ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೇಡ್ತಿ - ಅಘನಾಶಿನಿ ನದಿ ತಿರುವು ಯೋಜನೆಗೆ ಹವ್ಯಕ ಮಹಾಸಭೆ ವಿರೋಧ; ಜ.11ರ ಶಿರಸಿ ಸಮಾವೇಶಕ್ಕೆ ಬೆಂಬಲ

Sri Akhila Havyaka Mahasabha: ಬೇಡ್ತಿ - ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಆಯೋಜನೆಯಲ್ಲಿ ಹಾಗೂ ನಾಡಿನ ವಿವಿಧ ಸಂತರ ನೇತೃತ್ವ ಹಾಗೂ ಬೆಂಬಲದೊಂದಿಗೆ ಜನವರಿ 11ರಂದು ಶಿರಸಿಯಲ್ಲಿ ನಡೆಯಲಿರುವ ಬೃಹತ್ ಜನ ಸಮಾವೇಶವನ್ನು ಶ್ರೀ ಅಖಿಲ ಹವ್ಯಕ ಮಹಾಸಭೆಯು ಬೆಂಬಲಿಸುತ್ತದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ತಿಳಿಸಿದ್ದಾರೆ.

ಬೇಡ್ತಿ ನದಿ (ಸಂಗ್ರಹ ಚಿತ್ರ)

ಬೆಂಗಳೂರು, ಜ.10: ನದಿಗಳು ಜನಸಮೂಹದ ಜೀವನಾಡಿಗಳಾಗಿದ್ದು, ನದಿಗಳ ನೈಸರ್ಗಿಕ ಹರಿವಿನ ಬದಲಾವಣೆಯು ಜೀವಸಂಕುಲಕ್ಕೆ ಅಪಾಯಕಾರಿಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾದರೆ ದೀರ್ಘಕಾಲದ ಸಾಧಕ - ಬಾಧಕಗಳನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಬೇಕು ಹಾಗೂ ಸಮಗ್ರ ವೈಜ್ಞಾನಿಕ ಚಿಂತನೆ ಇಲ್ಲದ ಅಭಿವೃದ್ಧಿಯು ಭವಿಷ್ಯದಲ್ಲಿ ಜೀವ ಸಂಕುಲಕ್ಕೆ ಮಾರಕವಾಗಲಿದೆ. ಈ ಹಿನ್ನೆಲೆಯಲ್ಲಿ ಬೇಡ್ತಿ ಹಾಗೂ ಅಘನಾಶಿನಿ ನದಿಗಳ ತಿರುವಿನ ಯೋಜನೆಯಿಂದ ಸರ್ಕಾರಗಳು ತಕ್ಷಣ ಹಿಂದೆ ಸರಿಯಬೇಕು ಎಂದು ಶ್ರೀ ಅಖಿಲ ಹವ್ಯಕ ಮಹಾಸಭೆಯು (Shri Akhila Havyaka Mahasabha) ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಅವರು, ಬೇಡ್ತಿ - ಅಘನಾಶಿನಿ ಹಾಗೂ ಶರಾವತಿ ನದಿಗಳು ಉತ್ತರ ಕನ್ನಡದ ಜೀವ ನದಿಗಳಾಗಿದ್ದು, ನಾಡಿನ ಅಭಿವೃದ್ಧಿಗಾಗಿ ಉತ್ತರ ಕನ್ನಡವು ಈಗಾಗಲೇ ಹಲವಾರು ತ್ಯಾಗಗಳನ್ನು ಮಾಡಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶವಾದ ಉತ್ತರ ಕನ್ನಡದ ಮೇಲೆ ಇನ್ನಷ್ಟು ಹೇರಿಕೆ ಮಾಡುವುದು ಜನಜೀವನ ಹಾಗೂ ಪ್ರಾಕೃತಿಕ ಸಂಪತ್ತಿನ ಮೇಲಿನ ದೌರ್ಜನ್ಯವಾಗಿದೆ. ಬಹು ಕೋಟಿ ವೆಚ್ಚದಲ್ಲಿ ನಡೆದ ಎತ್ತಿನ ಹೊಳೆ ಯೋಜನೆಯು ಬಹುತೇಕ ನಿಷ್ಪ್ರಯೋಜಕವಾಗಿರುವ ಉದಾಹರಣೆ ನಮ್ಮ ಕಣ್ಣಿನ ಮುಂದೆ ಇರುವಾಗ, ಇದೀಗ ಪರಿಸರಕ್ಕೆ ಮಾರಕವಾದ ಮತ್ತೊಂದು ಯೋಜನೆಯನ್ನು ಮಾಡಲು ಹೊರಟಿರುವುದು ಪರಿಸರ - ಜನಜೀವನ - ಆರ್ಥಿಕ - ಭವಿಷ್ಯ ಮುಂತಾದ ಎಲ್ಲಾ ದೃಷ್ಟಿಯಿಂದಲೂ ಅವೈಜ್ಞಾನಿಕವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಷ್ಟ ಜೀವಿಗಳಾದ ಉತ್ತರ ಕನ್ನಡದ ಜನರು ಪರಿಸರದ ಜತೆಜತೆಗೆ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದು, ಹವ್ಯಕ ಸಮಾಜದ ಬಂಧುಗಳು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಜನಜೀವನಕ್ಕೆ ವರ್ತಮಾನ ಹಾಗೂ ಭವಿಷ್ಯದಲ್ಲಿ ಮಾರಕವಾಗುವ ಮತ್ತು ಸೂಕ್ಷ್ಮ ಪರಿಸರಕ್ಕೆ ಹಾನಿಯನ್ನುಂಟುಮಾಡುವ ನದಿ ತಿರುವಿನ ಯೋಜನೆಯನ್ನು ಮಹಾಸಭೆ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ; ಭೂಮಿ ಮುಳುಗಡೆ ಸಂತ್ರಸ್ತ ರೈತರಿಗೆ ಎಕರೆಗೆ 35-40 ಲಕ್ಷ ಪರಿಹಾರ ಎಂದ ಡಿಸಿಎಂ

ಬೇಡ್ತಿ - ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಆಯೋಜನೆಯಲ್ಲಿ ಹಾಗೂ ನಾಡಿನ ವಿವಿಧ ಸಂತರ ನೇತೃತ್ವ ಹಾಗೂ ಬೆಂಬಲದೊಂದಿಗೆ ಜನವರಿ 11 ರಂದು ಶಿರಸಿಯಲ್ಲಿ ನಡೆಯಲಿರುವ ಬೃಹತ್ ಜನ ಸಮಾವೇಶವನ್ನು ಹವ್ಯಕ ಮಹಾಸಭೆಯು ಬೆಂಬಲಿಸುತ್ತದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಅವರು ತಿಳಿಸಿದ್ದಾರೆ.