ಗೋಕರ್ಣ, ಸೆ.04: ಮಗುವಿಗೆ ಹಿತವಲ್ಲದ ಆಹಾರವನ್ನು ತಾಯಿ ಅಡುಗೇ ಮನೆಯಲ್ಲಿ ಕಾಣದಂತೆ ಅಡಗಿಸಿಡುವಂತೆ, ಪ್ರಕೃತಿಯು ಜೀವಿಗೆ ಹಿತವಲ್ಲದ ಆಹಾರಗಳನ್ನು ನಮ್ಮಿಂದ ಆದಷ್ಟು ದೂರವಿಟ್ಟಿರುತ್ತದೆ. ನಮಗೆ ಹಿತವಾದದ್ದು ರಮಣೀಯವಾದರೆ, ಪ್ರಿಯ ಆಹಾರವನ್ನು ಮರಣೀಯ ಎನ್ನಬಹುದಾಗಿದೆ. ಹಾಗಾಗಿ ಪ್ರಿಯ ಹಾಗೂ ಹಿತ ಆಹಾರಗಳ ವ್ಯತ್ಯಾಸವನ್ನು ಗಮನಿಸಿ ಸ್ವೀಕರಿಸಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶುಕ್ರವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಔಷಧದ ಅಂಗಡಿಯಲ್ಲಿ ಅನೇಕ ಔಷಧಗಳಿರುತ್ತವೆ. ಆದರೆ ಎಲ್ಲವೂ ನಾವು ಸೇವಿಸಲು ಇರುವುದಲ್ಲ. ಹಾಗೆಯೇ ಸೃಷ್ಟಿಯಲ್ಲಿ ಅನೇಕ ಬಗೆಯ ಆಹಾರವಿದೆ. ಆದರೆ ಎಲ್ಲವೂ ನಮಗೆ ಸೂಕ್ತವಲ್ಲ. ನಮಗೆ ಸೂಕ್ತವಾದ ಆಹಾರವನ್ನು ಆಯುರ್ವೇದದಲ್ಲಿ ಹಿತಾಹಾರ ಎನ್ನಲಾಗಿದ್ದು, ಪ್ರಕೃತಿ ನಮಗಾಗಿ ಕೊಟ್ಟಿರುವುದನ್ನು ನಿಹಿತ ಎಂದರೆ, ಶಾಸ್ತ್ರಗಳು ಸೂಚಿಸಿರುವುದನ್ನು ವಿಹಿತ ಎಂದು ಕರೆಯಲಾಗಿದೆ ಎಂದು ಹಿತ - ಅಹಿತ ಆಹಾರಗಳ ಕುರಿತಾಗಿ ವಿವರಿಸಿದರು.
ಸಿಕ್ಕಿದ್ದನ್ನು ಸಿಕ್ಕಂತೆ ತಿನ್ನುವುದು ಮನುಷ್ಯನ ಸ್ವಭಾವವಲ್ಲ. ಸೂಕ್ತವಾದ ಬೇರೆ ಬೇರೆ ಪದಾರ್ಥಗಳನ್ನು ಸೇರಿಸಿ, ಪದಾರ್ಥಗಳಲ್ಲಿನ ದೋಷಗಳನ್ನು ತೆಗೆದು, ಹಿತವಾದ ಪಾಕವನ್ನು ಮಾಡಿ ಸೇವಿಸುವುದು ಮನುಷ್ಯನ ಪ್ರವೃತ್ತಿಯಾಗಿದೆ. ಪ್ರಕೃತಿಯನ್ನು ಮಾರ್ಪಡಿಸಿಕೊಳ್ಳುವ ವಿಶೇಷ ಅವಕಾಶವನ್ನು ನಮಗೆ ದೇವರು ಕೊಟ್ಟಿದ್ದಾನೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಕೆಲವು ಪದಾರ್ಥಗಳನ್ನು ಆಯುರ್ವೇದವು ಶ್ರೇಷ್ಠ ಪಥ್ಯಗಳಲ್ಲಿ ಶ್ರೇಷ್ಠ ಎಂದು ಸೂಚಿಸಿದೆ. ಆದರೆ ಹಾಗೆ ಸೂಚಿಸಿದ ಹಲವಾರು ಪದಾರ್ಥಗಳು ಇಂದು ಕಲಿಯ ಪ್ರಭಾವಕ್ಕೆ ಒಳಗಾಗಿ ಸೇವಿಸಲು ಯೋಗ್ಯವೇ? ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ. ಉದಾಹರಣೆಗೆ ಹಾಲು, ದ್ರಾಕ್ಷಿ ಹಣ್ಣು, ಸಕ್ಕರೆ ಇತ್ಯಾದಿಗಳು ಹೆಚ್ಚಿನವು ಕಲುಷಿತವಾಗಿವೆ. ಕಲುಷಿತವಾಗದೇ ಇರುವುದನ್ನು ಪರಿಶ್ರಮದಿಂದ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಾಚೀನ ಆಯುರ್ವೇದ, ಯೋಗಶಾಸ್ತ್ರ ಸೂಚಿಸಿದಂತೆ ಆಹಾರದ ವಿಚಾರದಲ್ಲಿ ಸರಿತಪ್ಪುಗಳನ್ನು ಸಮಾಜದ ಮುಂದೆ ತೆರೆದಿಡುವ ಕಾರ್ಯವನ್ನು ಮಾಡುತ್ತಿದ್ದೇವೆ. ಹಲವರು ಆಸಕ್ತಿಯಿಂದ ಪ್ರತಿದಿನವೂ ಪ್ರವಚನವನ್ನು ಕೇಳುತ್ತಿದ್ದರೆ, ಕೆಲವರು ಆಚರಣೆಗೆ ತಂದುಕೊಳ್ಳುತ್ತಿದ್ದಾರೆ. ನಮ್ಮ ಬಗ್ಗೆ ಕೆಲವರು ಹಗುರವಾದ ಮಾತುಗಳನ್ನು ಆಡಿಕೊಳ್ಳಬಹುದು. ಆದರೆ ಸರಿದಾರಿಯನ್ನು ತೋರಿಸಬೇಕಾದ ಕರ್ತವ್ಯವನ್ನು ನಾವು ಮಾಡುತ್ತಿದ್ದೇವೆ ಎಂದು 'ಅನ್ನಂ ಬ್ರಹ್ಮ' ಪ್ರವಚನ ಮಾಲಿಕೆಯ ಅಗತ್ಯತೆಯ ಕುರಿತಾಗಿ ಹೇಳಿದರು.
ಕತ್ತಲಲ್ಲಿ ಬೆಳಕು ಹುಡುಕುವಂತೆ ಸಾತ್ವಿಕ ಆಹಾರವನ್ನು ಅರಸಿ: ರಾಘವೇಶ್ವರ ಭಾರತೀ ಶ್ರೀ ಕರೆ
ನಿವೃತ್ತ ಪೋಲಿಸ್ ಅಧಿಕಾರಿಗಳು ಹಾಗೂ ಶ್ರೀಮಠದ ಮಾಜಿ ಸಿ.ಇ.ಓ ಕೆ.ಜಿ. ಭಟ್, ಈಶ್ವರೀ ಬೇರ್ಕಡವು, ವಾದಿರಾಜ ಸಾಮಗ, ಮಂಜುನಾಥ ಭಟ್, ಚಂಪಕಾ ಭಟ್, ಸ್ವಾತಿ ಭಾಗ್ವತ್, ವೇಣು ನವಿಲಗೋಣ, ಸದಾನಂದ ಹೆಬ್ಬಾರ್, ದಿನಪ್ರಧಾನರಾಗಿ ರಾಧಾಕೃಷ್ಣ ಬಂದಗದ್ದೆ ದಂಪತಿಗಳು ಉಪಸ್ಥಿತರಿದ್ದರು.