ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat: ಸಂಕೇಶ್ವರರಿಗೆ ಕೊಟ್ಟ ಆ ಪುಸ್ತಕ ನನ್ನ ಹಣೆಬರಹ ಬದಲಿಸಿತು: ವಿಶ್ವೇಶ್ವರ ಭಟ್‌

Sadhana Sourabha: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಸಭಾಮಂಟಪದಲ್ಲಿ ಆಯೋಜಿಸಿದ್ದ ʼಸಾಧನಾ ಸೌರಭ; ಸಾಂಸ್ಕೃತಿಕ ಅನುಸಂಧಾನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿ ಸ್ವೀಕರಿಸಿ ವಿಶ್ವವಾಣಿ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರು ಮಾತನಾಡಿದ್ದಾರೆ.

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌.

ಕುಮಟಾ: ನನ್ನ ವೃತ್ತಿ ಜೀವನದಲ್ಲಿ ಉದ್ಯಮಿ ವಿಜಯ್‌ ಸಂಕೇಶ್ವರ್‌ ಅವರನ್ನು ನೆನೆಸಿಕೊಳ್ಳಲೇಬೇಕು. ಅವರಿಗೆ ಕೊಟ್ಟ ಒಂದು ಪುಸ್ತಕ ನನ್ನ ಹಣೆಬರಹವನ್ನೇ ಬದಲಿಸಿತು. ಅವರ ಸಹಕಾರದಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಹೊಸ ಹೊಸ ಪ್ರಯೋಗಗಳು ಮಾಡಿದ್ದೆ. ಅದರಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ (Vishweshwar Bhat) ಅವರು ಸ್ಮರಿಸಿದರು.

ಕುಮಟಾದ ಹವ್ಯಕ ಸಭಾಮಂಟಪದಲ್ಲಿ ಸೌರಭ ಸಂಸ್ಥೆಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ʼರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿʼ (sourabha samman award) ಸ್ವೀಕರಿಸಿ ಅವರು ಮಾತನಾಡಿದರು.

ವೃತ್ತಿ ಜೀವನದ ಆರಂಭದಲ್ಲಿ ನಾನು ಅನಂತ್‌ಕುಮಾರ್‌ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ಆಗ ಸಂಕೇಶ್ವರ್‌ ಅವರಿಗೆ ಒಂದು ಪುಸ್ತಕ ನೀಡಿದ್ದೆ. ಆ ಪುಸ್ತಕದ ಹೆಸರು ʼತಲೆಬರಹ ಪತ್ರಿಕೆಯ ಹಣೆಬರಹʼ. ಆ ಪುಸ್ತಕ ನನ್ನ ಹಣೆಬರಹವನ್ನು ಬದಲಿಸಿತು. ಸಂಕೇಶ್ವರ್‌ ಅವರು ನನ್ನ ಹೊಸ ಪತ್ರಿಕೆಗೆ ನೀವು ಸಂಪಾದಕರಾಗಬೇಕು ಎಂದು ಹೇಳಿದ್ದರು. ಯಾವುದೇ ಷರತ್ತು ಇಲ್ಲದೆ ಸಂಬಳ ಫಿಕ್ಸ್‌ ಮಾಡಿದ್ದರು. ಆದರೆ, ಇನ್ನು 6 ತಿಂಗಳಲ್ಲಿ ನೀವು ಪತ್ರಿಕೆ ಸರ್ಕ್ಯುಲೇಶನ್ 2 ಲಕ್ಷ ಮಾಡಬೇಕು, ಒಂದು ವರ್ಷದೊಳಗೆ 3 ಲಕ್ಷ ಪತ್ರಿಕೆ ಪ್ರಸರಣ ದಾಟಿಸಬೇಕು ಎಂದು ಹೇಳಿದ್ದರು. ಇಲ್ಲದಿದ್ದರೆ ನಾನು ಪತ್ರಿಕೆಯನ್ನು ಮುಚ್ಚುತ್ತೇನೆ ಎಂದು ತಿಳಿಸಿದ್ದರು.



ನಾನು ಸಂಕೇಶ್ವರ್ ಅವರ ಆಫರ್‌ ಒಪ್ಪಿಕೊಂಡೆ. ಆಗ ನನಗೆ ಎಲ್ಲವೂ ಹೊಸತು, ದೆಹಲಿಯಲ್ಲಿ ಇದ್ದ ಹಿನ್ನೆಲೆಯಲ್ಲಿ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ಇರಲಿಲ್ಲ. ಆದರೆ ಕನ್ನಡ ಪತ್ರಿಕೋದ್ಯಮ ಒಂದು ರೀತಿ ನಿಂತ ನೀರಾಗಿತ್ತು. ನಮ್ಮದು ಹೊಸ ಪತ್ರಿಕೆಯಾಗಿದ್ದರಿಂದ ಎಲ್ಲ ರೀತಿಯ ಪ್ರಯೋಗಗಳಿಗೆ ಅವಕಾಶವಿತ್ತು. ಉದಾಹರಣೆಗೆ ಯಾವುದೇ ಪತ್ರಿಕೆಗಳಲ್ಲಿ ಸಂಪಾದಕೀಯ ಪುಟದ ಜವಾಬ್ದಾರಿಯನ್ನು ಹಿರಿಯ ಪತ್ರಕರ್ತರಿಗೆ ನೀಡಿರುತ್ತಾರೆ. ಆದರೆ, ನಾನು 23 ವರ್ಷದ ಪ್ರತಾಪ್‌ ಸಿಂಹಗೆ ಜವಾಬ್ದಾರಿ ನೀಡಿದ್ದೆ. ಆ ಸ್ಥಾನಕ್ಕೆ ಯಾಕೆ ಕಿರಿಯ ವಯಸ್ಸಿನ ವ್ಯಕ್ತಿಯನ್ನು ನೇಮಿಸಲಾಗಿತ್ತು ಎಂದರೆ ಅದಕ್ಕೆ ಕಾರಣವೂ ಇದೆ. ಪತ್ರಿಕೆ ಹೊಸದಾಗಿತ್ತು, ಸಂಪಾದಕರು 33 ವರ್ಷದವರು, ಹೀಗಾಗಿ ಪತ್ರಿಕೆ ಆತ್ಮ ಎಂದು ಕರೆಸಿಕೊಳ್ಳುವ ಸಂಪಾದಕೀಯ ಪುಟದ ನಿರ್ವಹಣೆ ಮಾಡುವವರು ಕೂಡ ಯುವಕರೇ ಆಗಿರಬೇಕು ಎಂದು, ಪತ್ರಿಕೆಯ ಮುಂಚೂಣಿ ಸ್ಥಾನಗಳಲ್ಲಿ ಯುವಕರಿಗೇ ಜವಾಬ್ದಾರಿ ನೀಡಲಾಗಿತ್ತು. ಆಗ ಇಡೀ ಆಫೀಸ್‌ನಲ್ಲಿ ಇದ್ದವರೆಲ್ಲಾ 40 ವರ್ಷದೊಳಗಿನ ವಯಸ್ಸಿನವರೇ ಆಗಿದ್ದರು. ಆ ರೀತಿಯ ಸುದ್ದಿಮನೆಯನ್ನು ಇವತ್ತಿನ ದಿನಗಳಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಅಂತಹ ಪತ್ರಿಕೆ ಇನ್ನುಮುಂದೆ ಬರುತ್ತೆ ಎಂದು ನನಗೆ ಅನಿಸಲ್ಲ ಎಂದು ತಿಳಿಸಿದರು.

10 ವರ್ಷ ವಿಜಯ ಕರ್ನಾಟಕದಲ್ಲಿ ಹೊಸ ಹೊಸ ಪ್ರಯೋಗ ಮಾಡಲಾಯಿತು. ಒಂದು ದಿನವೂ ನೀರಸವಾದ ದಿವಸ ಇರಲಿಲ್ಲ. ಆ ಪ್ರತಿ ದಿನವೂ ಒಂದಲ್ಲ ಒಂದು ಪ್ರಯೋಗ ಇರುತ್ತಿತ್ತು, ಪ್ರತಿ ಪುಟದಲ್ಲೂ ಒಂದು ಪುಟ್ಟ ಅಂಕಣ ಇರುತ್ತಿತ್ತು. ನಾವು ಟೀಕೆ ಮಾಡದ ರಾಜಕಾರಣಿಗಳಿಲ್ಲ, ಸರ್ಕಾರಗಳಿಲ್ಲ ಎಂದು ಹೇಳಿದರು.

ನಮಗೆ ಕೆಲಸ ಕೊಟ್ಟವರು ಮತ್ತು ಕೊಡದವರನ್ನೂ ನೆನೆಯಬೇಕು

ನನ್ನ ಪುಸ್ತಕವೊಂದರ ಅರ್ಪಣೆಯಲ್ಲಿ ಹೀಗೆ ಬರೆದಿದ್ದೆ, ನನಗೆ ಮೊದಲ ಬಾರಿ ಕೆಲಸ ಕೊಟ್ಟು ಕೈಹಿಡಿದ ಸಂಯುಕ್ತ ಕರ್ನಾಟಕಕ್ಕೆ ಹಾಗೂ ಕೆಲಸ ಕೊಡದೆ ಬದುಕಿನ ಪಾಠ ಹೇಳಿಕೊಟ್ಟ ಪ್ರಜಾವಾಣಿಗೆ ಅರ್ಪಣೆ ಎಂದು ಬರೆದಿದ್ದೆ. ಒಂದು ವೇಳೆ ಪ್ರಜಾವಾಣಿಯವರು ನನಗೆ ನೌಕರಿ ಕೊಟ್ಟಿದ್ದರೆ ಬಹುಶಃ ಮುಖ್ಯ ಉಪಸಂಪಾದಕ ಅಥವಾ ಸುದ್ದಿ ಸಂಪಾದಕನಾಗಿ ಇಷ್ಟೊತ್ತಿಗೆ ನಿವೃತ್ತಿಯಾಗುತ್ತಿದ್ದೆ. ಆದ್ದರಿಂದ ನಮಗೆ ಕೆಲಸ ಕೊಟ್ಟವರು ಮತ್ತು ಕೊಡದವರನ್ನೂ ನಾವು ನೆನೆಯಬೇಕು. ಯಾರಾದರೂ ನಿಮಗೆ ಕೆಲಸ ಕೊಡದಿದ್ದರೆ ನೀವು ಬೇಸರ ಪಡಬಾರದು, ಯಾಕೆಂದರೆ ನಿಮಗೆ ಇನ್ನೂ ಒಳ್ಳೆಯ ಅವಕಾಶಗಳು ಕಾದಿರುತ್ತವೆ ಎಂದು ತಿಳಿಯಬೇಕು ಎಂದು ಸಲಹೆ ನೀಡಿದರು.

ಅತ್ಯಾಚಾರ ಸುದ್ದಿ ಬಂದ ಮಾರನೇ ದಿನವೇ ಸಚಿವ ರಾಜೀನಾಮೆ ನೀಡಿದ್ರು!

ನನ್ನ ವೃತ್ತಿ ಜೀವನದಲ್ಲಿ ಬಹಳ ರೋಚಕ ಪ್ರಸಂಗಗಳು ನಡೆದಿವೆ. ಒಮ್ಮೆ ಒಬ್ಬ ಸಚಿವರ ಜತೆ ಊಟ ಮಾಡಿದ್ದೆ. ಅದಾದ ಮಾರನೇ ದಿನ ಆ ಸಚಿವರ ವಿರುದ್ಧ ಅತ್ಯಾಚಾರ ಆರೋಪದ ಬಗ್ಗೆ 8 ಕಾಲಂ ಹೆಡ್‌ಲೈನ್‌ ಸುದ್ದಿ ಹಾಕಿದ್ದೆವು. ಆ ಸಚಿವರಿಂದಲೇ ಅತ್ಯಾಚಾರ ಆಗಿತ್ತು ಎಂದು ಸುದ್ದಿ ಪ್ರಕಟವಾಗಿತ್ತು. ಪತ್ರಿಕೆ ಬೆಳಗ್ಗೆ ಎಂಟು ಗಂಟೆಗೆ ಬಂದಿದ್ದರೆ, ಎಂಟೂವರೆಗೆ ಆ ಸಚಿವ ರಾಜೀನಾಮೆ ನೀಡಿದ್ದರು. ಅದಾದ ಸ್ಪಲ್ಪ ಹೊತ್ತಿನ ಬಳಿಕ ಆ ಸಚಿವರು ಫೋನ್‌ ಮಾಡಿ, ಭಟ್ರೇ ನಾನು ನಿಮಗೆ ಏನು ದ್ರೋಹ ಮಾಡಿದ್ದೆ ಎಂದು ಕೇಳಿದ್ದರು. ಈ ರೀತಿಯ ತಾಕಲಾಟಗಳ ನನ್ನ ಜೀವನದಲ್ಲಿ ಸಾವಿರಾರು ಆಗಿವೆ. ಇದು ಪತ್ರಕರ್ತನ ಜೀವನದ ಬಹುದೊಡ್ಡ ವಿಪರ್ಯಾಸ ಎನ್ನಬಹುದು ಎಂದರು.

ಐ ಆಮ್‌ ಎ ವೆರಿ ಬ್ಯಾಡ್‌ ಜರ್ನಲಿಸ್ಟ್

ನಾನು ಬರೆದಿದ್ದಕ್ಕಿಂತ ಹೆಚ್ಚಾಗಿ ಯಾವುದನ್ನು ಬರೆಯಬೇಕಿತ್ತೋ ಅದನ್ನು ಮರೆಮಾಚಿದ್ದು ಅಷ್ಟೇ ಇದೆ ಎಂದು ನನಗೆ ಎಷ್ಟೋ ಬಾರಿ ಅನಿಸಿದೆ. ಹೀಗಾಗಿ ನನ್ನ ಸ್ನೇಹಿತರು, ಆಪ್ತವಲಯದಲ್ಲಿ "I am a very bad Journalist' ಎಂದು ಎಷ್ಟೋ ಬಾರಿ ಹೇಳಿದ್ದೇನೆ. ಯಾಕೆಂದರೆ ನಮಗೆ ಗೊತ್ತಿರುವ ಎಲ್ಲವನ್ನೂ ಬರೆದರೂ ಕಷ್ಟವೇ. ಹಾಗಂತ ನಮಗೆ ಆತ್ಮೀಯರು ಎಂದು ಅವರ ಬಗ್ಗೆ ಏನೂ ಬರೆಯದಿರಲು ಸಾಧ್ಯವಿಲ್ಲ. ನಿಮಗೆ ಸ್ನೇಹವೇ ಬೇರೆ, ವೃತ್ತಿಯೇ ಬೇರೆ. ಆ ಎರಡನ್ನೂ ನೀವು ಮಿಕ್ಸ್‌ ಮಾಡಿದಾಗ ಮಾತ್ರ ಜೀವನದಲ್ಲಿ ಸಮಸ್ಯೆಗಳು ಶುರುವಾಗುತ್ತವೆ. ನಾವು ಒಬ್ಬ ರಾಜಕಾರಣಿಯನ್ನು ಟೀಕೆ ಮಾಡಿದ ಹೊರತಾಗಿಯೂ ಅವರ ಜತೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಬಹುಶಃ ನನ್ನ ʼಬ್ರ್ಯಾಂಡ್‌ ಆಫ್‌ ಜರ್ನಲಿಸಂʼ ಕೂಡ ಅದೇ ಇದೆ ಎಂದು ಅಂದುಕೊಳ್ಳುವೆ ಎಂದು ವಿಶ್ವೇಶ್ವರ್ ಭಟ್‌ ಹೇಳಿದರು.

