ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Sirsi News: ಬೇಡ್ತಿ, ಅಘನಾಶಿನಿ ಯೋಜನೆ ವಿರೋಧಿಸಿ ಬೃಹತ್ ಜನ ಸಮಾವೇಶ

ಬೇಡ್ತಿ, ಅಘನಾಶಿನಿ ಯೋಜನೆ ವಿರೋಧಿಸಿ ಬೃಹತ್‌ ಜನ ಸಮಾವೇಶವು ಶಿರಸಿಯಲ್ಲಿ ಭಾನುವಾರ ನಡೆಯಿತು. ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಶ್ರೀಗಳು, ಸೋಂದೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾಕಳಂಕ ಭಟ್ಟಾಚಾರ್ಯ ಸ್ವಾಮೀಜಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಮಂಕಾಳ ವೈದ್ಯ ಮೊದಲಾದವರು ಯೋಜನೆಗಳನ್ನು ವಿರೋಧಿಸಿ ಮಾತನಾಡಿದರು.

ಶಿರಸಿಯಲ್ಲಿ ಬೃಹತ್‌ ಜನ ಸಮಾವೇಶ

ಶಿರಸಿ, ಜ.12: ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ (Sirsi News) ನಗರದ ಎಂಇಎಸ್ ಕ್ರೀಡಾಂಗಣದಲ್ಲಿ ಭಾನುವಾರ ಬೇಡ್ತಿ, ಅಘನಾಶಿನಿ ಯೋಜನೆ (Bedthi, Aghanasini project) ವಿರೋಧಿಸಿ ಬೃಹತ್ ಜನ ಸಮಾವೇಶ ನಡೆಯಿತು. ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಇದರ ನೇತೃತ್ವ ವಹಿಸಿ ಮಾತನಾಡಿ, ಪಶ್ಚಿಮ ಘಟ್ಟಗಳು ಈಗಾಗಲೇ ಸಾಕಷ್ಟು ಹಾನಿಗೊಳಗಾಗಿವೆ. ಬೇಡ್ತಿ-ವರದಾ ಯೋಜನೆಯಿಂದಾಗಿ ಸಾವಿರಾರು ಎಕರೆ ಅರಣ್ಯ ಭೂಮಿ ಮತ್ತು ರೈತರ ತೋಟಗಳು ನಾಶವಾಗುತ್ತವೆ. ಅರಣ್ಯವಿದ್ದರೆ ಮಾತ್ರ ಮಳೆ, ಮಳೆಯಿದ್ದರೆ ಮಾತ್ರ ನದಿ ಎಂಬ ನಿಸರ್ಗದ ನಿಯಮವನ್ನು ನಾವು ಮರೆಯಬಾರದು ಎಂದು ಎಚ್ಚರಿಸಿದರು.

​ಈ ಹೋರಾಟವು ಕೇವಲ ಭೂಮಿ ಕಳೆದುಕೊಳ್ಳುವ ರೈತರಿಗೆ ಸೀಮಿತವಾದುದಲ್ಲ. ಇದು ಈ ಭಾಗದ ಪ್ರಕೃತಿ ಮತ್ತು ಜೀವವೈವಿಧ್ಯವನ್ನು ಉಳಿಸುವ 'ಧರ್ಮಯುದ್ಧ' ಎಂದು ಕರೆ ನೀಡಿದರು. ಮುಂದಿನ ಪೀಳಿಗೆಗೆ ನಾವು ನೀಡುವ ಆಸ್ತಿ ಎಂದರೆ ಅದು ಶುದ್ಧ ಪರಿಸರ. ಇದು ನಮಗೂ ಲಾಭವಿಲ್ಲ, ರಾಜಕಾರಣಿಗಳಿಗೂ ಲಾಭವಿಲ್ಲ ಎಂದಾದರೆ ಇನ್ಯಾರೊ ಲಾಭದ ದಾಹದಲ್ಲಿದ್ದಾರೆ ಎನ್ನುವುದೇ ಅರ್ಥ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಮ್ಮ ಜಿಲ್ಲೆಗೆ ಮಾರಕವಾಗುವ ಯೋಜನೆ ಬೇಡ ಎಂದು ಸಂಸತ್‌ನಲ್ಲಿ ಧ್ವನಿ ಎತ್ತುತ್ತೇನೆ. ನಮ್ಮದು ಸಮೃದ್ದವಾದ ಜಿಲ್ಲೆ. ಹಾಗೆಯೇ ಇರಬೇಕು. ಜಿಲ್ಲೆಯ ಸಹನಶಕ್ತಿ  ಎಷ್ಟಿದೆ ಎಂಬುದನ್ನು ಮೊದಲು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿ, ನಾನು ಎಲ್ಲರ ಪರವಾಗಿ ಇದ್ದೇನೆ ಎಂದರು.

