ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

G S Hegde: ಐದು ದಶಕಗಳ ಸಂಗೀತ ಸೇವೆ; ಸೆ.19ರಂದು ಶಿರಸಿಯಲ್ಲಿ ಜಿ.ಎಸ್‌. ಹೆಗಡೆ ದಂಪತಿಗೆ ಸನ್ಮಾನ, ಸಂಗೀತ ಕಾರ್ಯಕ್ರಮ

G S Hegde: ಕಳೆದ 50 ವರ್ಷಗಳಿಂದ ಸಂಗೀತ ಸೇವೆಯನ್ನು ಒಂದು ದೀಕ್ಷೆಯಂತೆ ಪರಿಗಣಿಸಿ ನಿರಂತರವಾಗಿ ಕಲಾ ಕ್ಷೇತ್ರದಲ್ಲಿ ಜಿ.ಎಸ್‌. ಹೆಗಡೆ ಅವರು ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿ.ಎಸ್‌. ಹೆಗಡೆ ದಂಪತಿಗೆ ಅವರಿಗೆ ಗೌರವ ಸಲ್ಲಿಸಲು ಶಿರಸಿಯಲ್ಲಿ ಸೆ.19ರಂದು ಸನ್ಮಾನ ಮತ್ತು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಶಿರಸಿ: ದೇಶದ ವಿವಿಧ ಭಾಗಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾದ ಸರಸ್ವತಿಯ ಸೇವೆಯಲ್ಲಿ ಐದು ದಶಕಗಳಿಂದ ನಿರಂತರವಾಗಿ ತೊಡಗಿಸಿಕೊಂಡಿರುವ ಸಪ್ತಕ ಬೆಂಗಳೂರು ಸಂಸ್ಥಾಪಕ ಜಿ.ಎಸ್‌. ಹೆಗಡೆ (G.S. Hegde) ಹಾಗೂ ಗೀತಾ ಹೆಗಡೆ (Geetha Hegde) ದಂಪತಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಸೆ.19ರಂದು ನಗರದ ರಂಗಧಾಮದಲ್ಲಿ ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಬಗ್ಗೆ ನಗರದ ನೆಮ್ಮದಿ ಕುಟೀರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಪ್ತಕ ಸನ್ಮಾನ ಸಮಿತಿಯ ಗೌರವಾಧ್ಯಕ್ಷ ಡಾ.ಕೆ.ವಿ.ಶಿವರಾಮ ಅವರು ಮಾಹಿತಿ ನೀಡಿದ್ದಾರೆ. ಜಿ.ಎಸ್‌. ಹೆಗಡೆ ಅವರ 75ನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಸಂಜೆ 5 ಗಂಟೆಗೆ ಆರಂಭವಾಗಲಿದೆ. ಹಿರಿಯ ಸಂಗೀತ, ಸಂಸ್ಕೃತ ವಿದ್ವಾಂಸರಾದ ಶ್ರೀ ಎಸ್ ಶಂಭು ಭಟ್ಟ ಕತಡೋಕಾ ಅವರು ಜಿ‌.ಎಸ್. ಹೆಗಡೆ ಹಾಗೂ ಪತ್ನಿ ಗೀತಾ ಹೆಗಡೆ ಅವರಿಗೆ ಸನ್ಮಾನ ನೆರವೇರಿಸಲಿದ್ದಾರೆ.

ಜಿ.ಎಸ್‌. ಹೆಗಡೆ ಅವರು ಸಂಗೀತವನ್ನು ಕೇವಲ ಕಲೆಯಾಗಿ ನೋಡದೆ, ಅದನ್ನು ನಿರಂತರ ಸಾಧನೆ ಹಾಗೂ ಸೇವೆಯ ರೂಪದಲ್ಲಿ ಸ್ವೀಕರಿಸಿದ್ದಾರೆ. ಸಂಗೀತ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಅವರು ಹಲವು ವರ್ಷಗಳಿಂದ ಯುವ ಹಾಗೂ ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅನೇಕ ಪ್ರತಿಭೆಗಳಿಗೆ ತಮ್ಮ ಕಲೆಯನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಲು ಅವಕಾಶ ದೊರೆತಿದೆ ಎಂದರು.

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಲವು ಕಲಾವಿದರನ್ನು ಉತ್ತರ ಕನ್ನಡದ ಶಿರಸಿ, ಹೊನ್ನಾವರ, ಕುಮಟಾ ಸೇರಿದಂತೆ ಸಣ್ಣ ಪಟ್ಟಣಗಳಿಗೂ ಕರೆತಂದು ಸಂಗೀತಾಸಕ್ತರಿಗೆ ಪರಿಚಯಿಸುವ ಕಾರ್ಯವನ್ನು ಜಿ.ಎಸ್‌. ಹೆಗಡೆ ಅವರು ಮಾಡಿದ್ದಾರೆ. ಸಾಮಾನ್ಯವಾಗಿ ದೊಡ್ಡ ನಗರಗಳಿಗೆ ಸೀಮಿತವಾಗುವ ಉನ್ನತ ಮಟ್ಟದ ಸಂಗೀತ ಕಾರ್ಯಕ್ರಮಗಳು ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಲ್ಲಿಯೂ ನಡೆಯಬೇಕು ಎಂಬ ಆಶಯದೊಂದಿಗೆ ಅವರು ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.

ಸಪ್ತಕದ ಚಟುವಟಿಕೆಗಳನ್ನು ಉತ್ತರ ಕನ್ನಡಕ್ಕೆ ಮಾತ್ರ ಸೀಮಿತಗೊಳಿಸದೆ ದೇಶದ ವಿವಿಧ ಭಾಗಗಳಿಗೂ ವಿಸ್ತರಿಸುವ ಮೂಲಕ ಭಾರತೀಯ ಸಂಗೀತ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಪ್ರಯತ್ನ ನಡೆಸಲಾಗಿದೆ.

ಕಳೆದ 50 ವರ್ಷಗಳಿಂದ ಸಂಗೀತ ಸೇವೆಯನ್ನು ಒಂದು ದೀಕ್ಷೆಯಂತೆ ಪರಿಗಣಿಸಿ ನಿರಂತರವಾಗಿ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಜಿ.ಎಸ್‌. ಹೆಗಡೆ ಅವರ ಸೇವೆ ಗಮನಾರ್ಹವಾಗಿದೆ. ಶಿರಸಿಯಲ್ಲಿ 25ಕ್ಕೂ ಹೆಚ್ಚು ಹಾಗೂ ದೇಶದ ಹಲವು ನಗರ, ಪಟ್ಟಣಗಳಲ್ಲಿ ಒಟ್ಟು ಸುಮಾರು 1 ಸಾವಿರ ಕಾರ್ಯಕ್ರಮಗಳನ್ನು ಉಚಿತ ಪ್ರವೇಶದೊಂದಿಗೆ ಆಯೋಜಿಸಿರುವುದು ಅವರ ಸುದೀರ್ಘ ಸೇವೆಯ ವ್ಯಾಪ್ತಿಯನ್ನು ತೋರಿಸುತ್ತದೆ ಎಂದರು.

ಸಂಗೀತದ ಜೊತೆಗೆ ಕಲಾವಿದರಿಗೆ ವೇದಿಕೆ, ಪ್ರೇಕ್ಷಕರಿಗೆ ಉತ್ತಮ ಸಂಗೀತಾನುಭವ ಹಾಗೂ ಸಮಾಜದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಜಿ.ಎಸ್‌. ಹೆಗಡೆ ದಂಪತಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಗೌರವಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ವೈವಿಧ್ಯಮಯ ಸಂಗೀತ ಕಾರ್ಯಕ್ರಮ:

ಸನ್ಮಾನ ಕಾರ್ಯಕ್ರಮದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮುಂಬೈನ ಸ್ವಪ್ನಿಲ್ ಭಿಸೆ ಅವರಿಂದ ತಬಲಾ ಸೋಲೋ ಅವರಿಗೆ ಅಜಯ್ ಹೆಗಡೆ ವರ್ಗಾಸರ ಲೆಹರಾ ಹಾಗೂ , ಮುಂಬೈನ ಧನಂಜಯ ಹೆಗಡೆ ಗಾಯನ ಪ್ರಸ್ತುತಪಡಿಸಲಿದ್ದಾರೆ. ಅವರಿಗೆ ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು, ತಬಲಾದಲ್ಲಿ ಸ್ವಪ್ನಿಲ್ ಭಿಸೆ ಸಾಥ್ ನೀಡಲಿದ್ದಾರೆ.

ಸಂಗೀತ ಕ್ಷೇತ್ರದ ಹಿರಿಯರು, ಕಲಾವಿದರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಸಪ್ತಕ ಸನ್ಮಾನ ಸಮಿತಿ ಉತ್ತರ ಕನ್ನಡದ ಅಧ್ಯಕ್ಷ ವಿ.ಪಿ.ಹೆಗಡೆ ವೈಶಾಲಿ, ಗೌರವ ಕಾರ್ಯದರ್ಶಿ ಸತೀಶ ಹೆಗಡೆ ಗೋಳಿಕೊಪ್ಪ, ಪ್ರಮುಖರಾದ ವಿ.ಎಂ.ಭಟ್ಟ, ವಿಜಯೇಂದ್ರ ಅಜ್ಜೀಬಳ ಮತ್ತಿತರರು ಉಪಸ್ಥಿತರಿದ್ದರು.

image

“ಮಾದರಿ ವ್ಯಕ್ತಿತ್ವದ ಜಿ.ಎಸ್‌. ಹೆಗಡೆ ದಂಪತಿಗೆ ನಮ್ಮೂರಿನಲ್ಲಿ ಕೃತಜ್ಞತಾಪೂರ್ವಕ ಧನ್ಯವಾದ ಅರ್ಪಿಸುವುದರ ಜತೆಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಗುರುಗಳ ಸ್ಥಾನದಲ್ಲಿರುವ ಹಿರಿಯ ಸಂಗೀತ , ಸಂಸ್ಕೃತ ವಿದ್ವಾಂಸ ಎಸ್ ಶಂಭು ಭಟ್ಟ ಕತಡೋಕಾ ಅವರು ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ.”

– ಡಾ.ಕೆ.ವಿ.ಶಿವರಾಮ, ಸಪ್ತಕ ಸನ್ಮಾನ ಸಮಿತಿ ಗೌರವಾಧ್ಯಕ್ಷ
image

ಸಪ್ತಕದ ಅಭಿಮಾನಿಗಳು ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವರನ್ನು ಗೌರವಿಸುವದು ನಮಗೂ ಹೆಮ್ಮೆ. ಸಂಗೀತ ಕಾರ್ಯಕ್ರಮಗಳ ಜತೆಗೆ ಶಾಲಾ‌ ಮಕ್ಕಳಿಗೆ, ಬಡ ವಿದ್ಯಾರ್ಥಿಗಳಿಗೆ ನೆರವು, ಪರಿಸರ‌ ಸಂರಕ್ಷಣೆ‌ ಆದ್ಯತೆ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೂ ನೆರವಾದವರು ಸಪ್ತಕದವರು.

ವೈಶಾಲಿ ವಿ.ಪಿ.ಹೆಗಡೆ, ಅಧ್ಯಕ್ಷರು, ಸನ್ಮಾನ ಸಮಿತಿ, ಶಿರಸಿ