ಶಿರಸಿ: ‘ವಿಶ್ವವಾಣಿ’ ಸಂಸ್ಥೆಯ ಸಹೋದರಿ ದೈನಿಕವಾದ ‘ಲೋಕಧ್ವನಿ’ ಹೆಮ್ಮೆಯ ಸಾಧಕರು ಪ್ರಶಸ್ತಿಗೆ (Lokadhwani Awards) ಭಾಜನರಾಗಿದ್ದ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ, ಕೆಎಂಎಫ್ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರನ್ನು ಶಿರಸಿಯ ಸುಪ್ರಿಯಾ ಇಂಟರ್ ನ್ಯಾಷನಲ್ ಹೊಟೇಲ್‌ನಲ್ಲಿ ಶನಿವಾರ ಗೌರವಿಸಲಾಯಿತು. ವಿಶ್ವವಾಣಿ ಪ್ರಧಾನ ಸಂಪಾದಕ ಹಾಗೂ ಜನಶಕ್ತಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಅವರು ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ನೀಡಿ ಸನ್ಮಾನಿಸಿದರು.
ಈ ವೇಳೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಅವರು ಮಾತನಾಡಿ, ನನ್ನ ಬೆಳೆಸಿದ ಪತ್ರಿಕೆ ಹಾಗೂ ನನ್ನೂರಲ್ಲಿ ಈ ಪ್ರಶಸ್ತಿ ಪಡೆಯುತ್ತಿರುವುದು ಅತ್ಯಂತ ಸಂತಸದ ಕ್ಷಣ. ಸುದೀರ್ಘ ಇತಿಹಾಸ ಹೊಂದಿದ ಲೋಕಧ್ವನಿ ಪತ್ರಿಕೆಯು ಅಕ್ಷರಶಃ ಲೋಕದ ಧ್ವನಿಯಾಗಿಯೇ ಹೊರಬರುತ್ತಿರುವುದು ನಿಜಕ್ಕೂ ಸಂತಸ ಎಂದರು.
ಮತ್ತೊಬ್ಬ ಸಾಧಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ನಾವು ಅತಿಯಾಗಿ ಗೌರವಿಸುವ ವ್ಯಕ್ತಿಯ ಕೈಯಿಂದ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣ. ಎಷ್ಟೇ ದೊಡ್ಡ, ಗಣ್ಯ ವ್ಯಕ್ತಿಗಳಿಂದ ನಾನು ಪ್ರಶಸ್ತಿ ಪಡೆದಿದ್ದರೂ ಈ ಸಾರ್ಥಕ ಕ್ಷಣ ಸಿಗುತ್ತಿರಲಿಲ್ಲ ಎಂದರು.
ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ನಾವು ಯಾವುದನ್ನು ಮಾಡಲು ಸಾಧ್ಯವಾಗಿಲ್ಲವೂ ಅದನ್ನು ಬೇರೆಯವರು ಮಾಡಿದಾಗ ಅದು ಸಾಧನೆ ಎನಿಸಿಕೊಳ್ಳುತ್ತದೆ. ಈ ಇಬ್ಬರೂ ಹಾಗೇ ವಿಶೇಷವಾಗಿ ಸಾಧನೆ ಮಾಡಿದ ವ್ಯಕ್ತಿಗಳು. ಇಂಥ ಸಾಧಕರನ್ನು ಸನ್ಮಾನಿಸುವುದು ಕೂಡ ನಮಗೆ ಹೆಮ್ಮೆಯ ವಿಷಯ ಎಂದ ಅವರು, ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಲೋಕಧ್ವನಿ ಹೆಮ್ಮೆಯ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಲೋಕಧ್ವನಿ ಸಿಇಒ ಜಯಂತ ಭಟ್, ಸ್ಥಾನಿಕ ಸಂಪಾದಕ ನಾಗರಾಜ ಮತ್ತಿಗಾರ, ವಿಶ್ವವಾಣಿ ಜಾಹೀರಾತು ವಿಭಾಗದ ರಾಜಶೇಖರ ಪತ್ತಾರ ಇದ್ದರು.