ಗೋಕರ್ಣ, ಸೆ. 3: ಮನುಷ್ಯ ಸತ್ವಗುಣದ ಸೃಷ್ಟಿ, ಹುಲಿ ಭೇಟೆಯಾಡುವುದನ್ನು ಬಿಟ್ಟು ತಪ್ಪಸ್ಸನ್ನು ಮಾಡಿದರೆ ಅದು ವಿಚಿತ್ರ ಎನಿಸುತ್ತದೆ. ಹಾಗೆಯೇ ಮನುಷ್ಯನು ಪ್ರಾಣಿಗಳಂತೆ ಬದುಕಬಾರದು, ಗಿಡಮರಗಳಂತೆ ನಿತ್ಯ ಜಾಢ್ಯದಿಂದ ನಿದ್ರೆಯಲ್ಲೂ ಕಳೆಯಬಾರದು. ಮನುಷ್ಯ ಅರಿವು-ಆನಂದ-ದಯೆ-ಕರುಣೆಗಳಿಂದ ಕೂಡಿದ ಬದುಕನ್ನು ಬಾಳಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಗುರುವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಆಹಾರದ ಚರಾಚರರೂಪಗಳ ಬಗ್ಗೆ ಪ್ರವಚನ ಅನುಗ್ರಹಿಸಿದ ಶ್ರೀಗಳು, ಆಹಾರ ಪ್ರಪಂಚವನ್ನು ಹತ್ತಾರು ಬಗೆಯಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಬಹುದು. ಆಯುರ್ವೇದದ ಆಚಾರ್ಯರು ಆಹಾರವನ್ನು ಪ್ರಮುಖವಾಗಿ ಎರಡು ವಿಧವಾಗಿ ವಿಂಗಡಿಸಿ ಸ್ಥಾವರ ಹಾಗೂ ಜಂಗಮ ಎಂದು ಕರೆದಿದ್ದಾರೆ. ಸ್ಥಾವರ ವಿಭಾಗವನ್ನು ಸಸ್ಯಜನ್ಯ ಹಾಗೂ ಜಂಗಮ ವಿಭಾಗವನ್ನು ಪ್ರಾಣಿಜನ್ಯ ಎನ್ನಬಹುದಾಗಿದೆ. ಸ್ಥಾವರವನ್ನು ಮತ್ತೆ ನಾಲ್ಕು ಬಗೆಯಲ್ಲಿ ವಿಭಾಗಿಸಿದ್ದು, ಹೂವಿಲ್ಲದೇ ಹಣ್ಣು ಬಿಡುವ ವನಸ್ಪತಿಗಳು, ಹೂವು ಬಿಟ್ಟು ಬಳಿಕ ಹಣ್ಣು ಬಿಡುವ ವೃಕ್ಷಗಳು, ಬಳ್ಳಿಗಳು, ಫಲವನ್ನು ಬಿಟ್ಟನಂತರ ತಾವಾಗಿಯೇ ಒಣಗುವ ಧಾನ್ಯಾದಿ ಗಿಡಗಳನ್ನು ಓಷಧಿಗಳು ಎಂದು ಕರೆಯಲಾಗಿದೆ. ಜಂಗಮದಲ್ಲಿಯೂ ನಾಲ್ಕು ಬಗೆಗಳಿದ್ದು, ಜರಾಯುಜ, ಅಂಡಜ, ಸ್ವೇದಜ, ಉದ್ಭಿಜ ಎಂದು ವಿಭಜಿಸಲಾಗಿದೆ ಎಂದು ಆಹಾರದ ವಿಧಗಳನ್ನು ವಿವರಿಸಿದರು.
ದೇವರ ಸೃಷ್ಟಿಯಲ್ಲಿ ಪ್ರಾಣಿಗಳು ರಾಜಸ ಸೃಷ್ಟಿಯಾದರೆ, ಗಿಡ, ಮರ, ಜಡವಸ್ತುಗಳು ತಾಮಸ ಸೃಷ್ಟಿ ಹಾಗೂ ತಲೆಯನ್ನು ಎತ್ತರದ ಸ್ಥಾನದಲ್ಲಿ ಹೊಂದಿರುವ, ಜ್ಞಾನವೇ ಪ್ರಧಾನವಾದ ಮನುಷ್ಯ ದೇವರ ಸಾತ್ವಿಕ ಸೃಷ್ಟಿ ಎಂದ ಶ್ರೀಗಳು, ಸಾತ್ವಿಕ ಸೃಷ್ಟಿಯಾದ ಮನುಷ್ಯನಿಗೆ ರಾಜಸ ಸೃಷ್ಟಿ ಹಾಗೂ ತಾಮಸ ಸೃಷ್ಟಿಗಳು ಆಹಾರವಾಗಿವೆ. ಅಂದರೆ ಸಸ್ಯಜನ್ಯ ಹಾಗೂ ಪ್ರಾಣಿಜನ್ಯಗಳು ಮನುಷ್ಯನ ಆಹಾರಗಳಾಗಿವೆ ಎಂದು ತಿಳಿಸಿದರು.
ಆಹಾರವು ಸಿಹಿ- ಕಹಿಗಳೆಂಬ ಆರು ರಸಗಳಲ್ಲಿ ನೆಲಸಿದ್ದು, ಆ ರಸಗಳು ಪದಾರ್ಥಗಳಲ್ಲಿವೆ. ಸಾತ್ವಿಕಾಹಾರವನ್ನು ಸ್ವೀಕರಿಸಬೇಕೆಂಬ ಹಿನ್ನೆಲೆಯಲ್ಲಿ ಸಾತ್ವಿಕ ಸೃಷ್ಟಿಯ ಮನುಷ್ಯನನ್ನೇ ಮನುಷ್ಯ ತಿನ್ನಲು ಸಾಧ್ಯವಿಲ್ಲ. ಮನುಷ್ಯನು ಸಾತ್ವಿಕ ಸೃಷ್ಟಿಯೇ ಆದರೂ, ಮನುಷ್ಯನನ್ನೇ ತಿನ್ನಲು ಹೊರಟರೆ ಅದು ತಾಮಸಾಹಾರವಾಗುತ್ತದೆ. ಕತ್ತಲಲ್ಲಿ ಬೆಳಕನ್ನು ಹುಡುಕು ಎಂಬಂತೆ ರಾಜಸ, ತಾಮಸ ಆಹಾರ ವಿಭಾಗಗಳ ಮಧ್ಯದಲ್ಲಿ ಸಾತ್ವಿಕ ಆಹಾರವನ್ನು ಹುಡುಕಿ ಸ್ವೀಕರಿಸಬೇಕು ಎಂದು ಅಭಿಪ್ರಾಯಪಟ್ಟರು.
ಮನುಷ್ಯನ ಪತನ ಶುರುವಾಗಿದ್ದೇ ಊಟದಿಂದ: ರಾಘವೇಶ್ವರ ಭಾರತೀ ಶ್ರೀ
ಉಪ್ಪಿನಂಗಡಿ ಹವ್ಯಕ ಮಂಡಲದ ಬೆಟ್ಟಂಪಾಡಿ, ಪುತ್ತೂರು, ದರ್ಬೆ, ಪಂಜ, ಬೆಳ್ಳಾರೆ, ಚೊಕ್ಕಾಡಿ ಹವ್ಯಕ ವಲಯಗಳ ಪರವಾಗಿ ಎ.ಪಿ. ಸದಾಶಿವ ಮರಿಕೆ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ, ಹರಿಪ್ರಸಾದ್ ಪೆರಿಯಾಪು, ಆರ್.ಎಸ್. ಹೆಗಡೆ ಹರಗಿ, ಈಶ್ವರೀ ಬೇರ್ಕಡವು, ಅರವಿಂದ ದರ್ಬೆ, ಪ್ರಸನ್ನಕುಮಾರ್ ಟಿ.ಜಿ., ದಿನಪ್ರಧಾನರಾಗಿ ದೇವೇಂದ್ರ ಖಂಡಿಕಾ ದಂಪತಿ ಉಪಸ್ಥಿತರಿದ್ದು, ಆಶೀರ್ವಾದ ಪಡೆದರು.