ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೂರ್ಯ, ಚಂದ್ರ, ಗಾಳಿಯ ಸಂಪರ್ಕವಿಲ್ಲದ ನೀರು ಬಳಕೆಗೆ ಅಯೋಗ್ಯ: ರಾಘವೇಶ್ವರ ಭಾರತೀ ಶ್ರೀ

Sri Raghaveshwara Bharathi Swamiji: ಆಧುನಿಕ ಚಿಂತನೆಗಳು ಸಿದ್ಧಾಂತವಲ್ಲ. ಬಹಳಷ್ಟು ಚರ್ಚೆಗಳು ನಡೆದು, ವಿಮರ್ಶೆಗಳ ನಂತರ ಸಿದ್ಧವಾಗುವುದಕ್ಕೆ ಸಿದ್ಧಾಂತ ಎಂದು ಹೆಸರು. ಸಿದ್ಧಾಂತ ಎಂಬುದು ಸಾರ್ವಕಾಲಿಕ ಸತ್ಯ. ಆಧುನಿಕ ಚಿಂತನೆಗಳಂತೆ ಅದು ಹತ್ತಾರು ವರ್ಷಗಳಿಗೊಮ್ಮೆ ಬದಲಾಗುವುದಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ.

ಗೋಕರ್ಣ, ಸೆ.09: ಸೂರ್ಯ, ಚಂದ್ರ ಹಾಗೂ ಗಾಳಿಯ ಸಂಸರ್ಗವನ್ನು ಹೊಂದಿರುವ ನೀರು ಮಾತ್ರ ಬಳಕೆಗೆ ಯೋಗ್ಯ. ಸೂರ್ಯ ಕಿರಣ ಕ್ರಿಮಿ ನಾಶಕ ಹಾಗೂ ಜೀವ ಚೈತನ್ಯದ ಸೆಲೆಯಾದರೆ, ಚಂದ್ರ ಕಿರಣ ನೀರಿಗೆ ತಂಪು ನೀಡುವ ಜೊತೆಗೆ ಔಷಧೀಯ ಗುಣಗಳನ್ನು ತುಂಬುತ್ತದೆ ಹಾಗೂ ವಾಯುವಿನಿಂದಾಗಿ ನೀರು ಸ್ವಯಂ ಶುದ್ಧಿಯನ್ನು ಹೊಂದುತ್ತದೆ. ಹಾಗಾಗಿ ಸೂರ್ಯ, ಚಂದ್ರ ಮತ್ತು ಗಾಳಿಯ ಸಂಪರ್ಕವಿಲ್ಲದ ನೀರು ಬಳಕೆಗೆ ಅಯೋಗ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Shri Raghaveshwara Bharathi Swamiji) ಹೇಳಿದರು.

Annabrahma Chaturmasya

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಬುಧವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ನದಿ ನೀರಿನ ಕುರಿತಾಗಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ಇಂದು ಸೂರ್ಯ, ಚಂದ್ರ ಹಾಗೂ ಗಾಳಿಯ ಸಂಪರ್ಕ ಇಲ್ಲದ ನೀರನ್ನೇ ನಾವು ಬಳಸುತ್ತಿದ್ದೇವೆ. ಸೂರ್ಯನ ಬೆಳಕು ಬೀಳದಂತೆ ಸಿಮೆಂಟು ಅಥವಾ ಪ್ಲಾಸ್ಟಿಕ್ ಟ್ಯಾಂಕುಗಳಲ್ಲಿ ನೀರನ್ನು ಸಂಗ್ರಹಿಸಿ, ಪ್ಲಾಸ್ಟಿಕ್ ಪೈಪುಗಳಲ್ಲಿ ತಂದು ನೀರನ್ನು ಬಳಸುತ್ತಿದ್ದೇವೆ. ಆಧುನಿಕ ವಿಜ್ಞಾನ ಸೂರ್ಯನ ಸಂಪರ್ಕಕ್ಕೆ ಬಂದ ನೀರಿನಲ್ಲಿ ಜೈವಿಕ ಕ್ರಿಯೆ ನಡೆದು ನೀರು ಬಳಕೆಗೆ ಅಯೋಗ್ಯವಾಗುತ್ತದೆ ಎಂದು ಹೇಳುತ್ತದೆ. ಆದರೆ ಅಧುನಿಕ ವಿಜ್ಞಾನದ ಈ ಸೂತ್ರಕ್ಕೆ ವಿರುದ್ಧವಾಗಿಯೇ ಇಲ್ಲಿಯ ವರೆಗಿನ ಮನುಷ್ಯಕುಲ ಬದುಕಿದೆ. ಸೂರ್ಯ - ಚಂದ್ರ - ಗಾಳಿಯ ಸಂಪರ್ಕಕ್ಕೆ ಬಂದ ನೀರನ್ನು ಕುಡಿದೇ ಯುಗಯುಗಾಂತರಗಳಿಂದ ನಮ್ಮ ಪೂರ್ವಜರು ಬದುಕಿದ್ದಾರೆ. ಹಾಗಾಗಿ ಈ ಆಧುನಿಕ ಚಿಂತನೆಯನ್ನು ಮತ್ತು ನಾವು ಕುಡಿಯುವ ನೀರನ್ನು ಒಮ್ಮೆ ಅವಲೋಕಿಸಬೇಕಿದೆ ಎಂದು ಕರೆ ನೀಡಿದರು.

Gokarna News

ಕಳೆದ 50 ವರ್ಷಗಳನ್ನು ಗಮನಿಸಿದರೆ ಆಧುನಿಕ ಚಿಂತನೆಗಳಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಹತ್ತು ವರ್ಷಗಳ ಹಿಂದೆ ಇದು ಆರೋಗ್ಯಕರ ಎಂದಿದ್ದನ್ನೇ ಇಂದು ಅನಾರೋಗ್ಯಕರ ಎನ್ನಲಾಗುತ್ತದೆ. ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಆದರೆ ಭಾರತೀಯ ಪರಂಪರೆ ಹೀಗೆ ಬದಲಾಗುವುದಲ್ಲ. ಅದು ಸಾರ್ವಕಾಲಿಕ ಸತ್ಯ. ಐದು ಹತ್ತು ವರ್ಷಗಳಿಗೊಮ್ಮೆ ಬದಲಾಗುವ ಆಧುನಿಕ ಚಿಂತನೆಯನ್ನು ನಂಬಿ ನಮ್ಮ ಜೀವನ ಕ್ರಮವನ್ನು ಬದಲಾಯಿಸಿಕೊಂಡರೆ ನಮ್ಮ ಜೀವನವನ್ನು ಅಪಾಯಕ್ಕೆ ತೆರೆದುಕೊಂಡಂತೆ ಎಂದು ಸಮಾಜವನ್ನು ಎಚ್ಚರಿಸಿದರು.

Ramachandrapura mutt

ಆಯುರ್ವೇದದಲ್ಲಿ ಹಿಮ ಕರಗಿದ ನೀರು, ಇಬ್ಬನಿಯ ನೀರು, ಕ್ಷಣ ಮಾತ್ರ ಬಂದು ಹೋಗುವ ಮಳೆಯ ನೀರು, ವೇಗವಾಗಿ ಮತ್ತು ನಿಧಾನವಾಗಿ ಹರಿಯುವ ನದಿಯ ನೀರು, ಕಲ್ಲಿನ ಮೇಲೆ ಮತ್ತು ಮರಳಿನ ಮೇಲೆ ಹರಿಯುವ ನೀರು ಹಾಗೂ ಮಳೆಗಾಲದಲ್ಲಿ ಮಾತ್ರ ಹರಿಯು ನದಿಗಳ ನೀರು ಸೇರಿದಂತೆ ಅನೇಕ ವಿಧಗಳ ಕುರಿತಾಗಿ ಸವಿಸ್ತಾರವಾಗಿ ಚರ್ಚಿಸಿದ್ದು, ಸುಶ್ರುತರು ಬೇರೆಬೇರೆ ದಿಕ್ಕುಗಳಿಗೆ ಹರಿಯುವ ಹಾಗೂ ಬೇರೆಬೇರೆ ಪರ್ವತಗಳಿಂದ ಉಗಮಿಸುವ ನದಿಯ ನೀರಿನ ಗುಣಾವಗುಣಗಳ ಕುರಿತಾಗಿ ವಿಮರ್ಶಿಸಿದ್ದಾರೆ. ಇದು ಕುಡಿಯುವ ನೀರಿನ ಹಿಂದೆ ನಮ್ಮ ಪೂರ್ವಜರಲ್ಲಿದ್ದ ಅಪರಿಮಿತವಾದ ಚಿಂತನೆಯನ್ನು ಸೂಚಿಸುತ್ತದೆ ಎಂದು ವಿವರಿಸಿದರು.

ನಾರಾಯಣ ಭಟ್ ಸಾದಂಗಾಯ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಉದ್ಯಮಿ ನಿಡ್ಲೆ ರಾಮ ಭಟ್, ರವಿಶಂಕರ್ ಭಟ್ ಕಡತೋಕ, ಉದ್ಯಮಿ ಮುರಳೀಧರ್ ಪ್ರಭು, ಸುಬ್ರಾಯ್ ಭಟ್ ಕೊಣಾರೆ, ವಿ.ಎಂ. ಹೆಗಡೆ ಆಲ್ಮನೆ, ದಿನಪ್ರಧಾನರಾಗಿ ಬಾಬು ಹೆಗಡೆ ಅಳವಳ್ಳಿ ದಂಪತಿಗಳು ಉಪಸ್ಥಿತರಿದ್ದರು.

ನದಿ ನೀರನ್ನು ತಡೆಯುವುದು ಅನರ್ಥಕ್ಕೆ ಕಾರಣ: ರಾಘವೇಶ್ವರ ಭಾರತೀ ಶ್ರೀ

ಭೋವಿ ಸಮಾಜದಿಂದ ಸ್ವರ್ಣ ಪಾದುಕಾಪೂಜೆ

ಶ್ರೀಮಠಕ್ಕೆ ಪರಂಪರೆಯಿಂದ ನಡೆದುಕೊಳ್ಳುತ್ತಿರುವ ಭೋವಿ ಸಮಾಜದಿಂದ ಸ್ವರ್ಣ ಪಾದುಕಾಪೂಜೆ ನಡೆಯಿತು. ಪಾದುಕಾ ಪೂಜೆ ಸ್ವೀಕರಿಸಿ ಭೋವಿ ಸಮಾಜವನ್ನು ಶ್ರೀಗಳು ಆಶೀರ್ವದಿಸಿದರು. ಅನಂತ ಬೈಂದೂರು, ನರಸಿಂಹ ಅಂಕೋಲೆಕರ, ಚಂದ್ರಶೇಖರ ಸಿರಸಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.

image

ಆಧುನಿಕ ಚಿಂತನೆಗಳು ಸಿದ್ಧಾಂತವಲ್ಲ. ಬಹಳಷ್ಟು ಚರ್ಚೆಗಳು ನಡೆದು, ವಿಮರ್ಶೆಗಳ ನಂತರ ಸಿದ್ಧವಾಗುವುದಕ್ಕೆ ಸಿದ್ಧಾಂತ ಎಂದು ಹೆಸರು. ಸಿದ್ಧಾಂತ ಎಂಬುದು ಸಾರ್ವಕಾಲಿಕ ಸತ್ಯ. ಆಧುನಿಕ ಚಿಂತನೆಗಳಂತೆ ಅದು ಹತ್ತಾರು ವರ್ಷಗಳಿಗೊಮ್ಮೆ ಬದಲಾಗುವುದಲ್ಲ.

- ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ.