ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sadhana Sourabha: ಏಪ್ರಿಲ್‌ 26ರಂದು ಕುಮಟಾದಲ್ಲಿ ಸಾಧನಾ ಸೌರಭ; ವಿಶ್ವೇಶ್ವರ ಭಟ್ಟರಿಗೆ ʼರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿʼ ಪ್ರದಾನ

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಸಭಾಮಂಟಪದಲ್ಲಿ ಏಪ್ರಿಲ್‌ 26ರಂದು ಭಾನುವಾರ ಬೆಳಗ್ಗೆ 9.30 ಗಂಟೆಗೆ ʼಸಾಧನಾ ಸೌರಭ; ಸಾಂಸ್ಕೃತಿಕ ಅನುಸಂಧಾನ ಮತ್ತು ರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿ ಪ್ರದಾನ ಸಮಾರಂಭʼ ಹಮ್ಮಿಕೊಳ್ಳಲಾಗಿದೆ. 30 ವರ್ಷಗಳ ಇತಿಹಾಸವನ್ನು ಹೊಂದಿರುವ ಸೌರಭ, ಅಪೂರ್ವ ಸದಭಿರುಚಿಯ 'ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದ ಉತ್ತರ ಕನ್ನಡದ ಅಗ್ರಗಣ್ಯ ಸಂಸ್ಥೆಗಳಲ್ಲೊಂದಾಗಿದೆ.

ಕುಮಟಾ: ಸೌರಭ ಸಂಸ್ಥೆ ವತಿಯಿಂದ ʼಸಾಧನಾ ಸೌರಭ; ಸಾಂಸ್ಕೃತಿಕ ಅನುಸಂಧಾನ ಮತ್ತು ರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿ ಪ್ರದಾನ ಸಮಾರಂಭʼವನ್ನು (Sadhana Sourabha) ಏಪ್ರಿಲ್‌ 26ರಂದು ಭಾನುವಾರ ಬೆಳಗ್ಗೆ 9.30 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಸಭಾಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಈ ಬಾರಿಯ ರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿಯನ್ನು ವಿಶ್ವವಾಣಿ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ (Vishweshwar Bhat) ಅವರಿಗೆ ಪ್ರದಾನ ಮಾಡಲಾಗುತ್ತದೆ.

30 ವರ್ಷಗಳ ಇತಿಹಾಸವನ್ನು ಹೊಂದಿರುವ ಸೌರಭ, ಅಪೂರ್ವ ಸದಭಿರುಚಿಯ 'ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದ ಉತ್ತರ ಕನ್ನಡದ ಅಗ್ರಗಣ್ಯ ಸಂಸ್ಥೆಗಳಲ್ಲೊಂದು. ಪ್ರಾಯೋಜಕರ ಉದಾರ ನೆರವು, ಸಾಂಸ್ಕೃತಿಕಾಸಕ್ತರ ನಿರಂತರ ಪ್ರೋತ್ಸಾಹ, ಸಹೃದಯಿ ಕಲಾವಿದರ ಸ್ಪಂದನೆ ನಮ್ಮ ಸಾಂಸ್ಕೃತಿಕ ಪಥದ ಯಶಸ್ಸಿನ ಗುಟ್ಟು. ದೇಶ ವಿದೇಶಗಳಲ್ಲಿ ಸುವಿಖ್ಯಾತರಾದ ಅದೆಷ್ಟೋ ಶ್ರೇಷ್ಠ - ಸಜ್ಜನ ಕಲಾವಿದರು, ಇಲ್ಲಿನ ಸಹೃದಯಿ ಪ್ರೇಕ್ಷಕರ ಎದುರು ತಮ್ಮ ಕಲಾ ಪ್ರೌಢಿಮೆ ಹಾಗೂ ಪ್ರದರ್ಶನ ನೀಡಿದ್ದಾರೆ. ಭಾವಪರವಶರಾಗಿದ್ದಾರೆ! ಹಿರಿಯರಿಗೆ ಮುನ್ನಣೆ, ಕಿರಿಯರಿಗೆ ಅವಕಾಶ, ಪ್ರಾಯೋಜಕರಿಗೆ ಹೃದ್ಯ ಅಭಿನಂದನೆ ಇವು ಸೌರಭದ ಕಾರ್ಯ ಧ್ಯೇಯ.

ಗೌಜು ಗದ್ದಲಗಳ ಮಾಲಿನ್ಯವಿಲ್ಲ. ಹಾರ ತುರಾಯಿಗಳ ಆಡಂಬರವಿಲ್ಲ. ಮನಃಪೂರ್ವಕ ಸ್ವಾಗತ - ಹೃದಯಪೂರ್ವಕ ಸತ್ಕಾರ ಇವು ನಮ್ಮ ಧನ್ಯತೆ ಹೊಸತನದ ಪರಿಚಯ, ಸೃಜನಶೀಲತೆಗೆ ಪ್ರೋತ್ಸಾಹ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಸಂಶೋಧನೆ-ಸಂವರ್ಧನೆಯೇ ಸಂಸ್ಥೆಯ ಆದ್ಯ ಲಕ್ಷ್ಯವಾಗಿದೆ.

ತಮ್ಮ ಅಪೂರ್ವ ಸಾಧನೆಯಿಂದ ಉತ್ತರ ಕನ್ನಡ ಜಿಲ್ಲೆಯ ಕೀರ್ತಿ ಗೌರವವನ್ನು ಜಗದಗಲ ವಿಸ್ತರಿಸಿದ, ಸಾಂಸ್ಕೃತಿಕ ಶ್ರೇಷ್ಠ ಕಿಂಕರರೊಬ್ಬರವರಿಗೆ ʼರಾಷ್ಟ್ರೀಯ ಸೌರಭ ಸಮ್ಮಾನ್ʼ ಪ್ರಶಸ್ತಿ ನೀಡುತ್ತಾ ಬಂದಿದ್ದೇವೆ. ಈ ವರ್ಷ ಈ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮೂರೂರಿನ ವಿಶ್ವೇಶ್ವರ ಭಟ್ಟರು ಆಯ್ಕೆಯಾಗಿದ್ದಾರೆ ಎಂದು ಸೌರಭ ಅಧ್ಯಕ್ಷ ಶ್ರೀಕಾಂತ ಕೆ. ಭಟ್ಟ ಅವರು ತಿಳಿಸಿದ್ದಾರೆ.

ವಿಶ್ವೇಶ್ವರ ಭಟ್‌ ಅವರ ಪರಿಚಯ

ವಿಶ್ವೇಶ್ವರ ಭಟ್‌ ಅವರು ಕುಮಟಾ ತಾಲೂಕಿನ ಮೂರೂರಿನಲ್ಲಿ ಹುಟ್ಟಿ ಬೆಳೆದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮಾಜಿ ಸಚಿವ ಅನಂತಕುಮಾ‌ರ್ ಅವರ ಆಪ್ತ ಕಾರ್ಯದರ್ಶಿಗಳಾಗಿ ಸೇವೆ, ವಿಜಯಕರ್ನಾಟಕ, ಕನ್ನಡಪ್ರಭ, ಸುವರ್ಣ ನ್ಯೂಸ್ ಮೊದಲಾದ ʼಪತ್ರಿಕೆ ಮತ್ತು ವಾಹಿನಿಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ಇವರ ಸಂಪಾದಕತ್ವದಲ್ಲಿ ವಿಶ್ವವಾಣಿ, ಪ್ರವಾಸಿ ಪ್ರಪಂಚ ಪತ್ರಿಕಾ ಬಳಗ ಕಾರ್ಯಪ್ರವೃತ್ತವಾಗಿದೆ. ಹಳ್ಳಿ ಹಳ್ಳಿಗಳಲ್ಲಿ ನೂರಾರು ಪತ್ರಕರ್ತರನ್ನು ಸೃಷ್ಟಿಸಿದ ಕೀರ್ತಿ ಇವರದ್ದು. ಸಾವಿರಾರು ಬರಹಗಳಿಂದ ಜನಪ್ರೀತರಾದವರು. ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ, ವಿಶ್ವಾದ್ಯಂತ ಅಧ್ಯಯನಕ್ಕಾಗಿಯೇ ಸುತ್ತಿ, ಅನುಭವಗಳ ಮಹತ್ವಪೂರ್ಣ ಕೊಡುಗೆಗಳನ್ನು ಕೊಡುತ್ತಿರುವವರು. ಈ ವರ್ಷ ವಿಶ್ವೇಶ್ವರ ಭಟ್ಟರಿಗೆ 'ರಾಷ್ಟ್ರೀಯ ಸೌರಭ ಸಮ್ಮಾನ' ಪ್ರಶಸ್ತಿಯನ್ನು ನೀಡಲು ಸೌರಭ ಟ್ರಸ್ಟ್ ತೀರ್ಮಾನಿಸಿದೆ.

ಕಾರ್ಯಕ್ರಮಗಳ ವಿವರ:

ಉದ್ಘಾಟನೆ: ಬೆಳಗ್ಗೆ 9.55ಕ್ಕೆ ವೇದಿಕೆ ಕಾರ್ಯಕ್ರಮವನ್ನು ಖ್ಯಾತ ವಾಗ್ಮಿ, ಸಾಂಸ್ಕೃತಿಕ ಧುರೀಣ ಚಕ್ರವರ್ತಿ ಸೂಲಿಬೆಲೆ ಅವರು ಉದ್ಘಾಟಿಸಲಿದ್ದಾರೆ.

ವಿಶ್ವೇಶ್ವರ ಭಟ್‌ ಅವರ ಕುರಿತು ಸಂವಾದ: ಬೆಳಗ್ಗೆ 11.10ಕ್ಕೆ ವಿಶ್ವೇಶ್ವರ ಭಟ್‌ ಅವರ ಕುರಿತ ʼಪತ್ರಿಕಾ ಪಥʼ ಸಂವಾದದಲ್ಲಿ ಹೊನ್ನಾವರದ ನಾಗರಿಕ ಪತ್ರಿಕೆ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಕರ್ಕಿ ಅವರು ಮಾತನಾಡಲಿದ್ದಾರೆ.

ಸಾಹಿತ್ಯ ಪಥ: ಬೆಳಗ್ಗೆ 11.45ಕ್ಕೆ ಉಡುಪಿ ಜಿಲ್ಲೆ ಗಿಳಿಯಾರದ ಜನಸೇವಾ ಟ್ರಸ್ಟ್‌ ಪ್ರವರ್ತಕ ವಸಂತ ಗಿಳಿಯಾರ್‌ ಮಾತನಾಡಲಿದ್ದಾರೆ.

ಕಲಾ ಸೌರಭ: ಮಧ್ಯಾಹ್ನ 12.15ಕ್ಕೆ ಹಿಂದೂಸ್ತಾನಿ ಗಾಯಕ ಪಂ. ರಘುನಂದನ್‌ ಭಟ್‌, ತಬಲಾ ವಾದಕ ಗುರುರಾಜ ಹೆಗಡೆ, ಹಾರ್ಮೋನಿಯಂ ಕಲಾವಿದ ಸತೀಶ ಭಟ್‌ ಹೆಗ್ಗಾರ ಅವರಿಂದ ಭಕ್ತಿ ಭಾವ ಗಾನ ಕಾರ್ಯಕ್ರಮ ನಡೆಯಲಿದೆ.

ವಿಸ್ಮಯ ಪಥ: ಮಧ್ಯಾಹ್ನ 2.15ಕ್ಕೆ ಸಾಹಿತಿ, ಅಂಕಣಕಾರ, ಹಿರಿಯ ಪತ್ರಕರ್ತ ರಾಜು ಅಡಕಳ್ಳಿ ಮಾತನಾಡಲಿದ್ದಾರೆ.

ಪ್ರವಾಸ ಕಥನ: ಮಧ್ಯಾಹ್ನ 2.45ಕ್ಕೆ ಲೇಖಕ ಹಾಗೂ ಅಂಕಣಕಾರ ಕಿರಣ್‌ ಉಪಾಧ್ಯಾಯ (ಬಹ್ರೈನ್‌) ಮಾತನಾಡಲಿದ್ದಾರೆ.
ಅಂತರಂಗ ಪಥ: ಮಧ್ಯಾಹ್ನ 3.35ಕ್ಕೆ ಮಾಜಿ ಸಂಸದ ಹಾಗೂ ಖ್ಯಾತ ಅಂಕಣಕಾರ ಪತ್ರಕರ್ತ ಪ್ರತಾಪ್‌ ಸಿಂಹ ಮಾತನಾಡಲಿದ್ದಾರೆ.

ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ: ಸಂಜೆ 4.35ಕ್ಕೆ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಈ ವೇಳೆ ಪ್ರಧಾನ ಅಭ್ಯಾಗತರಾಗಿ ಖ್ಯಾತ ಆಯುರ್ವೇದ ಮತ್ತು ಶಿಕ್ಷಣ ತಜ್ಞ ಹಾಗೂ ಮೂಡುಬಿದಿರೆ ಆಳ್ವಾಸ್‌ ಫೌಂಡೇಶನ್‌ ಸಂಸ್ಥಾಪಕ ಡಾ.ಎಂ.ಎನ್‌. ಮೋಹನ ಆಳ್ವಾ ಅವರು ಭಾಗವಹಿಸಲಿದ್ದು, ಸೌರಭ ಅಧ್ಯಕ್ಷ ಶ್ರೀಕಾಂತ ಕೆ. ಭಟ್ಟ, ಉಪಾಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಅರುಣ ಎನ್‌.ಹೆಗಡೆ ಅವರು ಉಪಸ್ಥಿತರಿರಲಿದ್ದಾರೆ.

ಸಂಜೆ 6.20ಕ್ಕೆ ಯಕ್ಷಗಾನ: ಮೂಡುಬಿದಿರೆ ಆಳ್ವಾಸ್‌ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಸ್ತುತ ಪಡಿಸುವ ದಿ.ಬೊಟ್ಟಿಕೆರೆ ಪರುಷೋತ್ತಮ ಪೂಂಜ ವಿರಚಿತ ʼಸಿಂಧೂರ ಸಂಗ್ರಾಮʼ ಯಕ್ಷಗಾನ ಪ್ರದರ್ಶನ ನಡೆಯಲಿದೆ.