ಬೆಂಗಳೂರು: ಬಿಎಂಟಿಸಿ ಬಸ್‌ಗಳ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾಗಿ ಇಬ್ಬರು ಮೃತಪಟ್ಟಿದ್ದ ಘಟನೆ (Bangalore Accident) ಬೆಂಗಳೂರಿನ ಹನುಮಂತನಗರ ಬಳಿ ಶುಕ್ರವಾರ ನಡೆದಿತ್ತು. ಅಫಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗುತ್ತಿದೆ. ಹೊಸಕೆರೆಹಳ್ಳಿ ಕ್ರಾಸ್‌ನಿಂದ ಬಾಟಾ ಶೋ ರೂಮ್‌ಗೆ ತೆರಳುವ 50 ಅಡಿ ರಸ್ತೆಯಲ್ಲಿ ಸೀತಾ ಸರ್ಕಲ್ ಬಳಿ ಭೀಕರ ಅಪಘಾತ ನಡೆದಿತ್ತು. ಎರಡು ಬಿಎಂಟಿಸಿ ಬಸ್‌ಗಳ ನಡುವೆ ಆಟೋ ಸಿಲುಕಿ, ಚಾಲಕ ಹಾಗೂ ಪ್ರಯಾಣಿಕ ಕುಳಿತ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದರು. ಇನ್ನು ಘಟನೆಗೆ ಸಂಬಂಧಿಸಿ ಈಗಾಗಲೇ ಪೊಲೀಸರು ಬಸ್ ಜಪ್ತಿ ಮಾಡಿ, ಚಾಲಕನನ್ನು ಬಂಧಿಸಿದ್ದಾರೆ.
ಆಯುರ್ವೇದ ವೈದ್ಯರಾಗಿದ್ದ ವಿಷ್ಣುರಾವ್ ಮತ್ತು ಚಾಲಕ ಅನಿಲ್‌ಕುಮಾರ್ ಆಟೋದಲ್ಲಿ ಶುಕ್ರವಾರ ಬೆಳಗ್ಗೆ ಸೀತಾ ಸರ್ಕಲ್ ಕಡೆ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆ ಆಟೋ ಮುಂದೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಚಾಲಕ ಹೊಸಕೆರೆಹಳ್ಳಿ ಕ್ರಾಸ್‌ನಲ್ಲಿ ಕಾರೊಂದು ಎಡ ತಿರುವು ಪಡೆಯುತ್ತಿದ್ದ ಕಾರಣ ಸ್ವಲ್ಪ ನಿಧಾನ ಮಾಡಿದ್ದರು. ಹೀಗಾಗಿ, ಹಿಂದೆ ಅನಿಲ್‌ಕುಮಾರ್ ಕೂಡ ಆಟೋ ವೇಗ ತಗ್ಗಿಸಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಮುಂದಿದ್ದ ಬಿಎಂಟಿಸಿಗೆ ಆಟೋ ಡಿಕ್ಕಿಯಾಗಿದ್ದು, ಸ್ಥಳದಲ್ಲಿಯೇ ಚಾಲಕ ಅನಿಲ್‌ಕುಮಾರ್ ಹಾಗೂ ವಿಷ್ಣು ರಾವ್ ಮೃತಪಟ್ಟಿದ್ದರು.
ಮೃತ ಪ್ರಯಾಣಿಕ ವಿಷ್ಣು ಅವರು ವೈದ್ಯರಾಗಿದ್ದರು. ಅಪಘಾತ ಸಂಬಂಧ ಮೃತ ವಿಷ್ಣುರಾವ್ ಪುತ್ರಿ ಸ್ಮೃತಿ ರಾಜೇಶ್ ದೂರಿನ ಮೇರೆಗೆ ಬಿಎಂಟಿಸಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಚಾಲಕ ಪ್ರಸನ್ನ ಎಂಬುವವರನ್ನು ಪೊಲೀಸರು ಬಂಧಿಸಿ, ಬಸ್ ಜಪ್ತಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Viral News: ಆಟೋದಲ್ಲೇ ದಿನವಿಡೀ ಟೌನ್ ಟ್ರಿಪ್ ಹೊಡೆಯೋ ಸಾಕು ನಾಯಿ- ಈ ವಿಡಿಯೊಗೆ ನೆಟ್ಟಿಗರು ಫಿದಾ!
ಶೀಲ ಶಂಕಿಸಿ 8 ತಿಂಗಳ ಗರ್ಭಿಣಿಯನ್ನು ಕೊಲೆಗೈದ ಪಾಪಿ ಪತಿ!

ತುಮಕೂರು: ಶೀಲಶಂಕಿಸಿ 8 ತಿಂಗಳ ಗರ್ಭಿಣಿಯನ್ನು 8 ವರ್ಷದ ಮಗನ ಕಣ್ಣೆದುರೇ ನೇಣು ಬಿಗಿದು ಕೊಲೆ ಮಾಡಿ ಬಳಿಕ ಪತಿ ಠಾಣೆಗೆ ಹೋಗಿ ಶರಣಾಗಿರುವ ಘಟನೆ (Murder Case) ನಗರದ ತಿಲಕ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗ್ಮಾ ಕೊಲೆಯಾದ ಗರ್ಭಿಣಿ. ಪತಿ ಸೈಯದ್ ಆರೋಪಿ ಎಂದು ತಿಳಿದುಬಂದಿದೆ. ಹೌಸಿಂಗ್ ಬೋರ್ಡ್ ನಿವಾಸಿಯಾದ ನಗ್ಮಾಗೆ 8 ವರ್ಷದ ಮಗನಿದ್ದಾನೆ. ಒಂದು ವರ್ಷದ ಹಿಂದೆ ನಗ್ಮಾ ಮೊದಲ ಗಂಡನನ್ನು ಬಿಟ್ಟಿದ್ದಳು. ಬಳಿಕ ಸೈಯದ್‌ನನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದಳು. ಆದರೆ, ಶೀಲಶಂಕಿಸಿ ಎಂಟು ತಿಂಗಳ ಗರ್ಭಿಣಿ ನಗ್ಮಾಳನ್ನು ನೇಣು ಬಿಗಿದು ಗಂಡ ಹತ್ಯೆ ಮಾಡಿದ್ದಾನೆ.
ಆರೋಪಿ ನಶೆಮುಕ್ತ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಹಣ ತೆಗೆದುಕೊಂಡು ಬಾ ಎಂದು ಪೀಡಿಸಿ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಗಲಾಟೆ ನಡೆದು 8 ವರ್ಷದ ಮಗನ ಕಣ್ಣೆದುರೇ ನಗ್ಮಾ ಬಾಯಿಗೆ ಬಟ್ಟೆ ತುರುಕಿ ನೇಣು ಬಿಗಿದು ಕೊಲೆ ಮಾಡಿದ ಗಂಡ, ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.