ಗೋಕರ್ಣ: ಉತ್ತರ ಕನ್ನಡ ಜಿಲ್ಲೆ ಗೋಕರ್ಣ (Gokarna Tragedy) ಪೊಲೀಸ್ ಠಾಣಾ ವ್ಯಾಪ್ತಿಯ ದುಬ್ಬಣಶಶಿ ಬೀಚ್ನಲ್ಲಿ ಭಾನುವಾರ ಬೆಳಗ್ಗೆ ದುರಂತ ಸಂಭವಿಸಿದೆ. ಸಮುದ್ರದ ಭಾರಿ ಅಲೆಗಳಿಗೆ ಸಿಲುಕಿ ಮೂವರು ಪ್ರವಾಸಿಗರು ಮೃತಪಟ್ಟಿದ್ದು, ಇಬ್ಬರನ್ನು ರಕ್ಷಿಸಲಾಗಿದೆ.
ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಆಲೋರಿಕಾ ಇಕೋಸ್ಪೇಸ್ ಕಂಪನಿಯ 16 ಉದ್ಯೋಗಿಗಳ ತಂಡ ಅ.31ರಂದು ಗೋಕರ್ಣಕ್ಕೆ ಪ್ರವಾಸಕ್ಕೆ ಆಗಮಿಸಿ, ದುಬ್ಬಣಶಶಿ ಬೀಚ್ನ ಕೋಜೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿತ್ತು. ಭಾನುವಾರ ಬೆಳಗ್ಗೆ ಸುಮಾರು 7.30ಕ್ಕೆ ತಂಡದ ಸದಸ್ಯರು ಸಮುದ್ರಕ್ಕೆ ಇಳಿದಿದ್ದ ವೇಳೆ ಐವರು ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.
ಘಟನೆ ಗಮನಿಸಿದ ರೆಸಾರ್ಟ್ನ ಜೀವರಕ್ಷಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ನಾಲ್ವರನ್ನು ದಡಕ್ಕೆ ಕರೆತಂದಿದ್ದಾರೆ. ಅಸ್ವಸ್ಥಗೊಂಡಿದ್ದ ನಾಲ್ವರನ್ನು ಆಂಬ್ಯುಲೆನ್ಸ್ ಮೂಲಕ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಈ ಪೈಕಿ ಬೆಂಗಳೂರಿನ ನಿಶಾಂತ್ ಡಿ.ವಿ. (26) ಹಾಗೂ ಮಹಮದ್ ಖಾಸಿಂ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಶೋಭಾ ದಾಸ್ (22) ಚಿಕಿತ್ಸೆ ಫಲಿಸದೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದಾರೆ. ಜಾರ್ಖಂಡ್ನ ಜಮ್ಶೆಡ್ಪುರ ಮೂಲದ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದರು.
ಇನ್ನು ಬೆಂಗಳೂರಿನ ಮುಸ್ಲಿಂ ಕಾಲೋನಿ ನಿವಾಸಿ ಮಹಮದ್ ಅಕ್ರಮ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮುರುಡೇಶ್ವರ ಸಮೀಪ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.
ಅನ್ಯಕೋಮಿನ ಯುವಕನಿಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಇಸ್ಮಾಯಿಲ್ ಪಟೇಲ್ ವಿರುದ್ಧ ಪೋಕ್ಸೋ ಪ್ರಕರಣ
ಬೆಂಗಳೂರಿನ ಕಲ್ಯಾಣನಗರ ನಿವಾಸಿ ವಿಶ್ವ ಎ.ಕೆ. (24) ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಗೋಕರ್ಣ ಪೊಲೀಸರು ಹಾಗೂ ಕರಾವಳಿ ಕಾವಲುಪಡೆ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮೃತರ ಮೃತದೇಹಗಳನ್ನು ಕಾರವಾರ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರಿಸಿ ಇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಪ್ರವಾಸಿಗನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.