ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂಪುಟ ನಿರ್ಣಯ: ಉತ್ತರ ಕನ್ನಡದ ಅಪ್ಸರಕೊಂಡ-ಮುಗಳಿ ಕಡಲ ವನ್ಯಜೀವಿ ಧಾಮ ಘೋಷಣೆ

CM Siddaramaiah: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮುದ್ರ ತೀರದ 6 ಕಿ.ಮೀ.ವರೆಗಿನ ಪ್ರದೇಶ ಹಾಗೂ ಅರಣ್ಯ ಪ್ರದೇಶವನ್ನು ಒಳಗೊಂಡಂತೆ ಒಟ್ಟು 5,959.322 ಹೆಕ್ಟೇರ್ ಪ್ರದೇಶವನ್ನು ಅಪ್ಸರಕೊಂಡ- ಮುಗಲಿ ಕಡಲ ವನ್ಯ ಜೀವಿಧಾಮ ಎಂದು ಘೋಷಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ನಿರ್ಧರಿಸಿದೆ.

ಅಪ್ಸರಕೊಂಡ ಬೀಚ್‌.

ಬೆಂಗಳೂರು: ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯಡಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮುದ್ರ ತೀರದ 6 ಕಿ.ಮೀ.ವರೆಗಿನ ಪ್ರದೇಶ ಹಾಗೂ ಅರಣ್ಯ ಪ್ರದೇಶವನ್ನು ಒಳಗೊಂಡಂತೆ ಒಟ್ಟು 5,959.322 ಹೆಕ್ಟೇರ್ ಪ್ರದೇಶವನ್ನು ಅಪ್ಸರಕೊಂಡ- ಮುಗಲಿ ಕಡಲ ವನ್ಯ ಜೀವಿಧಾಮ ಎಂದು ಘೋಷಿಸಲು ಸಚಿವ ಸಂಪುಟ ನಿರ್ಧರಿಸಿದೆ. ವಿಧಾನಸೌಧದಲ್ಲಿ ಗುರುವಾರ (ಜೂ. 19) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ನಿರ್ಣಯ ಕೈಗೊಳ್ಳಲಾಗಿದೆ.

ʼʼಕಡಲ ವನ್ಯಜೀವಿ ಧಾಮದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಹಾಗೂ ಮೀನುಗಾರರ ದೋಣಿ ಪ್ರವೇಶಕ್ಕೆೆ ನಿರ್ಬಂಧವಿಲ್ಲ. ಅಲ್ಲಿನ ಜನರ ಅಸ್ತಿತ್ವದಲ್ಲಿರುವ ಹಕ್ಕುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ 8.21 ಕಿ.ಮೀ. ಸಮುದ್ರ ತೀರದ 6 ಕಿ.ಮೀ. ಸಮುದ್ರದವರೆಗಿನ ಪ್ರದೇಶ ಹಾಗೂ 835 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಒಳಗೊಂಡಂತೆ ಅಪ್ಸರಕೊಂಡ ಮುಗಲಿ ಕಡಲ ವನ್ಯ ಜೀವಿಧಾಮ ಎಂದು ಘೋಷಿಸಲಾಗಿದೆ. ನೀರನ ಜೀವಿಗಳ ರಕ್ಷಣೆಯ ಪ್ರಮುಖ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆʼʼ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಸಂಜಯ್ ಬಿ.ಭಟ್ ನಿವೃತ್ತ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ಅಪರ ನಿಬಂಧಕರು (ವಿಚಾರಣೆಗಳು) ಹುದ್ದೆಗೆ ರಮಾಕಾಂತ ಚವ್ಹಾಣ, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ನೇಮಕ ಮಾಡಲೂ ತೀರ್ಮಾನ ಕೈಗೊಳ್ಲಲಾಗಿದೆ.



ಈ ಸುದ್ದಿಯನ್ನೂ ಓದಿ: ಸಂಪುಟ ನಿರ್ಣಯ: ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ಯೋಜನೆಗೆ ಅನುಮೋದನೆ

ಎ.ಆರ್.ಎಸ್.: ನಾಮನಿರ್ದೇಶನ ಮಾಡುವ ಅಧಿಕಾರದಲ್ಲಿನ ಬದಲಾವಣೆ

ಕರ್ನಾಟಕ ನೋಂದಣಿ ಸಂಘಗಳ ಕಾಯ್ದೆ 1960ರ ಪ್ರಕಾರ ಸಂಘಗಳಾಗಿ ನೋಂದಾಯಿಸಲಾದ ಆರೋಗ್ಯ ರಕ್ಷಾ ಸಮಿತಿಗಳು (ಎ.ಆರ್.ಎಸ್.) ಆಡಳಿತ/ ಸಾಮಾನ್ಯ ಸಭೆಯ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರದಲ್ಲಿನ ಬದಲಾವಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಸ್ಪೋಕ್ ಯೋಜನೆಯ 12.87 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ

ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಪಾಶ್ವವಾಯು ಮತ್ತು ತಲೆಗೆ ತೀವ್ರ ಪೆಟ್ಟಾದ ರೋಗಿಗಳ ಆರೈಕೆಗಾಗಿ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಸ್ಪೋಕ್ ಆಗಿ ಕಾರ್ಯನಿರ್ವಹಿಸುವ ಯೋಜನೆಯ 12.87 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮರು ನಾಮಕರಣ

ʼʼಕಂದಾಯ ಇಲಾಖೆಯಡಿ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಬಸಾಪೂರ ಗ್ರಾಮದ ಹೆಸರನ್ನು ಗೇರುಗುಟ್ಟ ಬಸಾಪೂರ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆನರು ಮೊದಲಿನಿಂದ ಗೇರುಗುಡ್ಡ ಬಸಾಪೂರ ಎಂದು ಕರೆಯುತ್ತಿದ್ದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆʼʼ ಎಂದು ಸಚಿವ ಎಚ್. ಕೆ.ಪಾಟೀಲ್ ವಿವರಿಸಿದರು.

ಅನುಭವ ಮಂಟಪ ನಿರ್ಮಾಣ: ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ

ʼʼಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿಯ 742 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ. 612 ಕೋಟಿ ರೂ.ಗಳ ವೆಚ್ಚವಿತ್ತು. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆʼʼ ಎಂದು ಸಚಿವರು ತಿಳಿಸಿದರು.

23.51 ಕೋಟಿ ರೂ.ಗಳ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ

ರಾಜ್ಯ ವಿಪತ್ತು ಉಪಶಪನ ನಿಧಿಯಡಿ ಅನುಮೋದಿಸಿರುವ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಶಿಲಹಳ್ಳಿ ಗ್ರಾಮದ ಬಳಿ ಕೃಷ್ಣಾ ನದಿಯ ಉಪನದಿಗೆ ಅಡ್ಡಲಾಗಿ ಹೈಲೆವೆಲ್ ಮೈನರ್ ಸೇತುವೆ ನಿರ್ಮಾಣ ಹಾಗೂ ಹುಬ್ಬಳ್ಳಿ ನಗರದ ರಾಜನಾಲಾಗೆ ತಡೆಗೋಡೆ ನಿರ್ಮಾಣ ಮಾಡುವ ಒಟ್ಟು 23.51 ಕೋಟಿ ರೂ.ಗಳ ಅಂದಾಜು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಗ್ರಂಥಾಲಯ ನಿರ್ಮಿಸಲು ರಿಯಾಯಿತಿ ದರದಲ್ಲಿ ನಿವೇಶನ

ನಗರಾಭಿವೃದ್ಧಿ ಇಲಾಖೆಯಡಿ ರಾಯಚೂರು ಜಿಲ್ಲಾ ಕುರುಬರ ಸಂಘಕ್ಕೆ ಕನಕದಾಸ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲು ರಾಯಚೂರು ನಗರದ ಸಿಯತಲಾಬ್ ಬಡಲಾವಣೆಯಲ್ಲಿ ರಾಯಚೂರು ಮಹಾನಗರ ಪಾಲಿಕೆಗೆ ಸೇರಿದ 1200 ಚದರ ಅಡಿ ಅಳತೆಯ ಖಾಲಿ ನಿವೇಶನವನ್ನು ಶೇ 50 ರಷ್ಟು ರಿಯಾಯಿತಿ ದರದಲ್ಲಿ ಮಂಜೂರು ಮಾಡುವ ಬಗ್ಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಕನಕನಾಲಾ ಆಧುನೀಕರಣ ಯೋಜನೆಗೆ ಆಡಳಿತಾತ್ಮಕ ಅನುಮೋದನೆ