ಬೇಡ್ತಿ - ಅಘನಾಶಿನಿ ನದಿ ತಿರುವು ಯೋಜನೆಗೆ ಹವ್ಯಕ ಮಹಾಸಭೆ ವಿರೋಧ; ಜ.11ರ ಶಿರಸಿ ಸಮಾವೇಶಕ್ಕೆ ಬೆಂಬಲ

ಸಚಿವ ಮಂಕಾಳ ವೈದ್ಯ ಮಾತನಾಡಿ, ಜಿಲ್ಲೆಗೆ ಮಾರಕವಾದ, ಜನರಿಗೆ ಬೇಡವಾದ ಯೋಜನೆಗೆ ನಮ್ಮದೂ ವಿರೋಧವಿದೆ. ಜಿಲ್ಲೆಗೆ ಬರುವ ಯೋಜನೆಯಿಂದ ಜಿಲ್ಲೆಯ ಜನರಿಗೆ ಉಪಯೋಗವಾಗುವಂತಾಗಬೇಕು ಎಂದು  ಹೇಳಿದರು. ನಾನು ಸಚಿವನಾಗಿ ಅಲ್ಲ, ಈ ಜಿಲ್ಲೆಯ ಒಬ್ಬ ಮಗನಾಗಿ ಬಂದಿದ್ದೇನೆ. ಈ ಯೋಜನೆಗೆ ನನ್ನ ಸಂಪೂರ್ಣ ವಿರೋಧವಿದೆ ಎಂದು ಘೋಷಿಸಿದರು. ಸರ್ಕಾರ ಯಾವುದೇ ಯೋಜನೆ ತಂದರೂ ಅದು ಜನರ ಮತ್ತು ಪರಿಸರದ ಹಿತದೃಷ್ಟಿಯಿಂದ ಇರಬೇಕು ಎಂದು ಅವರು ಪ್ರತಿಪಾದಿಸಿದರು.



​ಈ ಯೋಜನೆಯಿಂದ ಮಲೆನಾಡಿನ ಪರಿಸರಕ್ಕೆ ಮತ್ತು ಕರಾವಳಿಯ ಮೀನುಗಾರಿಕೆಗೆ ದೊಡ್ಡ ಮಟ್ಟದ ಹೊಡೆತ ಬೀಳುತ್ತದೆ. ​ನದಿಗಳ ಸಹಜ ಹರಿವಿಗೆ ಅಡ್ಡಿಪಡಿಸುವುದರಿಂದ ಕೃಷಿ ಭೂಮಿ ನಾಶವಾಗುವ ಭೀತಿಯಿದೆ. ​ನದಿ ತಿರುಗಿಸುವಿಕೆಯಿಂದ ಸಮುದ್ರಕ್ಕೆ ಸೇರುವ ಸಿಹಿನೀರಿನ ಪ್ರಮಾಣ ಕಡಿಮೆಯಾಗಿ, ಮೀನುಗಾರರ ಬದುಕಿಗೆ ತೊಂದರೆಯಾಗುತ್ತದೆ ಎಂಬ ಆತಂಕವನ್ನು ಅವರು ಹಂಚಿಕೊಂಡರು.

ತಜ್ಞ ಕುಮಾರ ಸ್ವಾಮಿ ಮಾತನಾಡಿ, ಯೋಜನೆಯು ಕೇವಲ ನೀರಾವರಿ ಯೋಜನೆಯಲ್ಲ, ಇದು ಪಶ್ಚಿಮ ಘಟ್ಟಗಳ ಅಸ್ತಿತ್ವಕ್ಕೆ ಬರುವ ಆಪತ್ತು ಎಂದು ಪ್ರತಿಪಾದಿಸಿದರು. ಸಾವಿರಾರು ಎಕರೆ ದಟ್ಟ ಅರಣ್ಯ ಮತ್ತು ಅಡಿಕೆ ತೋಟಗಳು ನೀರಿನಲ್ಲಿ ಮುಳುಗಡೆಯಾಗುವುದರಿಂದ ಈ ಭಾಗದ ಜೀವವೈವಿಧ್ಯಕ್ಕೆ ಮರಣಶಾಸನ ಬರೆಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

Sirsi Marikamba Jatre 2026: ಫೆ. 24ರಿಂದ ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ

ಶಾಸಕ ಶಿವರಾಮ ಹೆಬ್ಬಾರ್ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಅಘನಾಶಿನಿ–ವೇದಾವತಿ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳಿಗೆ ತಮ್ಮ ವಿರೋಧವಿದೆ ಎಂದು ಘೋಷಿಸಿ. ಈ ಯೋಜನೆಗಳು ಜಿಲ್ಲೆಯ ಪರಿಸರದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಅನಂತ ಹೆಗಡೆ ಅಶೀಸರ,  ಶಾಸಕ ಭೀಮಣ್ಣ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಸೋಂದೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾಕಳಂಕ ಭಟ್ಟಾಚಾರ್ಯ ಸ್ವಾಮೀಜಿ, ನೆಲೆಮಾವು ಶ್ರೀ, ಜಡೆ ಶ್ರೀ, ಶಿರಳಗಿ ಶ್ರೀ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.

ಹರೀಶ್‌ ಕೇರ

View all posts by this author