ಹೊಸಪೇಟೆ, ಅ.31: ಬ್ಯಾಂಕ್ಗಳಲ್ಲಿ ಲಾಕರ್ ವ್ಯವಸ್ಥೆ ಎಲ್ಲರಿಗೂ ಗೊತ್ತಿರುವುದೇ. ಇದಕ್ಕೆ ಈಗ ಆಧುನಿಕ ಸ್ಪರ್ಶ ಸಿಕ್ಕಿದೆ. ಬ್ಯಾಂಕ್ ಸಿಬ್ಬಂದಿಯ ಹಂಗಿಲ್ಲದೆ ಗ್ರಾಹಕರು ತಮ್ಮ ಲಾಕರ್ ತಾವೇ ನಿರ್ವಹಣೆ ಮಾಡುವಂತಹ ಅತ್ಯಾಧುನಿಕ ತಂತ್ರಜ್ಞಾನ ಬಂದಿದೆ ಎಂದು ವಿಕಾಸ ಸೌಹಾರ್ದ ಕೋ–ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ ತಿಳಿಸಿದರು. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ದಕ್ಷಿಣ ಭಾರತದದಲ್ಲಿ ಇಂತಹ ತಂತ್ರಜ್ಞಾನ ಒಳಗೊಂಡ ‘ಅಹರ್ನಿಶಿʼ ಹೆಸರಿನ ರೊಬೊಟ್ ನೆರವಿನ ಸ್ವಯಂಚಾಲಿತ ಪ್ರಥಮ ಲಾಕರ್ ಸೌಲಭ್ಯ ಹೊಸಪೇಟೆಯ (Vijayanagara News) ವಿಕಾಸ ಸೌಹಾರ್ದ ಕೋ–ಆಪರೇಟಿವ್ ಬ್ಯಾಂಕ್ನಲ್ಲಿ ಅಳವಡಿಕೆಯಾಗಿದೆ ಎಂದರು.
ಗೋದ್ರೆಜ್ ಸೆಕ್ಯುರಿಟಿ ಸೊಲ್ಯೂಷನ್ಸ್ ಸಂಸ್ಥೆಯು ಜಪಾನ್ನ ಇಟೋಕಿ ಕಾರ್ಪೊರೇಷನ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಲಾಕರ್ ವ್ಯವಸ್ಥೆ ಇದು. ‘ಗೋದ್ರೆಜ್ ಆಟೊವಾಲ್ಟ್’ ಎಂದು ಇದಕ್ಕೆ ಹೆಸರು. ಹಗಲಿರುಳು ಸೇವೆ ಲಭ್ಯ ಎಂಬ ನಿಟ್ಟಿನಲ್ಲಿ ವಿಕಾಸ ಬ್ಯಾಂಕ್ ಇದಕ್ಕೆ ‘ವಿಕಾಸ ಅಹರ್ನಿಶಿ ಲಾಕರ್ʼ ಎಂಬ ಹೆಸರು ಇಟ್ಟಿದೆ ಎಂದು ಹೇಳಿದರು.
ಕೆಲಸ ಹೇಗೆ?
ಚಿನ್ನ, ಬೆಳ್ಳಿ, ಇತರ ಅಮೂಲ್ಯ ವಸ್ತುಗಳನ್ನು ಇಡುವ ಸ್ಥಳ ಅತ್ಯಂತ ಸುಭದ್ರವಾಗಿರುತ್ತದೆ. ಲಾಕರ್ ಅಂದರೆ ಅದೇ ವ್ಯವಸ್ಥೆ ತಾನೇ? ಇಟ್ಟಂತಹ ವಸ್ತುಗಳನ್ನು ಪಡೆಯುವುದು ಮತ್ತು ವಾಪಸ್ ಅದರಲ್ಲಿ ಇಟ್ಟು ಬರುವುದೇ ಇಲ್ಲಿ ಪ್ರಮುಖ ವಿಷಯ. ಬ್ಯಾಂಕ್ ಸಿಬ್ಬಂದಿ ಇರದೆ ನಡೆಯುವ ಕಾರ್ಯಾಚರಣೆ ಆಗಿರುವ ಕಾರಣ ದುರ್ಬಳಕೆ ಆಗಬಾರದು. ಹೀಗಾಗಿ ಒಟ್ಟು ಐದು ಹಂತದ ಭದ್ರತೆ, ತಪಾಸಣೆ ವ್ಯವಸ್ಥೆ ಹಾಗೂ ಸುರಕ್ಷತಾ ವ್ಯವಸ್ಥೆ ಇದರ ಪ್ರಮುಖ ಅಂಶ ಎಂದರು.
