ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ರಾಹುಲ್‌ ಗಾಂಧಿ ಅವರದ್ದು ʼಹಿಟ್‌ ಅಂಡ್‌ ರನ್‌ ಕೇಸ್‌ʼ ಇದ್ದಂತೆ: ಪ್ರಲ್ಹಾದ್ ಜೋಶಿ

Pralhad Joshi: ರಾಹುಲ್‌ ಗಾಂಧಿ ಅವರದ್ದು ಒಂದು ರೀತಿ ಹಿಟ್‌ ಆಂಡ್‌ ರನ್‌ ಕೇಸ್‌ ಇದ್ದಂತೆ. ಮನಬಂದಂತೆ ಮಾತನಾಡುತ್ತಾರೆ. ಉತ್ತರ ಕೇಳಿದರೆ ನಾಪತ್ತೆಯಾಗುತ್ತಾರೆ. ಯಾವುದೇ ಪ್ರಕರಣ ಸಹ ದಾಖಲಿಸುವುದಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ಪ್ರಲ್ಹಾದ್‌ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್‌ ಗಾಂಧಿ ಅವರದ್ದು ʼಹಿಟ್‌ ಅಂಡ್‌ ರನ್‌ ಕೇಸ್‌ʼ ಇದ್ದಂತೆ: ಜೋಶಿ ‌

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy Aug 8, 2025 10:26 PM

ನವದೆಹಲಿ: ʼಕುಣಿಯಲು ಬಾರದವರು ನೆಲ ಡೊಂಕುʼ ಅಂದರಂತೆ. ರಾಹುಲ್‌ ಗಾಂಧಿ (Rahul Gandhi) ಸಹ ಅದೇ ವರ್ತನೆ ತೋರುತ್ತಿದ್ದಾರೆ. ಚುನಾವಣಾ ಆಯೋಗದಂತಹ ಸಾಂಸ್ಥಿಕ ಸಂಸ್ಥೆಗಳ ಮೇಲೆ ವೃಥಾ ಆರೋಪ ಮಾಡುವ ಇವರದ್ದು ಮೂರ್ಖತನವೇ ಸರಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಕಿಡಿಕಾರಿದರು. ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುವ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಂದ ಮಾಹಿತಿ ಪಡೆದುಕೊಳ್ಳಲು ಆಯೋಗ ಕರೆದರೂ ತೆರಳಿಲ್ಲ. ಇದರಿಂದಲೇ ಗೊತ್ತಾಗುತ್ತದೆ ಇವರ ಆರೋಪಗಳೆಲ್ಲ ನಿರಾಧಾರʼ ಎಂದು ದೂರಿದರು.

ರಾಹುಲ್‌ ಗಾಂಧಿ ಅವರನ್ನು ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೆ ಕರೆದರೂ ಹೋಗಿಲ್ಲ. ಬೆಂಗಳೂರಲ್ಲೇ ಇದ್ದರೂ ಭೇಟಿ ನೀಡಿಲ್ಲ. ತಮ್ಮ ಪರವಾಗಿ ಬೇರೆಬ್ಬೊರನ್ನು ಕಳಿಸಿಕೊಡುವುದಾಗಿ ಹೇಳಿದ್ದೇಕೆ? ಎಂದು ಪ್ರಶ್ನಿಸಿದರು.

ಬೆಂಗಳೂರು ಫ್ರೀಡಂ ಪಾರ್ಕ್‌ಗೂ ಚುನಾವಣಾ ಆಯೋಗದ ಕಚೇರಿಗೆ ಐದೇ ನಿಮಿಷದ ಹಾದಿ. ನಡೆದೇ ಹೋಗಬಹುದು. ಹಾಗಿದ್ದರೂ ರಾಹುಲ್‌ ಗಾಂಧಿ ಹೋಗಿ ದಾಖಲೆಗಳನ್ನು ಒದಗಿಸಿಲ್ಲ. ಬೇರೊಬ್ಬರನ್ನು ಕಳಿಸುವುದಾಗಿ ಹೇಳಿದ್ದಾರೆ. ಆರೋಪ ಮಾಡುವ ತಾವು ಬೇರೆಯವರನ್ನು ಕಳಿಸುವುದೆಂದರೆ ಏನರ್ಥ? ಇದವರ ಸುಳ್ಳು ಆರೋಪಗಳನ್ನು ಸಾಬೀತುಪಡಿಸುತ್ತದೆ ಎಂದು ಆರೋಪಿಸಿದರು.

