ಹೊಸಪೇಟೆ, ಜ.15: ವಿಶ್ವವಿಖ್ಯಾತ ಹಂಪಿ ಉತ್ಸವವನ್ನು (Hampi Utsav 2026) ಈ ಬಾರಿ ಫೆಬ್ರವರಿ 13, 14 ಮತ್ತು 15ರಂದು ಆಚರಿಸಲು ನಿರ್ಧರಿಸಲಾಗಿದ್ದು, ಮುಖ್ಯ ವೇದಿಕೆ ಸೇರಿದಂತೆ 5 ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು. ಹಂಪಿಗೆ ಭೇಟಿ ನೀಡಿದ ಅವರು, ಹಂಪಿ ಉತ್ಸವ ನಡೆಯುವ ಮುಖ್ಯ ವೇದಿಕೆ ಸ್ಥಳ, ವಾಹನಗಳ ನಿಲುಗಡೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಉತ್ಸವದ ದಿನಾಂಕಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ. ಫೆಬ್ರವರಿ 13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿ ಕೇವಲ ಮುಖ್ಯ ವೇದಿಕೆಗೆ ಸೀಮಿತವಾಗದೆ, ಒಟ್ಟು 5 ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ವ್ಯಾಪಕ ಪ್ರಚಾರ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಕಲಾವಿದರ ಆಯ್ಕೆ
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನು ಆಹ್ವಾನಿಸುವ ಕುರಿತು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಧ್ರುವ ಸರ್ಜಾ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು. ಕಳೆದ ಬಾರಿಯಂತೆ ಈ ಬಾರಿಯೂ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಅವರು ಹೇಳಿದರು.
ಹೊಸ ವಿನ್ಯಾಸ
ಕಳೆದ ಎರಡು ವರ್ಷಗಳಿಗಿಂತ ಈ ಬಾರಿ ವೇದಿಕೆಯ ವಿನ್ಯಾಸ ಮತ್ತು ಸ್ಮಾರಕಗಳ ಮಾದರಿಗಳು ವಿಭಿನ್ನವಾಗಿ ಮತ್ತು ಆಕರ್ಷಕವಾಗಿರಲಿವೆ ಎಂದು ಹೇಳಿದರು. ಕಳೆದ ವರ್ಷದಂತೆ ಈ ಬಾರಿ ರೈತರೊಂದಿಗೆ ಚರ್ಚಿಸಿ ಹೆಚ್ಚಿನ ಪಾರ್ಕಿಂಗ್ ಸ್ಥಳಾವಕಾಶಕ್ಕೆ ಒಪ್ಪಿಗೆ ಪಡೆಯಲಾಗುತ್ತದೆ. ರೈತರ ಬೆಳೆ ನಷ್ಟವಾದಲ್ಲಿ ಅದಕ್ಕೆ ಪರಿಹಾರವನ್ನು ನೀಡಿ ಉತ್ಸವಕ್ಕೆ ಪಾರ್ಕಿಂಗ್‌ಗೆ ಬಳಕೆ ಮಾಡಿಕೊಂಡು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
ಫೆ.13ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ 'ಹಂಪಿ ಉತ್ಸವ-2026'
ರಸ್ತೆ ದುರಸ್ತಿ
ಹಗರಿಬೊಮ್ಮನಹಳ್ಳಿಯಿಂದ ಶಿವಮೊಗ್ಗ ರಸ್ತೆ ಸೇರಿದಂತೆ ಉತ್ಸವಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿರುವ ಬಗ್ಗೆ ದೂರುಗಳು ಬಂದಿದ್ದು, ಅವುಗಳನ್ನು ಕೂಡಲೇ ದುರಸ್ತಿ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿ.ಪಂ. ಸಿಇಒ ಮಹ್ಮದ್ ಅಕ್ರಂ ಅಲಿ ಷಾ, ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇತರರಿದ್ದರು.