Harish Kera Column: ನಗರದ ಚೈತ್ರಕ್ಕೊಂದು ಕುಸುಮಾಂಜಲಿ
ನೂರಾರು ವರ್ಷಗಳ ಹಿಂದೆ ಆಗಮಿಕ ತಳಿಗಳಾಗಿ ಬಂದ ಈ ಹೂ ಬಿಡುವ ಮರಗಳು ಇಂದು ನಮ್ಮ ವಾತಾವರಣಕ್ಕೂ ಲ್ಯಾಂಡ್‌ಸ್ಕೇಪ್‌ಗೂ ಅಚ್ಚುಕಟ್ಟಾಗಿ ಹೊಂದಿ ಕೊಂಡಿವೆ. ಟಿಪ್ಪುವಿನ ಸೋಲಿನ ನಂತರ ಬೆಂಗಳೂರಿಗೆ ಬಂದ ಬ್ರಿಟಿಷರ ಜತೆ ಇಲ್ಲಿಗೆ ಟಬೀಬಿಯ ಮುಂತಾದ ಹೂಗಳು ಪ್ರವೇಶಿಸಿದವು.

ಸುದ್ದಿ ಸಂಪಾದಕ, ಅಂಕಣಕಾರ ಹರೀಶ್ ಕೇರ

ಕಾಡುದಾರಿ
ಸಾಮಾನ್ಯವಾಗಿ ಬೆಂಗಳೂರಿನ ಬೀದಿಗಳಲ್ಲಿ ಓಡಾಡುವವರ ತಲೆ ಮೇಲೆ ಪಾರಿವಾಳದ ಹಿಕ್ಕೆ ಬೀಳುತ್ತಿರುತ್ತದೆ. ಆದರೆ ಈಗ ನೀವು ಇಲ್ಲಿ ನಡೆದುಹೋದರೆ ನಿಮ್ಮ ಮೇಲೆ ಹೂಮಳೆ ಆಗುವುದು ಖಚಿತ. ಇದೇನೂ ದೇವತೆಗಳು ಸುರಿಸುವ ಪುಷ್ಪವೃಷ್ಟಿಯಲ್ಲ. ಈ ಬೀದಿಗಳ ತುಂಬ ಬೆಳೆದು ನಿಂತ ಹೂ ಬಿಡುವ ಮರಗಳು ತಡೆಯಿಲ್ಲದೆ ಹೂಗಳನ್ನು ಕೆಳಗೆ ಉದು ರಿಸುತ್ತಿರುತ್ತವೆ. ಇವತ್ತು ಹೀಗೆ ಒಂದು ಮರದಿಂದ ನನ್ನ ತಲೆಯ ಮೇಲೆ ಬಿದ್ದ ಒಂದು ಹೂವನ್ನು ಗಮನಿಸಿದೆ- ಅದು ಹಳದಿ ಬಣ್ಣದ ಉದ್ದ ವಾದ್ಯದಂಥ ಹೂವು, ಪಿಂಕ್ ಟ್ರಂಪೆ ಟ್. ಆಗಸ ದಿಂದ ಸುರಿಯುತ್ತಿರುವ ಬೇಸಿಗೆಯ ಮೊದಲ ಬಿಸಿಲನ್ನು ಹೀರಿಕೊಂಡು ಗುಲಾಬಿಯಾದಂತೆ ತೋರುತ್ತಿರುವ ಈ ಹೂವಿನ ದಳಗಳು ತುದಿ ಮುಟ್ಟಿದಂತೆ ಮತ್ತಷ್ಟು ಮೆತ್ತ ಗಾಗಿರುತ್ತವೆ.
ಸಂಜೆ ಸುರಿದ ಸಾವಿರಾರು ಹೂವುಗಳು ರಂಗೋಲಿ ಚೆಲ್ಲಿದಂತಿರುತ್ತವೆ. ಜೊತೆ ಜೊತೆಗೆ ಮರದ ಎಲೆಗಳು ಕೂಡ ಉದುರಿ, ಕಸ ಗುಡಿಸುವ ಹೆಂಗಳೆಯರ ಪಾಲಿಗೆ ರೇಗುವ ಸನ್ನಿವೇಶ. ಡಿಸೆಂಬರ್‌ನಿಂದಲೇ ಎಲೆಗಳಿಗೆ ಉದುರುಶೂಲೆ ಶುರುವಾಗಿರುತ್ತದೆ. ಜನವರಿಯ ಅಂತ್ಯದ ಹೊತ್ತಿಗೆ ಹಳೆ ಎಲೆಗಳು ಉದುರಿ ಮರಗಳೆಲ್ಲ ನವಪಲ್ಲವ ಚಕ್ರವರ್ತಿಗಳು.
ಇದನ್ನೂ ಓದಿ: Harish Kera Column: ಟ್ರಂಪ್ ಮತ್ತು ಡೇರಿಯನ್ ಗ್ಯಾಪ್
ಫೆಬ್ರವರಿ ಮಧ್ಯಭಾಗದಲ್ಲಿ ಕತ್ತೆತ್ತಿದರೆ ಮಾತ್ರ ಕಾಣಿಸುವ ಕೆಂಪು ಗುಲಾಬಿ ಹಳದಿ ರಂಗು ರಂಗೋಲಿ.ನಾಡಿನಲ್ಲಿ ಮಾತ್ರವಲ್ಲ, ಕಾಡಿನಲ್ಲೂ ಈಗ ಮರಗಳಿಗೆ ಹೂಬಿಡುವ ಕಾಲ. ಫಲಾಶ ಮರಕ್ಕೆ ‘ಕಾಡಿನ ಬೆಂಕಿ’ ( forest flame) ಅಂತ ಹೆಸರು ಬಂದಿರುವುದೇ ಅದರ ಜ್ವಾಲೆಯಂಥ ಕೆಂಪು ಹೂವುಗಳಿಂದ. ಡ್ರೋನ್ ಅಥವಾ ಆಕಾಶದಿಂದ ನೋಡಿದರೆ ಹಸಿರು ಮರಗಳ ನಡುವೆ ಒಂದೊಂದು ಮರಕ್ಕೆ ಬೆಂಕಿಯಟ್ಟಂತೆ ಇದು ಹೂಗಳನ್ನು ಉಗ್ಗುತ್ತಿರುತ್ತದೆ.
ಗಿಳಿ ಮರವೆಂದೂ ಮುತ್ತುಗವೆಂದೂ ಕರೆಯಲ್ಪಡುವ ಇದರ ಹೂಗಳನ್ನು ಯಶೋಧರ ಚರಿತದಲ್ಲಿ ಜನ್ನ ‘ಸಿಸಿರಮನೆ ಪಡೆದು ಪರಕೆಗೆ ವಸಂತನಲರ್ವೋದ ಮಾವಿನಡಿಮಂಚಿ ಕೆಯೋಳ್ ಕುಸುರಿದರಿದಡಗಿನಂತೆವೊಲ್ ಎಸೆದಿರ್ದವು ಮುತ್ತದ ಮುಗುಳ್ಗಳ್’ ಎಂದು ಹೇಳಿ ಬೀಭತ್ಸವನ್ನೇ ಸೃಷ್ಟಿಸಿಬಿಡುತ್ತಾನೆ. ಅಂದರೆ ‘ಶಿಶಿರನನ್ನೇ (ಮಾಸ) ಹಿಡಿದು ಮಾವಿನ ಮರದ ಕೆಳಗೆ ಹರಕೆಯ ಬಲಿಗಾಗಿ ಕೊಚ್ಚಿ ಹಾಕಿದ ಮಾಂಸದ ತುಣುಕುಗಳಂತೆ ಮುತ್ತುಗದ ಹೂಗಳು ರಂಜಿಸಿದವು’ ಎಂದು.
ಹೂವುಗಳು ಮಧುರ ಭಾವನೆಯನ್ನೇ ಸೃಜಿಸಬೇಕು ಎಂಬ ನಿಲುವಿನವರು ನೀವಾದರೆ ಅದಕ್ಕೆ ನಮ್ಮ ಆದಿಕವಿ ಪಂಪನನ್ನೇ ತೆಗೆದುಕೊಳ್ಳಿ- ತಾನು ಬನವಾಸಿ ದೇಶವನ್ನು ನೆನೆ ಯುವಂತೆ ಮಾಡುವ ಅವನ ಪಟ್ಟಿಯಲ್ಲಿ ‘ಪೂತ ಜಾಜಿ ಸಂಪಗೆ, ಬಿರಿದ ಮಲ್ಲಿಗೆ’ಗಳೆಲ್ಲ ಇವೆ. ಬೆಂಗಳೂರಿನಲ್ಲಿ ಮರ ಹೂಬಿಟ್ಟರೆ ಕೆಲವರಾದರೂ ಆಸ್ವಾದಿಸುವವರು ಸಿಕ್ಕಾರು; ಕಾಡಿನಲ್ಲಿ ಮರ ಹೂತರೆ ಅದನ್ನು ಕಂಡು ಸವಿಯುವವರಾರು? ಯಾರೂ ಇಲ್ಲ ಎಂಬ ಕಾರಣಕ್ಕಾಗಿಯೇ ಅದು ‘ವನಸುಮ’.
ಅಂದರೆ ತನ್ನ ಕೆಲಸ ಮಾಡುತ್ತಾ ಹೋಗಬೇಕು, ಅನ್ಯರು ನೋಡಿ ಪ್ರಶಂಸಿಸಲಿ ಎಂದು ಕಾಯಬಾರದು. ಡಿವಿಜಿಯವರು ಇದನ್ನೇ, ವನಸುಮದೊಲೆನ್ನ ಜೀವನವು ವಿಕಸಿಸು ವಂತೆ... ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ ತಾನೆಲೆಯ ಪಿಂತಿರ್ದು... ಎಂದೆ ಹೇಳಿರುವುದು ತಾನೆ? ಕಾಡಲ್ಲಿರುವ ಹೂವೇನೋ ಹೀಗೇ ಸರಿ. ಹಾಗಂತ ಬೆಂಗಳೂರಿನಲ್ಲಿರುವ ಮರದ ಹೂಗಳು ನಮ್ಮ ಮೆಚ್ಚುಗೆಗೆ ಕಾಯುತ್ತವೆ ಅಂತಲ್ಲ. ಮರಗಳಿಗೆ ಜೀವವಿದೆ ನಿಜ.
ಆದರೆ ನಾವು ಅವುಗಳ ಮುಂದೆ ನಿಂತು ಆ ಹೂಗಳ ಬಣ್ಣ ಅಂದ ಆಕಾರಗಳನ್ನೆ ಶ್ಲಾಘಿಸ ಬೇಕು ಎಂದು ಅವುಗಳು ನಿರೀಕ್ಷಿಸಲಾರವು. ರಸ್ತೆ ಮೇಲೆ ಚೆಲ್ಲಿದ ಹೂಗಳ ಮೇಲೇನೋ ಇಡಲಾರದೆ ಕಾಲಿಟ್ಟು ನಡೆಯುತ್ತೇವೆ, ನಿಜ. ‘ಅವನ ಜೀವನ ಹೂವಿನ ಹಾದಿಯಾಗಿರ ಲಿಲ್ಲ’ ಅನ್ನುತ್ತೇವೆ. ಹೂವಿನ ಮೇಲೆ ನಡೆಯುವುದು ಮೆತ್ತಮೆತ್ತಗಿನ ಫೀಲ್ ಕೊಡುತ್ತದೆ ಸರಿ.
ಆದರೆ ಯಾರೂ ತನ್ನ ಕಾಲಡಿಯಲ್ಲಿ ಹೂವಿರಲಿ ಎಂದು ನಿರೀಕ್ಷಿಸಬಾರದು. ನಮ್ಮ ಸುಖಕ್ಕಾಗಿ ಹೂವಿನ ಬಲಿ ಕೊಡಬಹುದೆ? ಇದನ್ನಾದರೂ ಅರ್ಥ ಮಾಡಿಕೊಳ್ಳಬಹುದು, ಆದರೆ ಈ ‘ಹೂವಿನ ಹಾಸಿಗೆ’ ಎಂಬುದನ್ನು ಹೇಗೆ ಅರಗಿಸಿಕೊಳ್ಳುವುದು? ಹೊಸ ಮದು ಮಕ್ಕಳ ಹಾಸಿಗೆಯ ಮೇಲೆ ಹೂಗಳನ್ನು ಚೆಲ್ಲುವ ಈ ಕ್ರೂರ ಕೃತ್ಯವನ್ನು ಯಾರು ಆರಂಭಿಸಿ ದರೋ ಗೊತ್ತಿಲ್ಲ.
