ಗೋಕರ್ಣ, ಸೆ.25: ವೇದವು ತುಪ್ಪವನ್ನು ದೇವರ ನಾಲಿಗೆ ಎಂಬುದಾಗಿ ಹೇಳಿದ್ದು, ದೇವರು ಹೋಮದ ಮೂಲಕ ಏನನ್ನೇ ಸ್ವೀಕರಿಸಿದರೂ ಅದನ್ನು ತುಪ್ಪದ ಮೂಲಕವೇ ಸ್ವೀಕರಿಸುತ್ತಾನೆ. ಹೋಮ - ಹವನಗಳಲ್ಲಿ ದೇವರಿಗೆ ಯಾವ ದ್ರವ್ಯವನ್ನ ಸಮರ್ಪಿಸಿದರೂ, ಅದನ್ನು ತುಪ್ಪದಲ್ಲಿ ಶುದ್ಧವಾಗಿಸಿಯೇ ಸಮರ್ಪಿಸುವುದಾಗಿದೆ. ತುಪ್ಪದ ಮೂಲಕವೇ ದೇವರು ದ್ರವ್ಯಗಳನ್ನು ಸ್ವೀಕರಿಸುವುದರಿಂದ ತುಪ್ಪವನ್ನು ದೇವರ ನಾಲಿಗೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶುಕ್ರವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಸಾಧಕನಿಗೆ ತುಪ್ಪವು ಹೇಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬುದನ್ನು ವಿವರಿಸುತ್ತಾ, ಸಾಧನೆ ಎಂದರೆ ದೇವಪ್ರೀತಿ ಸಂಪಾದನೆ. ಜೀವ ಮತ್ತು ದೇವರ ನಡುವೆ ಗೋಡೆಯಾಗಿ ನಿಲ್ಲುವ ಕರ್ಮಫಲವೇ ಪಾಪ. ಆ ಪಾಪವನ್ನು ಕರಗಿಸಿ, ತಡೆಯನ್ನು ನಿವಾರಿಸಿ ಸಾಧಕನನ್ನು ಭಗವಂತನೊಂದಿಗೆ ಬೆಸೆಯುವ ಸಾಮರ್ಥ್ಯ ತುಪ್ಪಕ್ಕಿದೆ. ತುಪ್ಪವು ಮಂಗಲ ದ್ರವ್ಯವಾಗಿದ್ದು, ಅದರ ದರ್ಶನ, ಸ್ಪರ್ಶನ ಹಾಗೂ ಸೇವನೆಯಿಂದ ಪಾಪಕ್ಷಯವಾಗುತ್ತದೆ. ಅಲ್ಲದೆ ರಾಕ್ಷಸ ಬಾಧೆ ಹಾಗೂ ದುಷ್ಟ ಶಕ್ತಿಗಳಿಂದ ಸಾಧಕನನ್ನು ರಕ್ಷಿಸುವ ರಕ್ಷಾಕವಚವಾಗಿ ತುಪ್ಪ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ಯಾವುದು ಮೃತ್ಯು, ಮುಪ್ಪು ಹಾಗೂ ರೋಗಗಳ ವಿರುದ್ಧ ಕೆಲಸ ಮಾಡುತ್ತದೆಯೋ, ಯಾವುದು ಮನಸ್ಸಿಗೆ ಶಕ್ತಿಯನ್ನು ತುಂಬುತ್ತದೆಯೋ ಅದನ್ನು ಆಯುರ್ವೇದದಲ್ಲಿ ರಸಾಯನ ಎಂದು ಕರೆಯಲಾಗಿದ್ದು, ತುಪ್ಪ ಉತ್ತಮ ರಸಾಯನವಾಗಿ, ನಮಗೆ ಅಗಣಿತವಾದ ಪ್ರಯೋಜನಗಳನ್ನು ನೀಡುತ್ತದೆ ಎಂದರು.
ಆರೋಗ್ಯ ಹಾಗೂ ಆತ್ಮಜ್ಞಾನ ಬೇರೆಬೇರೆಯಲ್ಲ: ರಾಘವೇಶ್ವರ ಭಾರತೀ ಶ್ರೀ
ಇಂದು ಅರವತ್ತು ವರ್ಷವಾದ ನಂತರ ಭಗವದ್ಗೀತೆಯ ಪುಸ್ತಕವನ್ನು ಹಿಡಿಯುವ ಜನರನ್ನು ಕಾಣುತ್ತೇವೆ. ಶರೀರ ದುರ್ಬಲವಾಗಿರುವುದರಿಂದ ಮುಪ್ಪಿನಲ್ಲಿ ಸಾಧನೆ ಆರಂಭಿಸುವುದಲ್ಲ.ಆದರೆ ಭಾರತೀಯ ಪರಂಪರೆಯಲ್ಲಿ ಬ್ರಹ್ಮಚರ್ಯದಲ್ಲೇ ಸಾಧನೆಯು ಆರಂಭವಾಗುತ್ತದೆ. ಸಾಧನೆಗೆ ಸ್ವಸ್ಥ ಶರೀರ ಬೇಕಾಗಿದ್ದು, ದೇಹ ಗಟ್ಟಿಯಿದ್ದಾಗಲೇ ಸಾಧನೆಯನ್ನು ಮಾಡಬೇಕು. ತುಪ್ಪ ಸಾಧನೆಗೆ ಬೇಕಾದ ಬಲವನ್ನು, ವಯಸ್ಥಾಪನ ಶಕ್ತಿಯನ್ನು ನೀಡುತ್ತದೆ ಎಂದರು.
ಭಾರತ ಮಂಡಲದ ಮುಂಬಯಿ, ಡೊಂಬಿವಿಲಿ ಹಾಗೂ ಹೈದರಾಬದ್ ಹವ್ಯಕ ವಲಯಗಳ ಪರವಾಗಿ ಮುಂಬೈನ ಯು.ಟಿ. ಕೃಷ್ಣಮೂರ್ತಿ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಉದ್ಯಮಿಗಳಾದ ಗೋಪಾಲಕೃಷ್ಣ ಭಟ್, ಪ್ರಭಾಕರ ಎಂ.ಎನ್, ಡಾ. ರವಿರಾಜ್ ಕಡ್ಲೆ, ದಿನಪ್ರಧಾನರಾಗಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ದಂಪತಿಗಳು ಉಪಸ್ಥಿತರಿದ್ದರು.
![]()
ತುಪ್ಪ ವಯಸ್ಥಾಪಕ, ದೀರ್ಘಾಯಸ್ಸನ್ನು ನೀಡುತ್ತದೆ ಎನ್ನಲಾಗಿದೆ. ಶಕ್ತಿಯುತ ಶರೀರ ಹಾಗೂ ದೀರ್ಘಾಯಸ್ಸು ಸಾಧನೆ ಮಾಡಲು ಬೇಕಾಗಿದ್ದು, ನಾವೆಲ್ಲ ಸಾಧನೆಗೆ ಯುಕ್ತವಾದ ಶರೀರವನ್ನು ಪಡೆದಿದ್ದು, ಇದೇ ಜನ್ಮದಲ್ಲಿ ಸಾಧನೆಯ ಮೂಲಕ ಮೋಕ್ಷವನ್ನು ಸಾಧಿಸಿಕೊಳ್ಳಬೇಕು. ಆ ಸಾಧನೆಯನ್ನು ಮಾಡಲು ಹಾಗೂ ಸಾಧನೆಯ ನಂತರ ಒಳಿತನ್ನು ಜಗತ್ತಿಗೆ ಹಂಚಲು ದೀರ್ಘಾಯಸ್ಸು ಬೇಕು.
- ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ.