ಕೊಪ್ಪಳ, ಫೆ.16: ಹಂಪಿ ಬಳಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಅಮೆರಿಕ ಪ್ರವಾಸಿಗನ ಕೊಲೆ ಪ್ರಕರಣದ (Hampi Physical abuse and murder case) ಅಪರಾಧಿಗಳಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಗಂಗಾವತಿ ನ್ಯಾಯಾಲಯವು ಫೆಬ್ರವರಿ 6ರಂದು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಇದೀಗ ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ. ಘಟನೆ ನಡೆದ 9 ತಿಂಗಳಲ್ಲೇ ಗಂಗಾವತಿ ಕೋರ್ಟ್ ಈ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ನ್ಯಾಯಮೂರ್ತಿ ಸದಾನಂದ ನಾಗಪ್ಪ ನಾಯಕ್ ಅವರು ತೀರ್ಪು ಪ್ರಕಟಿಸಿ, ಇಂತಹ ಕ್ರೂರ ಅಪರಾಧಗಳಿಗೆ ಸಮಾಜದಲ್ಲಿ ಬದುಕಲು ಯಾವುದೇ ಸ್ಥಳವಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.
ಏನಿದು ಘಟನೆ?
2025ರ ಮಾರ್ಚ್‌ನಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಂಪಿಯ ಸಾಣಾಪುರ ಬಳಿ ಹೀನ ಕೃತ್ಯ ನಡೆದಿತ್ತು. ಇಸ್ರೇಲ್ ಮೂಲದ ಮಹಿಳೆಯ ಮೇಲೆ ಆರೋಪಿಗಳು ಅತ್ಯಾಚಾರವೆಸಗಿದ್ದರು. ಈ ಘಟನೆಯಲ್ಲಿ ವಿದೇಶಿ ಯುವಕನ ಕೊಲೆಯಾಗಿತ್ತು. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಕರಿನೆರಳು ಬಿದ್ದಿತ್ತು.
ಬಿಕ್ಲು ಶಿವ ಕೊಲೆ ಕೇಸ್; ಬಿಜೆಪಿ ಶಾಸಕ ಬೈರತಿ ಬಸವರಾಜ್ 7 ದಿನ ಸಿಐಡಿ ಕಸ್ಟಡಿಗೆ
ಇದಕ್ಕೆ ಸಂಬಂಧಿಸಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಹಾಗೂ ಶರಣಪ್ಪ ಮೂವರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಅತ್ಯಂತ ಚುರುಕಾಗಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಗಂಗಾವತಿಯ ಹೆಚ್ಚುವರಿ ಸತ್ರ ನ್ಯಾಯಾಲಯವು, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಈ ಮೂವರನ್ನೂ ದೋಷಿಗಳು ಎಂದು ತಿಳಿಸಿತ್ತು. ಇದೀಗ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ.