heranje-krishna-bhat: ಸಾಹಿತಿ, ಸಾಂಸ್ಕೃತಿಕ ಸಂಘಟಕ ಹೆರಂಜೆ ಕೃಷ್ಣ ಭಟ್ ನಿಧನ
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರು, ವಿಭಾಗ ಮುಖ್ಯಸ್ಥರಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದ ಭಟ್ಟರು (Heranje Krishna Bhat) ನಿವೃತ್ತಿಯ ಬಳಿಕ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಾಗಿ ಅನೇಕ ವರ್ಷಗಳ ಕಾಲ ಮಹತ್ವದ ಸೇವೆ ಸಲ್ಲಿಸಿದ್ದರು.

ಹೆರಂಜೆ ಕೃಷ್ಣ ಭಟ್

ಉಡುಪಿ: ಉಡುಪಿಯ (Udupi news) ಹಿರಿಯ ಸಾಂಸ್ಕೃತಿಕ ಸಂಘಟಕ, ಸಾಹಿತಿ (Writer), ನಿವೃತ್ತ ಉಪನ್ಯಾಸಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮಾಜಿ ನಿರ್ದೇಶಕ ಪ್ರೊ ಹೆರಂಜೆ ಕೃಷ್ಣ ಭಟ್ಟರು (Heranje Krishna Bhat Passes Away) ನಿನ್ನೆ ಸಂಜೆ ವಯೋಸಹಜ ಅಸ್ವಾಸ್ಥ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಒಬ್ಬ ಪುತ್ರ ಹಾಗೂ ಬಂಧುಮಿತ್ರರನ್ನು ಭಟ್ಟರು ಅಗಲಿದ್ದಾರೆ.
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರು, ವಿಭಾಗ ಮುಖ್ಯಸ್ಥರಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದ ಭಟ್ಟರು ನಿವೃತ್ತಿಯ ಬಳಿಕ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಾಗಿ ಅನೇಕ ವರ್ಷಗಳ ಕಾಲ ಮಹತ್ವದ ಸೇವೆ ಸಲ್ಲಿಸಿ ಕೇಂದ್ರದ ಮೂಲಕ ಅನೇಕ ಸಾಹಿತ್ಯ ಸಾಂಸ್ಕೃತಿಕ ಕೈಂಕರ್ಯಗಳನ್ನು ಯಶಸ್ವಿಯಾಗಿ ಸಂಯೋಜಿಸಿದ್ದರು. ಉಡುಪಿಯ ಸಾಂಸ್ಕೃತಿಕ ಕ್ಷೇತ್ರದ ದಂತಕಥೆ ಆಗಿದ್ದ ಕು.ಶಿ ಹರಿದಾಸ ಭಟ್ಟರ ಗರಡಿಯಲ್ಲಿ ಪಳಗಿದ್ದ ಕೃಷ್ಣ ಭಟ್ಟರು ತಾನೂ ಅದೇ ರೀತಿಯಲ್ಲಿ ಧೀಮಂತ ಸಾಂಸ್ಕೃತಿಕ ಸಂಘಟಕರಾಗಿ ರೂಪುಗೊಂಡಿದ್ದರು.
ಸುಮಾರು 5 ದಶಕಗಳ ಉಡುಪಿಯ ಅನೇಕ ಪರ್ಯಾಯೋತ್ಸಗಳು, ವಾದಿರಾಜ ಕನಕದಾಸ ಸಂಗೀತೋತ್ಸವಗಳು, ಹತ್ತಾರು ಸಾಹಿತ್ಯ ಸಾಂಸ್ಕೃತಿಕ ಹಬ್ಬಗಳು, ವಿಶ್ವ ತುಳು ಸಮ್ಮೇಳನ, ನಡಾವಳಿಯೇ ಮುಂತಾಗಿ ದೊಡ್ಡ ದೊಡ್ಡ ಕಾರ್ಯಕ್ರಮಗಳ ಸಂಯೋಜನೆ ಮಾರ್ಗದರ್ಶನ ಮುತುವರ್ಜಿಯಲ್ಲಿ ಯಶಸ್ವಿಯಾಗಿ ಆಯೋಜನೆಗೊಂಡಿವೆ. ಜಾನಪದ ಸಂಶೋಧನ ಕೇಂದ್ರದ ಮೂಲಕ ಅನೇಕ ನೇಪಥ್ಯಕ್ಕೆ ಸರಿಯುತ್ತಿರುವ ಜನಪದೀಯ ಕಲೆಗಳ ದಾಖಲೀಕರಣಗಳೂ ಭಟ್ಟರ ಮಾರ್ಗದರ್ಶನದಲ್ಲೇ ನಡೆದಿವೆ.
ಹೆರಂಜೆ ಕೃಷ್ಣ ಭಟ್ಟರಿಗೆ ಉಡುಪಿ ಅಷ್ಟಮಠಗಳ ಅನೇಕ ಗೌರವ ಸಂಮಾನಗಳು, 2007ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಂಮೇಳನದ ಪುರಸ್ಕಾರ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ತಿಂಗಳೆ ಗರಡಿ ಉತ್ಸವದ ಪುರಸ್ಕಾರಗಳೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಪುತ್ತಿಗೆ ಕೃಷ್ಣಾಪುರ, ಪೇಜಾವರ ಕಾಣಿಯೂರು ಅದಮಾರು ಪಲಿಮಾರು ಸೋದೆ ಶೀರೂರು ಭಂಡಾರಕೇರಿ ಶ್ರೀಪಾದರುಗಳು ಕೃಷ್ಣ ಭಟ್ಟರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಭಗವಂತನು ಅವರಿಗೆ ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. ಡಾ. ಡಿ. ವೀರೇಂದ್ರ ಹೆಗ್ಗಡೆ, ಶಾಸಕ ಯಶಪಾಲ್ ಸುವರ್ಣ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ ರಘುಪತಿ ಭಟ್, ಡಾ ಮೋಹನ ಆಳ್ವಾ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: G.S. Siddalingaiah: ಹಿರಿಯ ಸಾಹಿತಿ ಜಿ.ಎಸ್.ಸಿದ್ದಲಿಂಗಯ್ಯ ನಿಧನ