ಇದು ಹೂಗಳಿಗೆ ನಾವು ಮಾಡುವ ಅತ್ಯಂತ ಘೋರ ಅಪಚಾರ. ಆ ಹೂಗಳನ್ನು ಮೊದಲ ರಾತ್ರಿಯ ಆವೇಶದಲ್ಲಿರುವ ವಧು- ವರ ಗಮನಿಸಿ ಆನಂದಿಸುತ್ತಾರೆ ಎಂದು ನಾವು ನಿರೀಕ್ಷಿ ಸುವುದೇ ಮೂರ್ಖತನ. ಅವುಗಳಿಗೆ ಅಲ್ಲಿ ಯಾವ ಕೆಲಸವೂ ಇಲ್ಲ. ಜೊತೆಗೆ ಅಪ್ಪಚ್ಚಿ ಯಾಗಬೇಕಾದ ವಿಧಿ. ಇದನ್ನು ಕಾವ್ಯಾತ್ಮಕವಾಗಿ ಹೇಳಬಹುದಾದರೆ ‘ಒಂದು ಹೂವು ಅರಳುವುದಕ್ಕೆ ಸಾಕ್ಷಿಯಾಗಿ ಎಷ್ಟೊಂದು ಹೂಗಳನ್ನು ಬಾಡಿಸುವುದು’ !
ನೋಡಿ, ಈ ಹೂಗಳ ದೆಸೆಯಿಂದ ನಾನೂ ಕವಿಯಾಗಬೇಕಾಯಿತು. ಸದ್ಯ ಪ್ರಸ್ತದ ಕೋಣೆ ಯಿಂದ ಆಚೆ ಬಂದು ಬೆಂಗಳೂರಿನ ಬೀದಿಗಳಿಗೆ ಮರಳೋಣ. ಕೆಂಪೇಗೌಡರು ಊರು ಕಟ್ಟಿದಾಗ ಇಲ್ಲಿ ಈ ಮರಗಳ್ಯಾವುವೂ ಇರಲಿಲ್ಲ. ಇದು ಒಣಭೂಮಿಯಾಗಿತ್ತು. ತೆಂಗಿನ ಮರಗಳಿದ್ದವು, ಕಡಲೆ ಇತ್ಯಾದಿ ಹೊಲಗಳಿದ್ದವು. ಇಲ್ಲಿಇದ್ದುದು ತೀರಾ ಎತ್ತರಕ್ಕೆ ಬೆಳೆಯದ ಪೊದೆ ಜಾತಿಯ ಸಸ್ಯಗಳು ಎಂಬುದು ಬೆಂಗಳೂರಿನ ಇತಿಹಾಸಜ್ಞರ ಅಂಬೋಣ.
ಜನ ಬಂದು ನೆಲೆಸಲು ಆರಂಭಿಸಿದಂತೆ ಬೇರೆ ಬೇರೆಡೆಗಳಿಂದ ನಾನಾ ಸಸ್ಯಜಾತಿಗಳು ಇಲ್ಲಿಗೆ ಬರಲು ಆರಂಭಿಸಿದವು. ಲೇಖನದ ಮೊದಲಲ್ಲಿ ಹೇಳಿದ ಪಿಂಕ್ ಟ್ರಂಪೆಟ್ ಎಂಬು ದರ ವೈಜ್ಞಾನಿಕ ಹೆಸರು ಟಬೀಬಿಯಾ ರೋಸಿಯಾ ( Tabebuia Rosea).
ಇದು ಬೆಂಗಳೂರಿನಲ್ಲಿ ಒಂದೂವರೆ ದಶಕದ ಹಿಂದೆ ಇರಲೇ ಇಲ್ಲ. ನೂರೈವತ್ತು ವರ್ಷಗಳ ಹಿಂದೆ, ಇಂದು ರಸ್ತೆ ಬದಿಗಳಲ್ಲಿ ನಿಂತಿರುವ ಟಬೀಬಿಯಾ ವೈವಿಧ್ಯಗಳು, ನೇರಳೆ ಹೂ ಗಳನ್ನು ಬಿಡುವ ಜಕರಾಂಡ ( Jacaranda mimosifolia) ಎಲ್ಲವನ್ನೂ ತಂದವರು ಬ್ರಿಟಿ ಷರು. ಟಬೀಬಿಯಾದ ನಾನಾ ಬಣ್ಣ ಹೂ ಬಿಡುವ ಹಲವು ವೆರೈಟಿಗಳಿವೆ.
ಇವು ಬಂದುದು ದಕ್ಷಿಣ ಅಮೆರಿಕಾದಿಂದ. ಜೊತೆಗೆ ನಮ್ಮ ಮೇ-ವರ್ ಕೂಡ ಸೇರಿ ಕೊಂಡಿ ದೆ. ಇದೇನೂ ನಮ್ಮ ದೇಶದ್ದೊಂದು ಭಾವಿಸಬೇಡಿ. ಗುಲ್ ಮೊಹರ್ ಎಂದು ಕರೆಯಲಾ ಗುವ ಇದರ ವೈಜ್ಞಾನಿಕ ನಾಮಧೇಯ (Delonix regia)ಇದು ಮಡಗಾಸ್ಕರ್ ನಿಂದ ಬಂತು. ಕಬ್ಬನ್ ಪಾರ್ಕ್ ನಲ್ಲಿ ಈಗ ಹೋದರೆ ಇವೆಲ್ಲವೂ ಸೇರಿ ದಾರಿಯುದ್ದಕ್ಕೂ ಯಾರೋ ಅರಶಿನ ಕುಂಕುಮ ಚೆಲ್ಲಿದಂತೆ ಹೂಗಳನ್ನು ಹಾಸಿರುತ್ತವೆ.
ಕಬ್ಬನ್ ಪಾರ್ಕಿನ ವಿಷಯ ಬಂತು. ಜೊತೆಗೇ ಲಾಲ್‌ಬಾಗೂ ಇರಲಿ. ಲಾಲ್‌ಬಾಗ್‌ನಲ್ಲಿ ನಡೆಯುವ ಹೂವಿನ ಪ್ರದರ್ಶನ ನಿಮಗೆ ತಿಳಿಯದ್ದೇನಲ್ಲ. ಈ ಹೂವುಗಳಿಗೂ ಹೂವಿನ ಮರಗಳಿಗೂ ಬ್ರಿಟಿಷರಿಗೂ ಲಾಲ್‌ಬಾಗ್ ಕಬ್ಬನ್ ಪಾರ್ಕುಗಳಿಗೂ ಅವಿನಾಭಾವ ಸಂಬಂಧ. ನೂರಾರು ವರ್ಷಗಳ ಹಿಂದೆ ಆಗಮಿಕ ತಳಿಗಳಾಗಿ ಬಂದ ಈ ಹೂ ಬಿಡುವ ಮರಗಳು ಇಂದು ನಮ್ಮ ವಾತಾವರಣಕ್ಕೂ ಲ್ಯಾಂಡ್‌ಸ್ಕೇಪ್‌ಗೂ ಅಚ್ಚುಕಟ್ಟಾಗಿ ಹೊಂದಿಕೊಂಡಿವೆ. ಕೆಂಪೇಗೌಡರೂ ಅವರ ವಂಶಸ್ಥರೂ ಆಲ ಅರಳಿ ಮೊದಲಾದ ಮರಗಳಿಗೆ ಒತ್ತು ನೀಡಿ ದರು.
ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಉದ್ಯಾನವನಗಳನ್ನು ರೂಪಿ ಸಲು ಶುರುವಾಯಿತು. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ (1799) ಟಿಪ್ಪುವಿನ ಸೋಲಿನ ನಂತರ ಬ್ರಿಟಿಷರು ಬೆಂಗಳೂರಿನ ಮೇಲೆ ಹಿಡಿತ ಸಾಧಿಸಿದರು. ನಂತರ ಇಲ್ಲಿಗೆ ಟಬೀಬಿಯ ಮುಂತಾದ ಹೂಗಳು ಪ್ರವೇಶಿಸಿದವು.
