ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಶನಿವಾರ ಬೆಳಗಿನ ಜಾವ ಭೀಕರ ಬಸ್ ಅಪಘಾತ (Ankola Bus Accident ) ಸಂಭವಿಸಿದೆ. ಬಳ್ಳಾರಿಯಿಂದ ಗೋವಾ ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸೀಬರ್ಡ್ ಬಸ್, ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 52ರ ಕಂಚಿನಬಾಗಿಲು (ಅಡ್ಲೂರು) ಬಳಿ ರಸ್ತೆಗೆ ಪಲ್ಟಿಯಾಗಿ, ಓರ್ವ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 21 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ದುರಂತ ಸಂಭವಿಸಿದ ಸಮಯದಲ್ಲಿ ಬಸ್‌ನಲ್ಲಿ ಒಟ್ಟು 36 ಪ್ರಯಾಣಿಕರಿದ್ದರು. ಸದ್ಯದ ಮಾಹಿತಿ ಪ್ರಕಾರ ಗಾಯಾಳುಗಳ ಪೈಕಿ 9 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮುಂಜಾನೆ ಚಾಲಕ ನಿದ್ದೆ ಮಂಪರಿನಲ್ಲಿ ತೂಕಡಿಸಿದ ಹಿನ್ನೆಲೆಯಲ್ಲಿ ಬಸ್ ಅಪಘಾತ ಸಂಭವಿಸಿರಬಹುದು ಎನ್ನಲಾಗಿದೆ.
ವೇಗವಾಗಿ ಚಲಿಸುತ್ತಿದ್ದ ಬಸ್ ಹೆದ್ದಾರಿಯ ಮಧ್ಯದಲ್ಲೇ ಉರುಳಿಬಿದ್ದ ಕಾರಣ, ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಅಂಕೋಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಗಾಯಗೊಂಡ 21 ಜನರನ್ನು ತಕ್ಷಣವೇ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದ 9 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕ್ರಿಮ್ಸ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದಕ್ಕೆ ಸಂಬಂಧಿಸಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.