ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆರ್‌ಸಿಬಿಯ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ(Bengaluru Stampede) ಬೆನ್ನಲ್ಲೇ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ(B. Dayanand) ಅವರನ್ನು ಅಮಾನತುಗೊಳಿಸಿತ್ತು. ಈ ವಿಚಾರ ಇದೀಗ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಜನ ಸಾಮಾನ್ಯರೂ ಸರ್ಕಾರದ ನಡೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಇದೆ ಸರ್ಕಾರ ನಡೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಬಿ.ದಯಾನಂದ್ ಪರ ಧ್ವನಿ ಎತ್ತಿದ್ದಾರೆ. ಹಾಗಿದ್ದರೆ ಸಸ್ಪೆಂಡ್ ಆಗಿರುವ ಈ ಉನ್ನತ ಪೊಲೀಸ್ ಅಧಿಕಾರಿಯ ಮುಂದಿನ ನಡೆ ಏನು? ಮುಂದೆ ಅವರಿಗಿರುವ ಆಯ್ಕೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
- ಕೇಂದ್ರ ಸರ್ಕಾರವು ಪೊಲೀಸ್ ಆಯುಕ್ತರ ಅಮಾನತನ್ನು ಅನುಮೋದಿಸುತ್ತದೆಯೇ ಎಂಬುದರ ಮೇಲೆ ಎಲ್ಲರ ಕಣ್ಣುಗಳಿವೆ. ಕರ್ನಾಟಕದ ವಿರೋಧ ಪಕ್ಷದ ಬಿಜೆಪಿ ನಾಯಕರು ಸಿದ್ದರಾಮಯ್ಯ ಸರ್ಕಾರವು ಉನ್ನತ ಪೊಲೀಸ್ ಅಧಿಕಾರಿ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕಾಲ್ತುಳಿತ ಪ್ರಕರಣಕ್ಕೆ ಬಲಿಪಶುವನ್ನಾಗಿ ಮಾಡಿದ್ದಕ್ಕಾಗಿ ಟೀಕಿಸಿದ್ದಾರೆ. ಸರ್ಕಾರದ ವೈಫಲ್ಯವನ್ನು ಮರೆಮಾಚುವ ಕುತಂತ್ರ ಇದು ಎಂದು ಕಿಡಿಕಾರಿದ್ದಾರೆ.
- ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರವು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿರುವ ಪೊಲೀಸ್ ಆಯುಕ್ತರ ಅಮಾನತನ್ನು 30 ದಿನಗಳ ಒಳಗೆ ಅನುಮೋದಿಸಬೇಕು. ಇದುವರೆಗೆ ಕೇಂದ್ರದಿಂದ ಯಾವುದೇ ಅಂತಹ ಅನುಮೋದನೆ ಬಂದಿಲ್ಲ.
- ಅಮಾನತುಗೊಂಡ ಉನ್ನತ ಪೊಲೀಸ್ ಅಧಿಕಾರಿಯ ಬೆಂಬಲಕ್ಕೆ ಅನೇಕ ಐಪಿಎಸ್ ಅಧಿಕಾರಿಗಳು ನಿಂತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಅನುಮೋದಿಸದಂತೆ ಕೇಂದ್ರವನ್ನು ವಿನಂತಿಸುವಂತೆ ಅವರು ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ.
- ಮುಖ್ಯಮಂತ್ರಿ ಸಿದ್ದರಾಮಯ್ಯ "ಭಯಭೀತರಾಗಿದ್ದಾರೆ" ಎಂದು ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಮತ್ತು ಬಿಜೆಪಿ ನಾಯಕ ಭಾಸ್ಕರ್ ರಾವ್ ಹೇಳಿದ್ದಾರೆ. ಅಮಾನತು ರದ್ದುಗೊಳಿಸುವಂತೆ ಒತ್ತಾಯಿಸುವಂತೆ ತಮ್ಮ ಪಕ್ಷಕ್ಕೆ ಮನವಿ ಮಾಡುವುದಾಗಿಯೂ ರಾವ್ ಹೇಳಿದ್ದಾರೆ. ಅಲ್ಲದೇ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿ, ರಾತ್ರಿ ಹಗಲು ಬೆಂಗಳೂರನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ಶ್ರಮಿಸಿದ ಪೊಲೀಸರಿಗೆ ಮಾಡಿದ ಅವಮಾನ ಎಂದಿದ್ದಾರೆ.
- ಕಾಲ್ತುಳಿತದ ಘಟನೆಯಲ್ಲಿ ಉನ್ನತ ಪೊಲೀಸ್ ಮತ್ತು ಇತರ ಪೊಲೀಸ್ ಅಧಿಕಾರಿಗಳ ವಿರುದ್ಧದ ಕ್ರಮವು ಪಡೆಯ ನೈತಿಕ ಸ್ಥೈರ್ಯದ ಮೇಲೆ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ.