Harish Kera Column: ಮಹಾಕುಂಭದಲ್ಲಿ ಕರಗಿದ ಒಂದು ಕ್ಷಣ
ಹಳ್ಳಿಯ ಜನ ತಂಡೋಪತಂಡವಾಗಿ ತಲೆಯ ಮೇಲೆ ಗಂಟುಮೂಟೆ ಕಟ್ಟಿಕೊಂಡು ಹರ್ ಹರ್ ಗಂಗೆ ಎಂದು ಕೂಗುತ್ತ ಗಂಗಾನದಿಯ ಕಡೆಗೆ ಸಾಗುತ್ತಿದ್ದರು. ಆಗಲೇ ಬಂದು ಮಿಂದು ಮುಗಿಸಿ ದವರು ಕ್ಯಾನುಗಳಲ್ಲಿ ಗಂಗಾಜಲ ತುಂಬಿಕೊಂಡು ಹರ್ ಹರ್ ಮಹಾದೇವ್ ಎಂದು ಕೂಗುತ್ತ ದಿಕ್ಕು ಸಿಕ್ಕಿದೆಡೆ ಸಾಗುತ್ತಿದ್ದರು

ಸುದ್ದಿ ಸಂಪಾದಕ, ಅಂಕಣಕಾರ ಹರೀಶ್ ಕೇರ

ಕಾಡುದಾರಿ
ಕಾವಿ ಬಟ್ಟೆ ಮತ್ತು ರುದ್ರಾಕ್ಷಿ ಧರಿಸಿ ಹಣೆಗೆ ಮೂರು ಪಟ್ಟೆ ವಿಭೂತಿ ಬಳಿದಿದ್ದ ಆ ಹಿರಿಯ ಸಾಧು ಒಂದು ತಗಡಿನ ಹೋಟೆಲ್ ಹೊರಗೆ ಹಾಕಿದ್ದ ಕುರ್ಚಿಯಲ್ಲಿ ದಪ್ಪನೆಯ ಚುಟ್ಟಾ ಸೇದುತ್ತ ಕೂತಿದ್ದರು. ಅದರಿಂದ ಒಂದು ದಿವ್ಯವಾದ ಪರಿಮಳ ಸೂಸುತ್ತಿತ್ತು. ಬೇರೆ ಎಲ್ಲೂ ಜಾಗ ಇರಲಿಲ್ಲವಾದ್ದರಿಂದ ಅವರ ಮುಂದೆಯೇ ಇದ್ದ ಕುರ್ಚಿಗಳಲ್ಲಿ ಕೂತೆವು. ಶುದ್ಧ ಹಿಂದಿಯಲ್ಲಿ ಎಲ್ಲಿಂದ ಬಂದಿದೀರಿ? ಎಂದು ಕೇಳಿದರು. ಬೆಂಗಳೂರಿನಿಂದ ಎಂದೆವು. ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಒಂದು ವರ್ಷ ಇದ್ದೆ. ಅಲ್ಲಿಂದ ಕಾಶಿಯ ಹರಿಶ್ಚಂದ್ರ ಘಾಟ್‌ಗೆ ಬಂದೆ ಎಂದು ಮಾತಾಡಲು ಶುರು ಹಚ್ಚಿಕೊಂಡರು. ಅಪರಿಚಿತರು ಎಂಬ ಯಾವ ಭಾವನೆಯೂ ಅವರನ್ನು ಬಾಧಿಸಿದಂತೆ ಕಾಣಲಿಲ್ಲ.
ಇದನ್ನೂ ಓದಿ: Harish Kera Column: ನಗರದ ಚೈತ್ರಕ್ಕೊಂದು ಕುಸುಮಾಂಜಲಿ
ಕುಂಭ ಮೇಳದ ಮೌನಿ ಅಮಾವಾಸ್ಯೆಯ ಮುನ್ನಾ ದಿನದ ಮುಂಜಾನೆ ಆಗ ತಾನೆ ತೆರೆದು ಕೊಳ್ಳು ತ್ತಿತ್ತು. ಆದರೆ ಕುಂಭ ಮೈದಾನದಲ್ಲಿ ಹಗಲು ರಾತ್ರಿ, ಮುಂಜಾನೆ ಸಂಜೆ ಎಂಬ ಯಾವ ಭೇದವೂ ಇಲ್ಲದಂತೆ ಜನರ ಚಟುವಟಿಕೆಗಳು ತುಂಬಿ ನಡೆಯುತ್ತಿದ್ದವು.
