Basava Jaya Mruthyunjaya Swamiji: ಕೂಡಲಸಂಗಮ ಬಸವ ಜಯ ಮೃತ್ಯುಂಜಯ ಶ್ರೀ ಆರೋಗ್ಯ ಏರುಪೇರು; ಮಠದಿಂದ ಶ್ರೀಗಳನ್ನು ಹೊರಹಾಕಲು ಚಿಂತನೆ
Basava Jaya Mruthyunjaya Swamiji: ನಾಲ್ಕು ದಿನಗಳ ಹಿಂದೆ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ್ದು ವಿವಾದವಾಗಿತ್ತು. ಬೀಗ ಹಾಕಿದ ಹಿನ್ನೆಲೆಯಲ್ಲಿ ಬಸವ ಜಯ ಮೃತ್ಯುಂಜಯ ಶ್ರೀಗಳು ಬಹಳ ನೊಂದುಕೊಂಡಿದ್ದರು. ಇದೀಗ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸವ ಜಯಮೃತ್ಯುಂಜಯ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ್

ಬಾಗಲಕೋಟೆ : ಬಾಗಲಕೋಟೆ (Bagalakote news) ಜಿಲ್ಲೆಯ ಕೂಡಲಸಂಗಮದ (Kudala Sangama) ಪಂಚಮಸಾಲಿ (Panchamasali Mutt) ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಶ್ರೀ (Basava Jaya Mruthyunjaya Swamiji) ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಜಯಮೃತ್ಯುಂಜಯ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ, ಪಂಚಮಸಾಲಿ ಮಠದಿಂದ ಬಸವ ಜಯ ಮೃತ್ಯುಂಜಯ ಶ್ರೀಗಳನ್ನು ಹೊರಹಾಕಲು ಚಿಂತನೆ ನಡೆಸಲಾಗುತ್ತಿದೆ ಎಂದು ಶಾಸಕ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ತಿಳಿಸಿದ್ದಾರೆ.
ಬಸವ ಜಯ ಮೃತ್ಯುಂಜಯ ಶ್ರೀಗಳಿಗೆ ತಲೆ, ವಾಂತಿ ಹಾಗು ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಸದ್ಯ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಚೆ ನೀಡಲಾಗುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ನಾಲ್ಕು ದಿನಗಳ ಹಿಂದೆ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ್ದು ವಿವಾದವಾಗಿತ್ತು. ಬೀಗ ಹಾಕಿದ ಹಿನ್ನೆಲೆಯಲ್ಲಿ ಜಯ ಮೃತ್ಯುಂಜಯ ಶ್ರೀಗಳು ಬಹಳ ನೊಂದುಕೊಂಡಿದ್ದರು. ಇದೀಗ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀಗಳನ್ನು ಹೊರಹಾಕುತ್ತೇವೆ: ಕಾಶಪ್ಪನವರ್ ಸುದ್ದಿಗೋಷ್ಠಿ
ಇನ್ನೊಂದೆಡೆ ಶಾಸಕ ವಿಜಯಾನಂದ ಕಾಶಪ್ಪನವರ್ ಸುದ್ದಿಗೋಷ್ಠಿ ನಡೆಸಿ, ಕೂಡಲಸಂಗಮದ ಪಂಚಮಸಾಲಿ ಮಠದಿಂದ ಬಸವ ಜಯ ಮೃತ್ಯುಂಜಯ ಶ್ರೀಗಳನ್ನು ಹೊರಹಾಕಲು ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದಿಂದ ಜಯಮೃತ್ಯುಂಜಯ ಶ್ರೀಗಳನ್ನು ಹೊರಹಾಕಲು ಟ್ರಸ್ಟ್ ಚಿಂತನೆ ನಡೆಸುತ್ತಿದೆ. ಕೂಡಲಸಂಗಮಪೀಠದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರೂ ಆಗಿದ್ದಾರೆ. ಸ್ವಾಮೀಜಿ ಒಂದು ಪಕ್ಷದ ಬ್ಯಾನರ್ ಅಡಿ ಹೋಗಿ ಕೂರುತ್ತಿದ್ದಾರೆ. ಓರ್ವ ವ್ಯಕ್ತಿಯ ಪರವಾಗಿ ಮಾತ್ರ ಸ್ವಾಮೀಜಿ ಮಾತನಾಡುತ್ತಿದ್ದಾರೆ. ಜಯ ಮೃತ್ಯುಂಜಯ ಸ್ವಾಮೀಜಿ ನಡವಳಿಕೆ ಬದಲಾವಣೆ ಆಗಿದ್ದು ಸತ್ಯ. ನಮ್ಮ ಸಮಾಜದವರ ಮೇಲೆ ಅನೇಕ ಕಡೆ ದೌರ್ಜನ್ಯ ನಡೆದಿದೆ. ಅಲ್ಲಿ ಹೋಗಿ ಸ್ವಾಮೀಜಿ ಯಾರಿಗೂ ಸಾಂತ್ವನ ಹೇಳಿಲ್ಲ. ಬಸವ ಜಯ ಸ್ವಾಮೀಜಿ ಪ್ರಚಾರ ಪ್ರಿಯ ಆಗಿದ್ದಾರೆ ಎಂದು ಆರೋಪಿಸಿದರು.