ʼʼಜಲ ಸಂಪನ್ಮೂಲ ಇಲಾಖೆಯಡಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಆರ್ಯಭೋಗಪುರ ಗ್ರಾಮದ ಬಳಿ ಮಸ್ಕಿನಾಲಾದಿಂದ ಕನಕನಾಲಾ ಕಣಿವೆಗೆ ಪ್ರವಾಹದ ನೀರನ್ನು ತಿರುಗಿಸಲು ಮಸ್ಕಿನಾಲೆಯ ಮೇಲ್ಭಾಗದಲ್ಲಿ ಬ್ರಿಡ್ಜ್ –ಕಂ ಬ್ಯಾರೇಜ್ ನಿರ್ಮಿಸಲು ಮತ್ತು ಕನಕನಾಲಾ ಆಧುನೀಕರಣ ಯೋಜನೆಯ 134.56 ಕೋಟಿ ರೂ.ಗಳ ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹಿನ್ನೀರಿನ ಮೇಲ್ಭಾಗದಲ್ಲಿರುವ ಬಾಧಿತ ಅಚ್ಚುಕಟ್ಟು ಪ್ರದೇಶಗಳಾದ ಆರ್ಯಭೋಗಾಪುರ, ಮುದಲಗುಂಡಿ, ವನರಳ್ಳಿ, ಕಿಲನೂರು, ಕಲ್ಮಳ್ಳಿ, ಅಮರಾಪುರ ತಾಂಡಾಗಳು ಕಿಲ್ಲರಹಟ್ಟಿ ಗ್ರಾಮಗಳಿಗೆ ಅನುಕೂಲ ಕಲಗಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆʼʼ ಎಂದು ಎಚ್. ಕೆ.ಪಾಟೀಲ್ ಮಾಹಿತಿ ನೀಡಿದರು.

ವಿಯರ್ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಚನ್ನಬಸವೇಶ್ವರ (ಒಳಬಳ್ಳಾರಿ) ಏತ ನೀರಾವರಿ ಯೋಜನೆಯ ಜಾಕ್ ವೆಲ್ ಹತ್ತಿರ ತುಂಗಭದ್ರಾ ನದಿಗೆ ಅಡ್ಡಲಾಗಿ ವಿಯರ್ ನಿರ್ಮಾಣ ಮಾಡುವ 43.10 ಕೋಟಿ ರೂ.ಗಳ ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.

ಕೇಂದ್ರವನ್ನು ಒತ್ತಾಯಿಸಲು ಕೃಷಿ ಸಚಿವರಿಗೆ ಸೂಚನೆ

ಮಾವು ಬೆಳೆಗಾರರ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಕೋಲಾರ, ಬೆಂಗಳೂರು ಗ್ರಾಮೀಣ ಭಾಗದವರು ಈ ಬಗ್ಗೆ ಪ್ರಸ್ತಾವಿಸಿದರು. ರೈತರಿಗೆ ಪರಿಹಾರ ನೀಡಬೇಕೆಂಬ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಕೃಷಿ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿ ಕೇಂದ್ರ ಕೃಷಿ ಸಚಿವರೊಂದಿಗೆ ಚರ್ಚಿಸಬೇಕು ಎಂದು ಸೂಚನೆ ನೀಡಿದರು. ಅಗತ್ಯ ಬಿದ್ದರೆ ಭೇಟಿ ನೀಡಲು ಹಾಗೂ ಸಾಧ್ಯವಾದಷ್ಟು ಹೆಚ್ಚಿನ ಪರಿಹಾರ ನೀಡಲು ಕೇಂದ್ರವನ್ನು ಒತ್ತಾಯಿಸಬೇಕೆಂದೂ ತಿಳಿಸಿದರು. ಚಿತ್ತೂರು ಭಾಗದಲ್ಲಿ ರಾಜ್ಯದ ಮಾವಿನ ಹಣ್ಣುಗಳ ಪ್ರವೇಶಕ್ಕೆ ನಿರಾಕರಿಸಿರುವ ಬಗ್ಗೆ ಸಚಿವ ಕೆ.ಎಚ್.ಮುನಿಯಪ್ಪ ಪ್ರಸ್ತಾಪ ಮಾಡಿದರು.

ಜು. 17ಕ್ಕೆ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ

ʼʼನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಜು. 16-17ರಂದು ನಿಗದಿಯಾಗಬಹುದುʼ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮುಂದೂಡಲು ಕಾರಣ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ʼʼಆ ಭಾಗದ ಕೆಲವು ಇಲಾಖೆಗಳಿಂದ ಪ್ರಸ್ತಾವನೆಗಳು ತಲುಪಿರಲಿಲ್ಲ. ಆ ಪ್ರದೇಶಕ್ಕೆ ಪರಿಣಾಮಕಾರಿಯಾಗಿ ಕೆಲಸಗಳು ಆಗಬೇಕು ಎಂಬ ಉದ್ದೇಶದಿಂದ ಮತ್ತು ಕೆಲವು ಸಚಿವರ ಕೋರಿಕೆಯ ಮೇರೆಗೆ ಮುಂದೂಡಲಾಯಿತುʼʼ ಎಂದರು.