ಕಾರವಾರ: ಪ್ರಸ್ತಾವಿತ ಬೇಡ್ತಿ–ಹಿರೇವಡ್ಡಟ್ಟಿ (ಮಾರ್ಪಡಿಸಿದ ಬೇಡ್ತಿ–ವರದಾ) ನದಿ ಜೋಡಣೆ ಯೋಜನೆಯು (Bedti-Varada River Interlinking Project) ಕಾರ್ಯಸಾಧುವಲ್ಲ ಹಾಗೂ ಸ್ಥಳೀಯ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ; ಆದ್ದರಿಂದ ಇದನ್ನು ಅನುಷ್ಠಾನಗೊಳಿಸಬಾರದು, ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಮತ್ತು ಮುಂದಿನ ಎಲ್ಲಾ ಚಟುವಟಿಕೆಗಳನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಮಾಹಿತಿ ನೀಡಿ, ತುರ್ತು ಮಧ್ಯಪ್ರವೇಶ ಕೋರಿ ಪತ್ರ ಸಲ್ಲಿಸಿದ್ದರು. ಸಂಸದರ ಈ ಪತ್ರಕ್ಕೆ ಕೇಂದ್ರ ಸಚಿವರಿಂದ ಇದೀಗ ಅಧಿಕೃತ ಲಿಖಿತ ಉತ್ತರ ಬಂದಿದೆ.
ಸಂಸದರ ಮನವಿಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಜಲಶಕ್ತಿ ಸಚಿವರಾದ ಸಿ. ಆರ್. ಪಾಟೀಲ್ ಅವರು, ಯಾವುದೇ ನೀರಾವರಿ ಅಥವಾ ನದಿ ಜೋಡಣೆ ಯೋಜನೆಗಳನ್ನು ರೂಪಿಸುವುದು, ಅವುಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡುವುದು ಸಂಪೂರ್ಣವಾಗಿ ಆಯಾ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಷಯವಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ನೇರ ಹಸ್ತಕ್ಷೇಪವಾಗಲಿ ಅಥವಾ ಜಾರಿಯ ಹೊಣೆಯಾಗಲಿ ಇರುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರಗಳು ತಮ್ಮದೇ ಆದ ಆಡಳಿತಾತ್ಮಕ ಆದ್ಯತೆಗಳು ಮತ್ತು ಸಂಪನ್ಮೂಲಗಳ ಲಭ್ಯತೆಯ ಆಧಾರದ ಮೇಲೆ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತವೆ. ಸಂಬಂಧಪಟ್ಟ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬಂದಾಗ ನಿಯಮಾವಳಿಗಳ ಪ್ರಕಾರ ಕೇವಲ ತಾಂತ್ರಿಕ ಮಾರ್ಗದರ್ಶನ ಮತ್ತು ಸಲಹಾತ್ಮಕ ನೆರವು ನೀಡುವುದನ್ನು ಬಿಟ್ಟರೆ ಕೇಂದ್ರ ಸರ್ಕಾರಕ್ಕೆ ಯೋಜನೆ ಅನುಷ್ಠಾನದಲ್ಲಿ ಯಾವುದೇ ಪಾತ್ರವಿಲ್ಲ ಎಂಬುದನ್ನು ಸಚಿವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯು ಅಧಿಕೃತವಾಗಿ ವಿನಂತಿಸಿಕೊಂಡಿದ್ದರಿಂದ ಹಾಗೂ ದಿನಾಂಕ 23.12.2025 ರಂದು ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಮಾತ್ರ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ಈ ಡಿಪಿಆರ್ ಸಿದ್ಧಪಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಜಲಸಂಪನ್ಮೂಲ ಸಚಿವಾಲಯವು ರಾಜ್ಯ ಸರ್ಕಾರದ ಜೊತೆಗಿನ ಒಡಂಬಡಿಕೆಯಂತೆ ಕೇವಲ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದೆಯೇ ಹೊರತು, ಇದೇ ಅಂತಿಮ ಯೋಜನಾ ವರದಿಯಲ್ಲ ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ.
ಅಲ್ಲದೆ, ಈ ಹಂತದಲ್ಲಿ ನದಿಯ ಕೆಳಹಂತದ ಪರಿಸರ ವ್ಯವಸ್ಥೆ, ಕೃಷಿ, ಮೀನುಗಾರಿಕೆ, ಅಂತರ್ಜಲ ಹಾಗೂ ಬೇಡ್ತಿ ಜಲಾನಯನ ಪ್ರದೇಶದ ಜನರ ಅಗತ್ಯತೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದಿರುವ ಸಚಿವರು, ರಾಜ್ಯ ಸರ್ಕಾರ ಕೋರಿರುವ ಪ್ರದೇಶಗಳಲ್ಲಿ ನೀರಿನ ವಾಸ್ತವಿಕ ಅಗತ್ಯತೆಯನ್ನು ರಾಜ್ಯ ಸರ್ಕಾರದ ಸಮಾಲೋಚನೆಯೊಂದಿಗೆ ಅಳೆಯಲಾಗುವುದು ಎಂದು ತಿಳಿಸಿದ್ದಾರೆ. ಸಂಸದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎತ್ತಿರುವ ಪರಿಸರ ಹಾಗೂ ಜನಹಿತದ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲ್ಲಾ ಶಾಸನಬದ್ಧ ಅರಣ್ಯ, ವನ್ಯಜೀವಿ ಮತ್ತು ಪರಿಸರ ನಿಯಮಾವಳಿಗಳ ಕುರಿತು ರಾಜ್ಯ ಸರ್ಕಾರ ವರದಿ ನೀಡಿದರೆ ಅದನ್ನುಕೇಂದ್ರ ಪರಿಸರ ಇಲಾಖೆಯು ಕಡ್ಡಾಯವಾಗಿ ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.