ಹೊರಗೆ ಸುತ್ತಲೂ ಸಿ.ಸಿ.ಟಿ.ವಿ. ಕ್ಯಾಮೆರಾ, 24 ಗಂಟೆಯೂ ರಕ್ಷಣಾ ಸಿಬ್ಬಂದಿಯ ಭದ್ರತೆ ಇರುತ್ತದೆ. ಗ್ರಾಹಕರ ಮುಖಚಹರೆ ಮತ್ತು ಬೆರಳಚ್ಚು ಯಂತ್ರ ಬೂತ್ನ ಹೊರಭಾಗದಲ್ಲೇ ಅಳವಡಿಸಲಾಗಿರುತ್ತದೆ. ಇವೆರಡೂ ಹೊಂದಾಣಿಕೆ ಆದರೆ ಮಾತ್ರ ಬಾಗಿಲು ತೆರೆದುಕೊಳ್ಳುತ್ತದೆ. ವ್ಯಕ್ತಿ ಒಳಗೆ ಹೋದ ಕೂಡಲೇ ಬಾಗಿಲು ಮುಚ್ಚಿಕೊಳ್ಳುತ್ತದೆ. ಅಲ್ಲಿಂದ ಮತ್ತೊಂದು ಕೊಠಡಿಗೆ ಹೋಗಲು ಕಾರ್ಡ್ ಸ್ವೈಪ್ ಮಾಡಬೇಕು. ಹೀಗಾಗಿ ಗ್ರಾಹಕರಿಗೆ ಒಂದು ಸ್ಮಾರ್ಟ್ ಕಾರ್ಡ್ ಕೊಡಲಾಗಿರುತ್ತದೆ ಎಂದು ಹೇಳಿದರು.
ವ್ಯಕ್ತಿ ಒಳಗೆ ಬಂದ ಬಳಿಕ ಬಾಗಿಲು ಭದ್ರವಾಗಿ ಮುಚ್ಚಿಬಿಡುತ್ತದೆ. ಆ ಕೊಠಡಿಯಲ್ಲಿ ಇರುತ್ತದೆ ಒಂದು ಟೇಬಲ್, ಅದರ ಮೇಲೊಂದು ಟಚ್ಸ್ಟ್ರೀನ್ ಪ್ಯಾನಲ್. ಎರಡನೇ ಬಾಗಿಲು ತೆರೆಯಲು ನೀಡಲಾದ ಸ್ಮಾರ್ಟ್ ಕಾರ್ಡ್ ಅನ್ನು ಟಚ್ಸ್ಕ್ರೀನ್ ಪ್ಯಾನಲ್ನಲ್ಲಿ ಹಾಕಿ 4 ಅಂಕೆಯ ರಹಸ್ಯ ಪಿನ್ ನಮೂದಿಸಬೇಕು. ಆಗ ವಾಲ್ಟ್ನ ಒಳಗಿರುವ ರೋಬೋಟಿಕ್ ಸಿಸ್ಟಮ್ ನಿಖರವಾಗಿ ಅವರ ಲಾಕರ್ ಬಾಕ್ಸ್ ಅನ್ನು ಬೂತ್ನ ಟೇಬಲ್ಗೆ ತಂದಿಡುತ್ತದೆ ಎಂದು ತಿಳಿಸಿದರು.
