ಬಳ್ಳಾರಿ: ದೂರದಿಂದ ಹೆಲಿಕಾಪ್ಟರ್ ನೋಡಿ ಕೈಬೀಸುತ್ತಿದ್ದ ಮಕ್ಕಳಿಗೆ ಹಂಪಿ ಉತ್ಸವದಲ್ಲಿ (Hampi utsav 2026) ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರು ಮರೆಯಲಾಗದ ಉಡುಗೊರೆಯೊಂದನ್ನು ನೀಡಿದ್ದಾರೆ. ಸರ್ಕಾರಿ ಶಾಲೆಯ ಸುಮಾರು 60 ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ಏರಿ ಹಂಪಿಯ ಸೌಂದರ್ಯವನ್ನು ಆಕಾಶದಿಂದ ಸವಿಯುವ ಅವಕಾಶವನ್ನು ಸಚಿವರು ಮಾಡಿಕೊಟ್ಟಿದ್ದಾರೆ.
ಹಂಪಿ ಉತ್ಸವದ ಅಂಗವಾಗಿ ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ನೋಡಲು ಸುತ್ತಮುತ್ತಲಿನ ಸರ್ಕಾರಿ ಶಾಲಾ ಮಕ್ಕಳು ಶನಿವಾರ ಕುತೂಹಲದಿಂದ ಜಮಾಯಿಸಿದ್ದರು. ಅಲ್ಲಿಗೆ ಬಂದ ಸಚಿವರು ಮಕ್ಕಳನ್ನು ಕಂಡು ಪ್ರೀತಿಯಿಂದ ಮಾತನಾಡಿಸಿ, "ನೀವೂ ಆಕಾಶದಲ್ಲಿ ಹಾರಾಡಬೇಕಾ?" ಎಂದು ಕೇಳಿದರು. ಇದಕ್ಕೆ ಮಕ್ಕಳಿಂದ ಬಂದ ಉತ್ತರ "ಹೌದು ಸರ್" ಎನ್ನುವ ಹರ್ಷೋದ್ಗಾರ ಕೇಳಿಬಂತು.
ಮಕ್ಕಳ ಆಸೆಯನ್ನು ಈಡೇರಿಸಲು ಮುಂದಾದ ಸಚಿವರು, ತಮ್ಮ ಸ್ವಂತ ಹಣದಿಂದಲೇ ಹೆಲಿ ರೈಡ್ ವ್ಯವಸ್ಥೆ ಮಾಡಿದರು. ಇದು ಶಾಲಾ ಮಕ್ಕಳ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿದೆ. ಹೆಲಿಕಾಪ್ಟರ್‌ನಲ್ಲಿ ಹಾರಾಡಿದ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿತ್ತು.
Hampi Utsav: ಕಾಶಿ ಗಂಗಾರತಿ ಮಾದರಿಯಲ್ಲಿ ಹಂಪಿಯಲ್ಲಿ ನೆರವೇರಿದ ತುಂಗಾರತಿ
ಈ ವೇಳೆ ಮಾತನಾಡಿದ ಸಚಿವರು, ಮಕ್ಕಳ ಮುಖದಲ್ಲಿನ ಆ ಖುಷಿ ನೋಡಿದಾಗ ಸಿಗುವ ತೃಪ್ತಿ ಬೇರೆ ಯಾವುದರಲ್ಲೂ ಇಲ್ಲ. ಅವರ ಕನಸಿಗೆ ರೆಕ್ಕೆ ನೀಡುವ ಸಣ್ಣ ಪ್ರಯತ್ನವಿದು ಎಂದು ತಿಳಿಸಿದರು.
ಹಂಪಿ ಉತ್ಸವದಲ್ಲಿ ಗಾಳಿಪಟ ಉತ್ಸವಕ್ಕೆ ಚಾಲನೆ

ಹೊಸಪೇಟೆ, ಫೆ.14: ಐತಿಹಾಸಿಕ ವಿಜಯನಗರದ ವೈಭವವನ್ನು ಸಾರುವ 'ಹಂಪಿ ಉತ್ಸವ - 2026' ರ (Hampi Utsav 2026) ಅಂಗವಾಗಿ ಹೊಸಪೇಟೆ ನಗರದ ವಿಜಯನಗರ ಕಾಲೇಜು ಮೈದಾನದಲ್ಲಿ ಶನಿವಾರ ಗಾಳಿಪಟ ಉತ್ಸವಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯನಗರ ಜಿಲ್ಲಾ ಆಡಳಿತದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ನೋಡುಗರ ಕಣ್ಮನ ಸೆಳೆಯುತ್ತಿದೆ.
ಬೆಳಗ್ಗೆಯಿಂದಲೇ ಮೈದಾನದಲ್ಲಿ ನೂರಾರು ಗಾಳಿಪಟ ಪ್ರೇಮಿಗಳು ಜಮಾಯಿಸಿದ್ದು, ಆಕಾಶದಲ್ಲಿ ವಿವಿಧ ವಿನ್ಯಾಸದ ಹಾಗೂ ಬಣ್ಣ ಬಣ್ಣದ ಗಾಳಿಪಟಗಳು ಪೈಪೋಟಿಗೆ ಬಿದ್ದಂತೆ ಹಾರಾಡುತ್ತಿವೆ. ಮೈದಾನದಲ್ಲಿ ಜಮಾಯಿಸಿದ್ದ ಪ್ರವಾಸಿಗರು ಹಾಗೂ ಸ್ಥಳೀಯರು ಆಕಾಶದಲ್ಲಿ ತೇಲುತ್ತಿದ್ದ ಬೃಹತ್ ಗಾಳಿಪಟಗಳನ್ನು ನೋಡಿ ಸಂಭ್ರಮಿಸಿದರು.