ಹೊಸಪೇಟೆ: ಹಂಪಿ ಉತ್ಸವ (Hampi Utsav 2026) ಉದ್ಘಾಟನಾ ಸಮಾರಂಭದ ವೇದಿಕೆ ಬಳಿ ಶುಕ್ರವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪಟಾಕಿಯಿಂದ ಬೆಂಕಿ ಹೊತ್ತಿಕೊಂಡಿದ್ದು, ಯಾರಿಗೂ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯ ಅವರಿದ್ದ ಮುಖ್ಯ ವೇದಿಕೆಯ ಎದುರೇ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಲ ದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಉತ್ಸವದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಬಂದ ಸಮಯದಲ್ಲಿ ಪಟಾಕಿ ಸಿಡಿಸಲಾಗಿದ್ದು, ಈ ವೇಳೆ ಬೆಂಕಿ ಕಿಡಿಗಳು ಹುಲ್ಲು ಹಾಗೂ ಸಮೀಪದ ವಸ್ತುಗಳಿಗೆ ತಗುಲಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಹಂಪಿ ಉತ್ಸವ–2026 ಇಂದಿನಿಂದ ಆರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ ಚಾಲನೆ ನೀಡಿದರು. 3 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ, ಆಹಾರ, ಮತ್ಸ್ಯ ಮೇಳ, ಕುಸ್ತಿ ಸಹಿತ ಹಲವು ಸಾಹಸ ಕ್ರೀಡೆಗಳ ಜತೆಗೆ ಹಂಪಿಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಗೋಷ್ಠಿ ಹಾಗೂ ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಹಂಪಿ ಉತ್ಸವದಲ್ಲಿ ಕನ್ನಡ ಚಲನಚಿತ್ರರಂಗದ ಖ್ಯಾತ ನಟ, ನಟಿಯರು ಆಗಮಿಸಲಿದ್ದಾರೆ. ಸಂಗೀತ ನಿರ್ದೇಶಕರು ಮತ್ತು ಹಿನ್ನೆಲೆ ಗಾಯಕರಿಂದ ರಸಮಂಜರಿ ಕಾರ್ಯಕ್ರಮ, ಆನೆಲಾಯ ಆವರಣದಲ್ಲಿ ವಿಜಯನಗರ ವೈಭವದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ.
ಇನ್ನು ಹಂಪಿ ಉತ್ಸವದಲ್ಲಿ ಬೈ ಸ್ಕೈ, ಎತ್ತುಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಫಲ ಪುಷ್ಪ ಪ್ರದರ್ಶನ, ಮತ್ಸ್ಯ ಮೇಳ, ಬೋಟಿಂಗ್, ಹಂಪಿ ಇತಿಹಾಸ ಕುರಿತು ವಿಚಾರ ಸಂಕಿರಣ, ಆಹಾರ ಮೇಳ, ಡ್ರೋನ್ ಪ್ರದರ್ಶನ, ಗ್ರಾಮೀಣ ಕ್ರೀಡೆಗಳು, ಕವಿಗೋಷ್ಠಿ, ಗಾಳಿಪಟ ಪ್ರದರ್ಶನ, ಯುವ ಗೋಷ್ಠಿ, ಜಾನಪದ ವಾಹಿನಿ ಮತ್ತಿತರ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.