ಗ್ರಾಹಕರು ತಮ್ಮ ಕೀ ಬಳಸಿ ಲಾಕರ್ ತೆರೆದು ವಸ್ತುಗಳನ್ನು ಇಡುವುದು ಅಥವಾ ತೆಗೆದುಕೊಳ್ಳಬೇಕು. ಕೀಲಿ ಹಾಕಿ ಸ್ಕ್ರೀನ್ ಮೇಲಿನ 'Return' ಬಟನ್ ಒತ್ತಿದಾಗ ರೊಬೋಟ್ ಆ ಲಾಕರ್ ಅನ್ನು ಸುರಕ್ಷಿತವಾಗಿ ವಾಲ್ಟ್ನೊಳಗೆ ನಿಗದಿತ ಜಾಗದಲ್ಲಿ ಮರಳಿ ಜೋಡಿಸುತ್ತದೆ ಎಂದರು.
ಅಲ್ಲೇ ಆಭರಣ ತೊಟ್ಟುಕೊಳ್ಳಬಹುದು, ವಸ್ತುಗಳನ್ನು ಬದಲಿಸಿಕೊಳ್ಳಬಹುದು. ಎಲ್ಲಾ ಸಿದ್ಧಪಡಿಸಿಕೊಂಡು, ಭದ್ರಪಡಿಸಿಕೊಂಡ ಮೇಲೆ ಒಳಗಿನ ಬಟನ್ ಒತ್ತಿಯೇ ಬಾಗಿಲು ತೆರೆಯಬೇಕು. ಹೊರಗೆ ಇನ್ನೊಂದು ಬಾಗಿಲು ತೆರೆಯಲು ಸಹ ಒಳಗಿನ ಬಟನ್ ಒತ್ತಬೇಕು ಎಂದು ಮಾಹಿತಿ ನೀಡಿದರು.
ಸಾಮಾನ್ಯವಾಗಿ ಲಾಕರ್ಗಳು ವಿವಿಧ ಆಕಾರಗಳಲ್ಲಿ ಇರುತ್ತವೆ. ಇಲ್ಲಿ ಮನುಷ್ಯ ಯಾವ ಕೆಲಸವನ್ನೂ ಮಾಡದೆ ರೊಬೋಟ್ನಿಂದಲೇ ಕೆಲಸ ಆಗುವ ಕಾರಣ ಒಂದೇ ಆಕಾರದ ಲಾಕರ್ ವ್ಯವಸ್ಥೆ ಮಾಡಲಾಗಿದೆ. ಈ ಲಾಕರ್ ಎಷ್ಟು ದೊಡ್ಡದಿದೆ ಎಂದರೆ 15 ಕೆ.ಜಿ ಭಾರ ಹೊರುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಏನೇನು ಅನುಕೂಲ?
ದಿನದ 24 ಗಂಟೆಯೂ ಈ ಲಾಕರ್ ಸೇವೆ ಲಭ್ಯ. ಹೀಗಾಗಿ ತುರ್ತು ಸಂದರ್ಭದಲ್ಲಿ ಯಾವ ಸಮಯದಲ್ಲಾದರೂ, ಮಧ್ಯರಾತ್ರಿಯಲ್ಲೂ ಇಲ್ಲಿಗೆ ಬಂದು ಅದನ್ನು ಪಡೆದುಕೊಂಡು ಹೋಗಬಹುದು. ಕಾರ್ಯಕ್ರಮ ಮುಗಿಸಿ ಮನೆಗೆ ಹೋಗದೆ ನೇರವಾಗಿ ಬಂದು ವಸ್ತುಗಳನ್ನು ಇಟ್ಟು ಮನೆ ಕಡೆಗೆ ತೆರಳಬಹುದು. ಐದು ಹಂತದ ತಪಾಸಣೆ, ಭದ್ರತೆ ಇರುವ ಕಾರಣ ಒಬ್ಬರ ಹೆಸರಿನರುವ ಲಾಕರ್ ಅನ್ನು ಇನ್ನೊಬ್ಬರು ದುರ್ಬಳಕೆ ಮಾಡುವುದು ಸಾಧ್ಯವೇ ಇಲ್ಲ. ಮುಖ್ಯವಾಗಿ ಮುಖಚಹರೆ ಮತ್ತು ಬೆರಳಚ್ಚು ಗುರುತಿಸಿದ ನಂತರವಷ್ಟೇ ಒಳಗೆ ಪ್ರವೇಶಿಸುವುದು ಸಾಧ್ಯವಾದ ಕಾರಣ ಇದೊಂದು ಅತ್ಯಂತ ಸುರಕ್ಷಿತ ಭದ್ರತೆಯ ಲಾಕರ್ ವ್ಯವಸ್ಥೆ. ಲಾಕರ್ ಸೌಲಭ್ಯಕ್ಕೆ ಗ್ರಾಹಕರು ಒಂದಿಷ್ಟು ಸೇವಾ ಶುಲ್ಕ ಪಾವತಿಸುವುದು ಸಾಮಾನ್ಯ ಎಂದರು.
ಒಂದು ವೇಳೆ ಸ್ವೈಪ್ ಕಾರ್ಡ್, ಕೀ ಕಳೆದುಹೋದರೆ ಬ್ಯಾಂಕ್ ನಿಯಮಾವಳಿಯಂತೆ ಇವರೆಡನ್ನು ಪರ್ಯಾಯವಾಗಿ ಗ್ರಾಹಕರು ಪಡೆಯಬಹುದಾಗಿದೆ. ಇದಕ್ಕೆ ತಗಲುವ ನಿಖರ ವೆಚ್ಚವನ್ನು ಗ್ರಾಹಕರು ಭರಿಸಬೇಕಾಗುತ್ತದೆ ಎಂದು ವಿವರಿಸಿದರು.
ಹೊಸಪೇಟೆಯಲ್ಲಿನ ವಿಶೇಷತೆ
ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಹೇಳುವಂತೆ ಮುಂಬೈನ ಒಂದು ಸಹಕಾರಿ ಸಂಸ್ಥೆ, ಅಹಮದಾಬಾದ್ನ ಅಪೆಕ್ಸ್ ಬ್ಯಾಂಕ್ ಹಾಗೂ ದೆಹಲಿ ಸುಪ್ರೀಂ ಕೋರ್ಟ್ನಲ್ಲಿ ಮಾತ್ರ ಇಂತಹ ಲಾಕರ್ ಇದೆ. ಪುಣೆಯಲ್ಲಿರುವ ಗೋದ್ರೆಜ್ ಪ್ರಾಪರ್ಟಿಯಲ್ಲಿ ತಮ್ಮ ಸಿಬ್ಬಂದಿಗಾಗಿ ಗೋದ್ರೆಜ್ ಕಂಪನಿಯವವರು ಇದನ್ನು ಅಳವಡಿಸಿದ್ದಾರೆ.
‘ಇದು ಲಾಭದ ದೃಷ್ಟಿಯಿಂದ ಮಾಡಿದ ವ್ಯವಸ್ಥೆಯಲ್ಲ, ಬದಲಿಗೆ ಸೇವೆಯ ದೃಷ್ಟಿಯಿಂದ ನೀಡಲಾದ ಸೌಲಭ್ಯ. ಇಲ್ಲಿ ಒಂದೇ ಗಾತ್ರದ 354 ಲಾಕರ್ಗಳಿವೆ. ಒಟ್ಟು 6 ಕೋಟಿ ವೆಚ್ಚದಲ್ಲಿ ಈ ವ್ವವಸ್ಥೆ ಅಳವಡಿಸಿಕೊಂಡಿದ್ದೇವೆʼ ಎನ್ನುತ್ತಾರೆ ವಿಕಾಸ ಸೌಹಾರ್ದ ಕೋ–ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ.