ಹುಬ್ಬಳ್ಳಿ: ಶಿರಸಿಯ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ (Sirsi Marikamba Jatre 2026) ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಯಶವಂತಪುರ ಮತ್ತು ತಾಳಗುಪ್ಪ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು (Yeshwanthpur-Talguppa Special train) ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
ಈ ವಿಶೇಷ ರೈಲು (06587) ಫೆ.27ರಂದು ರಾತ್ರಿ 10.45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 5.05ಕ್ಕೆ ತಾಳಗುಪ್ಪ ತಲುಪಲಿದೆ. ಅದೇ ರೀತಿ ರೈಲು (06588) ಫೆ.28ರಂದು ಬೆಳಗ್ಗೆ 9.30ಕ್ಕೆ ತಾಳಗುಪ್ಪದಿಂದ ಹೊರಟು, ಅದೇ ದಿನ ಸಂಜೆ 5.15ಕ್ಕೆ ಯಶವಂತಪುರ ಸೇರಲಿದೆ.
ಈ ವಿಶೇಷ ರೈಲು ಒಟ್ಟು 20 ಬೋಗಿ ಹೊಂದಿರಲಿದ್ದು, ಅದರಲ್ಲಿ 1 ಪ್ರಥಮ ದರ್ಜೆ ಮತ್ತು ಎಸಿ 2-ಟೈರ್, 2 ಎಸಿ ತ್ರೀ-ಟೈರ್, 10 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 2 ಎಸ್ಎಲ್ಆರ್/ಡಿ) ಬೋಗಿಗಳು ಇರಲಿವೆ. ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು ಜಂಕ್ಷನ್, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಕೊನಗವಳ್ಳಿ, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಳು, ಆನಂದಪುರಂ, ಅಡೇರಿ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಇನ್ನು ಜಾತ್ರೆಯ ಅಂಗವಾಗಿ ಯಶವಂತಪುರ-ಶಿವಮೊಗ್ಗ ನಡುವೆ ಸಂಚರಿಸುವ ರೈಲನ್ನು (16581/16582) ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲು ನಿರ್ಧರಿಸಿದೆ. ಯಶವಂತಪುರದಿಂದ ಹೊರಡುವ ರೈಲು ಶಿವಮೊಗ್ಗದ ಬದಲಾಗಿ ತಾಳಗುಪ್ಪವರೆಗೆ ಸಂಚರಿಸಲಿದೆ. ಈ ರೈಲು ಶಿವಮೊಗ್ಗದ ಬದಲು ತಾಳಗುಪ್ಪದಿಂದಲೇ ಪ್ರಯಾಣ ಆರಂಭಿಸಲಿದೆ. ಈ ವಿಸ್ತರಣೆಯು ಒಂದು ಟ್ರಿಪ್‌ಗೆ ಮಾತ್ರ ಅನ್ವಯಿಸಲಿದೆ.
ಮಾರ್ಚ್ 1ರಂದು ಯಶವಂತಪುರದಿಂದ ರಾತ್ರಿ 12.15ಕ್ಕೆ ಹೊರಟು ಬೆಳಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ. ಅದೇ ದಿನ ರಾತ್ರಿ 10 ಗಂಟೆಗೆ ತಾಳಗುಪ್ಪದಿಂದ ಹೊರಟು, ಮರುದಿನ ಬೆಳಿಗ್ಗೆ 4.45ಕ್ಕೆ ಯಶವಂತಪುರ ತಲುಪಲಿದೆ. ಶಿವಮೊಗ್ಗದಿಂದ ಮುಂದಕ್ಕೆ ಕೊನಗವಳ್ಳಿ, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಳು, ಆನಂದಪುರಂ, ಅಡೇರಿ ಹಾಗೂ ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.