ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉಷಃಪಾನ ಹಾಗೂ ನಾಸಾಪಾನದಿಂದ ಶತಾಯುಷಿ ಜೀವನ ಸಾಧ್ಯ: ರಾಘವೇಶ್ವರ ಭಾರತೀ ಶ್ರೀ

Sri Raghaveshwara Bharathi Swamiji: ಉಷಃಪಾನವನ್ನು ಒಂದನೇ ವಯಸ್ಸಿಗೇ ಆರಂಭಿಸಬಹುದಾಗಿದ್ದು, ಹಂತಹಂತವಾಗಿ ನೀರಿನ ಸೇವನೆಯನ್ನು ಹೆಚ್ಚಿಸುತ್ತಾ ಹೋಗಬೇಕು. ಹದಿನಾರನೇಯ ವಯಸ್ಸಿಗೆ ಬರುವಾಗ ಅದು ಎಂಟು ಬೊಗಸೆ ಆಗುವಂತೆ ಹೊಂದಿಸಿಕೊಳ್ಳುಬೇಕು. ಈ ಕ್ರಿಯೆಗಾಗಿ ನೀರನ್ನು ರಾತ್ರಿ ಶೇಖರಿಸಿಡುವಾಗ ತಾಮ್ರ ಅಥವಾ ಯಾವುದಾದರೂ ಉತ್ತಮ ಪಾತ್ರೆಯಲ್ಲಿಯೇ ನೀರನ್ನು ಶೇಖರಿಸಿಡಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ.

ಗೋಕರ್ಣ, ಸೆ.16: ಸೂರ್ಯೋದಯಕ್ಕೂ ಪೂರ್ವದಲ್ಲಿ ಪ್ರತಿದಿನವೂ ನಿಯಮಿತವಾಗಿ ನೀರನ್ನು ಸೇವಿಸುವ 'ಉಷಃಪಾನ' ಹಾಗೂ 'ನಾಸಾಪಾನ' ಪದ್ಧತಿಗಳನ್ನು ಅಳವಡಿಸಿಕೊಂಡರೆ ಮನುಷ್ಯನು ಮುಪ್ಪು ಹಾಗೂ ರೋಗಗಳಿಲ್ಲದ ನೂರು ವರ್ಷಗಳ ಕಾಲದ ಆರೋಗ್ಯಯುತ ಜೀವನವನ್ನು ನಡೆಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ಹೇಳಿದರು.

Annabrahma Chaturmasya

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಬುಧವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ 'ಉಷಃಪಾನ - ನಾಸಾಪಾನ' ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಸೂರ್ಯೋದಯಕ್ಕೂ ಪೂರ್ವದಲ್ಲಿ ಪ್ರತಿದಿನ ಎಂಟು ಬೊಗಸೆ ನೀರನ್ನು ಸೇವಿಸುವುದನ್ನು 'ಉಷಃಪಾನ' ಎಂದು ಕರೆಯಲಾಗಿದ್ದು, ಆಯುರ್ವೇದ ಹಾಗೂ ಯೋಗಶಾಸ್ತ್ರದಲ್ಲಿ ಈ ಕುರಿತಾಗಿ ಉಲ್ಲೇಖಗಳಿದ್ದು, ಪ್ರತಿದಿನ ಇದನ್ನು ಆಚರಿಸುವಂತೆ ಸೂಚಿಸಲಾಗಿದೆ. ಉಷಃಪಾನದಿಂದ ಎಲ್ಲಾ ರೋಗಗಳ ನಿವಾರಣೆಯ ಜತೆಗೆ ಮುಪ್ಪನ್ನು ಇದು ನಿವಾರಿಸುತ್ತದೆ ಮತ್ತು ಮನುಷ್ಯನು ಶತಾಯುಷಿಯಾಗುತ್ತಾನೆ ಎಂದು ಇದರ ಉಪಯೋಗವನ್ನು ಹೇಳಿದ್ದು, ಬೆಳಗ್ಗೆ ಎದ್ದು ಶೌಚಕ್ರಿಯೆಯನ್ನು ಮಾಡುವುದಕ್ಕೂ ಮೊದಲೇ ಇದನ್ನು ಆಚರಿಸಬೇಕು ಎಂದರು.

Gokarna News

ಉಷಃಪಾನವನ್ನು ಒಂದನೇ ವಯಸ್ಸಿಗೇ ಆರಂಭಿಸಬಹುದಾಗಿದ್ದು, ಹಂತಹಂತವಾಗಿ ನೀರಿನ ಸೇವನೆಯನ್ನು ಹೆಚ್ಚಿಸುತ್ತಾ ಹೋಗಬೇಕು. ಹದಿನಾರನೇಯ ವಯಸ್ಸಿಗೆ ಬರುವಾಗ ಅದು ಎಂಟು ಬೊಗಸೆ ಆಗುವಂತೆ ಹೊಂದಿಸಿಕೊಳ್ಳುಬೇಕು. ಈ ಕ್ರಿಯೆಗಾಗಿ ನೀರನ್ನು ರಾತ್ರಿ ಶೇಖರಿಸಿಡುವಾಗ ತಾಮ್ರ ಅಥವಾ ಯಾವುದಾದರೂ ಉತ್ತಮ ಪಾತ್ರೆಯಲ್ಲಿಯೇ ನೀರನ್ನು ಶೇಖರಿಸಿಡಬೇಕು ಎಂದು ಕಿವಿಮಾತು ಹೇಳಿದರು.

Ramachandrapura mutt

ಸೂರ್ಯೋದಯಕ್ಕೂ ಪೂರ್ವದಲ್ಲಿ ಮೂಗಿನ ಹೊಳ್ಳೆಗಳಿಂದ ನೀರನ್ನು ಸೇವಿಸುವ ಕ್ರಮಕ್ಕೆ 'ನಾಸಾಪಾನ' ಎಂದು ಯೋಗ ಹಾಗೂ ಆಯುರ್ವೇದದಲ್ಲಿ ಉಲ್ಲೇಖವಿದ್ದು, ಇದರಿಂದ ಬುದ್ಧಿ ಚುರುಕಾಗುವ ಜೊತೆಗೆ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಇದಕ್ಕೆ ಜಲ ನೇತಿ, ಜಲ ನಸ್ಯ ಎಂಬ ಹೆಸರೂ ಇದ್ದು, ಯೋಗಶಾಸ್ತ್ರವು ಪ್ರತಿದಿನ ಇದನ್ನು ಆಚರಿಸುವುದರಿಂದ ದಿವ್ಯದೃಷ್ಟಿ ಪ್ರಾಪ್ತವಾಗುತ್ತದೆ ಎಂದು ಹೇಳಿದೆ. ನಿಧಾನವಾಗಿ ಅಭ್ಯಾಸ ಮಾಡುತ್ತಾ ಕಲಿಯಬೇಕಾದ ಕ್ರಿಯೆ ಇದಾಗಿದ್ದು, ಈ ಕ್ರಮದಲ್ಲಿ ಸುಮಾರು ಮೂರು ಬೊಗಸೆ ನೀರನ್ನು ಸೇವಿಸಬೇಕು. ಹಾಗೆಯೇ ಕೆಲವು ಸಂದರ್ಭದಲ್ಲಿ ಈ ಕ್ರಿಯೆಯನ್ನು ಮಾಡಬಾರದು ಎಂಬ ನಿಷೇಧವಿದ್ದು, ಎಚ್ಚರಿಕೆಯಿಂದ ಇದನ್ನು ಮಾಡಬೇಕು ಎಂದು ನೇತಿಯ ಕ್ರಮವನ್ನು ವಿವರಿಸಿದರು.

