MAMCOS Election: ಮ್ಯಾಮ್‌ಕೋಸ್ ಚುನಾವಣೆ; ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ ಭರ್ಜರಿ ಜಯ
MAMCOS Election: ಮಲೆನಾಡಿನ ಪ್ರತಿಷ್ಠಿತ ಸಹಕಾರ ಸಂಘವಾದ ಮ್ಯಾಮ್‌ಕೋಸ್‌ನ ಆಡಳಿತ ಅಧಿಕಾರ ನಿರೀಕ್ಷೆಯಂತೆ ಮತ್ತೆ ಬಿಜೆಪಿಯ ಸಹಕಾರ ಭಾರತಿಗೆ ಲಭಿಸಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಮುಖಭಂಗ ಅನುಭವಿಸಿದೆ.
| ವರದಿ: ಅರವಿಂದ ಸಿಗದಾಳ್, ಮೇಲುಕೊಪ್ಪ
86 ವರ್ಷಗಳಿಂದ ಅಡಿಕೆ ಮಾರಾಟ ವ್ಯವಹಾರ ನಡೆಸುತ್ತಿರುವ ಮಲೆನಾಡಿನ ಪ್ರತಿಷ್ಠಿತ ಸಹಕಾರ ಸಂಘವಾದ ಮ್ಯಾಮ್‌ಕೋಸ್‌ನ ಆಡಳಿತ ಅಧಿಕಾರ ನಿರೀಕ್ಷೆಯಂತೆ ಮತ್ತೆ ಬಿಜೆಪಿಯ ಸಹಕಾರ ಭಾರತಿಗೆ ಲಭಿಸಿದೆ. ಮ್ಯಾಮ್‌ಕೋಸ್ ತನ್ನ ವ್ಯವಹಾರ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಎಲ್ಲ ತಾಲೂಕುಗಳು ಹಾಗೂ ದಾವಣಗೆರೆಯ ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳು ಸೇರಿದಂತೆ 18 ತಾಲೂಕುಗಳ 19 ಕ್ಷೇತ್ರಗಳಿಗೆ ಮಂಗಳವಾರ ಚುನಾವಣೆ (MAMCOS Election) ನಡೆದಿದ್ದು, ಎಲ್ಲ 19 ಕ್ಷೇತ್ರಗಳಲ್ಲೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ತಂಡದ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸಿದ್ದಾರೆ.
ಸಾಕಷ್ಟು ಪ್ರಚಾರ, ಪ್ರಯತ್ನ, ಹೋರಾಟ ನಡೆಸಿದರೂ, ಕಾಂಗ್ರೆಸ್ ಬೆಂಬಲಿತ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನ ತೀವ್ರ ಮುಖಭಂಗದ ಸೋಲನ್ನು ಅನುಭವಿಸಿದೆ. ಕಳೆದ 20 ವರ್ಷಗಳಿಂದ ಮ್ಯಾಮ್‌ಕೋಸ್‌ನ ಆಡಳಿತ ಬಿಜೆಪಿಯ ಸಹಕಾರ ಭಾರತಿಯೇ ನಡೆಸುತ್ತಿದ್ದು, ಈಗ ಮತ್ತೆ ಐದು ವರ್ಷಗಳ ಆಡಳಿತಕ್ಕೆ ಸ್ಪಷ್ಟ ಬಹುಮತ ಸಿಕ್ಕಂತಾಗಿದೆ. ಮೂರು ಜಿಲ್ಲೆಗಳ ಒಂಬತ್ತು ಸ್ಥಳಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮ್ಯಾಮ್‌ಕೋಸ್ ಸಂಸ್ಥೆಯಲ್ಲಿ 31,162 ಸದಸ್ಯರಿದ್ದರೂ, ಮತದಾನ ಮಾಡುವ ಅರ್ಹತೆ ಇರುವುದು ಕೇವಲ 11,750 ಸದಸ್ಯರಿಗೆ ಮಾತ್ರ. ಸಂಸ್ಥೆಯ ಬೈಲಾ ನಿಯಮಾವಳಿ ಪ್ರಕಾರ ಸಾಮಾನ್ಯ ಸಭೆಗೆ ನಿರಂತರ ಗೈರು ಹಾಜರಿ, ನಿರಂತರವಾಗಿ ವಾರ್ಷಿಕ ಕನಿಷ್ಟ ಅಡಿಕೆ ವಹಿವಾಟು ಮಾಡದಿರುವವರು ಮತದಾನದ ಅರ್ಹತೆಯನ್ನು ಕಳೆದುಕೊಂಡಿರುತ್ತಾರೆ.
ಸಾಮಾನ್ಯ ಸಭೆಗೆ ನಿರಂತರ ಗೈರು ಹಾಜರಿ, ನಿರಂತರವಾಗಿ ವಾರ್ಷಿಕ ಕನಿಷ್ಟ ಅಡಿಕೆ ವಹಿವಾಟು ಮಾಡದೆ ಮತದಾನದ ಅರ್ಹತೆ ಕಳೆದುಕೊಂಡಿದ್ದವರಲ್ಲಿ ಸುಮಾರು 6,644 ಸದಸ್ಯರು ನ್ಯಾಯಾಲಯದಿಂದ ಆದೇಶ ಪಡೆದು ಮತದಾನದ ಹಕ್ಕನ್ನು ಪಡೆದುಕೊಂಡಿದ್ದರು. ಹೀಗಾಗಿ, ಮತದಾನಕ್ಕೆ ಅರ್ಹತೆ ಪಡೆದವರ ಸಂಖ್ಯೆ 18,000 ದಾಟಿತ್ತು.
18,000 ಮತದಾರರಲ್ಲಿ, ಒಟ್ಟು ಮತದಾನ ಮಾಡಿದವರ ಸಂಖ್ಯೆ 12,000 (66%) ಮಾತ್ರ. ಮ್ಯಾಮ್‌ಕೋಸ್ ಚುನಾವಣೆ ಮುಗಿದು, ಮತ ಪೆಟ್ಟಿಗೆಗಳನ್ನು ಮ್ಯಾಮ್‌ಕೋಸ್ ಶಿವಮೊಗ್ಗದ ಕೇಂದ್ರ ಕಚೇರಿಗೆ ತಂದು, ಮತ ಎಣಿಕೆ ಮುಗಿದು, ಇವತ್ತು ಬೆಳಗಿನ ಜಾವ ಪಲಿತಾಂಶ ಪ್ರಕಟವಾಗಿದೆ.
"ಆರೋಗ್ಯದ ಕಣ ಕಣದಲ್ಲೂ ಕೇಸರಿ", "ಕೇಸರಿ ಕ್ಯಾನ್ಸರ್ ಕಾರಕ" ಘೋಷಣೆಗಳ ವಾಗ್ವಾದ:
ಕೆಲವು ಚುನಾವಣಾ ಕೇಂದ್ರಗಳಲ್ಲಿನ ಹೊರಭಾಗದಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ "ಆರೋಗ್ಯದ ಕಣ ಕಣದಲ್ಲೂ ಕೇಸರಿ" ಎಂದು ಘೋಷಣೆ ಕೂಗಿದರೆ, ಕಾಂಗ್ರೆಸ್ ಬೆಂಬಲಿತ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನ "ಕೇಸರಿ ಕ್ಯಾನ್ಸರ್ ಕಾರಕ" ಎಂದು ಪ್ರತಿ ಘೋಷಣೆ ಕೂಗಿದರು. ಪರಿಣಾಮ ಎರಡು ಗುಂಪುಗಳ ನಡುವೆ ಸಣ್ಣ ವಾಗ್ವಾದವೂ ಉಂಟಾಗಿ, ಪೋಲಿಸರ ಮಧ್ಯ ಪ್ರವೇಶದಿಂದ ನಿಯಂತ್ರಿಸಬೇಕಾಯಿತು.
ಹೊಸ ಆಡಳಿತ ಮಂಡಳಿಯ ಮುಂದಿರುವ ಸವಾಲುಗಳು:
ಅಡಿಕೆ ಧಾರಣೆಯಲ್ಲಿ ನಡೆಯುತ್ತಿರುವ ಅರ್ಥವಾಗದ ಮಾರುಕಟ್ಟೆ ವಿದ್ಯಮಾನಗಳು, ರಾಶಿ ಇಡಿ ಕೆಂಪಡಿಕೆಗೆ ದರ ಸ್ಥಿರತೆ ಇದ್ದರೂ, ಗೊರಬಲು ಕೆಂಪು ಅಡಿಕೆಯ ದರ ದಿನ ದಿನಕ್ಕೂ ಕುಸಿಯುತ್ತಿರುವುದು, ಪ್ರತಿನಿತ್ಯ ವಿದೇಶಿ ಅಕ್ರಮ ಅಡಿಕೆ ದೇಶದೊಳಗೆ ಬರುತ್ತಿರುವುದು, ಅಡಿಕೆ ಬೆಳೆಯುವ ಭೂಮಿ ವಿಸ್ತರಣೆ ಆಗುತ್ತಿರುವುದನ್ನು ತಡೆಯಲು ಕ್ರಮ, ಭೀಕರವಾಗಿ ವ್ಯಾಪಿಸುತ್ತಿರುವ ಮಲೆನಾಡ-ಕರಾವಳಿಯ ಅಡಿಕೆ ರೋಗಗಳ ಬಗ್ಗೆ ಸಂಶೋಧನೆ ವಿಚಾರದಲ್ಲಿ ನಿಷ್ಕ್ರಿಯಗೊಂಡಿರುವ ಸರಕಾರ, ವಿವಿ, ಸಂಶೋಧನಾ 'ಛತ್ರಗಳು' ಎಚ್ಚರಗೊಳ್ಳುವಂತೆ ಮಾಡುವುದು, ಸರಕಾರಿ ಸಬ್ಸಿಡಿ ವಿಚಾರದಲ್ಲಿ ನಡೆಯುತ್ತಿರುವ ಲಾಬಿ ಸರಿಪಡಿಸಲು ಮುಂದಾಳತ್ವ, ಎರಡು ದಶಕದಿಂದ ನೆಡೆಯುತ್ತಿರುವ ಅಡಿಕೆ ಹಾನಿಕಾರಕ ವಿಚಾರದಲ್ಲಿ ಅಧ್ಯಯನ-ಸಂಶೋಧನಾ ವರದಿಯೊಂದಿಗೆ, ತ್ವರಿತ ನ್ಯಾಯಕ್ಕೆ ಪ್ರಯತ್ನ, ಸಂಪೂರ್ಣ ಅಡಿಕೆ ವ್ಯವಹಾರ APMC ನಿಯಂತ್ರಣಕ್ಕೆ ಬರುವಂತೆ ಮಾಡುವುದು, ಹೀಗೆ ಅನೇಕ ಸವಾಲುಗಳು ಮ್ಯಾಮ್‌ಕೋಸ್‌ನ ಹೊಸ ಆಡಳಿತ ಮಂಡಳಿಯ ಮುಂದಿದೆ.
ಈ ಸುದ್ದಿಯನ್ನೂ ಓದಿ | Prahlad Joshi: ಕರ್ನಾಟಕ ರೈಲ್ವೆಗೆ ಕೇಂದ್ರದಿಂದ ಯುಪಿಎ ಅವಧಿಗಿಂತ 9 ಪಟ್ಟು ಹೆಚ್ಚಿನ ಬಜೆಟ್: ಪ್ರಹ್ಲಾದ್ ಜೋಶಿ
86 ವರ್ಷಗಳಿಂದಲೂ, ಪ್ರತೀ ವರ್ಷ ಉತ್ತಮ ಲಾಭ ಗಳಿಸುತ್ತಾ, ಆರ್ಥಿಕವಾಗಿಯೂ ಸದೃಢಗೊಳ್ಳುತ್ತ ಶತಮಾನದ ಕಡೆಗೆ ಹೆಜ್ಜೆ ಹಾಕುತ್ತಿರುವ ಪ್ರತಿಷ್ಠಿತ ಮ್ಯಾಮ್‌ಕೋಸ್ ಸಂಸ್ಥೆಯ ಹೊಸ ನಿರ್ದೇಶಕ ಪದಾಧಿಕಾರಿಗಳು ಅಡಿಕೆ ಬೆಳೆಗಾರರ ಹಿತಕ್ಕೆ, ಅಡಿಕೆ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಸ್ಪಂದಿಸುವವರಾಗಲಿ ಎಂಬುದು ಅಧಿಕಾರದ ತಾಂಬೂಲ ನೀಡಿದ ಮತದಾರರ ನಿರೀಕ್ಷೆಯಾಗಿದೆ.