ಹಳ್ಳಿಯ ಜನ ತಂಡೋಪತಂಡವಾಗಿ ತಲೆಯ ಮೇಲೆ ಗಂಟುಮೂಟೆ ಕಟ್ಟಿಕೊಂಡು ಹರ್ ಹರ್ ಗಂಗೆ ಎಂದು ಕೂಗುತ್ತ ಗಂಗಾನದಿಯ ಕಡೆಗೆ ಸಾಗುತ್ತಿದ್ದರು. ಆಗಲೇ ಬಂದು ಮಿಂದು ಮುಗಿಸಿದವರು ಕ್ಯಾನುಗಳಲ್ಲಿ ಗಂಗಾಜಲ ತುಂಬಿಕೊಂಡು ಹರ್ ಹರ್ ಮಹಾದೇವ್ ಎಂದು ಕೂಗುತ್ತ ದಿಕ್ಕು ಸಿಕ್ಕಿದೆಡೆ ಸಾಗುತ್ತಿದ್ದರು.
ರೂಮು ಸಿಗದೇ ಪಾರ್ಕಿಂಗ್ ಜಾಗದಲ್ಲಿಯೇ ಟೆಂಟ್ ಹಾಕಿಕೊಂಡು ಅಲ್ಲಿಯೇ ಮಲಗಿ ಎದ್ದದ್ದರಿಂದ ನಿದ್ರೆ ಸರಿಯಾಗಿಲ್ಲದೆ ಉರಿಯುತ್ತಿದ್ದ ಕೆಂಪು ಕಣ್ಣುಗಳನ್ನು ಉಜ್ಜಿಕೊಳ್ಳುತ್ತ ಟೇಬಲ್ಲಿಗೆ ಬಂದ ಚಾಯ್ ಕುಡಿಯುತ್ತಿದ್ದ ನಮ್ಮನ್ನು ಅವರು ಪ್ರಶ್ನಿಸಿದರು- ಎಲ್ಲಿ ಉಳಿದು ಕೊಂಡಿರಿ? ನಮ್ಮ ಕತೆ ಹೇಳಿದೆವು. ಅವರು ಅ ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ಪ್ಲಾಸ್ಟಿಕ್ ಗೋಣಿಚೀಲ ಹಾಸಿ ಬಿದ್ದುಕೊಂಡಿದ್ದ ನೂರಾರು ಜನರನ್ನು ತೋರಿಸಿ ಹೇಳಿದರು- ನಿಮಗೆ ನಿದ್ರೆ ಬಂದಿರಲಿಕ್ಕಿಲ್ಲ.
ಆದರೆ ಇವರನ್ನು ನೋಡಿ. ಯಾವುದೋ ರಾಜ್ಯದಿಂದ ಬಂದಿದಾರೆ, ಸುತ್ತ ಏನಾಗುತ್ತಿದೆ ಎಂಬುದೂ ಗೊತ್ತಿಲ್ಲದಂತೆ ನಿದ್ರೆ ಹೋಗಿದಾರೆ. ಯಾರಾದರೂ ಏನಾದರೂ ಕದಿಯ ಬಹುದು ಎಂಬ ಭಯವಿಲ್ಲ ಅವರಿಗೆ. ಬಿದ್ದಲ್ಲಿ ನಿದ್ದೆ, ಎದ್ದಾಗ ಪವಿತ್ರಸ್ನಾನ ಇಷ್ಟು ಹೇಳಿದ ಬಳಿಕ ಅವರು ಹೇಳಿದ್ದು- ಬೇಟಾ, ಬಾಹರ್ ನಹೀ, ಅಂದರ್ ಸೇ ಸಾಫ್ ರೆಹನಾ ಹೈ. ಸಿರ್ಫ್ ಗಂಗಾ ನಹಾನೇ ಸೇ ಕ್ಯಾ ಹೋಗಾ! (ಮಗೂ, ಶುದ್ಧವಾಗಬೇಕಿರುವುದು ಹೊರ ಗಲ್ಲ, ಒಳಗೆ. ಬರೀ ಗಂಗೆಯಲ್ಲಿ ಸ್ನಾನ ಮಾಡಿದರೆ ಏನು ಬಂತು?)
ಅದು ಜನವರಿ 28. ಮರುದಿನ ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನಕ್ಕೆ ಕುಂಭ ಸಜ್ಜಾಗು ತ್ತಿತ್ತು. ಗಂಗಾ ನದಿ ಬಯಲಿನ ತಾತ್ಕಾಲಿಕ ರಸ್ತೆಗಳೆಲ್ಲ ಆಗಲೇ ಜನರಿಂದ ತುಂಬಿ ಹೋಗಿ ದ್ದವು. ಬಗೆಬಗೆಯ ಜನ. ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರ ಕಾಶ್ಮೀರದವರೆಗೆ, ಪೂರ್ವ ದ ಬಂಗಾಲದಿಂದ ಪಶ್ಚಿಮದ ಪಂಜಾಬಿನವರೆಗಿನ ಜನ ಈ ಪ್ರವಾಹದಲ್ಲಿ ಒಂದಾಗಿ ಬಿಟ್ಟಿದ್ದರು.
ನದಿಯ ತಡಿಯಲ್ಲಿ ಹಾಕಿದ ಅಖಾಡಗಳಲ್ಲಿ ಬೆಳಗಿನ ಭಂಢಾರಗಳು ಶುರುವಾಗಿದ್ದವು. ಎಲೆಯ ದೊನ್ನೆಗಳಲ್ಲಿ ಬಿಸಿಬಿಸಿ ಸಬ್ಜಿ, ಖಿಚಡಿ ಇತ್ಯಾದಿಗಳನ್ನು ಹಂಚುತ್ತಿದ್ದರು. ಈ ಹಿರಿಯರೊಡನೆ ಮಾತು ಮುಂದುವರಿಸುವ ಇರಾದೆಯಿಂದ ಕೇಳಿದೆವು- ಬೆಂಗಳೂರಿಗೂ ನಿಮಗೂ ಹೇಗೆ ಲಿಂಕ್? ಅದಕ್ಕೆ ಅವರು ಉತ್ತರಿಸಿದ್ದು- ಮಗೂ, ಹಿಂದಿನದನ್ನು ಯಾಕೆ ಈಗ ಮಗುಚಿ ಹಾಕಬೇಕು.
ಹಾಗೆ ಮಾಡಿದರೆ ಆ ಕಾಲ ಮರಳಿ ಬರುತ್ತಾ? ಹರಿಶ್ಚಂದ್ರ ಘಾಟ್ ಅಂದೆ. ನಿಮಗೆ ಕುತೂ ಹಲ ಮೂಡಿತು. ಅದರ ಬದಲು ಎಲೆಕ್ಟ್ರಾನಿಕ್ ಸಿಟಿ ಅನ್ನಬಹುದಿತ್ತು ನಾನು. ಏನು ಹೇಳಿ ದರೂ ಅದು ಬದಲಾಗುತ್ತದಾ? ಅಥವಾ ಈ ಕ್ಷಣಕ್ಕೂ ಈ ಕ್ಷಣಕ್ಕೂ ಏನಾದರೂ ಸಂಬಂಧ ಇದೆಯಾ? ನನಗಂತೂ ಇಲ್ಲವಪ್ಪ.
ನೋಡಿ ಅಲ್ಲಿ ಈಗ ಹರಿಯೋ ಗಂಗೆಗೂ ಅರ್ಧ ಗಂಟೆ ಹಿಂದೆ ಹರಿದ ಗಂಗೆಗೂ ಸಂಬಂಧ ಇದೆಯಾ? ಇಲ್ಲವಲ್ಲ. ಯಾಕೆ ಭೂತಕಾಲಕ್ಕೆ ಜೋತು ಬೀಳುತ್ತೀರಿ. ಸಂಗಮ ಇರೋದು ಸೇರಿ ಮುಂದೆ ಹರಿಯೋದಕ್ಕೆ. ಅ ಇರೋದಕ್ಕಂತೂ ಅಲ್ಲವಲ್ಲ!
ಈ ತಾತ ಪ್ರತಿ ಮಾತು ಮಾತನ್ನೂ ಮತ್ತೊಂದು ಲೆವೆಲ್‌ಗೆ ಎತ್ತುತ್ತಿದ್ದರು. ಇವರೊಡನೆ ಲೋಕಾಭಿರಾಮ ಮಾತುಕತೆಯಂತೂ ಸಾಧ್ಯವಿಲ್ಲ ಎಂಬುದು ಖಾತ್ರಿಯಾಗಿ ಹೋಯಿತು. ಸರಿ ಬಾಬಾ (ಅಷ್ಟು ಹೊತ್ತಿಗೆ ಕಾಷಾಯ ವಸ ಧರಿಸಿದ ಯಾರೇ ಸಿಕ್ಕಿದರೂ ಬಾಬಾ ಎನ್ನು ವುದು ರೂಢಿಯಾಗಿತ್ತು). ನೀವು ಭೂತ ಭವಿಷ್ಯ ಎಂಬ ಭೇದ ಭಾವ ಕಳಚಿಕೊಂಡಿರ ಬಹುದು.
ಆದರೆ ನಮ್ಮಂಥ ಲೌಕಿಕರಿಗೆ ಅದೆಲ್ಲ ಉಂಟಲ್ಲ ಎಂದೆವು. ಅದೇ ನೀವು ಮಾಡುವ ತಪ್ಪು. ನಿನ್ನೆ ಬೇರೆ, ನಾಳೆ ಬೇರೆ ಎಂದುಕೊಂಡಿದ್ದೀರಿ. ಆದರೆ ಕಾಲ ಅಖಂಡ ಪ್ರವಾಹ ಎಂಬು ದನ್ನು ಮರೆತಿದ್ದೀರಿ. ಒಂದು ದಿನ ಈ ಗಂಗಾಮಾತೆಯನ್ನು ಸುಮ್ಮನೇ ನೋಡುತ್ತಾ ಕುಳಿತು ಕೊಳ್ಳಿ ನೋಡುವಾ. ಆಗ ಕಾಲದ ಎಲ್ಲ ಬಂಧನವೂ ನಿಮ್ಮಿಂದ ಕಳಚಿಕೊಳ್ಳುವುದನ್ನು ಕಾಣುವಿರಿ.
ಹೆಚ್ಚು ಬೇಡ, ಇಂದು ಗಂಗೆಯಲ್ಲಿ ಒಂದು ಮುಳುಗು ಹಾಕಿ ಏಳುವ ಹೊತ್ತಿಗೆ ನೀವು ಬೇರೊಬ್ಬ ಮನುಷ್ಯ ಆಗಿರುವುದಿಲ್ಲ ಎಂಬ ಗ್ಯಾರಂಟಿ ನಿಮಗೆ ಇದೆಯಾ? ಸಂಸಾರ ಸಮೇತ ಬಂದು, ಗಂಗೆಯಲ್ಲಿ ಒಂದೇ ಒಂದು ಮುಳುಗು ಹಾಕಿ ಎದ್ದ ಕೂಡಲೇ ಈ ಜಗತ್ತಿ ಗೂ ನನಗೂ ಸಂಬಂಧವಿಲ್ಲ ಎಂದು ಕೊಡವಿಕೊಂಡು ಹೋಗಿ ಸಾಧುಗಳಾಗಿ ಬಿಟ್ಟವ ರನ್ನು ನಿಮಗೆ ತೋರಿಸಲೇನು? ಒಂದು ಚಿಟಿಕೆಯಲ್ಲಿ ಎಲ್ಲ ಬದಲಾಗಿ ಬಿಡಬಹುದು ಬೇಟಾ. ಇಷ್ಟು ಹೇಳಿದವರು ಕೂತಲ್ಲಿಂದ ಎದ್ದರು.
ನೀವೀಗ ಎತ್ತ ಹೋಗುತ್ತೀರಿ ಎಂದು ಕೇಳಿದೆವು. ಸೆಕ್ಟರ್ ಎಂಟಕ್ಕೆ ಹೋಗುತ್ತೇನೆ. ಅಲ್ಲಿ ನಮ್ಮ ಅಖಾಡ ಇದೆ. ನೀವೂ ಬೇಕಾದರೆ ನನ್ನ ಜೊತೆ ಬರಬಹುದು ಅಂದರು. ಸೆಕ್ಟರ್ ಎಂಟು- ಒಂಬತ್ತರಲ್ಲಿ ದೊಡ್ಡ ದೊಡ್ಡ ಆಶ್ರಮಗಳು, ಮಠಗಳು, ಅಖಾಡಗಳು ತಮ್ಮ ಟೆಂಟ್ ಹೂಡಿದ್ದವು. ನಾಳೆ ನೀವೂ ಶಾಹಿ ಸ್ನಾನ ಮಾಡ್ತೀರಾ ಅಂತ ಕೇಳಿದೆವು. ಶಾಹಿ ಸ್ನಾನದ ಮುಹೂರ್ತ ನಾಳೆ ಅನ್ನೋದು ನಿಜ.
ಶತಮಾನಗಳಿಂದ ಹರಿಯೋ ಈ ಗಂಗೆಯಲ್ಲಿ ಈ ಕ್ಷಣ ಪವಿತ್ರ, ಆ ಕ್ಷಣ ಪವಿತ್ರವಲ್ಲ ಅನ್ನೋದೆಲ್ಲ ನಮ್ಮ ದೃಷ್ಟಿಯ ಸಮಸ್ಯೆ ಮಾತ್ರ. ನಿಮ್ಮ ತಾಯಿಯ ಗರ್ಭ ನೀವು ಹುಟ್ಟು ವಾಗ ಮಾತ್ರ ಪವಿತ್ರವಾ? ಗಂಗೆಯಲ್ಲಿ ಏನಿದೆ ಹೇಳಿ. ಕಣ್ಣಿಗೆ ಕಾಣೋದು ನೀರು ಮಾತ್ರ. ಈ ನೀರು ಇಂದು ನಿಮ್ಮಂಥ ಕಲಿತವರ ಕಣ್ಣಿಗೆ ಕೊಳೆಯಾಗಿ ಕಾಣಿಸಲೂಬಹುದು.
ಆದರೆ ಇಷ್ಟೊಂದು ಮಂದಿಯ ಪ್ರeಯಲ್ಲಿ ಹರೀತಾ ಇರೋ ಗಂಗೆ ಶತಮಾನಗಳಿಂದ ಅಷ್ಟೊಂದು ಶುದ್ಧವಾಗಿದ್ದಾಳಲ್ಲ, ಅದು ಹೇಗೆ? ಹಾಗಾದ್ರೆ ಗಂಗೆ ಅನ್ನೋದು ನದಿಯಲ್ಲ, ಅದು ಇಷ್ಟು ಕೋಟಿ ಜನರ ಪ್ರಜ್ಞೆಯ ಮಹಾಪ್ರವಾಹ ಅಲ್ವೇ- ಅಂದರು.
ಅಷ್ಟು ಹೊತ್ತಿಗೆ ನಾವು ಪಂಟೂನ್ ಸೇತುವೆ ಮೇಲಿದ್ದೆವು. ಕೆಳಗೆ ಗಂಗೆ ಹರಿಯುತ್ತಿತ್ತು. ದಡಗಳಲ್ಲಿ ಆಗಲೇ ಲಕ್ಷಾಂತರ ಮಂದಿ ಮೀಯತೊಡಗಿದ್ದರು. ಅವರು ತೇಲಿಬಿಟ್ಟ ದೀಪಗಳು ಗಂಗೆಯಲ್ಲಿ ಚಲಿಸುತ್ತಿದ್ದವು. ಅದರ ಜೊತೆಗೆ ಅವರು ಬಿಟ್ಟ ನಾಣ್ಯಗಳನ್ನು ಕೆಲವು ಮಕ್ಕಳು ತಕ್ಷಣ ಮುಳುಗಿ ಲಬಕ್ ಎಂದು ಎತ್ತಿಕೊಳ್ಳುತ್ತಿದ್ದರು.
ತ್ರಿವೇಣಿ ಸಂಗಮದತ್ತ ಜನರನ್ನು ತುಂಬಿಕೊಂಡ ಬೋಟುಗಳು ಚಲಿಸುತ್ತಿದ್ದವು. ಮುಂಜಾ ನೆ ಚಳಿ ನಿಧಾನವಾಗಿ ತೊಲಗುತ್ತ ರವಿಕಿರಣಗಳು ಸ್ಪರ್ಶಿಸತೊಡಗಿದ್ದವು. ಅವರ ಮಾತು ಗಳು ನಮ್ಮ ಒಳಗೆ ಇಳಿಯತೊಡಗಿದ್ದವು. ನಿಧಾನವಾಗಿ ಅಖಾಡಗಳು ಹತ್ತಿರವಾಗತೊಡಗಿ ದವು. ಟೆಂಟ್‌ಗಳ ಮುಂದೆ ಹಿಂದೆ ಒಳಗೆಲ್ಲ ಬೆತ್ತಲೆ ಸಾಧುಗಳು ಓಡಾಡುತ್ತಿದ್ದರು, ಜಪಿಸು ತ್ತಿದ್ದರು, ಭಂಗಿ ಸೇದುತ್ತಿದ್ದರು, ಹತ್ತಿರ ಬಂದವರಿಗೆ ವಿಭೂತಿ ಮೆತ್ತಿ ಕಳಿಸುತ್ತಿದ್ದರು. ಯಾರೂ ಈ ಯುಗದ ಮನುಷ್ಯರಂತೆ ಕಾಣಲಿಲ್ಲ. ಇದು ನಾವು ನೋಡಿಲ್ಲದ ಲೋಕ, ಇದನ್ನು ಒಳಹೊಕ್ಕು ನೋಡಬೇಕಾದರೆ ಬೇರೊಂದೇ ರೀತಿಯಲ್ಲಿ ಪ್ರವೇಶಿಸಬೇಕು ಎಂಬುದು ಸ್ಪಷ್ಟವಾಗತೊಡಗಿತು.
ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕೂ ತುದಿಯಿಲ್ಲ, ಕೊನೆ ಮುಟ್ಟುವುದೂ ಇಲ್ಲ, ಇಲ್ಲಿ ನೀರೆಲ್ಲವೂ ತೀರ್ಥ ಎಂದ ಕವಿವಾಣಿ ನೆನಪಾಗತೊಡಗಿತು. ಇದೆಲ್ಲ ವಾಸ್ತ ವವೋ, ಅವಾಸ್ತವವೋ, ಅತಿವಾಸ್ತವವೋ ಎಂದೆಲ್ಲ ಮನಸು ಕಲಸುಮೇಲೊ ಗರವಾಗ ತೊಡಗಿತು.
ಜೊತೆಗೆ ಬಂದ ಸಾಧುವಿನ ಮಾತುಗಳು ಕಿವಿ ಮೇಲೆ ಬೀಳತೊಡಗಿದವು: ಬೇಟಾ, ಎಲ್ಲ ವನ್ನೂ ನೋಡಿ, ಸಮಾಧಾನದಿಂದ, ಅವಸರವಿಲ್ಲದೆ ನೋಡಿ. ಯಾವುದೂ ಎಲ್ಲಿಯೂ ಓಡಿ ಹೋಗುವುದಿಲ್ಲ ಇಂದು ನೋಡಿ ನಾಳೆ ಊರಿಗೆ ಓಡಬೇಕೆನ್ನುವ ಧಾವಂತವಿಲ್ಲದೆ ನೋಡಿ. ಎಲ್ಲರನ್ನು ಮಾತಾಡಿಸಿ. ಪ್ರತಿ ಮನುಷ್ಯನೊಳಗೂ ಒಂದು ಲೋಕವಿದೆ. ಮತ್ತು ಎಲ್ಲರಲ್ಲೂ ಇರುವ ಲೋಕವೇ ನಿನ್ನಲ್ಲೂ ಇದೆ. ನೀನು ಲೋಕವನ್ನು ನೋಡುತ್ತಿರುವಾಗ ಲೋಕವೂ ನಿನ್ನನ್ನು ನೋಡುತ್ತಿದೆ.
ಗಂಗೆಯಲ್ಲಿ ನೀನು ಮಿಂದರೆ ಗಂಗೆ ಮತ್ತು ನೀನು ಇಬ್ಬರೂ ಒಂದಾಗುತ್ತೀರಿ. ಮತ್ತು ನೀವು ಎಂದೂ ಬೇರೆಯಾಗಿಯೂ ಇರಲಿಲ್ಲ ಎಂಬ ಸತ್ಯವನ್ನೂ ಕಂಡುಕೊಳ್ಳುತ್ತೀರಿ. ನಿಮ್ಮ ಇಚ್ಛೆಯಿಲ್ಲದೇ ಈ ಲೋಕದಲ್ಲಿ ನೀವು ಹುಟ್ಟಿ ಬಂದಿರುವಿರಿ. ಅದು ಯಾವ ಕರ್ಮದ ಫಲ, ನನಗೆ ಮೋಕ್ಷ ಸಿಗುತ್ತದಾ ಇಲ್ಲವಾ, ಸನ್ಯಾಸ ಮಾತ್ರ ಮೋಕ್ಷಕ್ಕೆ ದಾರಿಯಾ- ಇಂಥ ಯೋಚನೆಗಳನ್ನೆ ಬಿಟ್ಬಿಡಿ.
ಈ ಕ್ಷಣದ ಹಿಂದೆ ನೀನಿರಲಿಲ್ಲ, ಮುಂದಿನ ಕ್ಷಣದಲ್ಲೂ ನೀನಿರುವುದಿಲ್ಲ. ಆದರೆ ಈ ಕ್ಷಣ ದಲ್ಲಿ ಇರುವೆ. ಇದು ಮಾತ್ರ ನಿನ್ನದು. ಈ ಕೋಟಿ ಚೈತನ್ಯಗಳ ನಡುವೆ ಒಂದಾಗಲು ಬಂದಿ ರುವೆ. ಆಗ ನಿನ್ನಂಥದೇ ಸುಖ ದುಃಖ, ಪ್ರೇಮ ದ್ವೇಷ, ಕಾಯಿಲೆ ಕಸಾಲೆ ಎಲ್ಲವೂ ಅಕ್ಕಪಕ್ಕ ದಲ್ಲಿರುವವನಲ್ಲೂ ಇರುವುದೂ ನಿನಗೆ ಗೊತ್ತಾಗುತ್ತದೆ. ನೀವು ಮಹಾಕಾಲದ ಈ ಕ್ಷಣದಲ್ಲಿ ಒಂದಾಗಿರುವುದೂ, ಮತ್ತೆ ಇನ್ನೊಂದು ಕ್ಷಣದಲ್ಲಿ ಬೇರೆಯಾಗಬೇಕಿದೆ ಎಂಬುದೂ ಅರಿವಾಗುತ್ತದೆ. ಮುಕ್ತವಾಗಿರಿ.
ಇದಷ್ಟೇ ನೀವು ಇಲ್ಲಿಂದ ಕೊಂಡೊಯ್ಯಬೇಕಿರುವುದು. ಒಳ್ಳೇದಾಗಲಿ, ನಾನು ಬರ್ತೀನಿ. ಸಾಧುವಿನ ಮಾತುಗಳು ಕರಗಿದವು. ನೋಡುತ್ತಿದ್ದಂತೆ ಅವರು ಜನಜಂಗುಳಿಯ ನಡುವೆ ಮಂಜಿನಂತೆ ಕಣ್ಮರೆಯಾದರು. ಅವರ ಹೆಸರೂ ಕೇಳಿರಲಿಲ್ಲ ಎಂಬುದು ಎಷ್ಟೋ ಹೊತ್ತಿನ ನಂತರ ನೆನಪಾಯಿತು.