Shri Raghaveshwara Bharathi Swamiji

ಮಿಂಚು, ಸಮುದ್ರದ ಆಳದಲ್ಲಿರುವ ವಡವಾಗ್ನಿ ಹಾಗೂ ಜಠರಾಗ್ನಿಗಳಿಗೆ ನೀರೇ ಇಂಧನವಾಗಿದ್ದು, ನೀರಿನಿಂದಲೇ ಈ ಮೂರು ಅಗ್ನಿಗಳುಗಳು ಪ್ರಜ್ವಲಿಸುತ್ತದೆ. ಹಾಗಾಗಿ ಉಷಃಪಾನದಿಂದ ಜಠರಾಗ್ನಿ ಮಂದವಾಗುವುದಿಲ್ಲ ಎಂದ ಶ್ರೀಗಳು, ಈ ಪ್ರವಚನ ಮಾಲಿಕೆಯಲ್ಲಿ ಉಲ್ಲೇಖಿಸಿರುವ ವಿಚಾರಗಳು ಕೇವಲ ಪುಸ್ತಕದ ಬದನೇ ಕಾಯಿಯಲ್ಲ. ಇಲ್ಲಿ ಉಲ್ಲೇಖಿಸುತ್ತಿರುವ ಹಲವು ವಿಚಾರಗಳು ನಾವು ಆಚರಿಸಿ ನೋಡಿರುವ ಅಂಶಗಳನ್ನೇ ಉಲ್ಲೇಖಿಸುತ್ತಿದ್ದು, ಸಮಾಜ ಇದನ್ನು ಅಳವಡಿಸಿಕೊಂಡು ಆರೋಗ್ಯಯುತವಾಗಬೇಕು ಎಂದು ಅಭಿಪ್ರಾಯಪಟ್ಟರು.

ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್, ವೇ.ಬ್ರ. ರವೀಶ್ ತಂತ್ರಿ, ಹಿರಿಯ ಸಾಹಿತಿ ಭುವನೇಶ್ವರೀ ಹೆಗಡೆ ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆದರು. ಶಿವರಾಮಚಂದ್ರ ಶಿವಾಲ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ರಾಜಾರಾಮ ಮರಿಗದ್ದೆ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.

ಬದಲಾವಣೆ ನಮ್ಮ ಮನೆಯಿಂದಲೇ ಆರಂಭವಾಗಲಿ: ರಾಘವೇಶ್ವರ ಭಾರತೀ ಶ್ರೀ

ಘನಪಾರಾಯಣ ಪ್ರಾರಂಭ

ಚಾತುರ್ಮಾಸ್ಯದ ಶುಭ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೃಷ್ಣ ಯಜುರ್ವೇದದ ತೈತ್ತಿರೀಯ ಶಾಖೆಯ ಘನಪಾರಾಯಣವು ವೇ.ಬ್ರ. ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ ಘನಪಾಠಿಗಳ ನೇತೃತ್ವದಲ್ಲಿ ನಾಡಿನ ಪ್ರಮುಖ ಹತ್ತು ಘನಪಾಠಿಗಳಿಂದ ಪ್ರಾರಂಭವಾಯಿತು. ಇಂದಿನಿಂದ ಸೆಪ್ಟೆಂಬರ್ ೨೩ರ ವರೆಗೆ ಘನಪಾರಾಯಣ ನಡೆಯಲಿದ್ದು, ವಿಶಿಷ್ಟವಾದ ಕ್ರಮದಲ್ಲಿ ವೇದ ಮಂತ್ರಗಳನ್ನು ಉಚ್ಚರಿಸುವ ಪದ್ಧತಿ ಘನಪಾಠವಾಗಿದೆ. ವೇದ ಪಾರಾಯಣದಲ್ಲಿ ಒಟ್ಟು 8 ಪ್ರಕಾರದ ವಿಕೃತಿ ಪಾಠಗಳಿದ್ದು, ಅವುಗಳಲ್ಲಿ ಘನಪಾಠವು ಅತ್ಯಂತ ಶ್ರೇಷ್ಠ ಹಾಗೂ ಕಠಿಣವಾದದ್ದು ಎಂದು ಪರಿಗಣಿಸಲಾಗಿದೆ.