ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

108 Ambulance workers strike: ನಾಳೆಯಿಂದ ರಾಜ್ಯಾದ್ಯಂತ '108' ಆಂಬ್ಯುಲೆನ್ಸ್ ಸೇವೆ ಬಂದ್: ಸಿಬ್ಬಂದಿಯಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ!

ಆಂಬ್ಯುಲೆನ್ಸ್‌ ಚಾಲಕರು ಹಾಗೂ ತುರ್ತು ವೈದ್ಯಕೀಯ ತಂತ್ರಜ್ಞರು (ಇಎಮ್‌ಟಿ) ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹೋರಾಟಕ್ಕೆ ನಿರ್ಧರಿಸಿದ್ದಾರೆ. ವಾರ್ಷಿಕ ವೇತನ ಹೆಚ್ಚಳ, ರಾಜ್ಯಾದ್ಯಂತ ಏಕರೂಪದ ವೇತನ ಪದ್ಧತಿಯ ಜಾರಿ, ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬಗಳಿಗೆ ಪರಿಹಾರ ಧನ ಹಾಗೂ ನೌಕರರಿಗೆ ಸೂಕ್ತ ಉದ್ಯೋಗ ಭದ್ರತೆ ಒದಗಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸಿಬ್ಬಂದಿ ಆಗ್ರಹಿಸಿದ್ದಾರೆ.

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ನೀಡಿದ್ದ 15 ದಿನಗಳ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ '108' ಆರೋಗ್ಯ ಕವಚ ಆಂಬ್ಯುಲೆನ್ಸ್ ಸಿಬ್ಬಂದಿ, ನಾಳೆ (ಸೆ.22) ರಾತ್ರಿ 8 ಗಂಟೆಯ ನಂತರ ರಾಜ್ಯಾದ್ಯಂತ 108 ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳಿಸಿ (108 Ambulance workers strike), ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.

ಸಿಬ್ಬಂದಿಯ ಪ್ರಮುಖ ಬೇಡಿಕೆಗಳೇನು?

  • ವೇತನ ಹೆಚ್ಚಳ: ಒಪ್ಪಂದದ ಪ್ರಕಾರ ಪ್ರತಿ ವರ್ಷ ನೌಕರರ ವೇತನವನ್ನು ಪರಿಷ್ಕರಿಸಬೇಕು.
  • ಏಕರೂಪ ವೇತನ ವ್ಯವಸ್ಥೆ: ವಲಯವಾರು ವಿಂಗಡಣೆಯನ್ನು ರದ್ದುಗೊಳಿಸಿ, ಜ್ಯೇಷ್ಠತೆ (Seniority) ಆಧಾರದ ಮೇಲೆ ಎಲ್ಲರಿಗೂ ಸಮಾನ ವೇತನ ನೀಡಬೇಕು.
  • ಸಮಯಕ್ಕೆ ಸರಿಯಾಗಿ ಪಾವತಿ: ಕಾರ್ಮಿಕ ಇಲಾಖೆಯ ನಿಯಮಾವಳಿಯಂತೆ ಪ್ರತಿ ತಿಂಗಳ 7ನೇ ತಾರೀಖಿನೊಳಗೆ ವೇತನ ಸಿಗಬೇಕು.
  • ಮೂಲಸೌಕರ್ಯ: 3 ಶಿಫ್ಟ್‌ಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು. ಇದರೊಂದಿಗೆ ಎಲ್ಲಾ ಕಾರ್ಯಸ್ಥಳಗಳಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ ಹಾಗೂ ಆಂಬುಲೆನ್ಸ್ ಸ್ವಚ್ಛಗೊಳಿಸಲು ನೀರಿನ ವ್ಯವಸ್ಥೆ ಮಾಡಿಕೊಡಬೇಕು.
  • ಪರಿಹಾರ ಧನ: ಕರ್ತವ್ಯದ ಅವಧಿಯಲ್ಲಿ ಅಪಘಾತಕ್ಕೀಡಾಗಿ ಮೃತಪಡುವ ಸಿಬ್ಬಂದಿ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಧನ ನೀಡಬೇಕು.

ರಾಜ್ಯಾದ್ಯಂತ ನೌಕರರು ಸಾಮೂಹಿಕವಾಗಿ ಸೇವೆ ಬಂದ್ ಮಾಡಿ ರಾಜೀನಾಮೆ ನೀಡಲು ಮುಂದಾಗಿರುವುದರಿಂದ ನಾಳೆಯಿಂದ ತುರ್ತು ವೈದ್ಯಕೀಯ ಸೇವೆ ಹಾಗೂ ಆಂಬ್ಯುಲೆನ್ಸ್ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.