ರಾಹುಲ್‌ ಗಾಂಧಿ ಅವರದ್ದು ಒಂದು ರೀತಿ ಹಿಟ್‌ ಆಂಡ್‌ ರನ್‌ ಕೇಸ್‌ ಇದ್ದಂತೆ. ಮನಬಂದಂತೆ ಮಾತನಾಡುತ್ತಾರೆ. ಉತ್ತರ ಕೇಳಿದರೆ ನಾಪತ್ತೆಯಾಗುತ್ತಾರೆ. ಯಾವುದೇ ಪ್ರಕರಣ ಸಹ ದಾಖಲಿಸುವುದಿಲ್ಲ ಎಂದು ಸಚಿವ ಪ್ರಲ್ಹಾದ್‌ ಜೋಶಿ ಚಾಟಿ ಬೀಸಿದರು.

ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಚುನಾವಣೆ ಸಂಬಂಧಿತ ಎಲ್ಲಾ ಆರೋಪಗಳಿಗೆ ಅಫಿಡವಿಟ್‌ ಸಲ್ಲಿಸುವಂತೆ ಚುನಾವಣಾ ಆಯೋಗ ಹೇಳಿದೆ. ಆದರೆ ಈವರೆಗೂ ಸಲ್ಲಿಸಿಲ್ಲ. ಎಲ್ಲಾ ಬೋಗಸ್‌ ಆರೋಪಗಳಾಗಿದ್ದಕ್ಕಾಗಿ ಬೆಂಗಳೂರಲ್ಲಿ ಖುದ್ದು ಆಹ್ವಾನಿಸಿದರೂ ಹಾಜರಾಗಿಲ್ಲ ಎಂದು ಜೋಶಿ ಟೀಕಿಸಿದರು.

ಯಾರೋ ಬರೆದು ಕೊಟ್ಟದ್ದನ್ನು ಓದ್ತಾರೆ

ರಾಹುಲ್‌ ಗಾಂಧಿ ಯಾರೋ ಬರೆದುಕೊಟ್ಟದ್ದನ್ನು ಓದುತ್ತಾರೆ. ರಿಪಿಟ್‌ ಕೇಳಿದರೆ ತಡಬಡಿಸುತ್ತಾರೆ. ಇವರೊಬ್ಬ ಬೇಜವಾಬ್ದಾರಿ ರಾಜಕಾರಣಿ. ಗಂಭೀರತೆ ಎನ್ನುವುದೇ ಇಲ್ಲ. ಹತಾಶೆ, ನಿರಾಶೆಯಿಂದ ಏನೇನೋ ಮನಬಂದಂತೆ ಮಾತನಾಡುತ್ತಾರೆ ಎಂದು ಆರೋಪಿಸಿದರು.

ಕೋರ್ಟ್‌ಗೂ ಹೋಗಿಲ್ಲ

ಇವಿಎಂ ದೋಷ ಎಂದಾಯಿತು. ಈಗ ಚುನಾವಣಾ ಆಯೋಗದ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ. ದಾಖಲೆ ಸಹಿತ ಕೋರ್ಟ್‌ಗೂ ಹೋಗುವುದಿಲ್ಲ, ಹಾಗೇ ಬಾಯಿಗೆ ಬಂದಂತೆ ಬಾಲಿಶವಾಗಿ ಮಾತನಾಡುತ್ತಿದ್ದಾರೆ. ಸಿಸಿ ಟಿವಿ ದೃಶ್ಯ ಕೇಳುತ್ತಿದ್ದಾರೆ. ಆದರೆ, ಸಿಸಿ ಟಿವಿ ದೃಶ್ಯ ಸಂಗ್ರಹ ಸಹಜವಾಗಿ 45 ದಿನ ಮಾತ್ರವಿರುತ್ತದೆ. ಈಗ ಕೇಳಿದರೆ ಹೇಗೆ? ಎಂದು ಜೋಶಿ ಪ್ರಶ್ನಿಸಿದರು.