19ನೇ ಶತಮಾನದಲ್ಲಿ ಟಬೀಬಿಯದ ಮೊದಲ ಬೀಜಗಳನ್ನು ನೆಡಲಾಯಿತು. ಕೋಟೆಯ ಪೇಟೆ ಪ್ರದೇಶವನ್ನು ವಶಪಡಿಸಿಕೊಂಡ ಬ್ರಿಟಿಷರು ಸ್ವಲ್ಪ ಹೊರಗೆ ನೆಲೆಸಿದರು. ಅದು ಕಂಟೋನ್ಮೆಂಟ್ ಆಯಿತು. ಬ್ರಿಟಿಷರು ತಾವು ಬಿಟ್ಟು ಬಂದ ಇಂಗ್ಲೆಂಡ್ ಅನ್ನು ಇಲ್ಲಿ ಮರು ಸೃಷ್ಟಿಸಲು ಪ್ರಯತ್ನಿಸಿದರು. ಭಾರತದ ಬೇಸಿಗೆಯಲ್ಲಿ ಅವರನ್ನು ತಂಪಾಗಿಡಲು ದೊಡ್ಡ ಮರಗಳನ್ನು ತಂದರು. ಹೀ
ಗಾಗಿ ತಬೀಬಿಯಾ, ರೈನ್‌ಟ್ರೀ, ಆಫ್ರಿಕನ್ ಟುಲಿಪ್ಸ್ , ಜಕರಂಡಾಗಳನ್ನು ತಂದು ಬೀದಿಗಳ ಎರಡೂ ಬದಿ ನೆಟ್ಟರು. ಲಂಡನ್‌ನ ಕ್ಯೂ ಗಾರ್ಡನ್ಸ್ ನ ತೋಟಗಾರಿಕಾ ತಜ್ಞರು ಮತ್ತು ಸಸ್ಯಶಾಸ್ತ್ರಜ್ಞರೊಂದಿಗೆ ಸಮಾಲೋಚಿಸಿದ ನಂತರವೇ ಬ್ರಿಟಿಷರು ಇಲ್ಲಿಗೆ ಆಲಂಕಾರಿಕ ಹೂಗಳ ಮರಗಳನ್ನು ತಂದದ್ದು.
ಗುಸ್ತಾವ್ ಹರ್ಮನ್ ಕ್ರುಂಬಿಗೆಲ್ ಇಂತಹ ಅಧಿಕಾರಿಗಳಲ್ಲಿ ಒಬ್ಬ. ಜರ್ಮನ್ ಸಸ್ಯಶಾಸ್ತ್ರಜ್ಞ ಮತ್ತು ತೋಟಗಾರಿಕಾ ತಜ್ಞನಾದ ಈತ ಮೈಸೂರು ಮಹಾರಾಜರ ಸಲಹೆಗಾರನಾಗಿದ್ದ. ದಕ್ಷಿಣ ಅಮೆರಿಕಾ ಮೂಲದ ಮರಗಳನ್ನು ಬೆಂಗಳೂರಿನ ಬೀದಿಗಳಿಗೆ ಆತ ತಂದ. ಇವರ ಆಯ್ಕೆಗಳ ಹಿಂದಿನ ಚಿಂತನೆ ಭಾರತೀಯವಾಗಿತ್ತು ಎನ್ನಬಹುದು. ಕಾಳಿದಾಸನ ‘ಋತು ಸಂಹಾರ’ದಲ್ಲಿ ಪ್ರತಿ ಋತುಮಾನದಲ್ಲೂ ಹೂಬಿಡುವ ಸಸ್ಯಗಳ ಪರಿಕಲ್ಪನೆ ಇದೆ.
ಹಾಗೆ ಕ್ರುಂಬಿಗೆಲ್ ಬೆಂಗಳೂರು ವರ್ಷವಿಡೀ ಹೂಬಿಡುವ ಋತುಗಳಿಗೆ ಸಾಕ್ಷಿಯಾಗುವ ರೀತಿಯಲ್ಲಿ ಮರಗಳನ್ನು ಆಯ್ಕೆ ಮಾಡಿದ. ಇಂದಿಗೂ ಇದನ್ನು ಗಮನಿಸಬಹುದು. ಟಬೀಬಿಯದ ಗುಲಾಬಿ ಮತ್ತು ಹಳದಿ ಹೂವುಗಳು ಸಾಮಾನ್ಯವಾಗಿ ಹೊಸ ವರ್ಷದ ಆಗಮನದ ಸೂಚನೆ. ಮಾರ್ಚ್‌ನಲ್ಲಿ ಜಕರಂಡಾಗಳು ಪುಷ್ಪ ಧರಿಸುತ್ತವೆ. ಮೇ ತಿಂಗಳಲ್ಲಿ ಗುಲ್‌ಮೊಹರ್ ಕೆಂಪು ಕೆಂಪಾಗಿ ನಳನಳಿಸುತ್ತದೆ.
ಬೆಂಗಳೂರಿನ ತಜ್ಞರು ವಿವರಿಸುವ ಹಾಗೆ ಬ್ರಿಟಿಷರಿಗೆ ಸೌಂದರ್ಯದ ಬಗ್ಗೆ ಹೆಚ್ಚಿನ ಆಸಕ್ತಿ. ಭವ್ಯವಾದ ಕ್ಯಾನೋಪಿಗಳನ್ನು ಹೊಂದಿರುವ ದೊಡ್ಡ ಮಳೆ ಮರಗಳು, ದೊಡ್ಡ ಕಿತ್ತಳೆ-ಹಳದಿ ಹೂವುಗಳನ್ನು ಹೊಂದಿರುವ ಆಫ್ರಿಕನ್ ಟುಲಿಪ್ಸ್ , ಗುಲಾಬಿ, ನೇರಳೆ ಮತ್ತು ಹಳದಿ ಹೂವುಗಳನ್ನು ಹೊಂದಿರುವ ಟಬೀಬಿಯಾಗಳು ಎಲ್ಲವೂ ಅದ್ಭುತವಾದ ನೋಟವನ್ನು ಕಟ್ಟಿಕೊಡುತ್ತವೆ.
ಆದರೆ ಅವುಗಳಿಗೆ ಯಾವುದೇ ಪರಿಮಳವಿಲ್ಲ. ಆದರೆ, ನಮಗೆ ಅಂದರೆ ಭಾರತೀಯರಿಗೆ ಹೂವೆಂದರೆ ಸುಗಂಧವೂ ಬೇಕು. ನಮ್ಮ ಸೌಂದರ್ಯಶಾಸ್ತ್ರವು ಪರಿಮಳಕ್ಕೂ ಮಹತ್ವ ನೀಡಿದೆ. ಉದಾಹರಣೆಗೆ ಮಲ್ಲಿಗೆಯಂತಹ ಬಲವಾದ ಪರಿಮಳವನ್ನು ಹೊಂದಿರುವ ಬಿಳಿ ಹೂವು ಅಥವಾ ತುಳಸಿಯಂತಹ ಔಷಧಿಯ ಗಿಡಮೂಲಿಕೆಗಳು ಕಂಟೋನ್ಮೆಂಟ್ ಪ್ರದೇಶ ಗಳಿಗಿಂತ ಹೆಚ್ಚಾಗಿ ಮಶ್ವರಂ ಮತ್ತು ಬಸವನಗುಡಿಯಂತಹ ಪೇಟೆ ಪ್ರದೇಶಗಳಲ್ಲಿ ಕಂಡು ಬರುತ್ತವೆ. ಎಂಜಿ ರಸ್ತೆ, ಕಬ್ಬನ್ ಪಾರ್ಕ್ ಮತ್ತು ಅದರ ಸುತ್ತಮುತ್ತಲಿನ ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಟಬೀಬಯಾಗಳು ಹೆಚ್ಚು ಗೋಚರಿಸುತ್ತವೆ. ಆದರೂ ಈಗ ಅವುಗಳನ್ನು ಎಲ್ಲೂ ಕಾಣಬಹುದು. ಎಲ್ಲ ಹೂವುಗಳಲ್ಲಿ ಮಲ್ಲಿಗೆಯ ನೆಚ್ಚುವೆನು ಎಂದು ಕೆಎಸ್ ನರಸಿಂಹಸ್ವಾಮಿ ಅವರು ಹೇಳಿದ್ದು ಸರಿಯೇ ಇದೆ; ಆದರೆ ಎಲ್ಲಿಂದಲೋ ಬಂದು ಇಲ್ಲಿ ನಮ್ಮ ಸಿಟಿಯನ್ನು ಶೃಂಗಾರವಾಗಿಸಿರುವ ಈ ಮರಗಳಿಗೂ ನಮ್ಮ ಪ್ರೀತಿ, ಕೃತಜ್ಞತೆ, ಧನ್ಯ ವಾದಗಳು ಸಲ್ಲುತ್ತವೆ.