Bengaluru Rain: ರಾತ್ರಿಯಿಡೀ ಧಾರಾಕಾರ ಮಳೆ, ತತ್ತರಿಸಿದ ಬೆಂಗಳೂರು, ಕೆರೆಗಳಾದ ರಸ್ತೆಗಳು
ಮೆಜೆಸ್ಟಿಕ್, ಕೆ ಆರ್ ಮಾರುಕಟ್ಟೆ, ಜಯನಗರ, ವಿಜಯನಗರ, ಚಂದ್ರಲೇಔಟ್, ರಾಜಾಜಿನಗರ, ಆರ್ ಟಿ ನಗರ, ಹೆಬ್ಬಾಳ, ಕೋರಮಂಗಲ, ಕಾಮಾಕ್ಷಿ ಪಾಳ್ಯ, ಆರ್ ಆರ್ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ವೀಕೆಂಡ್ ಹಾಯಾಗಿ ಮಲಗಿದ್ದ ಜನ (Bengaluru rain) ರಾತ್ರಿ ಸುರಿದ ಭಾರಿ ಮಳೆ, ಗುಡುಗು ಸಿಡಿಲಿಗೆ ನಿದ್ದೆ ಕೆಡಿಸಿಕೊಂಡರು.


ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru rain news) ರಾತ್ರಿಯಿಡೀ ಧಾರಾಕಾರ ಮಳೆಯಾಗಿದೆ. ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ (Low lying areas) ಜನ ತತ್ತರಿಸಿದ್ದಾರೆ. ರಾತ್ರಿ ಹಾಗೂ ಮುಂಜಾನೆ ಹಲವೆಡೆ ಟ್ರಾಫಿಕ್ ಜಾಮ್ (Traffic jam) ಕೂಡ ಉಂಟಾಗಿದೆ. ರಸ್ತೆಗಳು ಜಲಾವೃತವಾಗಿ ಜನ ಪರದಾಡಿದ್ದಾರೆ. ಬ್ರಾಂಡ್ ಬೆಂಗಳೂರಿನ ಹೆಸರಿಗೆ ಮತ್ತೊಮ್ಮೆ ಕೆಸರು ಲೇಪಿಸಿದಂತಾಗಿದೆ.
ಮೆಜೆಸ್ಟಿಕ್, ಕೆ ಆರ್ ಮಾರುಕಟ್ಟೆ, ಜಯನಗರ, ವಿಜಯನಗರ, ಚಂದ್ರಲೇಔಟ್, ರಾಜಾಜಿನಗರ, ಆರ್ ಟಿ ನಗರ, ಹೆಬ್ಬಾಳ, ಕೋರಮಂಗಲ, ಕಾಮಾಕ್ಷಿ ಪಾಳ್ಯ, ಆರ್ ಆರ್ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ವೀಕೆಂಡ್ ಹಾಯಾಗಿ ಮಲಗಿದ್ದ ಜನ ರಾತ್ರಿ ಸುರಿದ ಭಾರಿ ಮಳೆ, ಗುಡುಗು ಸಿಡಿಲಿಗೆ ನಿದ್ದೆ ಕೆಡಿಸಿಕೊಂಡರು.
ರಾತ್ರಿಯಿಡಿ ಸುರಿದ ಮಳೆಗೆ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಮಾಗಡಿ ರಸ್ತೆಯ ಭುವನೇಶ್ವರಿ ನಗರ ಸಂಪೂರ್ಣ ಜಲಾವೃತಗೊಂಡಿದೆ. ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಮಳೆನೀರು ನುಗ್ಗಿದ್ದು, ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನೀರುಪಾಲಾಗಿವೆ. ಆಡುಗೋಡಿಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಮನೆಯಲ್ಲಿದ್ದವರ ಸ್ಥಿತಿ ಆಯೋಮಯವಾಗಿದೆ. ಮನೆಯ ಒಳಗಡೆ ಇದ್ದ ಸಾಮಾಗ್ರಿಗಳು ನೀರು ಪಾಲಾಗಿದ್ದು, ಬಾಡಿಗೆದಾರರು ನೀರು ಹೊರಹಾಕಲು ಪರದಾಡುತ್ತಿದ್ದಾರೆ.
ಭಾರೀ ಮಳೆಗೆ ಚಾಮರಾಜಪೇಟೆಯ ಶಿರಸಿ ವೃತ್ತದ ಬಳಿ ಬೃಹತ್ ಮರ ಉರುಳಿ ಬಿದ್ದಿದೆ. ಈ ಘಟನೆ ರಸ್ತೆ ಬದಿಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ವಾಹನಗಳು ಸಿಲುಕಿಲ್ಲ ಮತ್ತು ಯಾವುದೇ ಪ್ರಾಣಾಪಾಯವಾಗಿಲ್ಲ. ಬೆಳ್ಳಂ ಬೆಳಗ್ಗೆಯೇ ನೆಲಮಂಗಲ, ಗೊರಗುಂಟೆಪಾಳ್ಯ ಹಾಗೂ ಸಿಲ್ಕ್ ಬೋರ್ಡ್ ಸಿಗ್ನಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವೀಕೆಂಡ್ಗೆಂದು ಊರಿಗೆ ಹೋಗಿ ನಗರಗಳತ್ತ ಬರುತ್ತಿದ್ದ ಜನ ಟ್ರಾಫಿಕ್ನಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.
ಶನಿವಾರ ಸುರಿದಿದ್ದ ಮಳೆಗೆ ಸಾಯಿ ಲೇಔಟ್ ಜನರು ಇನ್ನೂ ಪರದಾಡುತ್ತಿದ್ದಾರೆ. ಇಡೀ ಏರಿಯಾ ಜಲಾವೃತಗೊಂಡಿದೆ. ರಸ್ತೆ ತುಂಬ ನೀರು, ಮನೆಗಳಿಗೂ ನೀರು ನುಗ್ಗಿ ಸಾಯಿ ಲೇಔಟ್ ಕೆರೆಯಂತಾಗಿದೆ. ರಾತ್ರಿಯಿಡಿ ಜಾಗರಣೆ ಮಾಡಿ ಬೆಳಗ್ಗೆಯಾದ್ರೂ ಮನೆಗಳಿಗೆ ನುಗ್ಗಿದ್ದ ರಾಜಕಾಲುವೆ ನೀರು ತಗ್ಗದೇ ನಿವಾಸಿಗಳು ಹಿಂಸೆ ಅನುಭವಿಸಿದರು.
ಇದನ್ನೂ ಓದಿ: Karnataka weather: ಇಂದು ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಭಾರಿ ಮಳೆ; ಆರೆಂಜ್ ಅಲರ್ಟ್ ಘೋಷಣೆ