ಈ ಪ್ರಶಸ್ತಿ ಸಿಕ್ಕಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣ

ಸೌರಭ ಸಂಸ್ಥೆ ನೀಡಿದ ರಾಷ್ಟ್ರೀಯ ಪ್ರಶಸ್ತಿಯನ್ನು ಅತ್ಯಂತ ಅಂತಃಕರಣಪೂರ್ವಕವಾಗಿ, ಪ್ರೀತಿಯಿಂದ ಸ್ವೀಕರಿಸಿದ್ದೇನೆ. ನನ್ನೂರಿನಲ್ಲಿ ನನಗೆ ಸಿಕ್ಕ ಈ ಸನ್ಮಾನ ನನ್ನ ಜೀವನದ ಅವಿಸ್ಮರಣೀಯ ಕ್ಷಣ. ನನ್ನ ಸಾಧನೆ ಹಿಂದೆ ಸಾವಿರಾರು ಜನರ ಕೊಡುಗೆ, ಸಹಕಾರ, ಪ್ರೋತ್ಸಾಹ, ಮಾರ್ಗದರ್ಶನ ಇದೆ ಎಂದು ಸ್ಮರಿಸಿದರು.

Sadhana Sourabha: ವಿಶ್ವೇಶ್ವರ ಭಟ್ಟರಿಗೆ ಹುಟ್ಟೂರಿನಲ್ಲಿ ʼರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿʼ ಪ್ರದಾನ

ಮೂರೂರಿನಂತಹ ಪುಟ್ಟ ಹಳ್ಳಿಯವನಾದ ನಾನು ಪ್ರಾಥಮಿಕ ಶಿಕ್ಷಣ 10 ವರ್ಷ ಓದಿದ್ದು ಶಿರಸಿಯಲ್ಲಿ, ನಂತರ ಎರಡು ವರ್ಷ ಕುಮಟಾದಲ್ಲಿ ವಿದ್ಯಾಭ್ಯಾಸ. ಅದಾದ ಬಳಿಕ ಮುಂದಿನ ಏಳು ವರ್ಷ (ಬಿಎಸ್ಸಿ, ಎಂಎಸ್ಸಿ, ಎಂಎ) ಧಾರವಾಡದಲ್ಲಿ ಓದಿದೆ. ನಂತರ ಒಂದು ವರ್ಷ ದೆಹಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಾಸ್‌ ಕಮ್ಯುನಿಕೇಷನ್‌ ಸಂಸ್ಥೆಯಲ್ಲಿ ಅಧ್ಯಯನ ಮಾಡಿದೆ. ನಂತರ ಸಂಯುಕ್ತ ಕರ್ನಾಟಕ ಸೇರಿದೆ. ಆರಂಭದಲ್ಲಿ ಸಂಜೆವಾಣಿ, ಪ್ರಜಾವಾಣಿ ಸೇರಿ ವಿವಿಧ ಪತ್ರಿಕೆಗಳಿಗೆ ಓಡಾಡಿದರೂ ನನಗೆ ನೌಕರಿ ಸಿಗಲಿಲ್ಲ. ಕೊನೆಗೆ ನನಗೆ ಸಂಯುಕ್ತ ಕರ್ನಾಟಕದಲ್ಲಿ ಶ್ಯಾಮರಾಯರು ನೌಕರಿ ಕೊಟ್ಟರು. ಆಗ 595 ರೂ. ನನ್ನ ಸಂಬಳವಿತ್ತು ಎಂದು ತಮ್ಮ ವೃತ್ತಿ ಜೀವನದ ಹಾದಿಯನ್ನು ಮೆಲುಕು ಹಾಕಿದರು.