ರಾಯೋಜಿತ ಬೆಂಗಳೂರು ದಕ್ಷಿಣ ಜಿಲ್ಲೆಗೆ ಮುಖ್ಯಮಂತ್ರಿಗಳು ಪ್ರಾಮುಖ್ಯತೆ ಕೊಡುತ್ತಿದ್ದಾರ? ಇಲ್ಲವೇ ಎನ್ನುವುದು ಎಲ್ಲರಿಗೂ ಗೊತ್ತಿದೆ. ವ್ಯಾಪಾರ ಮಾಡುತ್ತಿದ್ದಾರಲ್ಲ, ಅವರು ಇಲ್ಲಿನ ನಾಲ್ಕು ತಾಲೂಕುಗಳಿಗೆ ಮುಖ್ಯಮಂತ್ರಿಯ ಅಥವಾ ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಯಾ? ಅವರಿಗೆ ಜವಾಬ್ದಾರಿ ಎನ್ನುವುದು ಇದೆಯಾ? ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ರಾಮನಗರದ ಒಂದಷ್ಟು ಜನರು ಜಿಲ್ಲೆಯ ಅಭಿವೃದ್ಧಿಗೆ 770 ಕೋಟಿ ಕೊಡಿ ಎಂದು ಕೇಳಲು ಬಂದಿದ್ದರೆ ಅವರ ಮುಂದೆ ಮುಖ್ಯಮಂತ್ರಿ ಭಾಷಣ ಬಿಗಿದಿದ್ದಾರೆ. ಅವರು ಯಾರೂ ಕೂಡ ಬಿಡದಿ ಟೌನ್ ಶಿಪ್ ಬಗ್ಗೆ ಕೇಳಲು ಬಂದಿರಲಿಲ್ಲ. ಅವರ ಮುಂದೆ ಈ ವ್ಯಕ್ತಿ ಬಿಡದಿ ಬಗ್ಗೆ ಭಾಷಣ ಮಾಡಿದ್ದು ನಾನು ನೋಡಿದ್ದೇನೆ. ಪಾಪ. ಅವರು ಹೇಳಿದ ಮಾತುಗಳನ್ನು ಕೇಳಿದ್ದೇನೆ. ನನಗೆ ಈ ನಾಲ್ಕು ತಾಲೂಕುಗಳು ಮುಖ್ಯ ಎಂದು ಅವರು ಹೇಳಿದ್ದಾರೆ. ಹಾಗಾದರೆ ಇವರು ಕೇವಲ ನಾಲ್ಕು ತಾಲೂಕುಗಳಿಗೆ ಮುಖ್ಯಮಂತ್ರಿನಾ? ಅಥವಾ ಇಡೀ ಕರ್ನಾಟಕಕ್ಕೆ ಮುಖ್ಯಮಂತ್ರಿನಾ? ಅವರು ಬೆಂಗಳೂರು ದಕ್ಷಿಣಕ್ಕೆ ಮುಖ್ಯಮಂತ್ರಿನಾ? ಈವರೆಗೆ ಈ ಭಾಗದಲ್ಲಿ ಏನೇನು ಅಭಿವೃದ್ಧಿ ಆಗಿಲ್ಲ ಹೇಳಿದ್ದಾರೆ. ನಾನು ರಾಮನಗರಕ್ಕೆ ಬಂದಾಗ ಒಂದು ಹಳ್ಳಿಗೂ ಸರಿಯಾದ ರಸ್ತೆಯೇ ಇರಲಿಲ್ಲ ಎಂದು ಕೇಂದ್ರ ಸಚಿವರು ಟೀಕಿಸಿದರು.
ಇವರು ಹಿಂದೆ ಪ್ರತಿನಿಧಿಸಿದ್ದ ಸಾತನೂರು, ಈಗ ಪ್ರತಿನಿಧಿಸುತ್ತಿರುವ ಕನಕಪುರ ಕ್ಷೇತ್ರಗಳು ಹೇಗಿದ್ದವು. ಕನಕಪುರದ ಎಷ್ಟೋ ಹಳ್ಳಿಗಳಲ್ಲಿ ವಿದ್ಯುತ್ ಇರಲಿಲ್ಲ. ಅದೆಲ್ಲಾ ಇವರಿಗೆ ಗೊತ್ತಿಲ್ಲವೇ? ಬೆಂಗಳೂರು ನಗರಕ್ಕೆ ಕೇವಲ 53 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರದಲ್ಲಿ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಇರಲಿಲ್ಲ. ಅದೆಲ್ಲಾ ಎಲ್ಲಿಂದ ಬಂತು? ಹೇಗೆ ಬಂತು? ಯಾರು ತಂದರು? ಇದೆಲ್ಲಾ ಅವರು ತಿಳಿದುಕೊಳ್ಳಬೇಕು ಎಂದು ಕೇಂದ್ರ ಸಚಿವರು ಹೇಳಿದರು.
ನನ್ನ ಕೈಲಾದ ಮಟ್ಟಿಗೆ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನೇನು ಬಂಡೆ ಒಡೆಯಲು ಹೋಗಿರಲಿಲ್ಲ? ಬಂಡೆ ಒಡೆದು ವಿದೇಶಕ್ಕೆ ಸಾಗಿಸಲಿಲ್ಲ. ಕನಕಪುರದ ಜನಕ್ಕೆ ಏನು ಮಾಡಲು ಸಾಧ್ಯವೋ ಅಷ್ಟು ಮಾಡಿದ್ದೇನೆ. ಒಂದು ರಸ್ತೆ ಇರಲಿಲ್ಲ. ಉಪನಗರ ಯೋಜನೆ ನಾನು ಘೋಷಣೆ ಮಾಡಿದಾಗ ಇದೇ ಡಿ.ಕೆ. ಶಿವಕುಮಾರ್, ಅವರ ಪಕ್ಷದವರು ವಿರೋಧ ಮಾಡಿದರು. ರೈತರು ಬೇಡ ಎಂದರು. ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ಮಾಡಿದ್ದರು. ಅವರಿಗೆ ಧೈರ್ಯವಿದ್ದರೆ ಎಚ್.ಕೆ. ಪಾಟೀಲ್ ಅವರ ಸಮಿತಿ ಕೊಟ್ಟ ವರದಿಯನ್ನು ಜನರ ಮುಂದೆ ಇಡಿ. 2007 ಆಗಸ್ಟ್ 15ರಂದು ಮುಖ್ಯಮಂತ್ರಿಯಾಗಿ ನಾನು ಮಾಡಿರುವ ಸ್ವಾತಂತ್ರ್ಯ ದಿನಾಚರಣೆ ಭಾಷಣ ಕೇಳಲಿ. ವಿಧಾನಸಭೆ ಕಲಾಪದಲ್ಲಿ ನಾನು ಯೋಜನೆಯನ್ನು ಕೈಬಿಟ್ಟಿದ್ದೇನೆ ಎಂದು ಘೋಷಣೆ ಮಾಡಿದ್ದೇನೆ. ಯೋಜನೆಯನ್ನೇ ಕೈಬಿಟ್ಟ ಮೇಲೆ ಡಿನೋಟಿಫಿಕೇಷನ್ ಪ್ರಶ್ನೆ ಎಲ್ಲಿಂದ ಬರುತ್ತದೆ? ದಡ್ಡತನಕ್ಕೂ ಮಿತಿ ಬೇಡವೆ? ಎಂದು ಸಿಎಂಗೆ ಕಟುವಾಗಿ ತರಾಟೆಗೆ ತೆಗೆದುಕೊಂಡರು.
ಬಿಡದಿ ಉಪನಗರ ಯೋಜನೆಗೆ ಆಕ್ಷೇಪ ಎತ್ತಿ 4,000 ಅರ್ಜಿ ಹಾಕಿದವರಿಗೆ ಉತ್ತರ ಕೊಟ್ಟಿಲ್ಲ ಇವರು. ಬರೀ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ರೈತರು ಕಾನೂನು ಹೋರಾಟ ಮಾಡುತ್ತಿದ್ದಾರೆ, ಕೋರ್ಟ್ ಮೊರೆ ಹೋಗುತ್ತಿದ್ದಾರೆ. ರೈತರ ಪರ ನಾನಿದ್ದೇನೆ ಎಂದು ಹೇಳಿದರು.
ಗ್ಯಾರಂಟಿ ಪರಿಷ್ಕರಣೆಗೆ ಜಾತಿ ಎಳೆದು ತಂದಿರುವುದು ಖಂಡನೀಯ
ಜಾತಿಯ ಹೆಸರಿನಲ್ಲಿ ಗ್ಯಾರಂಟಿ ಫಲಾನುಭವಿಗಳನ್ನು ತೆಗೆದು ಹಾಕುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. ನಾನು ಯಾವತ್ತೂ ಜಾತಿ ಹೆಸರಲ್ಲಿ ರಾಜಕೀಯ ಮಾಡಿದವನಲ್ಲ. ಕಷ್ಟ ಎಂದು ನನ್ನ ಮನೆಗೆ ಬರುವ ಯಾರನ್ನೂ ಜಾತಿ ಕೇಳಲ್ಲ, ಕಷ್ಟ-ಸುಖ ಮಾತ್ರ ಕೇಳಿ ಸಹಾಯ ಮಾಡುತ್ತೇನೆ. ಆದರೆ ಈ ಸರ್ಕಾರ ಗ್ಯಾರಂಟಿ ಪರಿಷ್ಕರಣೆಗೆ ಜಾತಿಯನ್ನು ಎಳೆದು ತಂದಿರುವುದು ಖಂಡನೀಯ ಅವರು ಆರೋಪಿಸಿದರು.
ಇಲ್ಲಿ ಜಾತಿ ಕಲಂ ಯಾಕೆ ಬೇಕು? ಗ್ಯಾರಂಟಿ ಯೋಜನೆಗೆ ಹಿಂದೂ ಎಂದು ಬರೆದರೆ ಸಾಕಲ್ಲವೇ? ನಾವು ಪಾಸ್‌ಪೋರ್ಟ್ ಮಾಡಿಸಬೇಕಾದರೆ ನನ್ನ ಜಾತಿ ಒಕ್ಕಲಿಗ ಎಂದು ಬರೆಯಲು ಅವಕಾಶ ಇದೆಯಾ? ರಾಷ್ಟ್ರೀಯತೆ ಕೇಳುತ್ತಾರೆ. ಯಾವ ಕಾರಣಕ್ಕೆ ಇವರು ಜಾತಿಯನ್ನು ತಂದಿದ್ದಾರೆ? 2028ಕ್ಕೆ ಜನರನ್ನು ಜಾತಿ ಹೆಸರಿನಲ್ಲಿ ಒಡಕು ಸೃಷ್ಟಿಸಿ ಅಧಿಕಾರಕ್ಕೆ ಬರಲು ಇವರು ಗ್ಯಾರಂಟಿಗಳನ್ನು ಇಟ್ಟುಕೊಂಡು ಸಂಚು ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಅರ್ಕಾವತಿ ಮುಂಡಾಯಿಸಿಬಿಟ್ಟರು. ಅಲ್ಲಿನ ಜನರನ್ನು ಜಮೀನು ಮಾರಿಸಿ ಪಾತ್ರೆ ತೊಳೆಯಲು ಕಳಿಸಿದ್ರು. 'ಡಿನೋಟಿಫಿಕೇಶನ್ ಕುಮಾರಸ್ವಾಮಿ ಮಾಡಿಲ್ಲ, ನಾನು ಮಾಡ್ತೀನಿ' ಅಂತಾರೆ. ಅದೇನು ಮಾತಾಡುತ್ತಾರೋ ದೇವರಿಗೆ ಗೊತ್ತು. 'ಡಿನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗಲಾ' ಅಂತಾರೆ. ಏನೇನೋ ಮಾತಾಡ್ತಾರೋ, ಅವರನ್ನ ದೇವರೇ ಕಾಪಾಡಬೇಕು" ಎಂದು ವ್ಯಂಗ್ಯವಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ವೆಂಕಟಶಿವಾರೆಡ್ಡಿ, ಗ್ರೇಟರ್ ಬೆಂಗಳೂರು ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ ಹಾಗೂ ಇತರರು ಇದ್ದರು.