ಶಿರಸಿ: ಪತ್ರಿಕೆಗೂ, ಪ್ರಭಾವಕ್ಕೂ, ಪ್ರಸಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಸ್ವಾತಂತ್ರ್ಯ ಪೂರ್ವದ ಪತ್ರಿಕೆಗಳನ್ನು ಕಂಡಾಗ ಅನಿಸುತ್ತದೆ. ಮಹಾತ್ಮ ಗಾಂಧೀಜಿ ಅವರು ಪತ್ರಿಕೆಯನ್ನು ನಡೆಸುತ್ತಿದ್ದ ಕಾಲದಲ್ಲಿ ಪ್ರಸರಣ ಸಂಖ್ಯೆ ಕೇವಲ ಐದಾರು ಸಾವಿರ ಮಾತ್ರವಿತ್ತು. ಉಚಿತವಾಗಿ ಹಂಚುತ್ತಲೇ ಇರಲಿಲ್ಲ. ಆದ್ದರಿಂದ ಪ್ರಸರಣದಿಂದ ಪತ್ರಿಕೆಯ ತಾಕತ್ತು, ಪ್ರಭಾವ ಗುರುತಿಸಲು ಸಾಧ್ಯವಿಲ್ಲ ಎಂದು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwar Bhat) ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ (Sirsi News) ನೂತನವಾಗಿ ಆರಂಭವಾಗಿರುವ ತತ್ವ ನಿಷ್ಠ ದಿನಪತ್ರಿಕೆ ಹಾಗೂ ಟೆಕ್ ವೈದ್ಯ ವಾರ ಪತ್ರಿಕೆಯನ್ನು ನಗರದ ರಾಘವೇಂದ್ರ ಕಲ್ಯಾಣ ಮಂಟಪ ಸಭಾಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪತ್ರಿಕೆ ಎಂದರೆ ಅದು ಅಪಾಯಕಾರಿ, ಡೇಂಜರಸ್ ಉದ್ಯಮ. ಇದರಲ್ಲಿ ಜಾಹೀರಾತು ಮುಖ್ಯ. ಅದು ಬರದಿದ್ದರೂ ಕಷ್ಟ, ಹೆಚ್ಚಿಗೆ ಬಂದರೂ ಕಷ್ಟ. ಅಂತಹ ಅಪಾಯಕಾರಿಯಾದ ಉದ್ಯಮಕ್ಕೆ ಕೈ ಹಾಕಿದ ಪ್ರವೀಣ ಹೆಗಡೆಯವರಿಗೆ ಒಳ್ಳೆಯದಾಗಲು ಎಂದು ಹಾರೈಸಿದರು.
ಇಂದು ಪತ್ರಿಕೋದ್ಯಮಕ್ಕೆ ಗೇಟ್ ಕೀಪರ್ ಇಲ್ಲ. ಹಿಂದೆಲ್ಲ ಸಂಪಾದಕರ ಕೆಳಗೆ ಗೇಟ್ ಕೀಪರ್ ಇದ್ದರು. ಈಗ ಎಲ್ಲರೂ ಫೇಸ್ ಬುಕ್ ಪತ್ರಕರ್ತರೇ ಆಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಪತ್ರಿಕೋದ್ಯಮ ನಡೆಸುವುದು ಕಷ್ಟ. ಆದರೆ ಪತ್ರಿಕೆಯ ಪ್ರಭಾವ ಎಂದೂ ತಗ್ಗಿಲ್ಲ ಎಂದು ತಿಳಿಸಿದರು.