ಕಾಂಗ್ರೆಸ್‌ ಒಂದೂ ಆಕ್ಷೇಪಣೆ ಸಲ್ಲಿಸಿಲ್ಲ

ಕರ್ನಾಟಕದಲ್ಲಿ 2024ರಲ್ಲಿ ನಡೆದ ಚುನಾವಣೆ ವೇಳೆ ಒಟ್ಟು 9 ಲಕ್ಷ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಆದರೆ, ಕಾಂಗ್ರೆಸ್‌ ಪಕ್ಷದಿಂದ ಒಂದೇ ಒಂದು ಎಲೆಕ್ಷೆನ್‌ ಪಿಟಿಶನ್‌ ಸಲ್ಲಿಕೆಯಾಗಿಲ್ಲ. ಮತಪಟ್ಟಿ, ಮತದಾನದಲ್ಲಿ ಲೋಪವಾಗಿದ್ದರೆ ಏಕೆ ಆಕ್ಷೇಪಣೆ ಸಲ್ಲಿಸಲಿಲ್ಲ? ಎಂದು ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಯಾವುದೇ ಚುನಾವಣೆ ಇರಲಿ ಸಾಮಾನ್ಯವಾಗಿ ಬಿಎಲ್‌ಎಗಳು ಎಲ್ಲಾ ಕಡೆ ಹೋಗಿ ಕೆಲಸ ಮಾಡಿದ್ದಾರೆ. 2024ರಲ್ಲಿ ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಮಹದೇವಪುರದಲ್ಲಿ ಲೋಪ ಕಂಡುಬಂದಿದ್ದರೆ ಏಕೆ ಗಮನಕ್ಕೆ ತರಲಿಲ್ಲ? ಕಾಂಗ್ರೆಸ್‌ನ ಬಿಎಲ್‌ಎಗಳು ಏನು ಕತ್ತೆ ಕಾಯುತ್ತಾ ಇದ್ದರಾ? ಎಂದು ಸಚಿವ ಪ್ರಲ್ಹಾದ್‌ ಜೋಶಿ ವಾಗ್ದಾಳಿ ನಡೆಸಿದರು.

ಅಭ್ಯರ್ಥಿ ನಿದ್ದೆ ಮಾಡುತ್ತಿದ್ದರಾ?

ಚುನಾವಣಾ ಆಯೋಗ ಮತದಾರರ ಕರಡು ಪ್ರತಿಯನ್ನು ಅಭ್ಯರ್ಥಿಗಳು ಮತ್ತು ಜಿಲ್ಲಾ ಮಟ್ಟದ, ರಾಜ್ಯಮಟ್ಟದಲ್ಲಿ ಎಲ್ಲಾ ಪಾರ್ಟಿಗಳಿಗೂ ಕೊಟ್ಟಿರುತ್ತದೆ. ಆಗೇಕೆ ನೋಡಲಿಲ್ಲ. ಫಲಿತಾಂಶ ಬಂದ ತಕ್ಷಣ ಬೆಂಗಳೂರು ಸೆಂಟ್ರಲ್‌ ಎಲೆಕ್ಷೆನ್‌ ಪಿಟಿಷನ್‌ ಏಕೆ ಫೈಲ್‌ ಮಾಡಲಿಲ್ಲ? ಅಭ್ಯರ್ಥಿ ಏನು ನಿದ್ದೆ ಮಾಡುತ್ತಿದ್ದರಾ? ಅಥವಾ ರಾಹುಲ್‌ ಗಾಂಧಿ ರೀತಿ ಬೇರೆ ಲೋಕ, ಬೇರೆ ದೇಶದಲ್ಲಿ ಇದ್ದರಾ? ಎಂದು ಜೋಶಿ ಹರಿಹಾಯ್ದರು.

ನಾನೂ ಬೂತ್‌ ಏಜೆಂಟ್‌ ಆಗಿ ಕೆಲಸ ಮಾಡಿದ್ದೇನೆ. ಮತಪಟ್ಟಿಗೆ ಸಹಿ ಮಾಡಿಕೊಡಬೇಕು. ಲೋಪವಿದ್ದರೆ ಆಗೇಕೆ ಮಾಡಿ ಕೊಟ್ಟಿರಿ? ಬೆಂಗಳೂರು ಸೆಂಟ್ರಲ್‌ನ 6 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಲೀಡ್‌ ಬಂದಿದೆ. 6ನೇ ಬೂತ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ. ಇನ್ನು, ಶಿರಸಿ ವಿಧಾನಸಭಾ ಕ್ಷೇತ್ರ ಬಿಜೆಪಿಯದ್ದು. ಅಲ್ಲಿ ನಾವು ಸೋತಿದ್ದೇವೆ. ಹಾಗಾದರೆ ಅಲ್ಲಿಯೂ ಇವಿಎಂ, ಆಯೋಗ ಸರಿ ಇಲ್ಲವೇ? ಎಂದು ಜೋಶಿ ಪ್ರಶ್ನಿಸಿದರು.

ಮಹಾರಾಷ್ಟ್ರ ಚುನಾವಣೆ ಬಳಿಕ 70 ಲಕ್ಷ ವೋಟರ್‌ ಸೇರ್ಪಡೆಯಾಗಿದ್ದಾರೆ ಎಂದರು. ಆಮೇಲೆ 1 ಕೋಟಿ ಎಂದರು. ಹೀಗೆ ದಿನೇ ದಿನೇ ಮನಸೋ ಇಚ್ಛೆ ಹೇಳಿಕೆ ನೀಡತೊಡಗಿದ್ದಾರೆ ರಾಹುಲ್‌ ಗಾಂಧಿ. ಸಂಶಯಪಟ್ಟ ಇವರಿಗೆ ಆಯೋಗ 40 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಇದು ಸಾಮಾನ್ಯವೆಂದು ಸ್ಪಷ್ಟಪಡಿಸಿತು. ಆದರೂ ರಾಹುಲ್‌ ಗಾಂಧಿ ಈಗಲೂ ಮನಬಂದಂತೆ ಹೇಳಿಕೆ ಕೊಡುತ್ತಿದ್ದಾರೆ ಎಂದು ದೂರಿದರು.

ಈ ಸುದ್ದಿಯನ್ನೂ ಓದಿ | SBI Recruitment 2025: ಪದವಿ ಹೊಂದಿದವರಿಗೆ ಗುಡ್‌ನ್ಯೂಸ್‌; ಬರೋಬ್ಬರಿ 5,180 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ

ಯಾವಾಗ ಎಷ್ಟು ಸೇರ್ಪಡೆ

2004 ಮತ್ತು 2009ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲೇ ಹೆಚ್ಚು ಹೊಸ ಮತದಾರರ ಸೇರ್ಪಡೆಯಾಗಿದೆ. 2024ರಲ್ಲಿ ಶೇ.4.7, 2009ರಲ್ಲಿ ಶೇ.4.1ರಷ್ಟು ಹೆಚ್ಚಿನ ಮತದಾರರ ಸೇರ್ಪಡೆ ಆಗಿದೆ. 2014ರಲ್ಲಿ ಶೇ.3.4ರಷ್ಟು ಆಗಿದೆ. ಇನ್ನು ಎನ್‌ಡಿಎ ಕಾಲದಲ್ಲಿ ಶೇ.4.4ರಷ್ಟು ಹೊಸ ಮತದಾರರ ಸೇರ್ಪಡೆಯಾಗಿದೆ. ಇದರಲ್ಲಿ ಯಾವುದೇ ಲಾಜಿಕ್‌ ಇಲ್ಲ. ಹೊಸ ಮತದಾರರ ಹೆಚ್ಚು ಸೇರ್ಪಡೆಯಾದಾಗ ಆಗೆಲ್ಲ ಇವರೇ ಗೆದ್ದಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದರು.