ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉಸಿರಿನ ಗತಿಯಲ್ಲಿದೆ ಜಗತ್ತಿನ ಸಕಲ ಆಗುಹೋಗುಗಳ ರಹಸ್ಯ: ರಾಘವೇಶ್ವರ ಶ್ರೀ

ವಿಷ್ಣುಗುಪ್ತ ವಿಶ್ವವಿದ್ಯಾಪೀಠದಿಂದ ಗೋಕರ್ಣದ ಅಶೋಕೆಯಲ್ಲಿ ಆಯೋಜಿತವಾದ ಎರಡು ದಿನಗಳ 'ಸ್ವರೋದಯ' ರಾಷ್ಟ್ರಿಯ ಜ್ಯೌತಿಷ ವಿಚಾರಮಂಥನದಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಾತನಾಡಿದ್ದಾರೆ. ಶ್ವಾಸವೇ ಜೀವನವಾಗಿದ್ದು, ಉಸಿರಾಟದ ಮೂಲಕ ಜಗತ್ತನ್ನು ತಿಳಿಯಲು ಸಾಧ್ಯವಿದೆ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಗೋಕರ್ಣ: ಶ್ವಾಸದ ಮೂಲಕ ನಮ್ಮ ಜೀವನವನ್ನು ಮಾತ್ರವಲ್ಲ, ಜಗತ್ತಿನ ಎಲ್ಲಾ ಆಗುಹೋಗುಗಳನ್ನು ತಿಳಿದುಹೋಗಬಹುದು. ದೇಹದಲ್ಲಿ ಏನಿದೆಯೋ ಅದೇ ಬ್ರಹ್ಮಾಂಡದಲ್ಲಿ ಇರುವುದಾದ್ದರಿಂದ, ಪ್ರಪಂಚದ ಎಲ್ಲಾ ಆಗುಹೋಗುಗಳನ್ನು ಉಸಿರಿನ ಮೂಲಕ ತಿಳಿಯಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ವಿಷ್ಣುಗುಪ್ತ ವಿಶ್ವವಿದ್ಯಾಪೀಠದಿಂದ ಗೋಕರ್ಣದ ಅಶೋಕೆಯಲ್ಲಿ ಆಯೋಜಿತವಾದ ಎರಡು ದಿನಗಳ 'ಸ್ವರೋದಯ' ರಾಷ್ಟ್ರಿಯ ಜ್ಯೌತಿಷ ವಿಚಾರಮಂಥನದಲ್ಲಿ ಸಾನ್ನಿಧ್ಯವಹಿಸಿ ಶ್ರೀಗಳು ಮಾತನಾಡಿದರು.

ನಮ್ಮ ಶರೀರ ಮತ್ತು ಪ್ರಕೃತಿಯು ಮುಂದೆ ಆಗಬಹುದಾದ ಸನ್ನಿವೇಶಗಳ ಸೂಚನೆಯನ್ನು ನಮಗೆ ನೀಡುತ್ತದೆ. ಇದನ್ನು ಶಕುನ ಎಂಬುದಾಗಿ ಕರೆಯಲಾಗಿದ್ದು, ಇದು ಜ್ಯೌತಿಷ ಭಾಗವಾಗಿದೆ. ಹಾಗೆಯೇ ಶ್ವಾಸದ ಕುರಿತಾದ ಸ್ವರಶಾಸ್ತ್ರವೂ ಜ್ಯೌತಿಷದ ಅಂಗವೇ ಆಗಿದ್ದು, ಶ್ವಾಸದ ಗತಿಯನ್ನು ಅರ್ಥಮಾಡಿಕೊಂಡರೆ ಬದುಕನ್ನೇ ಅರ್ಥಮಾಡಿಕೊಂಡಂತೆ. ಎಲ್ಲರೂ ಮೂಗಿನಲ್ಲೇ ಉಸಿರಾಡುತ್ತಾರೆ ಹಾಗೂ ಉಸಿರನ್ನು ತೆಗೆದುಕೊಂಡು ಮತ್ತು ಹೊರಗೆ ಬಿಡುತ್ತಾರೆ. ಅದರಲ್ಲಿ ವಿಶೇಷವೇನಿಲ್ಲ ಎನಿಸಬಹುದು. ಆದರೆ ಶ್ವಾಸವೇ ಜೀವನವಾಗಿದ್ದು, ಉಸಿರಾಟದ ಮೂಲಕ ಜಗತ್ತನ್ನು ತಿಳಿಯಲು ಸಾಧ್ಯವಿದೆ. ನಮ್ಮ ಜೀವನದ ಹಾಗೂ ಜಗತ್ತಿನ ಶುಭಾಶುಭಗಳನ್ನು ಕೇವಲ ಉಸಿರಿನ ಅವಲೋಕನದ ಮೂಲಕ ತಿಳಿದುಕೊಳ್ಳಬಹುದು ಮಾತ್ರವಲ್ಲ, ನಮ್ಮ ಮುಂದಿನ ಹೆಜ್ಜೆಗಳನ್ನು ಸರಿಪಡಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

Ramachandrapura Mutt (1)

ಶರೀರಕ್ಕೂ ತಲೆಗೂ ಇರುವ ಸಂಬಂಧ ಜ್ಯೌತಿಷಕ್ಕೂ ಸ್ವರಶಾಸ್ತ್ರಕ್ಕೂ ಇದೆ. ಉಸಿರಾಟದ ಸೂಕ್ಷ್ಮ ಜ್ಞಾನ ತಿಳಿದಿಲ್ಲದಿದ್ದರೆ ದೈವಜ್ಞನು ಪರಿಪೂರ್ಣ ಎನಿಸಿಕೊಳ್ಲುವುದಿಲ್ಲ. ದೈವಜ್ಞರಿಗೆ ಮಾತ್ರವಲ್ಲ, ಜನಸಾಮಾನ್ಯನೂ ಕೂಡ ಈ ಶಾಸ್ತ್ರವನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಉಸಿರಾಟದ ಹಿನ್ನೆಲೆಯ ಸೂಕ್ಷ್ಮಗಳ ಮಾಹಿತಿಯನ್ನು ನೀಡಿದರು.

ಇಂದು ಶ್ವಾಸವಿದ್ಯೆ ಅಳಿವಿನ ಅಂಚಿನಲ್ಲಿದ್ದು, ಅದನ್ನು ಬಳಸುವ ಮೂಲಕ ನಾವು ಉಳಿಸಿಕೊಳ್ಳಬೇಕು. ನಮ್ಮ ಬದುಕನ್ನು ಪ್ರಯೋಗಾತ್ಮಕವಾಗಿ ಶ್ವಾಸಾವಲೋಕನ ಮಾಡಿಕೊಂಡರೆ ಈ ವಿದ್ಯೆಯ ಸಂರಕ್ಷಣೆಯಾಗುತ್ತದೆ. ಭಾರತೀಯ ಪರಂಪರೆ ಇಂತಹಾ ಅನೇಕ ಅಮೂಲ್ಯ ವಿಚಾರಗಳನ್ನು ಒಳಗೊಂಡಿದ್ದು, ಇಂದು ನಾವು ಅವುಗಳ ಕುರಿತಾಗಿ ಅಸಡ್ಡೆಯನ್ನು ಬೆಳೆಸಿಕೊಂಡಿದ್ದೇವೆ. ವಿದೇಶದವರು ನಮ್ಮ ಜ್ಞಾನ ಭಂಡಾರವನ್ನು ಕದ್ದುಕೊಂಡು ಹೋದಮೇಲೆ ಅವರಿಂದ ನಾವು ಮತ್ತೆ ಕಲಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ ಶ್ರೇಷ್ಠ ದೈವಜ್ಞರಲ್ಲೊಬ್ಬರಾದ ಕೇರಳದ ವಿದ್ವಾನ್ ಕೈಮುಕ್ಕು ನಾರಾಯಣ ನಂಬೂದರಿ ಅವರನ್ನು ಶ್ರೀಗಳು ಆಶೀರ್ವದಿಸಿದರು. ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ವಿಚಾರ ಗೋಷ್ಠಿಯಲ್ಲಿ ವಿದ್ವಾನ್ ಗೋಪಾಲಕೃಷ್ಣಶರ್ಮಾ 'ದೈವಜ್ಞನ ಲಕ್ಷಣ', ವಿದ್ವಾನ್ ರಾ. ಗಣಪತಿ ಭಟ್ಟರು 'ಸಮಾಹಿತಮನಾಃ', ವಿದ್ವಾನ್ ಶಿವಪ್ರಸಾದ್ ತಂತ್ರಿಗಳು 'ದೈವಜ್ಞನ ದಿನಚರಿ' ವಿಚಾರದ ಕುರಿತಾಗಿ ವಿಷಯ ಮಂಡಿಸಿದರು. ವಿದ್ವಾನ್ ಹಂಡ್ರಮನೆ ಗೋಪಾಲಕೃಷ್ಣ ಭಟ್ ಗೋಷ್ಠಿಯ ಅಧ್ಯಕ್ಷತೆಯನ್ನುವಹಿಸಿದ್ದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ವಾನ್ ನರಸಿಂಹ ಭಟ್ಟ ಬಡಗು, ದೈವಜ್ಞ ಮಿತ್ತೂರು ಕೇಶವ ಭಟ್ಟ, ದೈವಜ್ಞ ಮಧುಸೂಧನ ಶರ್ಮಾ, ಡಾ. ಕೆ.ಸಿ. ನಾಗೇಶ್ ಭಟ್ ಸೇರಿದಂತೆ ನಾಡಿನ ವಿವಿಧ ಭಾಗಗಳ ದೈವಜ್ಞರು ವಿಚಾರಮಂಥನದಲ್ಲಿ ಭಾಗವಹಿಸಿದ್ದರು.