ಕಾರವಾರ, ಫೆ. 15: ದೇಶಾದ್ಯಂತ ಭಕ್ತಿಯಿಂದ ಶಿವರಾತ್ರಿ ಆಚರಿಸಲಾಗುತ್ತಿದೆ. ಈ ಮಧ್ಯೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ದುರಂತವೊಂದು ನಡೆದಿದೆ. ಆತ್ಮಲಿಂಗ ದರ್ಶನ ಪಡೆದು ಕೆಲ ನಿಮಿಷಗಳಲ್ಲಿ ಭಕ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ (Uttara Kannada News). ಮೃತರನ್ನು ಗೋವಾದ ರತ್ನಾಕರ (76) ಎಂದು ಗುರುತಿಸಲಾಗಿದೆ. ಶಿವರಾತ್ರಿಯ ಹಿನ್ನೆಲೆಯಲ್ಲಿ ಮಹಾಬಲೇಶ್ವರನ ಆತ್ಮಲಿಂಗ ದರ್ಶನ ಪಡೆಯಲೆಂದು ರತ್ನಾಕರ ಗೋಕರ್ಣ ಕ್ಷೇತ್ರಕ್ಕೆ ಬಂದಿದ್ದರು ಎನ್ನಲಾಗಿದೆ.
ಆತ್ಮಲಿಂಗದ ದರ್ಶನ ಪಡೆದು ದೇವಸ್ಥಾನದಿಂದ ಹೊರಕ್ಕೆ ಹೋದ ಬಳಿಕ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಪೊಲೀಸರು ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿದೆ ರತ್ನಾಕರ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಲಬುರಗಿ ಕೋಟೆಯ ಶ್ರೀ ಸ್ವಯಂಭೂ ಸೋಮೇಶ್ವರ ಪೂಜೆಗೆ ಮುಂದಾದ ಹಿಂದೂ ಕಾರ್ಯಕರ್ತರ ಬಂಧನ
ದೇವಸ್ಥಾನಗಳಲ್ಲಿ ಭಕ್ತ ಜನ ಸಾಗರ
ರಾಜ್ಯದ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ಶಿವರಾತ್ರಿಯ ಪ್ರಯುಕ್ತ ಭಾನುವಾರ ಭಕ್ತರ ಜನ ಸಾಗರ ಕಂಡು ಬಂತು. ಅದರಲ್ಲಿಯೂ ಶಿವ ದೇವಸ್ಥಾನದಲ್ಲಿ ಜನ ಸಂದನಿ ತುಸು ಹೆಚ್ಚೇ ಇತ್ತು. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಮಹಾಶಿವರಾತ್ರಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಲಿಂಗಾಭಿಷೇಕ, ರುದ್ರಪಾರಾಯಣ, ಹಾಗೂ ಮಂತ್ರಜಪದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ್ ಸಾಯಿ ಶಿವತತ್ತ್ವ ಕುರಿತು ಪ್ರವಚನ ನೀಡಿದರು.
ಅಭಿಷೇಕದ ತೀರ್ಥವನ್ನು ಭಕ್ತರಿಗೆ ಪ್ರೋಕ್ಷಣೆ ಮಾಡಲಾಯಿತು. ರಾತ್ರಿ ಪೂರ್ತಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಭಕ್ತರು ಜಾಗರಣೆ, ಭಜನೆ, ಮಂತ್ರಜಪ ಹಾಗೂ ಧ್ಯಾನದಲ್ಲಿ ತೊಡಗಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಅತ್ಯಂತ ಸಂಭ್ರಮ ಮತ್ತು ಭಕ್ತಿಯಿಂದ ಆಚರಿಸಲಾಯಿತು. ಈ ಪವಿತ್ರ ದಿನದಂದು ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ನಾಡಿನ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದರು. ಸುಮಾರು 50 ಸಾವಿರಕ್ಕೂ ಭಕ್ತರು ಅಧಿಕ ಪಾದಯಾತ್ರಿ ಮೂಲಕ ಭೇಟಿ ಕೊಟ್ಟಿದ್ದು ವಿಶೇಷ.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಬರುವ ಭಕ್ತರಿಗಾಗಿ ಧರ್ಮಸ್ಥಳ ಮತ್ತು ಉಜಿರೆಯಲ್ಲಿ ವಿಶೇಷ ವಸತಿ ಮತ್ತು ವಿಶ್ರಾಂತಿ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಉಪವಾಸ ಮತ್ತು ಜಾಗರಣೆಯೊಂದಿಗೆ ರಾತ್ರಿಯಿಡೀ ಶಿವ ನಾಮ ಸ್ಮರಣೆ ಮಾಡಲಿದ್ದಾರೆ. ಪಾದಯಾತ್ರಿಗಳು ತಂಗುವ ಸ್ಥಳಗಳಲ್ಲಿ ಭಜನೆ, ಸತ್ಸಂಗ ಮತ್ತು ಧಾರ್ಮಿಕ ಉಪನ್ಯಾಸಗಳ ಮೂಲಕ ಧರ್ಮ ಪ್ರಭಾವನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಂಜುನಾಥ ಸ್ವಾಮಿಗೆ ಎಳನೀರು ಅಭಿಷೇಕ ಮತ್ತು ಶತರುದ್ರಾಭಿಷೇಕ ಸೇವೆಗಳು ವಿಶೇಷವಾಗಿ ನಡೆದಿದೆ.