ಗೋಕರ್ಣ, ಸೆ.21: ಈಚಲ ಮರದಲ್ಲಿ ಮಾವಿನ ಹಣ್ಣು ಬಿಡುವುದಿಲ್ಲ. ಮಾವಿನ ಮರದಲ್ಲಿ ಬಿಟ್ಟ ಹಣ್ಣಿಗಷ್ಟೇ ಮಾವಿನ ಹಣ್ಣು ಎನ್ನುವುದು. ಹಾಗೆಯೇ ದೇಶೀ ಗೋವಿನ ಹಾಲಿನಿಂದ ತಯಾರಾದ ತುಪ್ಪಕ್ಕಷ್ಟೇ ತುಪ್ಪ ಎಂದು ಹೇಳಬಹುದು. ಮೂಲದಲ್ಲಿ ಗೋವು ಇಲ್ಲದ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪಗಳು ನಕಲಿ ಎನಿಸಿಕೊಳ್ಳುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಸೋಮವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ತುಪ್ಪದ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಉತ್ಕೃಷ್ಟ ಮೂಲದ್ರವ್ಯ ಹಾಗೂ ಸಮರ್ಪಕವಾದ ಸಂಸ್ಕಾರದಿಂದ ಮಾತ್ರ ಶ್ರೇಷ್ಠ ತುಪ್ಪ ಲಭ್ಯವಾಗುತ್ತದೆ. ಹಸು ಹಾಗೂ ಎಮ್ಮೆ ಹೇಗೆ ಬೇರೆಬೇರೆಯೋ, ದೇಶಿ ಗೋವು ಹಾಗೂ ಮಿಶ್ರತಳಿ ಹಸು ಕೂಡ ಅಷ್ಟೇ ವಿಭಿನ್ನ. ಅವುಗಳು ಇಂದಿನ ವೈಜ್ಞಾನಿಕ ಪದ್ಧತಿಯಲ್ಲಿಯೂ ಸಂಪೂರ್ಣ ಭಿನ್ನವಾಗಿ ಗುರುತಿಸಲ್ಪಟ್ಟಿದೆ. ಮಿಶ್ರತಳಿಯ ಹಸುಗಳು ಮಾನವನ ಹಸ್ತಕ್ಷೇಪದ ಕಾರಣದಿಂದ ಗುಣಗಳನ್ನೇ ಕಳೆದುಕೊಂಡಿದ್ದು, ಅವುಗಳಿಂದ ಪಡೆಯುವ ಹಾಲು - ತುಪ್ಪಗಳನ್ನು ದೇಶಿ ಗೋವಿನ ಹಾಲು - ತುಪ್ಪಗಳ ಜತೆಗೆ ಹೋಲಿಸಲು ಆಗದು. ತುಪ್ಪಕ್ಕೆ ಹೇಳಿರುವ ಸದ್ಗುಣಗಳು ದೇಶಿ ಗೋತಳಿಯ ತುಪ್ಪಕ್ಕಷ್ಟೇ ಸೀಮಿತ ಎಂದರು.
ಅನ್ನವನ್ನೋ, ಸಾರನ್ನೋ ಎರಡನೇ ಬಾರಿ ಬಿಸಿ ಮಾಡಿದರೆ ಅದು ತನ್ನ ತನವನ್ನು ಕಳೆದುಕೊಳ್ಳುತ್ತದೆ. ಆದರೆ ತುಪ್ಪದ ಸಾಮರ್ಥ್ಯ ಅಪರಿಮಿತವಾಗಿದ್ದು, ತುಪ್ಪವನ್ನು ಸಾವಿರ ಬಾರಿ ಬಿಸಿ ಮಾಡಿದರೂ ಅದು ಕೆಡುವುದಿಲ್ಲ. ಸಾವಿರ ಬಾರಿ ಪಾಕ ಮಾಡಿದಾಗ ತುಪ್ಪ ಅಪರಿಮಿತವಾದ ಶಕ್ತಿಯನ್ನು ಹೊಂದುತ್ತದೆ. ತುಪ್ಪವು ಅಗ್ನಿವರ್ಧಕವಾದರೂ ದೇಹಕ್ಕೆ ತಂಪುಂಟು ಮಾಡುತ್ತದೆ. ಒಂದೇ ಸಮಯದಲ್ಲಿ ಬೇರೆಬೇರೆ ಕಾರ್ಯಗಳನ್ನು ಮಾಡುವ ವಿಶೇಷ ಶಕ್ತಿ ತುಪ್ಪಕ್ಕಿದೆ ಎಂದು ಹೇಳಿದರು.
ನಿಜವಾದ ತುಪ್ಪ ಜಠರಾಗ್ನಿಯನ್ನು ಉದ್ದೀಪನಗೊಳಿಸಿದರೆ, ಮಿಶ್ರತಳಿ ಹಸುವಿನ ತುಪ್ಪ ಹಾಗೂ ಸಮರ್ಪಕ ಸಂಸ್ಕಾರ ಸಿಗದೇ ನೇರವಾಗಿ ಹಾಲಿನ ಕೆನೆಯಿಂದ ತಯಾರಿಸಿದ ತುಪ್ಪ ಇದಕ್ಕೆ ವಿರುದ್ಧವಾಗಿ ಮಂದಾಗ್ನಿಗೆ ಕಾರಣವಾಗಬಹುದು. ಹೀಗೆ ನೈಜ ತುಪ್ಪದ ಪ್ರಯೋಜನಕ್ಕೂ ತುಪ್ಪದ ಹೆಸರಿನ ದ್ರವಕ್ಕೂ ಪರಿಣಾಮದಲ್ಲಿ ವ್ಯತ್ಯಾಸವಿದ್ದು, ತುಪ್ಪದ ಹೆಸರಿನ ದ್ರವ ಕೇವಲ ಕ್ಯಾಲರಿಗಳ ಪೂರೈಕೆ ಮಾತ್ರ ಸೀಮಿತವಾಗಬಹುದು ಎಂದು ಎಚ್ಚರಿಸಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಶಿಕಾರಿಪುರ, ಸೋನಿ ಕಂಪನಿಯ ಪ್ರಮುಖರಾದ ವಿಶ್ವಾವಸು ಮರಾಠೆ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು. ಸುಬ್ರಹ್ಮಣ್ಯ ಹೆಗಡೆ ಹೊಸಪೇಟೆ ಕುಟುಂಬದವರಿಂದ ಗುರುಭಿಕ್ಷಾ ಸೇವೆ ಸಮರ್ಪಿಸಿದರು. ರಮೇಶ್ ಕಟ್ಟ, ಶ್ರೀರಾಮ, ದಿನಪ್ರಧಾನರಾಗಿ ಲಕ್ಷ್ಮೀಶ್ ಎನ್ ಭಟ್ ದಂಪತಿಗಳು ಉಪಸ್ಥಿತರಿದ್ದರು.
ಊಟ ಆರಂಭವಾಗಬೇಕಿರುವುದು ತುಪ್ಪದಿಂದಲೇ ಹೊರತು ಉಪ್ಪಿನಕಾಯಿಯಿಂದಲ್ಲ: ರಾಘವೇಶ್ವರ ಭಾರತೀ ಶ್ರೀ
ಗುಡಿಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ
ಶ್ರೀಮಠದ ಗುರುಪರಂಪರೆಯನ್ನು ಪಾರಂಪರಿಕವಾಗಿ ಆಶ್ರಯಿಸಿರುವ ಗುಡಿಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ನಂದಕುಮಾರ್ ಗುಡಿಗಾರ್, ವಿ.ಜಿ. ಶೇಟ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು.
![]()
ಹಿಂದೆ ಗೋವುಗಳು ಸ್ವಾತಂತ್ರ್ಯವಾಗಿ ಸಂಚರಿಸಿ ಅಗತ್ಯ ಹುಲ್ಲನ್ನು ಮೇಯಲು ಗೋಮಾಳಗಳಿತ್ತು. ಅಂದು ಗೋಮಾಳಗಳಲ್ಲಿ ಗೋವುಗಳು ಹುಲ್ಲನ್ನು ತಿನ್ನುತ್ತಿದ್ದವು. ಆದರೆ ಇಂದು ಮನುಷ್ಯ ಗೋಮಾಳಗಳನ್ನೇ ತಿಂದು ಬಿಟ್ಟಿದ್ದಾನೆ. ಇದು ವಿಪರ್ಯಾಸ.
-ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ.