ವಿಜಯನಗರ: ಗಣೇಶ ಹಬ್ಬದ ಸಂಭ್ರಮದಲ್ಲಿದ್ದಾಗಲೇ ಜಿಲ್ಲೆಯ ಹೊಸಪೇಟೆ ತಾಲೂಕಿನ ಅನಂತಶಯನಗುಡಿಯ ಹೊರವಲಯದಲ್ಲಿ ಅವಘಡವೊಂದು ನಡೆದಿದೆ. ಗಣೇಶ ಮೂರ್ತಿಯನ್ನು ಸಾಗಿಸುವ ವೇಳೆ ವಿದ್ಯುತ್ ಸ್ಪರ್ಶವಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಣಪತಿ ಮೂರ್ತಿ ಕೊಂಡೊಯ್ಯುವ ವೇಳೆ ವಿದ್ಯುತ್ ಲೈನ್ಗೆ ಗಣೇಶನ ಮೂರ್ತಿಗೆ ಕಟ್ಟಿದ್ದ ಬಿದಿರಿನ ಕೋಲು ಟಚ್ ಆಗಿದೆ. ಈ ವೇಳೆ ವಾಹನದಲ್ಲಿದ್ದ ಹುಲುಗಪ್ಪ, ದೀಪಕ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು, ವಿದ್ಯುತ್ ಸ್ಪರ್ಶಕ್ಕೆ ಟ್ರ್ಯಾಕ್ಟರ್ ಮತ್ತು ಬೃಹತ್ ಗಣಪನ ಮೂರ್ತಿ ಕಾಲುವೆಗೆ ಬಿದ್ದಿದೆ.
ಗಾಯಗೊಂಡವರನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆ ನಡೆದ ಸ್ಥಳಕ್ಕೆ ವಿಜಯನಗರ ಎಸ್ಪಿ ಜಾಹ್ನವಿ ಎಸ್, ಹೊಸಪೇಟೆ ಡಿವೈಎಸ್ಪಿ ಮುರಳಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.