ಹೊಸಪೇಟೆ, ಏ.27: ಹೊಸಪೇಟೆ ತಾಲೂಕು ವಿಶ್ವಕರ್ಮ ಸಮಾಜದಿಂದ ಏ.30 ರಿಂದ ಮೇ 5 ರವರೆಗೆ ಹೊಸಪೇಟೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಕಂಚುಗಾರಪೇಟೆಯಲ್ಲಿರುವ ನೂತನ ಗರ್ಭಗುಡಿ ಆಲಯ ಸಮರ್ಪಣೆ ಹಾಗೂ ಶ್ರೀ ಕಾಳಿಕಾದೇವಿ ಕಮಟೇಶ್ವರ ದೇವರ ಹಾಗೂ ಪರಿವಾರ ದೇವರ ಅಷ್ಟಬಂಧ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ ಹಾಗೂ ನವಚಂಡಿಕಾ ಯಾಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಜಿಲ್ಲಾಧ್ಯಕ್ಷ ಕೆ.ವಿ. ಪತ್ತಾರ್ ಹಾಗೂ ವಿ. ಶಂಕರಾಚಾರ್ಯ ತಿಳಿಸಿದರು.
ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಕಾಳಿಕಾದೇವಿ ದೇವಸ್ಥಾನದ ಅಷ್ಟಬಂಧ ಪ್ರತಿಷ್ಠೆ ಹಾಗೂ ಬ್ರಹ್ಮಕುಂಬಾಭಿಷೇಕ ಧಾರ್ಮಿಕ ಕಾಯಕ್ರಮ ನಿಮಿತ್ತ ಏಪ್ರಿಲ್ 30ರಂದು ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ಕಾಳಿಕಾದೇವಿ ಕಮಟೇಶ್ವರ, ಗಣಪತಿ, ಸರಸ್ವತಿ, ವಿಶ್ವಕರ್ಮ, ಮೌನೇಶ್ವರ, ವೀರಬ್ರಹ್ಮೇಂದ್ರ ಸ್ವಾಮಿ, ನವಗ್ರಹ ಮತ್ತು ನಾಗದೇವರುಗಳ ವಿಗ್ರಹಗಳು ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರಾದ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಮೇ 3ರಂದು ದೇವಿಯ ಪ್ರತಿಷ್ಠಾಪನೆ ಸೇರಿದಂತೆ ಇತರೆ ಪರಿವಾರ ದೇವರ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಜರುಗಲಿದೆ. ಪ್ರತಿಷ್ಠಾಪನೆ ಪ್ರಯುಕ್ತ ಏಪ್ರಿಲ್ 30 ರಿಂದ ಮೇ 5ರವರೆಗೆ ಹೋಮ ಹವನಗಳು ಸೇರಿದಂತೆ ನವ ಚಂಡಿಕಾ ಯಾಗ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ರಾಜಣ್ಣ, ನಾಗರಾಜ್ ಆಚಾರ್ಯ, ಸುರೇಶ ಆಚಾರ್ಯ, ರಾಜಶೇಖರ, ಕುಬೇರ್ ಇತರರಿದ್ದರು.