ಶೀಘ್ರದಲ್ಲಿ ಪರ್ಯಾಯ ವ್ಯವಸ್ಥೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಪರ್ಯಾಯ ವ್ಯವಸ್ಥೆಯಲ್ಲಿ ಓರ್ವ ಗುರುಗಳನ್ನು ನಿರ್ಮಿಸುವುದು ಸತ್ಯ. ಜಯ ಮೃತುಂಜಯ ಸ್ವಾಮೀಜಿಯನ್ನು ಹೊರಹಕಾಲು ಚಿಂತನೆ ನಡೆಯುತ್ತಿದೆ. ಮಠಕ್ಕೆ ಮಾಲೀಕರು ಸ್ವಾಮೀಜಿ ಅಲ್ಲ. ನಮ್ಮ ಟ್ರಸ್ಟ್ ಮಠವನ್ನು ನೋಡಿಕೊಳ್ಳುವಂತೆ ಸ್ವಾಮೀಜಿಗಳಿಗೆ ಜವಾಬ್ದಾರಿ ನೀಡಿದೆ. ಮಠ ನೀಡಿದ್ದು ಧರ್ಮ ಪ್ರಚಾರ ಮತ್ತು ಸಂಘಟನೆಗೆ ಮಾತ್ರ. ಅದು ಬಿಟ್ಟು ಮನೆ ಮಾಡಿಕೊಂಡು ಓಡಾಡುವುದು ಸರಿಯಲ್ಲ. ಸ್ವಾಮೀಜಿ ಬೆಳಗಾವಿ ಮತ್ತು ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆ ಮಾಡಿದ್ದಾರೆ. ಸ್ವತಃ ಸ್ವಾಮೀಜಿ ಮಲಪ್ರಭಾ ನದಿಯ ಮೇಲೆ ಮಠ ಕಟ್ಟುವದಾಗಿ ಹೇಳಿದ್ದಾರೆ. ಕೆಲ ಅಗ್ರಗಣ್ಯ ನಾಯಕರು ಕೂಡ ಸೇರಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಜಯಾನಂದ ಕಾಶಪ್ಪನವರ್ ಹರಿ ಹಾಯ್ದರು.
ಇದೇ ವೇಳೆ ಪಂಚಮಸಾಲಿ ಪೀಠದ ಸ್ವಾಮೀಜಿ ಮತ್ತು ಟ್ರಸ್ಟ್ ನಡುವೆ ಗುದ್ದಾಟದ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಮುಖಂಡ ನೀಲಕಂಠ ಅಸೂಟಿ ಹೇಳಿಕೆ ನೀಡಿದ್ದು, ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೀಠದಲ್ಲಿ ಇರುತ್ತಿರಲಿಲ್ಲ. ಎರಡು ವರ್ಷದಿಂದ ಕೂಡಲಸಂಗಮ ಮಠಕ್ಕೆ ಸ್ವಾಮೀಜಿ ಬಂದೇ ಇಲ್ಲ. ಮಠಕ್ಕೆ ಬಂದು ವಾಸ್ತವ್ಯ ಮಾಡಿ ಅಂತ ಅನೇಕ ಬಾರಿ ನಾವು ಹೇಳಿದ್ದೆವು. ಯಾರೂ ಇಲ್ಲದಿದ್ದಾಗ ಬೇರೆ ಬೇರೆ ಚಟುವಟಿಕೆ ನಡೆಯುತ್ತಿದ್ದವು. ಹೀಗಾಗಿ ಪೀಠಕ್ಕೆ ಬೀಗ ಹಾಕಲು ಟ್ರಸ್ಟ್ ನಿರ್ಧಾರ ಕೈಗೊಂಡಿತ್ತು ಎಂದಿದ್ದಾರೆ.
ಆದರೆ ಏಕಾಏಕಿ ಹೋಗಿ ಪೀಠದ ಬಾಗಿಲು ಮುರಿದಿದ್ದಾರೆ. ನಿತ್ಯ ಅಲ್ಲಿ ಇದ್ದಿದ್ದರೆ ಮಠಕ್ಕೆ ಬೀಗ ಹಾಕುವ ಪ್ರಶ್ನೆಯೇ ಬರುತ್ತಿರಲಿಲ್ಲ. ಸ್ವಾಮೀಜಿ ಮಾಡಬಾರದ ಕೆಲಸ ಮಾಡಬಾರದು ಅಂತ ಹೇಳಿದ್ದೆವು. 2019ರಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ನೋಟಿಸ್ ನೀಡಿದ್ದೆವು. ಸರಿಪಡಿಸಿಕೊಂಡು ಹೋಗುತ್ತೇನೆ ಅಂತ ಸ್ವಾಮೀಜಿ ಕೂಡ ಪತ್ರ ಬರೆದಿದ್ದರು. ಆದರೂ ಜಯ ಮೃತ್ಯುಂಜಯ ಶ್ರೀಗಳು ವರ್ತನೆ ಸರಿ ಮಾಡಿಕೊಂಡಿಲ್ಲ ಎಂದು ಜಯ ಮೃತ್ಯುಂಜಯ ಶ್ರೀಗಳ ವಿರುದ್ಧ ನೀಲಕಂಠ ಅಸೂಟಿ ಕಿಡಿಕಾರಿದರು.
ಇದನ್ನೂ ಓದಿ: Vijayanand Kashappanavar: ಬಿಜೆಪಿಗೆ ಬರದಿದ್ದರೆ ಸಿಬಿಐ, ಇಡಿ ದಾಳಿ ಬೆದರಿಕೆ: ವಿಜಯಾನಂದ ಕಾಶಪ್ಪನವರ ಬಾಂಬ್