ಹೊಸಪೇಟೆ, ಜೂ. 1: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಪಸಂಖ್ಯಾತರ ನಾಯಕ ಜಮೀರ್ ಅಹ್ಮದ್ ಖಾನ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ. ನಗರದಲ್ಲಿ (Vijayanagara News) ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಕೀಲ ಕೊತ್ವಾಲ್ ಮಹಮ್ಮದ್ ಸೇರಿ ಇತರ ಮುಖಂಡರು ಮಾತನಾಡಿ, ಕಾಂಗ್ರೆಸ್ ಪಕ್ಷವು ಸದಾ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬಂದಿದೆ. ನಮ್ಮ ಸಮುದಾಯವು ರಾಜ್ಯದಲ್ಲಿ ಸುಮಾರು 80 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು ನಮ್ಮ ನ್ಯಾಯಯುತ ಬೇಡಿಕೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರದ ಉನ್ನತ ಹಂತದಲ್ಲಿ ಸೂಕ್ತ ಸ್ಥಾನ ದೊರಕಬೇಕು. ಜಮೀರ್ ಅಹ್ಮದ್ ಖಾನ್ ಅವರು ರಾಜ್ಯದಲ್ಲಿ ಒಂದು ಸಮುದಾಯದ ನಾಯಕರಲ್ಲ, ಅವರು ಎಲ್ಲಾ ಜಾತಿ, ಜನಾಂಗ ಧರ್ಮಗಳನ್ನು ಪ್ರೀತಿಸುವ ನಾಯಕರಾಗಿದ್ದಾರೆ ಎಂದರು.
ಕಷ್ಟದಲ್ಲಿ ಯಾರೇ ಆದರೂ ಅವರಿಗೆ ತನು ಮನದಿಂದ ಸಹಾಯ ಸಹಕಾರ ನೀಡುವ ಮಾನವೀಯ ಗುಣದ ನಾಯಕರಾಗಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರ ರಾಜಕೀಯ ಅನುಭವ ಹಲವು ವರ್ಷಗಳಿಂದ ಜನಸೇವೆ ಮತ್ತು ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸಚಿವರಾಗಿ ವಿವಿಧ ಇಲಾಖೆಗಳ ನಿರ್ವಹಣೆಯಲ್ಲಿ ಕಾರ್ಯಕ್ಷಮತೆ ತೋರಿದ್ದಾರೆ. ರಾಜ್ಯಾದ್ಯಂತ ಪಕ್ಷದ ಬಲವರ್ಧನೆಗೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ಬಡವರಲ್ಲಿ ಕಾಂಗ್ರೆಸ್ ಪರ ವಿಶ್ವಾಸ ಹೆಚ್ಚಿಸಲು ಶ್ರಮಿಸಿದ್ದಾರೆ. ಅನೇಕ ಚುನಾವಣೆಯಲ್ಲಿ ಪಕ್ಷದ ಪರವಾಗಿ ಸಕ್ರಿಯವಾಗಿ ಕೆಲಸ ಮಾಡುವ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಇತ್ತೀಚಿಗೆ ಪಕ್ಕದ ರಾಜ್ಯವಾದ ಕೇರಳದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಿರಂತರವಾಗಿ ಪ್ರಚಾರ ನಡೆಸಿ ಅನೇಕ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದಾರೆ ಎಂದರು.
ಉಪ ಮುಖ್ಯಮಂತ್ರಿ ಹುದ್ದೆ ನೀಡುವುದರಿಂದ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ಸಂದೇಶ ರಾಜ್ಯಾದ್ಯಂತ ಹೋಗುತ್ತದೆ. ಎಲ್ಲಾ ಸಮುದಾಯಗಳಿಗೆ ಸಮಾನ ಗೌರವ ನೀಡುವ ಕಾಂಗ್ರೆಸ್ ಪಕ್ಷದ ಬದ್ಧತೆ ಮತ್ತಷ್ಟು ಬಲವಾಗುತ್ತದೆ ಎಂದು ಹೇಳಿದರು.
ಜಮೀರ್ ಅಹ್ಮದ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ವಿವಿಧ ಸಮುದಾಯಗಳ ನಡುವೆ ವಿಶ್ವಾಸ ಮತ್ತು ಸಾಮರಸ್ಯ ಹೆಚ್ಚುತ್ತದೆ. ಜಮೀರ ಅಹ್ಮದ್ ಖಾನ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ, ಸರ್ವ ಧರ್ಮದವರನ್ನು ಪ್ರೀತಿಸುವ ನಾಯಕರು ಹಾಗು ಸಮಾನತೆಯನ್ನು ಬಯಸುವ ನಾಯಕರಾಗಿದ್ದಾರೆ ಎಂದರು. ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ಹಾಗೂ ರಾಜ್ಯ ನಾಯಕರು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಆಶಯಗಳಿಗೆ ಗೌರವ ನೀಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.